(ಎ.ಎನ್.ರಮೇಶ, ರಾಜಪ್ಪ ಎಕೆ, ಸುರೇಶ ಕಂಬಳಿ, ಡಾ.ನಾಗೇಶ ಬಸಪ್ಪ, ಲಕ್ಷ್ಮೀದೇವಿ ಕಮ್ಮಾರ, ಯೋಗೇಂದ್ರ ನಾಯಕ )
ಇದು ಕವಿತೆಯಲ್ಲ.. ಕುಟುಂಬದ ಸುರಕ್ಷೆ-ಸೌಖ್ಯಕ್ಕಾಗಿ ಕರ್ಪೂರದಂತೆ ಉರಿಯುತ್ತಿದ್ದರೂ ನಮ್ಮೆಲ್ಲರ ಕಂಗಳಿಗೆ ಅವ್ಯಕ್ತವಾಗಿಯೇ ಉಳಿದುಬಿಡುವ ಅಪ್ಪನೆಂಬ ದೈವತ್ವದ ಅನಾವರಣದ ಅಕ್ಷರ ಪ್ರಣತೆ. ಅನುಕ್ಷಣ ಅಂಬರವಾಗಿ ಪ್ರತಿಮನೆ ಮನೆಯ ಕಾಪಿಟ್ಟು ಕಾಯುತಿರುವ ಲೋಕದ ಸಮಸ್ತ ತಂದೆಯರಿಗೆ ಅರ್ಪಣೆ ಈ ಕವಿತೆ.”
ಅಪ್ಪನೆಂದೂ ಅವ್ಯಕ್ತ.!
ತನ್ನೆಲ್ಲ ಸುಖಗಳನು ತೆತ್ತು
ದುಡಿವನು ಮೂರು ಹೊತ್ತು
ಸದಾ ಕೊಡುವುದಷ್ಟೆ ಗೊತ್ತು
ಅಪ್ಪ ಬೇಡುವುದಿಲ್ಲ ಯಾವತ್ತು.!
ಅಪ್ಪನ ಭವ್ಯ ಹೆಗಲೆಂದರೆ
ಸದಾ ಭದ್ರತೆಯ ಸುಭದ್ರನೆಲೆ.!
ಅಪ್ಪನ ದಿವ್ಯ ಕಂಗಳೆಂದರೆ
ಸಾಧನೆಗಳಿಗೆ ಸ್ಫೂರ್ತಿಸೆಲೆ.!
ಕಠಿಣ ಚಿಪ್ಪಿನೊಳಗಿರುವ
ಅಪೂರ್ವ ಸ್ವಾತಿಮುತ್ತಿನಂತೆ
ಅಪ್ಪನ ಬೈಗುಳದೊಳಗಿಹುದು
ಅಂತರಾಳದ ಅನನ್ಯ ಪ್ರೀತಿ.!
ನೋವು ಆಘಾತಗಳಿಗೆ ಅತ್ತು
ಅಮ್ಮ ಹಗುರಾಗಿ ಬಿಡುತ್ತಾಳೆ
ಅಪ್ಪ ಒಳಗೊಳಗೇ ಕೊರಗಿ
ಕುಗ್ಗಿ ಕನಲಿ ಕೃಶವಾಗುತ್ತಾನೆ.!
ಹರಿಸುವ ಬೆವರನ್ನಾಗಲೀ
ಒಳಗಿನ ನಿಟ್ಟುಸಿರನ್ನಾಗಲೀ
ತೋರದೆ ನಿತ್ಯ ಕಾಯುತ್ತಾನೆ.
ನೊಂದರು ಮೇಲೆ ನಗುತ್ತಾನೆ.!
ಮಗನ ಬೈಕು, ಮಗಳ ಮೊಬೈಲು
ಬೇಡಿಕೆಗಳಿಗಾಗಿಯೇ ದುಡಿಯುತ್ತ
ಹರಿದ ಬನಿಯನ್ನು, ಚಪ್ಪಲಿಗಳಲ್ಲೇ
ದಿನಗಳನು ದೂಕಿ ಬಿಡುತ್ತಾನೆ.!
ಮನೆ ಮಕ್ಕಳಿಗಾಗಿ ಶ್ರಮಿಸುತ್ತ
ಹಾಗೇ ಜೀವ ಸವೆಸಿಬಿಡುತ್ತಾನೆ.!
