spot_img
spot_img

ಜನಪದ ಸಾಹಿತ್ಯ ಸಂಗ್ರಹಕಾರರು ಮತಿಘಟ್ಟ ಕೃಷ್ಣಮೂರ್ತಿ

Must Read

- Advertisement -

ಬದಲಾಗುತ್ತಿರುವ ಜಾನಪದ ಅಧ್ಯಯನದ ಸಂದರ್ಭದಲ್ಲಿ ಮತಿಘಟ್ಟ ಕೃಷ್ಣಮೂರ್ತಿ ಅವರ ಹೆಸರು ಗಮನಾರ್ಹವಾದುದು. ಇವರು ಎಲೆಮರೆ ಕಾಯಿಯಂತೆ ಇದ್ದು ಜನಪದ ಸಾಹಿತ್ಯಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ. ಜನಪದ ಸಾಹಿತ್ಯದ ವಿವಿಧ ಪ್ರಕಾರಗಳಾದ ನಾಡಪದಗಳು ಹಳ್ಳಿಯ ಹಾಡುಗಳು, ಸೋಬಾನೆ, ಗೃಹಿಣಿ ಗೀತೆಗಳು, ಲಾವಣಿಗಳು, ಜನಪದ ಕಥೆಗಳು, ಕೋಲಾಟ ಪದಗಳು ಹೀಗೆ ಜನಪದ ಸಾಹಿತ್ಯದ ಬಹುಮುಖಿ ಸಾಧಕರು ಮತಿಘಟ್ಟ ಕೃಷ್ಣಮೂರ್ತಿ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡಿ ಐಚನಹಳ್ಳಿ ಕೃಷ್ಣಮೂರ್ತಿಯವರು ಮತಿಘಟ್ಟ ಕೃಷ್ಣಮೂರ್ತಿಯವರ ಬದುಕು ಬರಹ ಕೃತಿಯನ್ನು ಪ್ರಕಟಿಸಿದ್ದಾರೆ. ಬಹುಶ: ಇದು ಇವರ ಪಿಹೆಚ್‌ಡಿ ಪ್ರಬಂಧ ಇರಬಹುದೆಂದು ಭಾವಿಸಿದ್ದೇನೆ.

ಐಚನಹಳ್ಳಿ ಕೃಷ್ಣಪ್ಪನವರ ಪಾದದ ಧೂಳು ಹಣೆಗೆ ಎಂಬ ಕವನ ಸಂಕಲನ ಕುರಿತ್ತಾಗಿ ಈ ಹಿಂದೆ ಬರೆದಿದ್ದೇನೆ. ಮೊನ್ನೆ ವಿವಿಸಿ ಹಾಸನ ಚಾನಲ್‌ರವರ ‘ರಸಮಯವೀ ಕವಿಸಮಯ.. ಕಾರ್ಯಕ್ರಮದ ವಿಡಿಯೋ ರೆಕಾರ್ಡ್ಗೆಂದು ಹೋದ ಸಂದರ್ಭ ಈ ಕೃತಿ ಅವರ ಕೈಯಲ್ಲಿತ್ತು. ನಾನು ಮನೆ ಮನೆ ಕವಿಗೋಷ್ಠಿ ಸಂಚಾಲಕನಾಗಿ ಮತಿಘಟ್ಟ ಕೃಷ್ಣಮೂರ್ತಿ ಅವರ ಬದುಕು ಬರಹ ವಿಷಯದ ಉಪನ್ಯಾಸ ಅಳವಡಿಸುವ ಆಲೋಚನೆಯಲ್ಲಿದ್ದೆನಾಗಿ ಈ ವಿಚಾರ ಪ್ರಸ್ತಾಪಿಸಿದೆ. ನಿಮ್ಮ ಈ ಕೃತಿಯಾಗಿಯೇ ಒಬ್ಬರಿಂದ ಮಾತನಾಡಿಸೋಣ ಎಂದೆ. ಕೈಗೆ ಪುಸ್ತಕ ಕೊಟ್ಟರು. ನಾನು ಈ ಹಿಂದೆ ಮತಿಘಟ್ಟ ಕೃಷ್ಣಮೂರ್ತಿ ಅವರ ಸಾಹಿತ್ಯ ಕುರಿತ್ತಾಗಿ ಬರೆದಿದ್ದೆನಾದರೂ ಇನ್ನೂ ಹೆಚ್ಚಿನ ವಿಚಾರ ತಿಳಿಯುವ ಆಸಕ್ತಿಯಿಂದ ಓದಿದೆ.

