spot_img
spot_img

ಮುರುಘೇಂದ್ರ ಮಹಾಸ್ವಾಮಿಗಳ ವೈಶಿಷ್ಟ್ಯಪೂರ್ಣ ಜನ್ಮದಿನಾಚರಣೆ

Must Read

ಜೂನ್ ೧೦ ರಂದು ಮುನವಳ್ಳಿ ಸೋಮಶೇಖರ ಮಠದ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳ ೪೮ ನೇ ಜನ್ಮದಿನ ತನ್ನಿಮಿತ್ತ ವಿವಿಧ ವರ್ಗಗಳ ಆಯ್ದ ಕುಶಲಕರ್ಮಿಗಳಿಗೆ ಗೌರವ ಸನ್ಮಾನ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ಗುರುವಂದನೆ ಹಾಗೂ ಮಹಾಪ್ರಸಾದ ಕಾರ್ಯಕ್ರಮ ಶುಕ್ರವಾರ ಜೂನ್ ೧೦ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶ್ರೀಮಠದ ಸಭಾಂಗಣದಲ್ಲಿ ಜರುಗಲಿದೆ.

ಸಮಾರಂಭದ ಪಾವನ ಸಾನಿಧ್ಯವನ್ನು ಉಪ್ಪಿನ ಬೆಟಗೇರಿಯ ವಿರುಪಾಕ್ಷ ಸ್ವಾಮಿಗಳು ಕಮತಗಿಯ ಹುಚ್ಚೇಶ್ವರ ಮಹಾಸ್ವಾಮಿಗಳು. ಅಮೀನಗಿಡದ ಪ್ರಭುಶಂಕರ ರಾಜೇಂದ್ರ ಸ್ವಾಮೀಜಿ, ಕುಂದರಗಿ ಅಮರಸಿದ್ದೇಶ್ವರ ಸ್ವಾಮಿಗಳು, ಬೈಲಹೊಂಗಲದ ಪ್ರಭು ನೀಲಕಂಠಸ್ವಾಮಿಗಳು, ಚೀಕಲಪರ್ವಿಯ ಸದಾಶಿವ ಶ್ರೀಗಳು ಸಾನಿಧ್ಯ ವಹಿಸುವರು.

ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರದ ಅಂಗ ಸಂಸ್ಥೆಗಳು.ಸಹಸಜ ಸ್ಥಿತಿ ಯೋಗ ಸತ್ಸಂಗ ಬಳಗ. ಅಕ್ಕನ ಬಳಗ ಹಾಗೂ ವಿವಿಧ ಸಂಘ ಸಂಸ್ಥೆಗಳು ಹಾಗೂ ಸದ್ಭಕ್ತರ ವತಿಯಿಂದ ಮುರುಘೇಂದ್ರ ಮಹಾಸ್ವಾಮಿಗಳಿಗೆ ಗುರುವಂದನೆ ಜರುಗಲಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

ಮುನವಳ್ಳಿಯಲ್ಲಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳ ನೇತೃತ್ವ ಇದ್ದೇ ಇರುತ್ತದೆ. ಕೋರೋನಾ ಸಂದರ್ಭದಲ್ಲಿ ಪೂಜ್ಯರು ಮಠದಲ್ಲಿ ಕುಳಿತು ಕೊಳ್ಳದೇ ಕೋರೋನಾ ಪೀಡಿತರಿಗೆ ಸಾಂತ್ವನ ಹೇಳುವ ಜೊತೆಗೆ ಅವರಿಗೆ ಔಷಧೋಪಚಾರಕ್ಕೆ ನೆರವಾಗುವ ಜೊತೆಗೆ ಕೋರೋನಾ ಸೇನಾನಿಗಳಿಗೆ ಪ್ರೋತ್ಸಾಹ ತುಂಬಿ ಹಬೆಯ ಕಿಟ್‌ಗಳನ್ನು ಶ್ರೀಮಠದ ವತಿಯಿಂದ ನೀಡುವ ಮೂಲಕ ಸಮಾಜಮುಖಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಅವರ ಮಾತೃಹೃದಯಕ್ಕೆ ಹಿಡಿದ ಕೈಗನ್ನಡಿ.

