ರೈತರು ತಮ್ಮನ್ನು ಶೋಷಿಸುವ ಸರ್ಕಾರಿ ಕಾನೂನುಗಳು ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ದ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಹೋರಾಟ ಮಾಡಿದಾಗ ಮಾತ್ರ ರೈತರಿಗೆ ಉತ್ತಮ ಜೀವನ ದೊರಕಲು ಸಾಧ್ಯ ಎಂದು ಹಿರಿಯ ರೈತ ಮುಖಂಡ,ವಕೀಲರು ಹಾಗೂ ಕವಿಗಳಾದ ಬಿ.ಕೆ.ನೂತನ ಕುಮಾರ್ ನೀಡಿದರು.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಹೊಸೂರು ಕಲ್ಲಹಳ್ಳಿ ಗ್ರಾಮದಲ್ಲಿ ಕರ್ನಾಟಕ ಕೃಷಿಕರ ಸಂಘದ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ರೈತರು ಜಮೀನಿನಲ್ಲಿ ಕಷ್ಟಪಟ್ಟು ಬೆಳೆಗಳನ್ನು ಬೆಳೆದರೂ ಆತನಿಗೆ ಉತ್ತಮ ಬೆಂಬಲ ಬೆಲೆ ಸಿಗುತ್ತಿಲ್ಲ. ತಾನು ಬೆಳೆದ ಒಳ್ಳೆಯ ಭತ್ತ ಮಾರಿ, ನ್ಯಾಯಬೆಲೆ ಅಂಗಡಿಯ ಅಕ್ಕಿ ತಿನ್ನುವ ದುರಂತ ಪರಿಸ್ಥಿತಿ ಇದೆ. ತಾನು ಉತ್ಪಾದಿಸಿದ ಹಾಲುಮಾರಿ, ಹಣ ಹೊಂದಿಸಿಕೊಂಡು ಜೀವನ ನಡೆಸುವಂತೆ ಕೃಷಿಕರಿದ್ದಾರೆ.
ರೈತರ ಸಮಸ್ಯೆಗಳನ್ನು ನಿಜವಾಗಿ ಅರಿತು ಜಾತ್ಯತೀತ ವಾಗಿ, ಪಕ್ಷಾತೀತವಾಗಿ ಹೋರಾಡುವ ಉದ್ದೇಶದಿಂದ ಕರ್ನಾಟಕ ಕೃಷಿಕರ ಸಂಘ ಅಸ್ತಿತ್ವಕ್ಕೆ ಬಂದಿದೆ. ನಿಜವಾದ ರೈತರ ಸಮಸ್ಯೆಗಳ ನಿವಾರಣೆಗೆ ನೂತನ ಸಂಸ್ಥೆ ಶ್ರಮಿಸಲಿದೆ ಎಂದು ನುಡಿದರು.
ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ರೈತರು ರಾಷ್ಟ್ರದ ಬೆನ್ನೆಲುಬು ಎಂದು ಬಣ್ಣಿಸಿದರು. ರೈತ ಸಿಡಿದೆದ್ದರೆ ರಾಷ್ಟ್ರ ನಲುಗೀತು ಎಂದು ರಾಷ್ಟ್ರ ಕವಿ ಕುವೆಂಪು ಎಚ್ಚರಿಕೆ ನೀಡಿದರು. ಆದರೆ ಆಡಳಿತ ನಡೆಸುವ ಸರ್ಕಾರಗಳು ರೈತರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ರೈತರ ತರಬೇತಿ ನೀಡುವ, ಸಾಧನ ಸಲಕರಣೆಗಳನ್ನು ವಿತರಿಸುವ ಹೆಸರಿನಲ್ಲಿ ಅಪಾರ ಅಕ್ರಮಗಳು ನಡೆಯುತ್ತಿವೆ. ಈ ಬಗ್ಗೆ ರೈತ ಸಂಘಟನೆಗಳು ಗಮನ ಹರಿಸಬೇಕು. ಎಲ್ಲ ರೈತರೂ ಪ್ರತಿ ದಿನವೂ ತಮ್ಮ ಕೆಲಸಗಳಿಗಾಗಿ ತಾಲ್ಲೂಕು ಕೇಂದ್ರಗಳಿಗೆ ಹೋಗುವ ಪರಿಸ್ಥಿತಿ ನಿವಾರಣೆಯಾಗಬೇಕು.
ಇಡೀ ಗ್ರಾಮದ ರೈತ ಪ್ರತಿನಿಧಿಯಾಗಿ ವಿದ್ಯಾವಂತ ಯುವಕರೊಬ್ಬರನ್ನು ನೇಮಕ ಮಾಡಬೇಕು. ಆ ಪ್ರತಿನಿಧಿ ಸರ್ಕಾರದ ಸೌಲಭ್ಯಗಳನ್ನು ತಮ್ಮನ್ನು ಗ್ರಾಮದ ರೈತಸಮುದಾಯಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ನುಡಿದರು.
ಕರ್ನಾಟಕ ಕೃಷಿಕರ ಸಂಘದ ಮೈಸೂರು ಜಿಲ್ಲಾಧ್ಯಕ್ಷರಾದ ಕುಮಾರಭೋವಿ ಅವರು ಮಾತನಾಡಿ, ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ದ ರೈತ ಸಮುದಾಯ ಹೋರಾಡಬೇಕು. ಗ್ರಾಮೀಣ ರೈತರ ಅಭ್ಯುದಯಕ್ಕೆ ಶ್ರಮಿಸಬೇಕಾದ ಅಧಿಕಾರಿಗಳು ಹಲವು ನೆಪ ಹೇಳಿ ಕಚೇರಿಗೇ ಹಾಜರಾಗುವುದಿಲ್ಲ. ರೈತರು ತಮ್ಮ ಕೆಲಸಗಳಿಗಾಗಿ ತಾಲ್ಲೂಕು ಕೇಂದ್ರಗಳಿಗೆ ಅಲೆಯಬೇಕಾಗಿದೆ. ಇಂಥವರ ವಿರುದ್ದ ರೈತರು ಹೋರಾಟ ನಡೆಸಬೇಕು ಎಂದು ನುಡಿದರು.
ಭ್ರಷ್ಟರಿಗೆ ಹಸಿರು ಶಾಲು ರಾಮಬಾಣವಿದ್ದಂತೆ. ಹಸಿರು ಶಾಲು ಧರಿಸಿದ ರೈತರು ಹಸಿರು ಯೋಧರಾಗಿ ಭ್ರಷ್ಟಾಚಾರ ,ಜಾತೀಯತೆ, ಅಧಿಕಾರ ದುರುಪಯೋಗಗಳ ವಿರುದ್ದ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಕರ್ನಾಟಕ ಕೃಷಿಕರ ಪರಿಷತ್ತಿನ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು, ಹೊಸೂರು, ಕಲ್ಲಹಳ್ಳಿ ಗ್ರಾಮದ ರೈತಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.