ಅನುಮಾನದ ಹೊಗೆ !
ಬೀದರ: ಜಿಲ್ಲೆಯ ಹುಮನಾಬಾದ್ ಪಟ್ಟಣದ ಸಮಾಜ ಕಲ್ಯಾಣ ಕಚೇರಿಗೆ ಕೋಣೆಯೊಂದಕ್ಕೆ ಬೆಂಕಿ ತಗುಲಿ ಮಹತ್ವದ ದಾಖಲೆ ಭಸ್ಮಗೊಂಡ ಘಟನೆ ನಿನ್ನೆ ಸಂಭವಿಸಿದ್ದು, ಅದು ಇಂದು ಬೆಳಕಿಗೆ ಬಂದಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ವಿದ್ಯಾರ್ಥಿಗಳ ಸ್ಕಾಲರಷಿಪ್ ಸೇರಿದಂತೆ ಇತರ ಪ್ರಮುಖ ಮಹತ್ವದ ದಾಖಲೆಗಳಿಗೆ ಬೆಂಕಿ ತಗುಲಿದ ವಿಷಯ ತಿಳಿದ ಅಗ್ನಿ ಶಾಮಕ ತಂಡ ಸ್ಥಳಕ್ಕೆ ಧಾವಿಸಿ, ಅಗ್ನಿನಂದಿಸುವ ಮೂಲಕ ಆಗಬಹುದಾದ ಹೆಚ್ಚಿನ ಹಾನಿ ತಪ್ಪಿಸಿದೆ ಎನ್ನಲಾಗಿದೆ.
ಈ ಕುರಿತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಮುರುಗೇಂದ್ರಪ್ಪ ಅವರನ್ನು ವಿಚಾರಿಸಿದಾಗ ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಅವರು ಹೇಳಿ, ತನಿಖೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಅಧಿಕಾರಿ ಗಿರೀಶ ರಂಜೇರಿ ಅವರು ರಜೆ ಮೇಲೆ ಇದ್ದು ಕಚೇರಿ ವ್ಯವಸ್ಥಾಪಕರನ್ನು ವಿಚಾರಿಸಿದಾಗ, ಘಟನೆಯಲ್ಲಿ ಸುಟ್ಟು ಹೋದ ದಾಖಲೆಗಳು ಹಳೆಯವಾಗಿವೆ ಆದರೂ ಕೆಲವು ಮಹತ್ವದ ದಾಖಲೆಗಳಿರುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಇದೇ ರೀತಿ ನಾಲ್ಕು ವರ್ಷಗಳ ಹಿಂದೆ ಬೀದರ್ ನ ಬ್ರಿಮ್ಸ್ ಮೆಡಿಕಲ್ ಕಾಲೇಜ್ ನಲ್ಲಿ ಬೆಂಕಿ ಹತ್ತಿ ಹಲವು ಮಹತ್ವದ ದಾಖಲೆ ಸುಟ್ಟು ಭಸ್ಮವಾಗಿದ್ದ ಘಟನೆ ನಡೆದಿತ್ತು. ಘಟನೆಯ ಹಿನ್ನೆಲೆಯಲ್ಲಿ ಎಸಿಬಿ ಕೂಡ ಹಲವು ಬ್ರಿಮ್ಸ್ ಮೆಡಿಕಲ್ ಸಿಬ್ಬಂದಿ ಅವರಿಗೆ ನೋಟಿಸ್ ನೀಡಿದ್ದು ಆ ಪ್ರಕರಣದ ತನಿಖೆ ಎಲ್ಲಿಗೆ ಬಂತು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಮೇಲಿಂದ ಮೇಲೆ ಇಂಥ ಬೆಂಕಿ ಪ್ರಕರಣಗಳು ಯಾಕೆ ಜರುಗುತ್ತವೆ ಎಂಬ ಬಗ್ಗೆ ಜಿಲ್ಲಾ ಆಡಳಿತ ಗಂಭೀರವಾಗಿ ಪರಿಗಣಿಸಿ ಸರ್ಕಾರದ ಕಚೇರಿಗಳಿಗೆ ಭದ್ರತೆ ಒದಗಿಸುವುದು ಮುಖ್ಯವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