ಲೇಖಕ ಐಚನಹಳ್ಳಿ ಕೃಷ್ಣಪ್ಪನವರು ಮತಿಘಟ್ಟ ಕೃಷ್ಣಮೂರ್ತಿ ಅವರ ಸಾಹಿತ್ಯ, ಸಂಪಾದನೆ ಮತ್ತು ಬದುಕಿನ ವಿವರಗಳನ್ನು ಸಾಕಷ್ಟು ಸಂಗ್ರಹಿಸಿರುವರು. ಜನಪದ ಸಾಹಿತ್ಯ, ಪತ್ರಿಕೋದ್ಯಮ, ನಾಟಕ ಕ್ಷೇತ್ರಗಳಲ್ಲಿ ೫೦ ವರ್ಷ ಸೇವೆ ಸಲ್ಲಿಸಿದ ಕರ್ನಾಟಕದ ಶ್ರೇಷ್ಠ ಜಾನಪದ ಸಂಗ್ರಹಕಾರರಲ್ಲಿ ಒಬ್ಬರು. ಜಾನಪದ ಸಂಗ್ರಹ ಇವರ ಜೀವನದ ಪ್ರಮುಖವಾಗಿತ್ತು. ಹತ್ತು ಸಾವಿರ ಪುಟಕ್ಕೂ ಹೆಚ್ಚು ಜಾನಪದ ಸಾಮಗ್ರಿ ಸಂಗ್ರಹಿಸಿದ ಹೆಗ್ಗಳಿಕೆ ಇವರದು. ಇದರಲ್ಲಿ ಒಂದು ಸಾವಿರ ಪುಟದ ೨ ಸಂಪುಟ ಪ್ರಕಟವಾಗಿವೆ. ಗಾಂಧಿ ಪ್ರಭಾವ ಸರಳ ವ್ಯಕ್ತಿತ್ವ ಅವರ ಬಹುಮುಖ ದೂರದೃಷ್ಟಿ ಕೆಲಸಗಳು ಇವರನ್ನು ಜನಪದ ಸಾಹಿತ್ಯದಲ್ಲಿ ಎತ್ತರಕ್ಕೇರಿಸಿದೆ.

- Advertisement -

ಮತಿಘಟ್ಟ ಕೃಷ್ಣಮೂರ್ತಿಯವರೇ ಹೇಳಿದಂತೆ ‘ಜನಪದ ಸಾಹಿತ್ಯದ ನನ್ನ ಒಲವಿಗೆ ಒಂದು ಸ್ಫಷ್ಟ ರೂಪ ಬಂದದ್ದು ೧೯೨೮-೨೯ರಲ್ಲಿ. ನಾನು ಚಿಕ್ಕಮಗಳೂರು ಪ್ರೌಢಶಾಲೆ ಯಲ್ಲಿ ಓದುತ್ತಿದ್ದೆ. ಆಗ ಮಾಸ್ತಿ ಹಾಗೂ ದ.ರಾ.ಬೇಂದ್ರೆಯವರು ನಮ್ಮ ಶಾಲೆಗೆ ಬಂದರು. ಮಾಸ್ತಿಯವರು ಜನಪದ ಸಾಹಿತ್ಯ ಕುರಿತು ಭಾಷಣ ಮಾಡಿದರೆ ಬೇಂದ್ರೆಯವರು ಗರತಿ ಹಾಡಿನ ತ್ರಿಪದಿಗಳನ್ನು ಹಾಡಿ ಅವುಗಳ ಸ್ವಾರಸ್ಯ ವರ್ಣಿಸಿದರು. ಅಂದು ಆ ಹಿರಿಯರಿಬ್ಬರೂ ನನ್ನ ಹೃದಯದಲ್ಲಿ ಹುದುಗಿದ್ದ ಜನಪದ ಸಾಹಿತ್ಯದ ಬಗೆಗಿನ ಒಲವಿಗೆ ಅಮೃತ ಸಿಂಚನ ಮಾಡಿ ಅದು ಚಿಗುರೊಡೆಯುವಂತೆ ಮಾಡಿದರು…
ಕೃಷ್ಣಮೂರ್ತಿಯವರು ಬೇಲೂರು ತಾ. ಹಳೇಬೀಡು ಹೋಬಳಿ ಮತಿಘಟ್ಟ ಗ್ರಾಮದ ಬಡ ಕೃಷಿಕ ಕುಟುಂಬ ಲಿಂಗಣ್ಣಯ್ಯ ಮತ್ತು ಚನ್ನಮ್ಮ ದಂಪತಿಗಳ ಕೊನೆಯ ಮಗನಾಗಿ ದಿ.೧೨-೭-೧೯೧೨ರಂದು ಜನಿಸಿದರು.

