ಸಿಂದಗಿ- ಪಟ್ಟಣದ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿ ಸಂಸ್ಥೆಯನ್ನು ದಿ. ಎಮ್ ಸಿ ಮನಗೂಳಿ ಅವರ ಜೊತೆಗೆ ಸದಾ ಬೆನ್ನೆಲುಬಾಗಿ ನಿಂತು ಈ ಸಂಸ್ಥೆಯನ್ನ ಉತ್ತರ ಕರ್ನಾಟಕದಲ್ಲಿ ಗುರುತಿಸುವಂತೆ ಮಾಡುವಲ್ಲಿ ಸಂಸ್ಥೆಯ ಹಿರಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಸಂಸ್ಥೆಯಿಂದ 91 ವರ್ಷ ಜೀವನ ಪೂರೈಸಿದ ಶಿವಪ್ಪಗೌಡ ಬಿರಾದಾರ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸುವಂಥದ್ದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ಮನಗೂಳಿ ಹೇಳಿದರು.
ಅವರು ಪಟ್ಟಣದ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ. ಮನಗೂಳಿ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಮಂಗಳವಾರ ನಡೆದ ಸಂಸ್ಥೆಯ ಹಿರಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ್ ಅವರ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಶಿವಪ್ಪಗೌಡ ಬಿರಾದಾರ ಅವರು ಶಿಕ್ಷಣ, ಸಾಮಾಜಿಕ, ಸಹಕಾರಿ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿದಂತವರು. 91 ವರ್ಷಗಳ ಜೀವನವನ್ನು ಸಾಗಿಸುತ್ತಿರುವ ಅವರು ಸಂಸ್ಥೆಯ ಬೆಳವಣಿಗೆಗೆ ಸದಾ ಶ್ರಮಿಸಿದಂತವರು. ಮುಂಬರುವ ದಿನಗಳಲ್ಲಿ ಅವರಿಗೊಂದು ಅಭಿನಂದನಾ ಗ್ರಂಥ ರಚಿಸುವ ಮೂಲಕ ಅರ್ಥಪೂರ್ಣವಾಗಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗುವುದು ಎಂದರು.
ಈ ವೇಳೆ ವಿಶ್ರಾಂತ ಪ್ರಾಚಾರ್ಯರಾದ ಡಾ. ವ್ಹಿ. ವ್ಹಿ. ಸಾಲಿಮಠ,ಎಂ.ಆರ್. ಜಂಗಮಶೆಟ್ಟಿ, ಎ.ಎಸ್ ಬಿರಾದಾರ, ಪ್ರಾಧ್ಯಾಪಕ ಡಾ. ಅರವಿಂದ್ ಮನಗೂಳಿ ಮಾತನಾಡಿ, ಶಿವಪ್ಪ ಗೌಡ ಬಿರಾದಾರ ಅವರ ಅಭಿನಂದನಾ ಸಮಾರಂಭವು ಅದ್ದೂರಿಯಾಗದೆ ಅರ್ಥಪೂರ್ಣವಾಗಬೇಕು. ಸಮಾಜಕ್ಕೆ ಉತ್ತಮ ಸಂದೇಶ ನೀಡುವಂಥ ಕಾರ್ಯಕ್ರಮವಾಗಬೇಕು ಎಂದು ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ನಿರ್ದೇಶಕ ಶಿವಪ್ಪ ಗೌಡ ಬಿರಾದಾರ ಮಾತನಾಡಿ, ದಿ. ಎಂ ಸಿ.ಮನಗೂಳಿ ಅವರ ಒಡನಾಡಿಯಾಗಿರುವ ನಾನು ಅನೇಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದೇನೆ. ಸಂಸ್ಥೆಯ ಬೆಳವಣಿಗೆಯಲ್ಲಿ ಎಲ್ಲ ನಿರ್ದೇಶಕರ ಪಾತ್ರಕ್ಕಿಂತಲೂ ದಿ. ಎಂ ಸಿ ಮನಗೂಳಿ ಅವರ ಪಾತ್ರ ಅತ್ಯಂತ ಹಿರಿದಾಗಿದೆ ಎಂಬ ಭಾವನಾತ್ಮಕ ನುಡಿಗಳನ್ನಾಡಿದರು.
ವೇದಿಕೆ ಮೇಲೆ ಸಂಸ್ಥೆಯ ನಿರ್ದೇಶಕರಾದ ಬಸನಗೌಡ ಪಾಟೀಲ್, ಶಂಕರಗೌಡ ಬಿರಾದಾರ , ವಿಶ್ವನಾಥಗೌಡ ಪಾಟೀಲ್, ವಿ.ಬಿ .ಕುರುಡೆ, ಬಿ.ಜಿ. ನೆಲ್ಲಗಿ ಇದ್ದರು.
ಸಭೆಯಲ್ಲಿ ವಿಶ್ರಾಂತ ಪ್ರಾಚಾರ್ಯರಾದ ಎಸ್.ಎಸ್. ಪಾಟೀಲ, ಜೆ.ಜೆ. ನಾರಾಯಣಕರ, ಎನ್.ಬಿ ಪಾಟೀಲ, ಬಿ.ಜಿ. ಕಲಶೆಟ್ಟಿ, ಬಿ.ಎ. ಬಿರಾದಾರ, ಬಿ.ಜಿ.ಮಠ, ಪ್ರಾಚಾರ್ಯ ಡಾ. ಬಿ.ಎಂ. ಹುರಕಡ್ಲಿ ಸೇರಿದಂತೆ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು , ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಯವರು ಇದ್ದರು.
ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಚಾರ್ಯ ಡಾ. ಬಿ.ಜಿ. ಪಾಟೀಲ್ ಸ್ವಾಗತಿಸಿದರು, ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿದರು, ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ವಂದಿಸಿದರು.