ರೈತರಿಗೆ ಅವರ ಹೊಲಗಳಿಗೆ ತೆರಳುವ ಜೊತೆಗೆ ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಲು ಉತ್ತೇಜನ ನೀಡುವ ಮೂಲಕ ಕೃಷಿ ಕ್ರಾಂತಿ ಈ ಭಾಗದಲ್ಲಿ ಜರುಗಲಿ ಎಂದು ಪ್ರೋತ್ಸಾಹ ನೀಡುತ್ತಿರುವರು. ಇವರ ಸಮಾಜಮುಖಿ ಕಾರ್ಯಗಳು ಹತ್ತು ಹಲವು. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು ನೀಡುವುದರೊಂದಿಗೆ ಹಿಡಿದು ಸ್ವ ಉದ್ಯೋಗ ಕೈಗೊಳ್ಳುವ ಯುವಕರಿಗೆ ಪ್ರೋತ್ಸಾಹ ನೀಡುವ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೂ ಆಧಾರಸ್ಥಂಭವಾಗಿರುವರು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೂಡ ಧಾರ್ಮಿಕ ಚಟುವಟಿಕೆಗಳಲ್ಲಿ ಶ್ರೀ ಗಳ ನೇತೃತ್ವ ಇದ್ದೇ ಇರುತ್ತದೆ.ಹಿಟ್ಟಣಗಿ ಗ್ರಾಮದ ಲ್ಲಿ ಸಂಗಮೇಶ್ವರ ಮಠದ ಧಾರ್ಮಿಕ ಕಾರ್ಯ ಗಳು. ಆಲದ ಕಟ್ಟಿ ಗ್ರಾಮದ ಲ್ಲಿ ಬಸವೇಶ್ವರ ಮೂರ್ತಿ ಅನಾವರಣ ಹಾಗೂ 5 ದಿನಗಳ ಪುರಾಣ ಪ್ರವಚನ ನೇತೃತ್ವ ವಹಿಸುವ ಮೂಲಕ ಶ್ರೀ ಗಳು ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಸಮಾಜಮುಖಿ ಕಾರ್ಯ ಗಳನ್ನು ಕೈಗೊಳ್ಳಲು ಜನರ ಸಹಕಾರ ನಿಜಕ್ಕೂ ಸ್ಮರಣಾರ್ಹ. ಮುನವಳ್ಳಿಯ ಮಲಪ್ರಭಾ ನದಿಯ ಪ್ರವಾಹ ಸಂದರ್ಭದಲ್ಲಿ ನೆರೆ ಪೀಡಿತ ಜನರಿಗೆ ಶ್ರೀ ಮಠದಲ್ಲಿ ಆಶ್ರಯ ನೀಡಿದ್ದು ಈಗ ಇತಿಹಾಸ.

ಇಂತಹ ಮಾತೃ ಹೃದಯದ ಪೂಜ್ಯರ ಕುರಿತು ನನ್ನ ನುಡಿ ನಮನ:

ಮುನವಳ್ಳಿಯ ಸೋಮಶೇಖರ ಮಠ ತನ್ನದೇ ಆದ ಮುನಿ ಪರಂಪರೆ ಹೊಂದಿದ್ದು ಈ ಮಠಕ್ಕೆ ೧೬ ನೇ ಪೀಠಾಧಿಪತಿಗಳಾಗಿ ಪೂಜ್ಯಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ದಯಮಾಡಿಸಿದ ಮೇಲೆ ಈ ಭಾಗದಲ್ಲಿ ನವ ಮನ್ವಂತರವೇ ಕಾಲಿಟ್ಟಿತು.ಪೂಜ್ಯರು ಪ್ರತಿವರ್ಷ ಪೂಜ್ಯಶ್ರೀ ಲಿಂಗೈಕ್ಯ ಬಸವಲಿಂಗ ಮಹಾಸ್ವಾಮಿಗಳವರ ಪುಣ್ಯಸ್ಮರಣೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಧಾರ್ಮಿಕ ಪರಂಪರೆಯಲ್ಲಿ ವಿನೂತನ ಹೆಜ್ಜೆಯನ್ನಿರಿಸಿದರು.