ಓಜೋ ದೊಡ್ಡಯ್ಯನವರ ಕೂಲಿಮಠದಲ್ಲಿ ಮರಳಿನ ಮೇಲೆ ತಿದ್ದಿ ಅಕ್ಷರಭ್ಯಾಸ ಆರಂಭಿಸಿ ಪ್ರಾಥಮಿಕ ಶಾಲೆ ಬೆಳವಾಡಿಯಲ್ಲಿ, ಮಾಧ್ಯಮಿಕ ಬೇಲೂರಿನಲ್ಲಿ ಮತ್ತು ವಾರಾನ್ನದ ಮೂಲಕ ಹೈಸ್ಕೂಲು ವ್ಯಾಸಂಗ ಚಿಕ್ಕಮಗಳೂರಿನಲ್ಲಿ ನಡೆಯಿತು. ಕಾಲೇಜು ಶಿಕ್ಷಣ ಬೆಂಗಳೂರಿನಲ್ಲಿ ಅಣ್ಣ ಎಲ್.ಗುಂಡಪ್ಪನವರ ಮನೆಯಲ್ಲಿ ಇದ್ದುಕೊಂಡು ಮಾಡಿದರು. ಗಾಂಧಿ ತತ್ವವನ್ನು ನಂಬಿದ್ದ ಇವರು ಓದನ್ನು ಮುಂದುವರೆಸದೆ ಗಾಂಧೀಜಿ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಅದನ್ನು ಪ್ರಚಾರ ಮಾಡಲು ಮತಿಘಟ್ಟ ಗ್ರಾಮಕ್ಕೆ ಹಿಂದಿರುಗಿದರು. ವ್ಯವಸಾಯದಲ್ಲಿ ತೊಡಗಿ ಖಾದಿ ಪ್ರಚಾರ, ವಯಸ್ಕರ ಶಿಕ್ಷಣ ಕಾರ್ಯಕ್ರಮ ಪ್ರಚುರಪಡಿಸಿದರು. ೧೯೩೪ರಲ್ಲಿ ಲಲಿತ ಅವರೊಂದಿಗೆ ಇವರ ವಿವಾಹ ನೆರವೇರಿತು. ಈ ದಂಪತಿಗಳಿಗೆ ಒಟ್ಟು ೧೧ ಮಕ್ಕಳು. ಅವರಲ್ಲಿ ೧೦ ಹೆಣ್ಣು, ಒಂದು ಗಂಡು. ೧೯೩೭ವರೆಗೆ ಮತಿಘಟ್ಟದಲ್ಲಿ ಕೃಷಿ ಕೆಲಸ ನಡೆಸಿ ವ್ಯವಸಾಯದಿಂದ ಕುಟುಂಬ ನಿರ್ವಹಣೆ ಕಷ್ಟ ಎಂದು ಬೆಂಗಳೂರಿಗೆ ಬಂದರು. ಅಲ್ಲಿ ಆರ್.ಕಲ್ಯಾಣಮ್ಮನವರು ನಡೆಸುತ್ತಿದ್ದ ಸರಸ್ವತಿ ಪತ್ರಿಕೆಗೆ ಲೇಖನ ಬರೆದರು.

