ಮೂಡಲಗಿ: – ಚೆನ್ನೈ ಮೂಲದ ಖಾಸಗಿ “ಸ್ಮಾಲ್ ಇಕ್ವಿಟಾನ್ ಫೈನಾನ್ಸ್” ಎಂಬ ಹಣಕಾಸು ಸಂಸ್ಥೆಯಲ್ಲಿ ಸಾಲ ಮಾಡಿದ ತಾಲೂಕಿನ ನಾಗನೂರ ಗ್ರಾಮದ ಸೈದಪ್ಪ ಶಂಕ್ರಪ್ಪ ಗದಾಡಿ ಎಂಬುವವರು ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಕುಟುಂಬವನ್ನೇ ಮೈಕೊರೆಯುವ ಚಳಿಯಲಿ ಒಂದುವರೆ ತಿಂಗಳ ಹಸುಗೂಸು,ಬಾಣಂತಿ, ಮೂರು ಮಕ್ಕಳು,ವೃದ್ದೆಯನ್ನೂ ನೋಡದೆ ಹೊರ ಹಾಕಿ ಬಾಗಿಲಿಗೆ ಬೀಗ ಹಾಕಿರುವ ಅಮಾನವೀಯ ಘಟನೆ ನಡೆದಿದೆ.
ಗದಾಡಿ ಮನೆಯವರು ಕೊರೆಯುವ ಚಳಿಯಲ್ಲಿ ಊಟ ಇಲ್ಲದೆ ಇಡೀ ರಾತ್ರಿ ಕಳೆದಿದ್ದಾರೆ. ಹಣಕಾಸು ಸಂಸ್ಥೆಯಲ್ಲಿ ಐದು ಲಕ್ಷ ಹಣ ಸಾಲ ಮಾಡಿದ್ದ ರೈತ ಸೈದಪ್ಪ, ಅದರಲ್ಲಿ ಮೂರು ಲಕ್ಷ ಹಣ ಪೈನಾನ್ಸಿಗೆ ಮರು ಪಾವತಿಸಿದ್ದಾರೆ,ಇನ್ನೂ ಎರಡು ಲಕ್ಷ ಹಣ ತುಂಬಲು ಸ್ವಲ್ಪ ತಡವಾಗಿದಕ್ಕೆ ಸಂಸ್ಥೆಯವರು ಮನೆಯವರನ್ನೇ ಹೊರಗೆ ಹಾಕಿದ್ದಾರೆ.
ಈ ಮುಂಚೆ ಪೈನಾನ್ಸದವರು ನ್ಯಾಯಾಲಯದ ಮೊರೆ ಹೋಗಿದ್ದರು, ನ್ಯಾಯಾಲಯ ಮನೆ ಜಪ್ತಿಗೆ ಆದೇಶ ನೀಡಿತು.ಅದರಂತೆ ಫೈನಾನ್ಸ್ ಕಂಪನಿಯವರು ಮನೆಯಿಂದ ಬಾಣಂತಿ ಅನ್ನುವುದ್ದನ್ನು ನೋಡದೆ ಮನೆಯಿಂದ ಹೊರ ಹಾಕಿದರು.
ಈ ಘಟನೆಯಿಂದ ನಾಗನೂರಿನ ಪಟ್ಟಣದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ವಿಷಯ ತಿಳಿದ ಮೂಡಲಗಿ ಸಿಡಿಪಿಓ ಯಲ್ಲಪ್ಪ ಗದಾಡಿ ಬಾಣಂತಿಗೆ ಪಕ್ಕದ ಮನೆಯಲ್ಲಿ ವ್ಯವಸ್ಥೆ ಮಾಡಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಲು ಅಲ್ಲಿಯ ಆಶಾ ಕಾರ್ಯಕರ್ತೆಗೆ ಬಾಣಂತಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ನಿಗಾ ವಹಿಸಿರಿ ಎಂದು ಹೇಳಿದ್ದಾರೆ.
ಅಮಾಯಕರ ಮೇಲೆ ಅಟ್ಟಹಾಸ,ಇದು ಹೊಸದಲ್ಲ. ಸಿರಿವಂತರು ಕೋಟಿ ಗಟ್ಟಲೆ ಸಾಲ ಮಾಡಿ ಹಣ ತುಂಬುವುದಿಲ್ಲ ಅವರನ್ನು ಯಾರೂ ಕೇಳುವುದಿಲ್ಲ.ಸ್ವಲ್ಪ ಸಾಲ ಮಾಡಿದರೂ ಬಡವರ ಬದುಕು ಬೀದಿಪಾಲು.ಎಲ್ಲ ಕಾನೂನು ಇರುವುದು ಬರಿ ಅಮಾಯಕರಿಗೆ/ಬಡವರಿಗೆ.ಹಣ ಬಲ,ತೋಳಬಲ ಇದ್ದವರನ್ನು ಯಾರು ಕೇಳುವುದೇ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.