ಇಂಥ ಮಠ ಹಮ್ಮಿಕೊಂಡಿರುವ ಧಾರ್ಮಿಕ ಚಟುವಟಿಕೆಗಳು ನಿಜಕ್ಕೂ ಅಭೂತಪೂರ್ವ. ಶ್ರೀ ಮಠವು ಪುರಾತನವಾದುದು. ಈ ಮಠದ ಮುಂಭಾಗ ಹಳೆಯ ಕಲ್ಲುಗಳಿಂದ ಮಹಾದ್ವಾರ ಒಳಗೊಂಡಿದ್ದು ಒಳ ಪ್ರಾಂಗಣದಲ್ಲಿ ಕರ್ತೃ ಗದ್ದುಗೆ.ಪಕ್ಕದಲ್ಲಿ ಮಹಡಿ ಒಳಗೊಂಡಿದ್ದು ಹಳೆಯ ಕಾಲದ ಕಟ್ಟಿಗೆಯ ಬಳಸಿ ನಿರ್ಮಿಸಲಾಗಿದ್ದು,ಪಕ್ಕದಲ್ಲಿ ಸಭಾಭವನ ಹೊಂದಿದ್ದು ಪುರಾತನ ಇತಿಹಾಸದ ಜೊತೆಗೆ ಆಧುನಿಕ ಸ್ಪರ್ಶದ ಕಟ್ಟಡದೊಂದಿಗೆ ಮೇಳೈಸಿರುವ ಸೋಮಶೇಖರ ಮಠ ಮುನವಳ್ಳಿಯಲ್ಲಿ ಒಂದು ಮಾದರಿ ಮಠವಾಗಿ ಕಂಗೊಳಿಸುತ್ತಿದೆ.

ಮುನವಳ್ಳಿ ಸೋಮಶೇಖರ ಮಠಕ್ಕೆ ಬಹುದೊಡ್ಡ ಪರಂಪರೆಯಿದೆ. ಈ ಮಠಕ್ಕೆ ೧೫ ಜನ ಮಹಾಸ್ವಾಮಿಗಳು ಆಗಿ ಹೋಗಿದ್ದಾರೆ. ಇಂತಹ ಸತ್ಪರಂಪರೆ ಹೊಂದಿದ ಮಠಕ್ಕೆ ೧೬ ನೇ ಪೀಠಾಧಿಕಾರಿಗಳಾಗಿ ಬಂದವರು ಶ್ರೀ ಮ.ನಿ.ಪ್ರ.ಮುರುಘೇಂದ್ರ ಮಹಾಸ್ವಾಮಿಗಳು, ಮಠಕ್ಕೆ ಬಂದ ಕೆಲವೇ ದಿನಗಳಲ್ಲಿ ಭಕ್ತರ ಪ್ರೀತಿಯನ್ನು ಸಂಪಾದಿಸಿ ತಮ್ಮ ಪೂಜಾಬಲ, ಹಾಗೂ ಕಾಯಕದಿಂದ ಮುನವಳ್ಳಿಯ ನಡೆದಾಡುವ ದೇವರೆಂದು ಜನರಿಂದ ಬಿಂಬಿತವಾದವರು. ಮುನವಳ್ಳಿಯ ಸುತ್ತಮುತ್ತಲಿನ ಅನೇಕ ಸ್ಥಳಗಳಲ್ಲಿ ಹಾಗೂ ಮುನವಳ್ಳಿಯಲ್ಲಿ ಯಾವುದೇ ಕಾರ‍್ಯಕ್ರಮಗಳಿರಲಿ, ಯಾವುದೇ ಜಾತಿ ಜನಾಂಗದ ಸಭೆ ಸಮಾರಂಭಗಳಿರಲಿ ಅಲ್ಲಿ ಪೂಜ್ಯರ ಸಾನಿಧ್ಯ ಇದ್ದದ್ದೇ. ಯಾವುದೇ ಸತ್ಕರ್ಮ ಕಾರ್ಯಗಳಿದ್ದರೂ ಪೂಜ್ಯರ ಸಲಹೆ ಕೇಳುವ ಮೂಲಕ ಮುಂದಡಿಯಿಡುವ ಮಟ್ಟಿಗೆ ಜನರಲ್ಲಿ ಪೂಜ್ಯರು ನೆಲೆಸಿರುವರು.

ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳು:

ಮುರುಘೇಂದ್ರ ಮಹಾಸ್ವಾಮೀಗಳು ಮೂಲತ: ಸವದತ್ತಿ ತಾಲೂಕಿನ ಕುಶಲಾಪುರ ಎಂಬ ಗ್ರಾಮದ ಶರಣ ದಂಪತಿಗಳಾದ ಲಿಂ.ವೀರಯ್ಯಾ ಮತ್ತು ಸಿದ್ದಮ್ಮನವರ ಉದರದಲ್ಲಿ ೧೦ ಜೂನ್ ೧೯೭೪ ರಲ್ಲಿ ಜನ್ಮ ತಾಳಿದರು.

