ಮೂಡಲಗಿ: ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು ಕಾಲಕ್ಕೆ ತಕ್ಕಂತೆ ತಮ್ಮ ಚಟುವಟಿಕೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ರೈತ ಕೇವಲ ರೈತನಾಗಿ ಇರದೇ ಉದ್ದಿಮೆಯಾಗಿ, ವ್ಯಾಪಾರಸ್ಥನಾಗಿ ಹೊರಹೊಮ್ಮಬೇಕಾದ ಅಗತ್ಯತೆ ಇದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಗುರುವಾರ ಮಾ-09 ರಂದು ಕಲ್ಲೋಳಿ ಪಟ್ಟಣದ ಮಲ್ಲಿಕಾರ್ಜುನ ಖಾನಗೌಡ್ರ ತೋಟದಲ್ಲಿ ಕೃಷಿ ಸಂಜೀವಿನಿ ಸಾವಯವ ಕೇಂದ್ರದ ವತಿಯಿಂದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆಯಡಿ ನಿರ್ಮಿಸಲಾದ ಹಲವಾರು ಯಂತ್ರಗಳಿಗೆ ಪೂಜೆ ನೇರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಈರಣ್ಣ ಕಡಾಡಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಬೆಳೆದಂತಹ ವಸ್ತುಗಳನ್ನು ಮೌಲ್ಯವರ್ಧನೆ ಮಾಡಲಿಕ್ಕೆ ಹಲವಾರು ತಂತ್ರಜ್ಞಾನಗಳನ್ನು ಒದಗಿಸಿದೆ. ಅವುಗಳನ್ನು ಉಪಯೋಗ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬ ರೈತನಿಗೆ ಈ ಯೋಜನೆಯಡಿ 30 ಲಕ್ಷ ರೂಪಾಯಿಗಳವರೆಗೆ ಬ್ಯಾಂಕ್ ಸಾಲ ಸೌಲಭ್ಯವಿದ್ದು, ಅದರಲ್ಲಿ ಪ್ರತಿಶತ 50% ರಷ್ಟು ಅಂದರೇ 15 ಲಕ್ಷದವರೆಗೆ ಸಹಾಯಧನ ಲಭ್ಯವಿದ್ದು, ರೈತರು ಕೇವಲ 15 ಲಕ್ಷ ರೂ. ಮಾತ್ರ ಸಾಲವನ್ನು ಪಾವತಿಸಬೇಕಾಗುತ್ತದೆ ಎಂದರು.
ರೈತರು ಈ ಯೋಜನೆಯಲ್ಲಿ ಹಿಟ್ಟಿನ ಗಿರಣಿ, ಖಾರ ಕುಟ್ಟುವ ಮಷೀನ್, ರೊಟ್ಟಿ ಮಾಡುವ ಮಷೀನ್, ಚಿಪ್ಸ್ ಮಾಡುವ ಮಿಷನ್, ಪಾಪಡ್ ಮಾಡೋ ಮಷೀನ್, ನೂಡಲ್ಸ್ ಶಾವಿಗೆ ಮಷೀನ್, ಜ್ಯೂಸ್ ಪ್ರೊಸೆಸಿಂಗ್ ಮಷೀನ್, ರವಾ ಮಾಡುವ ಮಷೀನ್, ದಾಲ್ ಮಾಡುವ ಮಷೀನ್, ಹಾಗೂ ರೈತ ಬೆಳೆದಂತಹ ಎಣ್ಣೆ ಬೀಜಗಳಿಂದ ಮನೆಯಲ್ಲಿಯೇ ಖಾದ್ಯತೈಲಗಳನ್ನು ತಯಾರಿಸಬಹುದು. ಹೀಗೆ ಯಾವುದೇ ಆಹಾರದ ಮೌಲ್ಯವರ್ಧನೆ ಗೊಳಿಸಲು ಬೇಕಾಗುವ ಮಷೀನ್ ಗಳನ್ನು ಪಡೆಯಬಹುದಾಗಿದೆ. ರೈತರು ಇಂತಹ ಯಂತ್ರಗಳನ್ನು ಖರೀದಿ ಮಾಡುವ ಮೂಲಕ ತಮ್ಮ ಬದುಕನ್ನು ಕೃಷಿ ಚಟುವಟಿಕೆ ಜೊತೆಗೆ ತಮ್ಮ ಬೆಳೆಗಳ್ನು ಮೌಲವರ್ಧನೆ ಮಾಡಿಕೊಂಡು ಉದ್ದಿಮೆಯಾಗಿ, ವ್ಯಾಪಾರಸ್ಥನಾಗಲು ಸಾಧ್ಯವಿದೆ. ಆ ದಿಕ್ಕಿನ ಕಡೆಗೆ ವಿದ್ಯಾವಂತ ಯುವ ರೈತರು ಗಮನ ಹರಿಸುವ ಅಗತ್ಯವಿದ್ದು, ನಾವು ಹಳೆ ಪದ್ದತಿಯಲ್ಲಿ ಮುಂದುವರೆಯಲಾರದೇ ರೈತರು ಹೊಸ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಮಲ್ಲಿಕಾರ್ಜುನ ಖಾನಗೌಡ್ರ ಮತ್ತು ರಮೇಶ ಖಾನಗೌಡ್ರ ಅವರನ್ನು ಸಂಸದರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶಿವರುದ್ರ ಬಿ.ಪಾಟೀಲ, ಹಣಮಂತ ಸಂಗಟಿ, ಬೋಜರಾಜ ಬೆಳಕೂಡ, ಬಸವರಾಜ ಕಡಾಡಿ, ಮಲ್ಲಪ್ಪ ಖಾನಗೌಡ್ರ, ಅಡಿವೆಪ್ಪ ಕುರಬೇಟ, ಈರಪ್ಪ ಚೌಗಲಾ, ರಮೇಶ ಗೋಸಬಾಳ, ಕೃಷಿ ಇಲಾಖೆ ಸಿಬ್ಬಂದಿಗಳಾದ ಕೃಷಿ ಅಧಿಕಾರಿ ಪರಸಪ್ಪ ಹುಲಗಬಾಳ, ಆತ್ಮಾ ಅಧಿಕಾರಿ ಪೂರ್ಣಿಮಾ ವಡ್ರಾಂಳಿ, ಪರಪ್ಪ ಗಿರೆಣ್ಣವರ ಸೇರಿದಂತೆ ಅನೇಕ ಪ್ರಗತಿಪರ ರೈತರು ಉಪಸ್ಥಿತರಿದ್ದರು.
ಪೋಟೋ ಶೀರ್ಷಿಕೆ: ಕಲ್ಲೋಳಿ ಪಟ್ಟಣದ ಕೃಷಿ ಸಂಜೀವಿನಿ ಸಾವಯವ ಕೇಂದ್ರದ ವತಿಯಿಂದ ನಿರ್ಮಿಸಲಾದ ಸಾವಯವ ಮಳಿಗೆ ಹಾಗೂ ಯಂತ್ರಗಳಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಚಾಲನೆ ನೀಡಿದರು. ಮಲ್ಲಿಕಾರ್ಜುನ ಖಾನಗೌಡ್ರ, ಹಣಮಂತ ಸಂಗಟಿ ಸೇರಿದಂತೆ ಅಧಿಕಾರಿಗಳು ಇದ್ದರು.