ಸತಿಸುತರ ಮುಂದೆ ಬಿಟ್ಟು ತಾನು
ಹಿಂದೆಯೇ ಉಳಿದು ಬಿಡುತ್ತಾನೆ.!
ಎ.ಎನ್.ರಮೇಶ್. ಗುಬ್ಬಿ.
ಅಪ್ಪ …..
ಗುಡುಗು-ಮಿಂಚು ಶಬ್ದಕ್ಕೆ
ನಾ ಭಯಭೀತನಾದೆ
ಬೆನ್ನು ತಟ್ಟಿದ ಅಪ್ಪ
ಹದ್ದಿನ ಕಣ್ಣು ನನ್ನ ಮ್ಯಾಲೆ
ವಿದ್ಯಾವಂತನಾಗಲು ಕಳಿಸಿದ ಶಾಲೆ
ಸ್ಲೇಟ್ – ಬಳಪ ಕೊಡಿಸಿದ ಅಪ್ಪ
ಆಕಾಶ ಮುಟ್ಟಲು ಕಾತುರ
ಹೆಗಲ ಮ್ಯಾಲೆ ಕೂರಿಸಿದ
ನಗು-ನಗುತಾ ಅಪ್ಪ
ಹಗಲಿರುಳು ಗುಲಾಮನಾದ
ಧಣಿಗಳ ಮನೆಯಲ್ಲಿ
ಅಂತರಾಳ ನೋವು ಹೇಳದೆ ಅಪ್ಪ
ಚಿಗುರು ಮೀಸೆಯ ಕಂಡು
ಎದೆಯೆತ್ತರ ಬೆಳೆದ
ನನ್ನ ಮಗನೆಂದು ಉಬ್ಬಿದ ಅಪ್ಪ
ನನಗೊಂದು ಹೆಸರಿಟ್ಟ ರಾಜಪ್ಪ
ಸೊಸೆಯ ಕಾಣದೆ ಕಾಲವಾದ ನನ್ನಪ್ಪ
ರಾಜಪ್ಪ ಎಕೆ
ಅಪ್ಪಾ….
ನಿನ್ನ ಬಟ್ಟೆ ಹರಿದರೂ
ನನಗೆ ಇಸ್ತ್ರಿ ಬಟ್ಟೆ
ಹಾಕಿಸಿ ನಲಿದೆ
ನಿನಗೆ ಹಸಿವಾದರೂ
ನನಗೆ ಉಪವಾಸ
ಮಾಡದೆ ಉಳಿದೆ
ನಿನ್ನ ನೋವು ನೂರು.
ನನಗೆ ಕಣ್ಣೀರು
ಬರದಂತೆ ಪೊರೆದೆ
ನಿದ್ದೆ ಎಂಬುದೆ ಗೊತ್ತಿಲ್ಲ.
ಲಾಲಿ ಹಾಡುತ
ನನ್ನ ಮಲಗಿಸಿದೆ
ಸಾಲದ ಹೊರೆ ಇದ್ದರೂ
ನನ್ನ ಕೈ ಖಾಲಿ
ಇಡದಂತೆ ದುಡಿದೆ
ನೀನು ಅನಕ್ಷರಸ್ಥ ಇದ್ದು
ನನ್ನನ್ನು ಕಾಲೇಜು
ಮೆಟ್ಟಿಲು ಹತ್ತಿಸಿದೆ
ನಾನು ಜೀವಂತ ಇರುವೆ.
ನೀನೆ ಮೊದಲು
ಹೊರುಟುಬಿಟ್ಟೆ ಅಪ್ಪ!
ಸುರೇಶ ಕಂಬಳಿ
ಅಪ್ಪ ನೀ ಮನೆಯ ದೀಪ
ಅಪ್ಪನಿದ್ಧರೇ ಬಂಗಾರದ ಬದುಕು…
ಅಪ್ಪನಿಲ್ಲದ ಮನೆ ಅನಾಥದ ಅಳುಕು…. ಅಪ್ಪನಿಲ್ಲದೆ ಅವ್ವನ ಜೀವನ ಕೊಳಕು…. ಅಪ್ಪನಿದ್ದರೆ ಮಕ್ಕಳಿಗೆ ಬೆಳಕು…
ಅಪ್ಪ ನೀ ಮನೆಯ ದೀಪ……
ಅಪ್ಪ ನೀ ಮನೆಯ ಶಕ್ತಿ……
ಅಪ್ಪನಿದ್ದರೆ ಮನೆಯ ಬದುಕಿಗೆ ಮುಕ್ತಿ…. ಮಕ್ಕಳಿಂದ ಸಿಗುವುದು ನಿನಗೆ ದೇವರ ರೂಪದ ಭಕ್ತಿ……
ಅಪ್ಪನಿದ್ದರೆ ಅವ್ವನ ಜೀವನವೇ ತೃಪ್ತಿ…..