ಇವರ ಮನೆಯಲ್ಲಿ ಮೊದಲಿನಿಂದಲೂ ಅಥಣಿಯ ಮುರುಘೇಂದ್ರ ಸ್ವಾಮಿಗಳ ಬಗ್ಗೆ ಅಪಾರ ಭಕ್ತಿ,ಮಮತೆ, ಹೀಗಾಗಿ ಇವರಿಗೆ ಮುರುಘೇಂದ್ರ ಎಂಬ ನಾಮಕರಣ ಮಾಡುವ ಮೂಲಕ ಇವರ ಮಾತಾಪಿತರು ಮುರುಘೇಂದ್ರರ ಹೆಸರು ಕರೆದರು. ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿನ ಇವರ ತೇಜಸ್ಸು ಮುಂದೊಂದು ದಿನ ಈ ವ್ಯಕ್ತಿ ಸಮಾಜದಲ್ಲಿ ಹೆಸರುವಾಸಿಯಾಗುತ್ತಾನೆ ಎಂಬಂತಿತ್ತು.

ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಕಲಿತು ಮುಂದೆ ಪ್ರೌಢ ಶಿಕ್ಷಣವನ್ನು ಯಕ್ಕುಂಡಿ ಗ್ರಾಮದಲ್ಲಿ ಪೂರೈಸಿದರು. ಬೆಳಗಾವಿಯ ಶ್ರೀ ಶಿವಬಸವ ಮಹಾಸ್ವಾಮಿಗಳು ಹಾಗೂ ಯಕ್ಕುಂಡಿಯ ಶ್ರೀ ವಿರುಪಾಕ್ಷ ಪೂಜ್ಯರ ಅನುಗ್ರಹದ ಮೇರೆಗೆ ಮತ್ತು ಗ್ರಾಮದ ಗುರುಹಿರಿಯರು ಹಿತೈಷಿಗಳು ಇವರನ್ನು ಧಾರ್ಮಿಕ ಶಿಕ್ಷಣ ಪಡೆಯಲು ಶಿವಯೋಗ ಮಂದಿರಕ್ಕೆ ಕಳುಹಿಸಿದರು.ಶಿ ವಯೋಗಮಂದಿರದ ಪ್ರಭೆಯಲ್ಲಿ ಮಿಂದ ಇವರು ವಚನ ಸಾಹಿತ್ಯದ ದೀರ್ಘ ಅಧ್ಯಯನ,ಶಾಸ್ತ್ರ,ಅಧ್ಯಾತ್ಮ ಯೋಗ,ಸಂಸ್ಕೃತವನ್ನು ಸತತ ಮೂರು ವರ್ಷಗಳವರೆಗೆ ಅಧ್ಯಯನಗೈದರು.

ಇನ್ನೂ ಹೆಚ್ಚಿನ ಅದ್ಯಯನ ಮಾಡಬೇಕೆಂಬ ಹಂಬಲದಿಂದ ಕಮತಗಿಯ ಪೂಜ್ಯರಾದ ಶ್ರೀ ಹುಚ್ಚೇಶ್ವರ ಸ್ವಾಮಿಗಳ ಹಾಗೂ ಅಲ್ಲಿಯ ಭಕ್ತರ ಬಳಿ ಬಂದಾಗ ಮೈಸೂರಿನ ಸುತ್ತೂರು ಮಠಕ್ಕೆ ಸಂಸ್ಕೃತದಲ್ಲಿ ಹೆಚ್ಚಿನ ವ್ಯಾಸಾಂಗ ಪಡೆಯಲು ಕಳುಹಿಸಿದರು, ಇಲ್ಲಿಯ ಜೆ, ಎಸ್,ಎಸ್,ಗುರುಕುಲ ವಿದ್ಯಾಪೀಠದಲ್ಲಿದ್ದುಕೊಂಡು ಶಕ್ತಿವಿಶಿಷ್ಟಾದ್ವೈತವನ್ನು ಮಹಾರಾಜ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಪೂರೈಸಿದರು.

ಸುತ್ತೂರು ಮಠ ಅಧ್ಯಾತ್ಮಿಕ ಒಲವಿನ ತಾಣ.ಮೈಸೂರು ರಾಜ ಮನೆತನದ ಗುರುಗಳಾದ ಲಿಂ.ಶಿವರಾತ್ರೀಶ್ವರರ ಭಕ್ತಿಯ ಬಿಲ್ವವೇ ಈ ಮಠ.ಇಂತಹ ಮಠದಲ್ಲಿ ಜ್ಞಾನ ಸಂಪಾದನೆ ಕೂಡ ವಿಶಿಷ್ಟವೇ ಅದು ಮುರುಘೇಂದ್ರ ಮಹಾಸ್ವಾಮೀಜಿಯವರಿಗೆ ಸಿದ್ದಿಸುವ ಜೊತೆಗೆ ಜ್ಞಾನದ ಪ್ರಸರಣಕ್ಕೂ ಪ್ರೇರಣೆ ನೀಡಿತು.

