ಬೆಳಗಾವಿ – ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮುಖ್ಯ ಶಿಕ್ಷಕರಾದ ಬಸವರಾಜ ಫಕೀರಪ್ಪ ಸುಣಗಾರ ರವರು ಮುಖ್ಯ ಶಿಕ್ಷಕರ ಹುದ್ದೆಯಿಂದ ಪದೋನ್ನತ್ತಿ ಹೊಂದಿ ತಾಲೂಕಿನ ಮಾಸ್ತಮರಡಿ ಸರಕಾರಿ ಹಿರಿಯ ಮಾದರಿ ಕನ್ನಡ ಶಾಲೆಯ ಪದವೀಧರೇತರ ಮುಖ್ಯ ಶಿಕ್ಷಕರಾಗಿ ವರ್ಗಾವಣೆಯಾಗಿರುವ ನಿಮಿತ್ತ ಇಂದು ಸನ್ಮಾನಿಸಿ ಅವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಗ್ರಾಮಸ್ಥರು ಎಸ್ ಡಿ ಎಮ್ ಸಿ ಪದಾಧಿಕಾರಿಗಳು ಬೀಳ್ಕೊಟ್ಟರು.
ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಕಲ್ಲಪ್ಪ ಪಾಮನಾಯಕ, ಉಪಾಧ್ಯಕ್ಷರಾದ ಮಾರುತಿ ಮಗದುಮ್ಮ, ಸದಸ್ಯರಾದ ಬಸವರಾಜ ತಳವಾರರವರು ಗ್ರಾಮಸ್ಥರ ಪರವಾಗಿ ಸನ್ಮಾನ ಮಾಡಿ ಮಾತನಾಡಿ, ಮುಖ್ಯ ಶಿಕ್ಷಕರಾಗಿ ಬಸವರಾಜ ಸುಣಗಾರ ಶಾಲೆಯ ಪ್ರಗತಿಗೆ ಶ್ರಮವಹಿಸಿರುವರು, ಶಾಲೆಯ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಏಳ್ಗೆಗೆ ಶ್ರಮಿಸಿರುವರು ತಮ್ಮ ಉತ್ತಮ ಕಾರ್ಯ ಶೈಲಿಯಿಂದ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿರುವರು,ಅವರ ಸೇವೆ ಸ್ಮರಣೀಯವಾಗಿದೆ, ಅವರು ನಮ್ಮ ಗ್ರಾಮದವರು ಎನ್ನಲು ಹೆಮ್ಮೆಯಾಗುತ್ತದೆ. ಆ ರೀತಿಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ಮಾಡಿರುವರೆಂದರು.
ಬಸವರಾಜ ಸುಣಗಾರ ಮಾತನಾಡಿ, ಗ್ರಾಮಸ್ಥರು, ಇಲಾಖೆಯ ಹಿರಿಯ ಅಧಿಕಾರಿ ಗಳ,ಎಸ್ ಡಿ ಎಮ್ ಸಿ ಯವರ ಸಹಾಯ ಸಹಕಾರ ದಿಂದ ಶಾಲೆಯ ಪ್ರಗತಿಯಾಯಿತು, ಇಂದು ಈ ಶಾಲೆಯು ಉತ್ತಮ ವಾತಾವರಣದಿಂದ ಜಿಲ್ಲೆಯ ಗಮನ ಸೆಳೆದಿದೆ,ಮುಂದೆಯೂ ಶಾಲೆಯು ಉತ್ತಮ ಪ್ರಗತಿ ಸಾಧಿಸಲಿ ಎಂದರು.
ಶಾಲೆಗೆ ಹೊಸದಾಗಿ ಶಿಕ್ಷಕರಾಗಿ ಆಗಮಿಸಿರುವ ಎಸ್ ಎಸ್ ಕರವಿನಕೊಪ್ಪ ರವರನ್ನು ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಎಸ್ ಡಿ ಎಮ್ ಸಿ ಪದಾಧಿಕಾರಿಗಳು, ಬಿಸಿಯೂಟ ಸಿಬ್ಬಂದಿಗಳು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.