ಮಳೆಗಾಲ ಆರಂಭದಲ್ಲಿ ಬಿತ್ತನೆ ಮಾಡಿದ ರೈತ ಫಸಲು ಹಸಿರಾಗಿ ಕಂಗೊಳಿಸುವ, ಕೃಷಿಕ ಹೆಣ್ಣು ಮಕ್ಕಳು ಕೆಲಸ ಕಡಿಮೆ ಇರುವ ಸಂದರ್ಭ ಇದು ಅನ್ನ ಹಾಕುವ ಭೂತಾಯಿಗೆ, ಬಸವಣ್ಣನಿಗೆ ಕೃತಜ್ಞರಾಗಿರಲು ಪೂಜೆ ಮಾಡುವ ಸಂಪ್ರದಾಯದ ಹಬ್ಬ.
ಕಾರಹುಣ್ಣಿಮೆಯಲ್ಲಿ ಎತ್ತುಗಳ ಬಣ್ಣ ಬಡಿದು ಶೃಂಗರಿಸಿ ಕರಿ ಹರಿದು ಸಂತಸ ಪಟ್ಟಿದ ರೈತಾಪಿಗಳು.ಈ ಹಬ್ಬದಲ್ಲಿ ಭೂಮಿ ತಾಯಿಯ ಮಣ್ಣಿನಲ್ಲಿ, ತನ್ನ ಎತ್ತುಗಳನ್ನು ತಯಾರಿಸಿ ಪೂಜಿಸುವ ಹಬ್ಬ ಈ ಮಣ್ಣೆತ್ತಿನ ಅಮವಾಸ್ಯೆ.
ಮಣ್ಣು ಪೂಜೆಯ ಮೊದಲ ಹಬ್ಬ ಇದು ಆಗಿದ್ದು ,ಆಷಾಡ ಮಾಸದ ಈ ಹಬ್ಬ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ, ಜನತೆ ಮಣ್ಣಿನ ಬಸವನ ಮಾಡಿ,ಪೂಜೆ ಮಾಡುವರು,ಇದು ಮಣ್ಣಿನ ಹಬ್ಬದ ಮೊದಲ ಪೂಜೆಯಾಗಿದ್ದು ಈ ರೀತಿ ಗುಳವ್ವ,ಗೌರವ್ವ,ಸೀಗವ್ವ, ,ಜೋಕುಮಾರ,ಗಣಪತಿ ಐದು ಮಣ್ಣಿನ ಐದು ಹಬ್ಬಗಳನ್ನು ಆಚರಿಸಲಾಗುತ್ತದೆ.
ಮಣ್ಣೆತ್ತಿನ ಅಮವಾಸ್ಯೆ ಮುನ್ನಾದಿನ ಎತ್ತಿನ ಕೊರಳಿ ಗುಮರಿ, ಗೆಜ್ಜೆ ಸರ ಸಿದ್ದ ಮಾಡಿಕೊಂಡು ಕೊರಳಲ್ಲಿ ಹಾಕಿಕೊಂಡು, ಗಿಲ್ ಗಿಲ್ ಅಂತ ಊರ ತುಂಬ ತಿರುಗಾಟ,
ಅಮವಾಸ್ಯೆ ದಿನ ಕೆರೆ ಹೊಳೆ ದಂಡೆಗೆ ಹೋಗಿ ಹಸಿ ಮಣ್ಣು ತಂದು ಜೋಡು ಬಸವಣ್ಣ ,ಡೋಣಿ ಮಾಡುವುದು ನಂತರ ಗುಲಗಂಜಿ ತಂದು ಕಣ್ಣಿಗೆ ಒತ್ತಿ ಎತ್ತಿನ ಪೂಜೆ ಪುನಸ್ಕಾರ, ಎತ್ತಿನ ಮುಂದಿನ ಗ್ವಾದಲಿಯಲ್ಲಿ ಕಾಳು ಹಾಕಿ, ನಂತರ ಬೆಲ್ಲದ ಬ್ಯಾಳಿ,ಕರಿಗಡಬು ಊಟ ಈಗ ಹೊಡೆದು ರೈತಾಪಿ ಸಂಭ್ರಮದ ಹಬ್ಬ ಮಣ್ಣೆತ್ತಿನ ಅಮವಾಸ್ಯೆ.
ಮರುದಿನ ಮಣ್ಣಿನ ಬಸವಣ್ಣನ ಮತ್ತು ಗ್ವಾದಲಿ ಒಂದು ತಟ್ಟಯಲ್ಲಿಇಟ್ಟು ಪೂಜಿಸಿ, ಕೊರಳಿಗೆ ಗುಮರಿ,ಗೆಜ್ಜೆ ಹಾಕಕೊಂಡು ಗಿಲ್ ಗಿಲ್ ಸಪ್ಪಳ ಮಾಡುತ್ತಾ ಮನೆ ಮನೆ ಹೋಗಿ ‘ಹತ್ತು ಎತ್ತನೋಳಗ ಒಂದು ಕುಂಟ ಎತ್ತು ಬಂದೈತ್ತಿ ಜೋಳ ಹಾಕರ್ರಿ, ಬಸವಣ್ಣ ಬಂದಾನ ಜೋಳ ನೀಡಿರಿ ಅಂತ ಮನೆ ಮನೆ ತಿರಗಿ ಜ್ವಾಳ ಹಾಕಿಸಿಕೊಂಡು ಅದನ್ನ ಮಾರಿ ರೊಕ್ಕ ತೆಗೆದುಕೊಂಡು ಕಾಯಿ,ಚುರಮರಿ,ಪರಾಳ ತೆಗೆದುಕೊಂಡು ಸಂಜೆ ಬಸವಣ್ಣನ ಹೊಳಿ ,ಹಳ್ಳ,ಕೆರೆ ಬಾವಿಗಳ ಹತ್ತಿರ ಪೂಜೆ ಮಾಡಿ ನೀರಿಗೆ ಕಳಿಸಿ ಬರ್ತಿದ್ದರು.