೧೯೯೯ ನೇ ಜನೇವರಿ ೨೪ ರಂದು ಮುನವಳ್ಳಿಯ ಸೋಮಶೇಖರ ಮಠಕ್ಕೆ ಪರಮಪೂಜ್ಯ ಹಾನಗಲ್ಲ ಕುಮಾರ ಸ್ವಾಮಿಗಳ ಅಪ್ಪಣೆಯ ಮೇರೆಗೆ ಹಾಗೂ ಇದೇ ಮಠದ ೧೫ ನೆಯ ಪೀಠಾಧಿಪತಿಗಳಾಗಿದ್ದ ಶ್ರೀ ಚನ್ನಬಸವ ಮಹಾಸ್ವಾಮಿಗಳ ಸದಿಚ್ಚೆಯ ಮೇರೆಗೆ ಹಾನಗಲ್ಲ ಪರಮಪೂಜ್ಯರಾದ ಶ್ರೀ ಕುಮಾರ ಸ್ವಾಮಿಗಳು ಅಂದರೆ ಈಗಿನ ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರುಗಳಾದ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಅವರಿಂದ ಅಧಿಕಾರ ಪಡೆದು ಮುನವಳ್ಳಿಯ ಸೋಮಶೇಖರ ಮಠಕ್ಕೆ ಪೀಠಾಧಿಪತಿಗಳಾದರು.

ಸತ್ಪರಂಪರೆ ಹೊಂದಿದ ಶ್ರೀಮಠಕ್ಕೆ ಆಗಮಿಸಿದ ಸ್ವಾಮೀಜಿ ಗ್ರಾಮದ ಎಲ್ಲ ಹಿರಿಯರು,ಯುವಕರು,ಮಕ್ಕಳು,ಅಕ್ಕನ ಬಳಗದ ಮಾತೆಯರು ಹೀಗೆ ಎಲ್ಲರನ್ನು ಗಮನಕ್ಕೆ ತೆಗೆದುಕೊಂಡು ಕಾಯಕ ದಾಸೋಹದ ಅರಿವು ಮೂಡಿಸುವ ಜೊತೆಗೆ ಯಾವ ಜಾತಿ ಜಂಜಾಟಕ್ಕೆ ಸಿಲುಕದೇ ಎಲ್ಲ ಸಮಾಜದವರೊಂದಿಗೆ ಬೆರೆತು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಜನಹಿತ ಧಾರ್ಮಿಕ ಚಿಂತನೆಗಳನ್ನು ಮಾಡುತ್ತ ಮುನವಳ್ಳಯಲ್ಲಿ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ,ಶ್ರೀ ಅನ್ನದಾನೇಶ್ವರ ಸ್ವತಂತ್ರಪೂರ್ವ ಹಾಗೂ ಪದವಿ ಮಹಾವಿದ್ಯಾಲಯ,ಶ್ರೀ ಅನ್ನದಾನೇಶ್ವರ ಗ್ರಾಮೀಣ ಅಭಿವೃದ್ದಿ ಸಂಘ, ಶ್ರೀ ಅಕ್ಕನ ಬಳಗ,ಶ್ರೀ ಶರಣ ಬಳಗ,ಬೈಲಹೊಂಗಲದಲ್ಲಿ ಶ್ರೀ ವಿರುಪಾಕ್ಷ ಸ್ವಾಮಿ ವಿದ್ಯಾರ್ಥಿನಿಲಯ, ಭಂಡಾರಹಳ್ಳಿಯಲ್ಲಿ ಶ್ರೀಮತಿ ಅಂದಾನೆಮ್ಮ ಯಕ್ಕುಂಡಿಮಠ ಕನ್ನಡ ಪೂರ್ವಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಅನ್ನದಾನೇಶ್ವರ ಗ್ರಾಮೀಣ ಅಭಿವೃದ್ದಿ ಸಂಘ ಸ್ಥಾಪಿಸುವ ಮೂಲಕ ಅನ್ನದಾಸೋಹ. ಜ್ಞಾನದಾಸೋಹ ಕರ‍್ಯಗಳಿಗೆ ಚಾಲನೆ ನೀಡಿರುವರು.

