ಬೈಲಹೊಂಗಲ- ಭಾರತದ ಸ್ವಾತಂತ್ರ್ಯದ ಜ್ಯೋತಿ, ಕನ್ನಡತಿ ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಅವರ ೨೦೦ ನೇ ವಿಜಯೋತ್ಸವದ ನಿಮಿತ್ತ ಬೈಲಹೊಂಗಲದಲ್ಲಿರುವ ಚೆನ್ನಮ್ಮಾಜಿಯವರ ಸಮಾಧಿಗೆ ಕರ್ನಾಟಕ ಸರಕಾರದ ಧಾರವಾಡ ರಂಗಾಯಣದ ನಿಕಟಪೂರ್ವ ನಿರ್ದೇಶಕ, ಖ್ಯಾತ ಚಲನಚಿತ್ರ ನಟ, ನಿರ್ಮಾಪಕ ರಮೇಶ ಪರವಿನಾಯ್ಕರ ಅವರು ಸೋಮವಾರ ಬೇಟಿ ನೀಡಿ ಗೌರವ ಸಲ್ಲಿಸಿದರು.
ನಂತರ ಮಾತನಾಡಿದ ಅವರು ಚೆನ್ನಮ್ಮ ಜನ್ಮಸ್ಥಳ ಕಾಗತಿ, ಕಾರ್ಯಕ್ಷೇತ್ರ ಕಿತ್ತೂರು ಅಷ್ಟೇ ಪವಿತ್ರವಾದ ಐಕ್ಯ ಕ್ಷೇತ್ರವಾದ ಬೈಲಹೊಂಗಲದಲ್ಲಿನ ಸಮಾಧಿಯು ರಾಷ್ಟ್ರೀಯ ಸ್ಮಾರಕವಾಗಬೇಕೆಂದು ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಒತ್ತಾಯಿಸಿದರು.
೨೦೦ ನೇ ವಿಜಯೋತ್ಸವದ ಸವಿನೆನಪಿಗಾಗಿ ಈ ಭಾಗದ ಬಡ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಕನ್ಯಾ ವಸತಿ ಶಾಲೆಯನ್ನು ಸಹ ಪ್ರಾರಂಭಿಸಿ ಶೈಕ್ಷಣಿಕ ಅಭಿವೃದ್ದಿಗೆ ಪ್ರಯತ್ನಿಸಬೇಕೆಂದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ರಾಜ್ಯ ಮಟ್ಟದ ಮಾಜಿ ಸದಸ್ಯರಾದ ಮೋಹನ ಬಸನಗೌಡ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ, ಕನ್ನಡ ಜಾನಪದ ಪರಿಷತ್ತಿನ ತಾಲೂಕಾ ಘಟಕದ ಮಾಧ್ಯಮ ಪ್ರತಿನಿಧಿ ಮಹಾಂತೇಶ ರಾಜಗೋಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.