ನೀ ಇದ್ದರೆ ಮನೆಯ ಹೆಸರಿಗೆ ಕೀರ್ತಿ…. ಮನೆಯ ಬದುಕಿಗೆ ಸ್ಫೂರ್ತಿ…. ಅಪ್ಪ ನೀ ಮನೆಯ ಶಕ್ತಿ….
ನೀ ಇಲ್ಲದ ಬದುಕು ನರಕವಪ್ಪ….
ನೀ ಇಲ್ಲದ ಮನೆ ಕತ್ತಲೆಯಪ್ಪ…..
ದೇಶ ಸುತ್ತಿಸುವುದು ನೀನಪ್ಪ…..
ಕೋಶ ಓದಿಸುವುದು ನೀನಪ್ಪ…
ಮನೆಯ ಕಾಯಕದ ಲೋಕಪ್ಪ….ಅವ್ವನಿಗೆ ಪ್ರಪಂಚವೇ ನೀನಪ್ಪ….
ನೀ ಇಲ್ಲದೆ ಬದುಕುವುದು ಹೇಗಪ್ಪ…. ನೀ ಇಲ್ಲದ ಬದುಕು ನರಕವಪ್ಪ…..
ನೀ ಇಲ್ಲದ ಬದುಕು ಹರಿದ ಬಟ್ಟೆ….. ಕಳೆಯಿಂದ ಕಳಚಿ ಹೋದ ಮನೆಯ ಕಟ್ಟೆ….
ಬಡತನದಿಂದ ಬಳಲುವ ಮನೆಯ ತಟ್ಟೆ….
ಪ್ರತಿನಿತ್ಯ ಸುಡುವುದು ಮನೆಯ ಹೊಟ್ಟೆ…. ನೀ ಇಲ್ಲದೆ ಸೋತು ಹೋಯಿತು ಅವ್ವನ ರಟ್ಟೆ……
ನೀನು ಬಿಟ್ಟು ಹೋದ ಮಕ್ಕಳಿಗಾಗಿ ಗಟ್ಟಿಯಾಗಿ ನಿಂತಿತು ಅವ್ವನ ಹೊಟ್ಟೆ……
ಡಾ. ನಾಗೇಶ್ ಬಸಪ್ಪ ಜಾನೇಕಲ್
ಅಪ್ಪನೆಂದರೆ ಕಡಲು
ಅಪ್ಪ ನನಗೆ ಯಾವಾಗಲು ಕಡಲಿನಂತೆ
ಅದೇ ಅರ್ಭಟ, ನಿಗೂಢ, ಅಗಾಧತೆ
ಆತನ ಕೈ ಬೆರಳ ಹಿಡಿದು
ಅಂಗಡಿ ಬಜಾರ,ನದಿ ದಡದಗುಂಟಾ ಸುತ್ತಾಡಿದರೆ
ಎಲ್ಲೆಲ್ಲಿಯ ಸಂಭ್ರಮ ಸಡಗರ
ಕಡಲ ತಟದಲಿ, ಅಲೆಗಳೊಂದಿಗೆ ‘ನೀರಾಟಕ್ಕಿಳಿದಂತೆ ಆನಂದ
ಜಾತ್ರೆ, ಉತ್ಸವಗಳಲ್ಲಿ
ಅಪ್ಪನ ಹೆಗಲೇರಿ ಹೊರಟರೆ
ಜನಸಾಗರದ ಮಧ್ಯೆ ತಲೆ ಎತ್ತಿ
ಉತ್ಸವದ ಮೂರ್ತಿ ನಾನೆಂಬ
ಗರ್ವ ಹೆಮ್ಮೆ
ಅಪ್ಪನೊಂದಿಗಿದ್ದರೆ ಯಾವ ಭಯವಿಲ್ಲ
ಮಳೆ-ಗುಡುಗು-ಸಿಡಿಲಿನ ಆರ್ಭಟ
ಉರಿಬಿಸಿಲು, ಸೋಲು, ಅವಮಾನಗಳಿಗೆ ಅಪ್ಪನ ಬಳಿ ಯಾವಾಗಲು
ಎಲ್ಲದಕ್ಕೂ ಪರಿಹಾರ