ಈಗ ಹಬ್ಬದ ಮಹತ್ವ ಕಡುಮೆಯಾಗಿ ಜಾಗತಿಕರಣದ ಭರಾಟೆಯಲ್ಲಿ ನಮ್ಮ ಜನಪದರ ಹಬ್ಬ ಹರಿದಿನ ಸಂಪ್ರದಾಯ ಮರೀಚಿಕೆಯಾಗುತ್ತಿವೆ.
ಇದು ಮಣ್ಣಿನ ಮೊದಲ ಪೂಜೆಯಾಗಿರುವುದರಿಂದ ಹಲವು ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ಅರಳೆಲೆ ಬಸವನನ್ನು ಎಲೆಯ ಮಂಟಪದಲ್ಲಿ ಶೃಂಗಾರ ಮಾಡಿ,ಹಾಡು ಹೇಳತ್ತಾ,ಕೆರೆ ಹಳ್ಳ,ಹೊಳೆ ಯಿಂದ ತಂದು ಪೂಜೆ ಮಾಡುವ ಅರಳರಲೆ ಬಸವನ ಮಂದಿರ ಮಠದಲ್ಲಿ ಇಟ್ಟು, ಹಾಡು ಹಾಡಿ ಆರತಿ ಬೆಳಗುವ ಪದ್ದತಿ ಕಾಣಬಹುದು.
ಒಂದು ಸುತ್ತಿನ ಕ್ವಾಟಿ
ಅದರೊಳು ಹೊಂದಿ ನಿಂತನು ಬಸವ
ಬಸವಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೇ ||
ಎರಡು ಸುತ್ತಿನ ಕ್ವಾಟಿ
ಅದರೊಳು ಸೊಡರು ತೂಗುವ ಬಸವ
ಬಸವಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೇ ||
ಮೂರು ಸುತ್ತಿನ ಕ್ವಾಟಿ
ಅದರೊಳು ಮೂರ್ತಗೊಂಡನ ಬಸವ
ಬಸವಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೇ ||
ನಾಲ್ಕು ಸುತ್ತಿನ ಕ್ವಾಟಿ
ಅದರೊಳು ನ್ಯಾಯಮೂರ್ತಿಯು ಬಸವ
ಬಸವಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೇ ||
ಐದು ಸುತ್ತಿನ ಕ್ವಾಟಿ
ಅದರೊಳು ಐಕ್ಯ ಮೂರ್ತಿಯು ಬಸವ
ಬಸವಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೇ ||
ಆರು ಸುತ್ತಿನ ಕ್ವಾಟಿ
ಅದರೊಳು ಅರಳಿ ನಿಂತಾನ ಬಸವ
ಬಸವಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೇ ||
ಏಳು ಸುತ್ತಿನ ಕ್ವಾಟಿ
ಅದರೊಳು ಜಗವನಾಳುವ ಬಸವ
ಬಸವಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೇ ||
ಎಂಟು ಸುತ್ತಿನ ಕ್ವಾಟಿ
ಶಿವನಿಗೆ ಕಂಟಲೆತ್ತೇನೊ ಬಸವ
ಬಸವಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೇ ||
ಒಂಭತ್ತು ಸುತ್ತಿನ ಕ್ವಾಟಿ
ಅದರೊಳ್ ತುಂಬಿ ಬಂದಾನೊ ಬಸವ
ಬಸವಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೇ ||
ಹತ್ತು ಸುತ್ತಿನ ಕ್ವಾಟಿ
ಅದರೊಳು ಸುತ್ತ ನೋಡಲು ಬಸವ
ಬಸವಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೇ ||
ಹೀಗೆ ನಮ್ಮ ಹಳ್ಳಿಯ ಜನಪದ ಹೆಣ್ಣು ಮಕ್ಕಳು ಬಸವನಿಗೆ ಕೋಟೆ ಕಟ್ಟಿ ಹಾಡು ಹೇಳುವ, ವಿವಿಧ ಹಾಡುಗಳು ಸಂಪ್ರದಾಯ ಆಚರಣೆಗಳು ಇಂದಿಗೂ ನಮ್ಮ ಹಳ್ಳಿಗಳಲ್ಲಿ ಕಾಣಸಿಗುತ್ತವೆ.
ಮಲ್ಲಿಕಾರ್ಜುನ ಎಂ ಸಜ್ಜನ.
ಅಧ್ಯಕ್ಷರು ಕ.ಸಾ.ಪ ಹುನಗುಂದ.