ಓ.ವಿ.ದೊಡ್ಡವೀರಪ್ಪ ಅವರ ವಿಮಾ ವಾಣಿಜ್ಯ ಪತ್ರಿಕೆಯಲ್ಲಿ ಸಂಪಾದಕ ಸಹಾಯಕರಾಗಿ ಸೇರಿದರು. ಟಿ.ಟಿ.ಶರ್ಮರ ವಿಶ್ವ ಕರ್ನಾಟಕ ವಾರಪತ್ರಿಕೆಗೆ ಉಪಸಂಪಾದಕರಾದರು. ೧೯೪೨ರಲ್ಲಿ ಮಯೂರ ಮಾಸ ಪತ್ರಿಕೆ ಸ್ವತಂತ್ರವಾಗಿ ಸಂಪಾದಿಸಿ ನಡೆಸಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿಯೂ ಸ್ವಾತಂತ್ರ್ಯಾ ನಂತರ ಚಳವಳಿಗಾರರಿಗೆ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ನಯವಾಗಿ ನಿರಾಕರಿಸಿದರು. ಅನಂತರ ತಾಯಿನಾಡು, ಕೈಲಾಸ, ಕನ್ನಡಪ್ರಭ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ೧೯೬೯ರಿಂದ ೧೯೭೪ವರೆಗೆ ಕಾರ್ಯ ನಿರ್ವಹಿಸಿ ನಂತರ ಜನಪದ ಸಾಹಿತ್ಯ ಸಂಗ್ರಹಣೆಗೆ ರಾಜ್ಯಾದ್ಯಂತ ಸಂಚರಿಸಿದರು. ಬಾಲ್ಯದಲ್ಲೇ ಜನಪದ ಹಾಡು ಕಥೆಗಳನ್ನು ಹಿರಿಯರಿಂದ ಕೇಳುತ್ತಿದ್ದ ಇವರು ಅದನ್ನು ಹಾಗೆಯೇ ಒಪ್ಪಿಸುತ್ತಿದ್ದರು.

