ಕೌಜಲಗಿ: ಧಾರ್ಮಿಕ ಆಚರಣೆಗಳಿಂದ ಆರೋಗ್ಯಕರವಾದ ಸಾಂಸ್ಕೃತಿಕ ಪರಿಸರ ನಿರ್ಮಾಣವಾಗುತ್ತದೆ. ಜಾತ್ರೆ -ಉತ್ಸವಗಳು ಮನುಷ್ಯನಲ್ಲಿ ಸಾಂಘಿಕ ಬೆಳವಣಿಗೆ ಮೂಡಿಸುವುದರೊಂದಿಗೆ ಒಕ್ಕಟ್ಟನ್ನು ತಂದುಕೊಡುತ್ತವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅಭಿಪ್ರಾಯಪಟ್ಟರು.
ಕೌಜಲಗಿ ಪಟ್ಟಣದ ಹೊರವಲಯದಲ್ಲಿ ಶುಕ್ರವಾರ ಮತ್ತು ಶನಿವಾರ 2 ದಿನಗಳಿಂದ ಜರುಗಿದ ನಾಗಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶತ ಶತಮಾನಗಳಿಂದ ಸಾರ್ವಜನಿಕರೆಲ್ಲರೂ ಒಂದೆಡೆ ಸೇರಿ ದೇವಸ್ಥಾನ- ಮಠಮಂದಿರಗಳಲ್ಲಿ ಆಚರಿಸುತ್ತಿರುವ ಧಾರ್ಮಿಕ ಕಾರ್ಯಗಳಿಗೆ ಚ್ಯುತಿ ಬಾರದಂತೆ ನಾವೆಲ್ಲ ಸಂಘಟಿತ ರಾಗುವುದರೊಂದಿಗೆ, ಧಾರ್ಮಿಕ ಪರಂಪರೆಯನ್ನು ಉಳಿಸಿ, ಬೆಳಿಸಿಕೊಂಡು ಹೋಗಬೇಕಾದಂತಹ ಅಗತ್ಯ ಜನರ ಮೇಲಿದೆ ಎಂದ ಕಡಾಡಿಯವರು, ಸಮುದಾಯಗಳ ಒಗ್ಗಟ್ಟಿನಲ್ಲಿ ದೇವಸ್ಥಾನಗಳ ಪಾತ್ರ ಮಹತ್ವದಾಗಿದ್ದು, ಸಹಸ್ರಾರು ವರ್ಷಗಳಿಂದ ಶ್ರದ್ದೆ, ನಂಬಿಕೆ ಆಧಾರದ ಮೇಲೆ ಹಲವಾರು ಧಾರ್ಮಿಕ ಆಚರಣೆಗಳು ಮುಂದುವರೆದಿದ್ದು ಅವುಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದರು.
ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಸಂಸದ ಈರಣ್ಣ ಕಡಾಡಿ ಅವರನ್ನು ನಾಗಮ್ಮ ದೇವಿ ಅರ್ಚಕ ಬಾಳಪ್ಪ ಪೂಜೇರಿ ಮತ್ತು ಮುಖಂಡರು ಸತ್ಕರಿಸಿದರು. ಸಾಹಿತಿ ಪ್ರಕಾಶ ಕೋಟಿನತೋಟ ಅವರು ತಾವು ರಚಿಸಿದ ಕೃಷಿ ಮತ್ತು ನಾವು ಪುಸ್ತಕವನ್ನು ಸಂಸದರಿಗೆ ನೀಡಿ ಗೌರವಿಸಿದರು.
ನಾಗಮ್ಮದೇವಿ ಜಾತ್ರೆಯ ಅಂಗವಾಗಿ ಪೂಜೆ- ಅಭಿಷೇಕ, ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಶಿವಾನಂದ ಲೋಕನ್ನವರ, ಸಿದ್ದಪ್ಪ ಹ.ಹಳ್ಳೂರ, ದಸ್ತಗೀರಸಾಬ ಮುಲ್ತಾನಿ, ಬಸವರಾಜ ಲೋಕನ್ನವರ, ಸಿದ್ದಪ್ಪ ಬಿಸಗುಪ್ಪಿ,ಅಶೋಕ ಶಿವಾಪೂರ,ಇರಪ್ಪಣ್ಣ ಬಿಸಗುಪ್ಪಿ,ಶೇಖರ ಮೂಡಲಗಿ, ರಮೇಶ ನರಗುಂದ, ಬಸವರಾಜ ಗಾಡವಿ, ಬಾಳಪ್ಪ ಪೂಜೇರಿ ಮಹಾಂತೇಶ ದಳವಾಯಿ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.