ಸಿಂದಗಿ: ಶಿಕ್ಷಕರು ದೇಶ ಕಟ್ಟುವ, ಸೃಜನಶೀಲ ಸಮಾಜವನ್ನು ನಿರ್ಮಿಸುವ, ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ರಾಷ್ಟ್ರಕ್ಕೆ ಅರ್ಪಿಸುವ ಕೆಲಸ ಸದಾ ಮಾಡುತ್ತಿರಬೇಕು. ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ದಾರಿ ತೋರಿಸುವವನೇ ನೈಜ ಗುರು ಎಂದು ಸಂಸ್ಥೆಯ ನಿರ್ದೇಶಕ ಎ.ಸಿ.ಪಾಟೀಲ ಹೇಳಿದರು.
ತಾಲೂಕಿನ ಕನ್ನೊಳ್ಳಿ ಗ್ರಾಮದ ಶ್ರೀ ಲಕ್ಷ್ಮೀ ವಿದ್ಯಾವರ್ಧಕ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡ ಬೀಳ್ಕೊಡುಗೆ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿ, ಮೌಲ್ಯಯುತ ಶಿಕ್ಷಣ ನೀಡುತ್ತಾ ಶಿಕ್ಷಣ ರಂಗದಲ್ಲಿ ಹಲವಾರು ಚೇತನಗಳಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ಮುಖ್ಯ ಗುರುಗಳು ತಮ್ಮ ನಿವೃತ್ತಿ ಜೀವನವನ್ನು
ಸಮಾಜಮುಖೀ ಚಿಂತನೆಗಳ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು. ಬೋಧನಾ ಕೌಶಲ್ಯದಿಂದ ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸರ್ವರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸಾರ್ಥಕ ಸೇವೆ ಸಲ್ಲಿಸಿದ ಯಂಕಂಚಿ ಅವರ ಸೇವೆ ಶಾಲೆಗೆ ತೃಪ್ತಿ ತಂದಿದೆ. ಅವರ ಮುಂದಿನ ನಿವೃತ್ತಿ ಜೀವನವನ್ನು ಬಯಸಿ ಬಂದ ವಿದ್ಯಾರ್ಥಿಗಳಿಗೆ ಹಾಗೂ ಕಿರಿಯರಿಗೆ ಮಾರ್ಗದರ್ಶನ ನೀಡುವ ಮೂಲಕ ಶಿಕ್ಷಣ ರಂಗದಲ್ಲಿ ಮಾರ್ಗದರ್ಶಕರಾಗಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎಂದರು.
ಧುರೀಣ ಪ್ರಶಾಂತಗೌಡ ಪಾಟೀಲ್, ಪ್ರಾಚಾರ್ಯ ಐ.ಡಿ.ಪಡಶೆಟ್ಟಿ, ಮಾತನಾಡಿ, ಶಿಕ್ಷಕರು ತಮ್ಮ ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದಲೇ ತಮ್ಮ ಶಿಷ್ಯರ ಮನಃಪಟಲದಲ್ಲಿ ಸದಾ ನಿಲ್ಲುತ್ತಾರೆ, ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಉತ್ತಮ ಶಿಕ್ಷಕರಿಂದಲೇ ಸಾಧ್ಯವಾಯಿತು. ವೃತ್ತಿ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡು ಎಲ್ಲರಿಗೂ ಬಹಳ ಆತ್ಮಿಯರಾಗಿದ್ದರು. ಹೃದಯವಂತ ಮತ್ತು ದೈವಭಕ್ತಿ ಹೊಂದಿರುವ ಯಂಕಂಚಿ ಗುರುಗಳು ಅನೇಕ ವಿದ್ಯಾರ್ಥಿಗಳನ್ನು ಸನ್ನಡತೆಯತ್ತ ಮುನ್ನೆಡೆಸಿದ ಗುರುವಾಗಿ ಶಾಲೆಯಲ್ಲಿ ಗುರುತಿಸಿಕೊಂಡಿದ್ದಾರೆ ಅವರ ನಿವೃತ್ತಿ ಜೀವನವು ಆಯುರಾರೋಗ್ಯದಿಂದ ಇರಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಮುಖ್ಯಗುರು ಎಸ್.ಎಸ್.ಯಂಕಂಚಿ ಮಾತನಾಡಿ, ಶಾಲೆಯ ಅಭಿವೃದ್ಧಿಯಲ್ಲಿ ಪ್ರತಿ ಶಿಕ್ಷಕರ ಪಾತ್ರವೂ ಪ್ರಮುಖವಾದದ್ದು, ವಿದ್ಯಾರ್ಥಿಗಳಲ್ಲಿ ಉತ್ತಮವಾದ ಚಿಂತನೆಯನ್ನು ರೂಪಿಸಿ ಅವರನ್ನು ಸಮಾಜದ ಆಸ್ತಿಯನ್ನಾಗಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರ ಮೇಲಿದೆ ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಹ ಶಿಕ್ಷಕರಾಗಿ 17ವರ್ಷ ಮತ್ತು ಮುಖ್ಯ ಗುರುಗಳಾಗಿ 17 ವರ್ಷ ಒಟ್ಟು 34 ವರ್ಷಗಳ ಕಾಲ ಸುಧೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ಎಸ್ ಎಸ್ ಯಂಕಂಚಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಅಧ್ಯಕ್ಷ ಸಿದ್ದನಗೌಡ ಪಾಟೀಲ್, ನೀಲಕಂಠರಾಯ ಚೌಧರಿ, ಶ್ರೀಶೈಲಗೌಡ ಪಾಟೀಲ್, ಶ್ರೀಶೈಲ ಬಗಲಿ, ಚನ್ನಪ್ಪ ಯಂಕಂಚಿ, ಮೌನೇಶ ಬಿರಾದಾರ, ಶಿಕ್ಷಕ ಬಿ.ಟಿ.ಚೌಧರಿ, ಡಿ.ಸಿ.ನಾಗಠಾಣ, ಎಸ್.ಜಿ.ಬರಗಿ, ಆರ್.ಅರ್.ಕನ್ನೂರ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾಚಾರ್ಯ ಐ. ಡಿ. ಪಡಶೆಟ್ಟಿ ಸ್ವಾಗತಿಸಿದರು. ನೂತನ ಮುಖ್ಯಗುರು ಆರ್.ಎಸ್ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಂಜುನಾಥ ಬಡಿಗೇರ ನಿರೂಪಿಸಿದರು. ಮಹೇಶ ಶಂಬೇವಾಡ ವಂದಿಸಿದರು.