- Advertisement -

ತಾಯಿ ಜೊತೆ ಆರತಿ ಅಕ್ಷತೆಗೆ ಹೋಗುತ್ತಿದ್ದ ವೇಳೆ ಅಲ್ಲಿ ಹಾಡುತ್ತಿದ್ದ ಸಂಪ್ರದಾಯ ಹಾಡು ದೇವರ ಸ್ತುತಿಗಳನ್ನು ಕೇಳಿ ಪ್ರಭಾವಿತರಾದರು. ಬೇಲೂರಿನಲ್ಲಿ ಓದುವಾಗ ಪ್ರತಿ ಶನಿವಾರ ಮತಿಘಟ್ಟಕ್ಕೆ ನಡೆದುಕೊಂಡು ಬರುತ್ತಾ ದಾರಿಯಲ್ಲಿ ಸಿಕ್ಕಿದ ಹಳ್ಳಿಗರೊಡನೆ ಮಾತನಾಡುತ್ತಿದ್ದರು. ಈ ನಡಿಗೆ ಇವರಿಗೆ ಜನಪದ ಸಾಹಿತ್ಯ ಸಂಗ್ರಹ ಕ್ಷೇತ್ರಕಾರ್ಯಕ್ಕೆ ಪ್ರೇರಣೆ ಆಯಿತು. ಒಂದು ವರ್ಷ ಕರ್ನಾಟಕ ಸುತ್ತಿ ಅಪಾರ ಜನಪದ ಸಾಹಿತ್ಯ ಸಂಗ್ರಹಣೆ ಮಾಡಿದರು. ಈ ಕುರಿತು ಅವರೇ ಬರೆಯುತ್ತಾರೆ. ನನ್ನ ಕೈಯಲ್ಲಿ ಹಣ ಇರುತ್ತಿರಲಿಲ್ಲ. ಆದರೆ ಅಮೂಲ್ಯ ಜನಪದ ಸಾಹಿತ್ಯ ಸಂಗ್ರಹಿಸದಿದ್ದರೆ ನಾಗರೀಕತೆಯ ಕಾರಣ ಕಣ್ಮರೆಯಾಗುತ್ತದೆ. ಎಷ್ಟಾದರೂ ಕಷ್ಟಪಟ್ಟು ಸಂಗ್ರಹಿಸಲೇಬೇಕೆಂಬ ಛಲದಿಂದ ಮನೆಯನ್ನು ಬಿಟ್ಟು ಹೊರಡುವುದು ಒಂದು ಹಳ್ಳಿಗೆ ಹೋಗುವುದು ಆ ಹಳ್ಳಿಯ ಪ್ರಮುಖರನ್ನು ಭೇಟಿಯಾಗಿ ಅವರ ಮನೆಯಲ್ಲಿಯೋ, ಶಾಲೆಯಲ್ಲಿಯೋ ಉಳಿಯುವುದು. ಕೆಲ ದಿನ ಇಲ್ಲಾ ವಾರವೇ ಅಲ್ಲಿದ್ದು ಅಲ್ಲಿನ ಶಾಲೆಯಲ್ಲಿ ಜನಪದ ಸಾಹಿತ್ಯದ ಬಗ್ಗೆ ಉಪನ್ಯಾಸ ಮಾಡುವುದು ಜನಪದ ಗೀತೆಗಳನ್ನು ಹಾಡುವುದು ಮತ್ತು ಹೊಸದಾಗಿ ಸಂಗ್ರಹಿಸುವುದು. ಅನಂತರ ಮುಂದಿನ ಹಳ್ಳಿಗೆ ಪ್ರಯಣ…
೧೯೪೭ರಲ್ಲಿ ಪ್ರಕಟವಾದ ನಾಡಪದಗಳು ಕೃತಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾಗಿದೆ. ೧೯೪೦-೪೧ರಲ್ಲಿ ಕೃಷ್ಣಮೂರ್ತಿಯವರು ಸಂಗ್ರಹಿಸಿದ ಕೆಲವು ಜನಪದ ಗೀತೆಗಳು ಪ್ರಬುದ್ಧ ಕರ್ನಾಟಕದಲ್ಲಿ ಅಚ್ಚಾಗಿದ್ದವು. ಜಯಚಾಮರಾಜ ಒಡೆಯರ್ ಅದನ್ನು ಓದಿ ಸಂತೋಷಪಟ್ಟು ಈ ವಿಚಾರವನ್ನು ಹಾಸನದ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಇವರು ಜೈಲಿನಿಂದ ಬಂದ ಮೇಲೆ ಇಂಡಿಯನ್ ಇಂಕ್‌ನಲ್ಲಿ ಬರೆದು ಅದನ್ನು ಸಿಲ್ಕ್ ಬೈಂಡ್ ಮಾಡಿಸಿ ಮಹಾರಾಜರಿಗೆ ಕಳುಹಿಸಿಕೊಟ್ಟರು. ಇದಕ್ಕೆ ಮಹಾರಾಜರು ಐದುನೂರು ರೂ. ಬಹುಮಾನ ಕೊಟ್ಟರು. ಈ ಕೃತಿಗೆ ಬಿ.ಎಂ.ಶ್ರೀ ಮುನ್ನುಡಿ ಬರೆದಿದ್ದಾರೆ. ಈ ಸಂಕಲನದಲ್ಲಿ ಟಿಪ್ಪು ಸುಲ್ತಾನನಿಗೆ ಸಂಬಂಧಿಸಿದ ಹಾಡುಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ.

ಇವರ ಕನ್ನಡ ಜನಪದ ಸಾಹಿತ್ಯ ಭಂಡಾರ ಸಂಪುಟ-೧ ಕೃತಿಯಲ್ಲಿ ೪೦೮ ಗೀತೆಗಳಿದ್ದು ೧೦೫೩ ಪುಟಗಳಷ್ಟು ವಿಸ್ತಾರವಾಗಿದೆ. ಇವುಗಳನ್ನು ಹಾಸನ ಚಿಕ್ಕಮಗಳೂರು ತುಮಕೂರು ಜಿಲ್ಲೆಗಳಲ್ಲಿ ಸಂಗ್ರಹಿಸಿದ್ದು ಕೃತಿಗೆ ಬೆಟಗೇರಿ ಕೃಷ್ಣಶರ್ಮರ ಮೊದಲ ನುಡಿಗಳು ಮೌಲ್ಯಯುತವಾಗಿವೆ. ಇದರಲ್ಲಿ ಜನಪದ ಛಂದಸ್ಸನ್ನು ಕುರಿತ ಧೀರ್ಘ ಲೇಖನವಿದೆ. ಪ್ರಥಮ ಬಾರಿಗೆ ಜನಪದ ಪದ್ಯ ಸಾಹಿತ್ಯಕ್ಕೆ ಛಂದಸ್ಸನ್ನು ಅಳವಡಿಸಿದ ಕೀರ್ತಿ ಮತಿಘಟ್ಟರಿಗೆ ಸಲ್ಲುತ್ತದೆ. ಇದು ಜನಪದ ಗೀತೆಗಳನ್ನು ಸಂಗೀತ ದೃಷ್ಟಿಯಿಂದ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಸಂಶೋಧಕರಿಗೆ ಮಾರ್ಗದರ್ಶಿ ಅಗಿದೆ.

