ಗೋಕಾಕ- ಪಶ್ಚಿಮ ಘಟ್ಟ ಮತ್ತು ಹಿಡಕಲ್ ಡ್ಯಾಂ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವದರಿಂದ ಘಟಪ್ರಭಾ ನದಿ ತೀರದ ಸಾರ್ವಜನಿಕರನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಳಾಂತರಿಸಲು ಈಗಾಗಲೇ ಮೂಡಲಗಿ ಮತ್ತು ಗೋಕಾಕ ತಾಲ್ಲೂಕಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ಈ ಬಗ್ಗೆ ಶುಕ್ರವಾರದಂದು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿರುವ ಅವರು, ಸಂಭಾವ್ಯ ಪ್ರವಾಹವನ್ನು ಎದುರಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಕೊಳ್ಳಲಾಗಿದೆ ಎಂದು ಹೇಳಿದರು.
ಹೆಚ್ಚುತ್ತಿರುವ ಧಾರಾಕಾರ ಮಳೆಯಿಂದಾಗಿ ಈಗಾಗಲೇ ನಮ್ಮ ತಾಲ್ಲೂಕಿಗೆ ಒಳಪಡುವ ಎಲ್ಲ ಸೇತುವೆಗಳು ಜಲಾವೃತಗೊಂಡಿವೆ. ಲೋಳಸೂರ ಸೇತುವೆಯು ಮುಳುಗಡೆಯಾಗಿದ್ದರಿಂದ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ಇಂದು ಶುಕ್ರವಾರ ಮಧ್ಯಾಹ್ನದ ಜಿಲ್ಲಾಧಿಕಾರಿಗಳ ಮಾಹಿತಿಯಂತೆ ಒಟ್ಟು 67,159 ಕ್ಯೂಸೆಕ್ಸ್ ನೀರನ್ನು ಘಟಪ್ರಭಾ ನದಿಗೆ ಬಿಡಲಾಗಿದೆ. ಇದರಲ್ಲಿ ಹಿಡಕಲ್ ಜಲಾಶಯದಿಂದ 29000, ಹಿರಣ್ಯಕೇಶಿಯಿಂದ 22,840, ಮಾರ್ಕಂಡೇಯ ನದಿಯಿಂದ 7,380 ಮತ್ತು ಬಳ್ಳಾರಿ ನಾಲಾದಿಂದ 2,939 ಕ್ಯೂಸೆಕ್ಸ್ ನೀರನ್ನು ಬಿಡಲಾಗಿದೆ. ಇಂದು ಸಂಜೆಯೊಳಗೆ ಮತ್ತೇ 10 ಸಾವಿರ ಕ್ಯೂಸೆಕ್ಸ್ ನೀರನ್ನು ಮತ್ತೇ ಬಿಡಲಾಗುತ್ತಿದೆ. ಇದರಿಂದ 72,159 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಟ್ಟಂತಾಗುತ್ತದೆ ಎಂದು ಅವರು ತಿಳಿಸಿದರು.
ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವ ಮೂಡಲಗಿ ಮತ್ತು ಗೋಕಾಕ ತಹಶೀಲ್ದಾರರಿಗೆ ಸೂಚಿಸಲಾಗಿದೆ. ನದಿ ತೀರದ ಗ್ರಾಮಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳ ಜತೆಗೆ ನಮ್ಮ ಟೀಂ ಎನ್ಎಸ್ಎಫ್ ಕಛೇರಿಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ನದಿ ತೀರದ ಸಾರ್ವಜನಿಕರನ್ನು ಸ್ಥಳಾಂತರಿಸಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿರುವುವಾಗಿ ಅವರು ತಿಳಿಸಿದ್ದಾರೆ.
ನದಿ ತೀರದ ಗ್ರಾಮಗಳಾದ ಅಡಿಬಟ್ಟಿಯಿಂದ ತಳಕಟ್ನಾಳವರೆಗೆ ಅಬ್ದುಲ್ ಮಿರ್ಜಾನಾಯಿಕ
(7795367576) ಲೋಳಸೂರದಿಂದ ಹುಣಶ್ಯಾಳ ಪಿ.ಜಿ.ವರೆಗೆ ಸಿಪಿ.ಯಕ್ಸಂಬಿ (9972619149) ವಡೇರಟ್ಟಿಯಿಂದ ಮುನ್ಯಾಳವರೆಗೆ ದಾಸಪ್ಪ ನಾಯಿಕ (9900161986) ಮತ್ತು ತಿಗಡಿಯಿಂದ ಅವರಾದಿ ಗ್ರಾಮದವರೆಗೆ ಭಾಸ್ಕರ್ (95383 89191) ಅವರನ್ನು ಟೀಂ ಎನ್ಎಸ್ಎಫ್ ದಿಂದ ಸಂತ್ರಸ್ತರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.