ಶ್ರೀ ಮಠದ ಸಂಸ್ಥೆಗಳು:

 1. ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾಕೇಂದ್ರ ಮುನವಳ್ಳಿ
 2. ಶ್ರೀ ಅನ್ನದಾನೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಮುನವಳ್ಳಿ
 3. ಶ್ರೀಮತಿ ಅಂದಾನೆಮ್ಮ ಯಕ್ಕುಂಡಿಮಠ ಕನ್ನಡ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಭಂಡಾರಹಳ್ಳಿ
 4. ಶ್ರೀ ಚನ್ನಬಸವ ಮಹಾಸ್ವಾಮೀಜಿ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ ಮುನವಳ್ಳಿ
 5. ಶ್ರೀ ವಿರೂಪಾಕ್ಷಸ್ವಾಮಿ ವಿದ್ಯಾರ್ಥಿ ನಿಲಯ ಬೈಲಹೊಂಗಲ
 6. ಶ್ರೀ ಅನ್ನದಾನೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮುನವಳ್ಳಿ
 7. ಶ್ರೀ ಅಕ್ಕನ ಬಳಗ ಹಾಗೂ ಶರಣರ ಬಳಗ ಮುನವಳ್ಳಿ.

“ಮಠದಿಂದ ಘಟವಲ್ಲ ಘಟದಿಂದ ಮಠ” ಎಂಬ ಮಾತಿಗೆ ನಿದರ್ಶನರಾದ ಸ್ವಾಮೀಜಿಯವರು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಬೆಳಗಿನ ಜಾವ ಧಾರ್ಮಿಕ ಪಥಸಂಚಲನ ನಡೆಸುವ ಪರಂಪೆಗೆ ನಾಂದಿ ಹಾಡಿದ್ದು ಈ ಸಂದರ್ಭದಲ್ಲಿ “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂಬ ಬಸವ ಮಂತ್ರದ ಧ್ವನಿ ಎಲ್ಲೆಡೆ ಮೊಳಗುವಂತೆ ಮಾಡಿರುವರು.

ತಾಲೂಕಿನಾದ್ಯಂತ ಅಷ್ಟೇ ಅಲ್ಲ ರಾಜ್ಯದ ವಿವಿದೆಡೆ ಧಾರ್ಮಿಕ ಪ್ರವಚನಗಳು, ಸಾಂಸ್ಕೃತಿಕ ಕಾರ‍್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ಮುನವಳ್ಳಿಯ ನಾಡಹಬ್ಬ, ಹಾಗೂ ಜೇವೂರ ಗುರುಗಳ ಪ್ರತಿಷ್ಠಾನ ಸಮಾರಂಭಗಳಲ್ಲಿ ಭಾಗವಹಿಸುವ ಜೊತೆಗೆ ಅಲ್ಲದೇ ನಾಡಿನ ವಿವಿದೆಡೆ ಸಂಭವಿಸಿದ ಕ್ಷಾಮ.

ಭೂಕಂಪ,ನೆರೆಸಂತೃಸ್ತ ಘಟನೆಗಳು ನಡೆದಾಗ ಗ್ರಾಮದ ಹಿರಿಯರು ಯುವಕರೊಡನೆ ಸೇರಿ ಸಂತ್ರಸ್ತ ಜನರಿಗೆ ನೆರವು ನೀಡುವ ಕರ‍್ಯಕ್ಕೆ ಧಾನ್ಯ, ಹಣ ಇತ್ಯಾದಿ ಸಂಗ್ರಹಿಸಿ ನೀಡುವ ಜನಪರ ಕಾಳಜಿಯುಳ್ಳ ಕರ‍್ಯಗಳನ್ನು ಸಂಘಟಿಸುತ್ತ ನಾಡು ನುಡಿಯ ಬಿತ್ತರಿಸುವಲ್ಲಿ ಕಾಳಜಿವಹಿಸಿರುವರು.