ಅಪ್ಪನೆಂದರೆ ಸದಾ ಕಾಯುವ ನೆರಳು,
ಧೈರ್ಯ ,ಬಲಕ್ಕೆ ಅಪ್ಪನ ತೋಳು
ಕಷ್ಟಕಾರ್ಪಣ್ಯದಲ್ಲಿ ಬಲವಾದ ಹೆಗಲು
ಲಕ್ಷ್ಮೀದೇವಿ ಕಮ್ಮಾರ, ಪ್ರೌಢಶಾಲಾ ಶಿಕ್ಷಕಿ, ಬರಹಗಾರ್ತಿ, ಗಂಗಾವತಿ
ಅಪ್ಪ
ಕರಗೋ ಬಂಡೆಯ ಕರಿ ಮಣ್ಣ ಎದೆಯ
ಗಿರಿಯ ಸಿರಿಯ
ಹಿಮದ ಪರಿಯ ನೀರಿನ ಪನಿ ನನ್ನಪ್ಪ
ಸರಳ ಸುಂದರ ಇರುಳ ಚಂದಿರ
ಹಾಲ ಆತ್ಮದ ಇಂದುಧರ ನನ್ನಪ್ಪ ||1||
ಬಾನ ತಾಪದ ಕಡಲ ಕೋಪದ
ಬಾಂದಳದಗಲದ ಸುಕೋಮಲ ಮನದ
ಕಾನನ ಕುಸುಮ ನನ್ನಪ್ಪ
ಬಾಡುವ ಬಳ್ಳಿಯ ಅಂಗ ಸೌಧದಲಿ
ಅರಳಿ ಗಂಧ ಚೆಲ್ಲುವ ಹೂವ ಛಲದವನು ನನ್ನಪ್ಪ ||1||
ಸಿಡಿಲ ಸಿಡುಕಿನ ಗುಡುಗ ಗಡಸಿನ
ಬೆಳದಿಂಗಳ ಹೊಳಪಿನ
ಕತ್ತಲೆಯ ಆಚೆಗೂ ಬೆಳಗುವ ಧ್ರುವತಾರೆ ನನ್ನಪ್ಪ
ಯಾವ ತಳುಕಿನ ಯಾವ ಕೊಳಕಿನ
ಸೋಂಕಿಲ್ಲದ ಭೂಮಿ ತೂಕದ ನಡೆಯವನು ನನ್ನಪ್ಪ ||3||
ಕಷ್ಟದ ಕಣ್ಣಾಗಿ ಸುಖದ ಬೆನ್ನಾಗಿ
ಭರವಸೆಯ ಗೂಡಾಗಿ
ವರ್ಷದ ಕೂಳಿಗೆ ಹರ್ಷದಲಿ ದುಡಿದವನು ನನ್ನಪ್ಪ
ಬೇಡಿ ಬದುಕಿದವನಲ್ಲ ಕಾಡಿ ಕೇಳಿದವನಲ್ಲ
ಕಾಸಿನ ಕಾಲು ಹಿಡಿದವನಲ್ಲ ಮಣ್ಣ ಗಡಿಗೆಯಂತಿದ್ದವನು ನನ್ನಪ್ಪ ||4||
ಅವ್ವಳ ಆಸೆಗೆ ಹಿಮವಾಗುತ್ತಿದ್ದ
ಮಕ್ಕಳ ಬಾಳಿಗೆ ಕರಗಿ ನೀರಾಗುತ್ತಿದ್ದ
ತನ್ನ ಸುಖವನು ಸಂಸಾರ ಸಾಗರದಲ್ಲಿ ಸುರಿಯುತ್ತಿದ್ದ ನನ್ನಪ್ಪ
ದಿನದ ಆಟಕ್ಕೆ ಬೆವರ ಪಾಠ ಕಲಿಯುತ್ತಿದ್ದ
ಆಗಸದೆತ್ತರಕ್ಕೆ ಬೆಳೆದಿದ್ದರೂ ಕೂಸಾಗಿರುತ್ತಿದ್ದ ನನ್ನಪ್ಪ.
ಯೋಗೇಂದ್ರ ನಾಯ್ಕ್
ಶಿಕ್ಷಕರು