ಪ್ರತಿವರ್ಷ ವರವಿಕೊಳ್ಳ ಸುಕ್ಷೇತ್ರದಲ್ಲಿ ಜನಸಾಮಾನ್ಯರೊಡನೆ ಶರಣರು ಎಂಬ ತತ್ವದಡಿಯಲ್ಲಿ ಇಷ್ಟಲಿಂಗಪೂಜಾ ವಿದಾನ, ಅದರ ಮಹಿಮೆ ಹಾಗೂ ಕಾಯಕನಿಷ್ಠೆ ಕುರಿತ ಕಾರ್ಯದಲ್ಲಿ ತೊಡಗಿರುವರು.ಶ್ರೀಮಠದಲ್ಲಿ ಅನೇಕ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುವ ಜೊತೆಗೆ ಪ್ರತಿವರ್ಷ ತಮ್ಮ ಹಿಂದಿನ ಗುರುಗಳಾದ ಲಿಂ.ಬಸವಲಿಂಗ ಮಹಾಸ್ವಾಮಿಗಳವರ ಪುಣ್ಯಸ್ಮರಣೋತ್ಸವವನ್ನು ಹಮ್ಮಿಕೊಳ್ಳುತ್ತ ಬಂದಿದ್ದು ಮುನವಳ್ಳಿಯ ಸಕಲ ಸದ್ಬಕ್ತರು, ಶಾಸಕರು, ಸಂಸದರ ಸಹಾಯ ಸಹಕಾರಗಳಿಂದ ಅನ್ನದಾನೇಶ್ವರ ದಾಸೋಹ ಭವನ ನಿರ್ಮಿಸಿದ್ದು. ಶ್ರೀ ಮಠದಲ್ಲಿನ ಕರ್ತೃ ಗದ್ದುಗೆಗೆ ನಿತ್ಯವೂ ಪೂಜೆ,ಅಭಿಷೇಕ,ಬಿಲ್ವಾರ್ಚನೆ ಕರ‍್ಯಗಳು ನಡೆಯುವಂತೆ ಮಾಡಿದ್ದು ಪೂಜಾನಿಷ್ಠರಾಗಿ ವೀರಶೈವ ತತ್ವದ ಪ್ರಕಾರ ಅಷ್ಟಾವರಣ.ಪಂಚಾಚಾರಗಳನ್ನು ಅಳವಡಿಸಿಕೊಂಡು ಇವುಗಳನ್ನು ಜನರಲ್ಲಿ ಬಿತ್ತಲು ಪ್ರಯತ್ನಿಸುತ್ತಿರುವರು.

ನಡೆಯೊಳಗೆ ನುಡಿತುಂಬಿ,ನುಡಿಯೊಳಗೆ ನಡೆ ತುಂಬಿ
ನಡೆ ನುಡಿ ಎರಡನು ಪರಿಪೂರ್ಣ ತುಂಬಿ ಲಿಂಗವ
ಕೂಡಬಲ್ಲಾತನೇ ಶರಣ ನೋಡಾ ಅಖಂಡೇಶ್ವರಾ”

ನಡೆ ನುಡಿ ಎರಡೂ ಸಮಪ್ರಮಾಣದಲ್ಲಿ ಪರಿಪೂರ್ಣ ತುಂಬಿ ಮಾನವತ್ವದಿಂದ ಶರಣತ್ವಕ್ಕೆ ,ಪ್ರೀತಿ ತುಂಬಿದ ನುಡಿಯಿಂದ ಸಕಲಕ್ಕೂ ಕಾರಣರು ಮುನವಳ್ಳಿಯ ನಡೆದಾಡುವ ದೇವರು ಮುನಿಪುರಾಧೀಶರಾದ ಶ್ರೀ,ಮ.ನಿ,ಪ್ರ,ಮುರುಘೇಂದ್ರ ಮಹಾಸ್ವಾಮಿಗಳು. ೨೦೧೧ ರಲ್ಲಿ ಲಿಂ.ಬಸವಲಿಂಗ ಸ್ವಾಮಿಗಳ ಪುಣ್ಯ ಸ್ಮರಣೆಯ ಕಾರ್ಯಕ್ರಮದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹನೀಯರನ್ನು ಗೌರವಿಸುವ ಜೊತೆಗೆ ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿ ಸೇವೆಗೈಯುತ್ತಿರುವ ಕಾರ್ಮಿಕರನ್ನು ೨೦೧೨ ರಲ್ಲಿ ಗ್ರಾಮದ ಎಲ್ಲ ಸಮಾಜದ ಹಿರಿಯರಿಗೆ ಗೌರವ ಸನ್ಮಾನವನ್ನೂ ೨೦೧೩ ಸೈನಿಕರನ್ನು ೨೦೧೪ ರಲ್ಲಿ ಪಾಕ ಪ್ರವೀಣರನ್ನು ೨೦೧೫ ರಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು, ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು.

ಅಷ್ಟೇ ಅಲ್ಲ ದೇಹದಾನ, ನೇತ್ರದಾನ, ರಕ್ತದಾನ, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾಂಸ್ಕೃತಿಕ ಸೊಬಗನ್ನು ಇಮ್ಮಡಿಗೊಳಿಸಿದ್ದಾರೆ. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಓರ್ವರಿಗೆ ಪ್ರತಿ ವರ್ಷ ಮುರುಘಶ್ರೀ ಪ್ರಶಸ್ತಿ ಪ್ರಧಾನ ಮಾಡುತ್ತಿರುವರು.

 • ಮುರುಘಶ್ರೀ ಪ್ರಶಸ್ತಿ
 • ೨೦೧೪ ನಾಟ್ಯಭೂಷಣ ಏಣಗಿ ಬಾಳಪ್ಪ, ಖ್ಯಾತ ರಂಗಭೂಮಿ ಕಲಾವಿದರು.
 • ೨೦೧೫ ಜನಪದ ಕಲಾವಿದ ಸಿದ್ದು ಮೋಟೆ
 • ೨೦೧೬ ಡಾಃಮಹಾಂತೇಶ ರಾಮಣ್ಣವರ ಖ್ಯಾತ ವೈದ್ಯರು ಬೈಲಹೊಂಗಲ
 • ೨೦೧೭ ಡಾ.ವೈ.ಎಂ.ಯಾಕೊಳ್ಳಿ ಸಾಹಿತಿಗಳು
 • ೨೦೧೮ ಲಕ್ಷ್ಮೀ ಲೋಕೂರ ಸಾವಯವ ಕೃಷಿ ಕ್ಷೇತ್ರದ ವಿಶಿಷ್ಟ ಸಾಧಕಿ
 • ೨೦೧೯ ಶಿವಾನಂದ ಕೌಜಲಗಿ (ಶಿಕ್ಷಣ ಮತ್ತು ಸಾಮಾಜಿಕ ಸೇವೆ)
 • ೨೦೨೧ ಏಣಗಿ ಬಂಗಾರಜ್ಜನ ಮಠದ ಪರಮಪೂಜ್ಯ ವಿರುಪಾಕ್ಷ ಸ್ವಾಮಿಗಳು
 • ೨೦೨೨ ಡಾ.ರಾಮನಗೌಡರ

ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮೀಜಿಯವರ ಸಮಾಜಮುಖಿ-ಸರ್ವತೋಮುಖಿ ಕಾರ್ಯಗಳು ಜನಮಾನಸದಲ್ಲಿ ಯಶಸ್ವಿ ರೀತಿಯಲ್ಲಿ ಒಡಮೂಡಿ ಕಾರ್ಯಗತವಾಗುವ ಜೊತೆಗೆ ಎಲ್ಲ ಜನಾಂಗದವರೂ ಈ ಕಾರ್ಯದಲ್ಲಿ ಕೈಗೂಡಿ ಬಹುಜನ ಸಿಖಾಯ-ಬಹು ಜನ ಹಿತಾಯ ಎಂಬಂತೆ ಸಾಗಿರುವುದು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ “ಇವ ನಮ್ಮವ ಇವ ನಮ್ಮವ” ಎಂದು ಬಗೆದು ನಾಡ ಕಟ್ಟುವ ಧರ್ಮ ರಕ್ಷಿಸುವ ಕಾರ್ಯದಲ್ಲಿ ಈ ಚಿಕ್ಕ ವಯಸ್ಸಿನ ಶ್ರೀಗಳವರು ಹಲವು ಮಾನ ಸನ್ಮಾನಗಳಿಗೆ ಭಾಜನರಾಗಿರುವರು.

ಪೂಜ್ಯರು ಮುನವಳ್ಳಿಯಲ್ಲಿ ಪಿ.ಯು.ಕಾಲೇಜ(ಕಲೆ ಮತ್ತು ವಾಣಿಜ್ಯ ವಿಭಾಗ) ಪದವಿ ಮಹಾವಿದ್ಯಾಲಯ, ಯೋಗ ಕೇಂದ್ರ, ಬಂಡಾರಹಳ್ಳಿಯಲ್ಲಿ ಪ್ರಾಥಮಿಕ ಶಾಲೆಯನ್ನು ತೆರೆಯುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಕೂಡ ಮಾಡುತ್ತಿರುವರು.

ಪೂಜ್ಯರ ೪೮ ನೇ ವರ್ಷದ ಹುಟ್ಟು ಹಬ್ಬ ಅವರ ಸದ್ಭಕ್ತರು ಹಾಗೂ ವಿವಿಧ ಸಂಘಟನೆಗಳ ಮೂಲಕ ಜರುಗಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ದೇವರು ಅವರಿಗೆ ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯ ನೀಡುವ ಮೂಲಕ ಮುನಿಪರಂಪರೆಯ ಹೊಸ ಮನ್ವಂತರಕ್ಕೆ ಇನ್ನೂ ಹೆಚ್ಚು ಸಮಾಜಮುಖಿ ಚಟುವಟಿಕೆಗಳು ನಡೆಯಲು ಅವಕಾಶ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ.


ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ ಸಿಂದೋಗಿ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!