ಇವರ ಹೊನ್ನಹೊತ್ತಿಗೆ ಕೃತಿಯ ೧ನೇ ಭಾಗದಲ್ಲಿ ೧೨೦ ಕೋಲಾಟ ಪದ್ಯಗಳಿವೆ. ಕೃತಿಯಲ್ಲಿ ಕೋಲಾಟ ಮಹತ್ವ ಕುರಿತ ಲೇಖನ ಮಹತ್ವದ್ದಾಗಿದೆ. ಕರ್ನಾಟಕದಲ್ಲಿ ಪ್ರಚಲಿತದಲ್ಲಿದ್ದ ಕೋಲಾಟದ ೧೪ ವರಸೆಗಳ ಮಾಹಿತಿ ಇದೆ. ಕೋಲಾಟದಲ್ಲಿ ಕಂಡು ಬರುವ ನಿಲುಪದ ವಿಚಾರವನ್ನು ಸಂಗ್ರಹಕಾರರು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಗಂಡಸರಲ್ಲದೇ ಹಬ್ಬ ಹುಣ್ಣಿಮೆಗಳಲ್ಲಿ ಮಹಿಳೆಯರು ಕೋಲಾಟ ಆಡುತ್ತಿದ್ದುದನ್ನು ದಾಖಲಿಸಿದ್ದಾರೆ. ೨ನೇ ಭಾಗದಲ್ಲಿ ೪೨ ಬೀಸುವ ಪದಗಳಿವೆ. ೩ನೇ ಭಾಗದಲ್ಲಿ ೪೨ ಒಸಗೆ ಮತ್ತು ಸೋಬಾನೆ ಪದಗಳನ್ನು ಸಂಕಲಿಸಿದ್ದಾರೆ. ಕೊನೆಯಲ್ಲಿ ದೀಪಾವಳಿ ಬಸವನ ಪೂಜೆ ತಿಂಗಳುಮಾಮನ ಪೂಜೆ ಕೊಂತಮ್ಮನ ಪೂಜೆ ಎಂಬ ನಾಲ್ಕು ಹಬ್ಬಗಳ ಕುರಿತ ೩೫ ಗೀತೆಗಳನ್ನು ಕಲೆ ಹಾಕಲಾಗಿದೆ.

ಸವದತ್ತಿ ಎಲ್ಲಮನ ಕ್ಷೇತ್ರ ಪರಿಚಯ ಮಹಿಮೆಯೇ ಪ್ರಧಾನವಾದ ಏಳುಕೊಳ್ಳದ ಎಲ್ಲಮ್ಮ ಕೃತಿ ೧೯೬೫ರಲ್ಲಿ ಪ್ರಕಟವಾಗಿದೆ. ಹುಣ್ಣಿಮೆಯಂದು ನಡೆಯುವ ಎಲ್ಲಮ್ಮನ ಜಾತ್ರೆ ಅಲ್ಲಿನ ೭ ಗುಡ್ಡ ೭ ಕೊಳ್ಳಗಳ ವರ್ಣನೆ ಎಲ್ಲಮ್ಮನ ಜನನ ಎಲ್ಲವೂ ವರ್ಣನೆಗೊಂಡಿವೆ. ಒಂದು ಕ್ಷೇತ್ರದ ಸಾಂಸ್ಕೃತಿಕ ಪರಂಪರೆಯನ್ನು ಕೃತಿ ತೆರೆದಿಟ್ಟಿದೆ.

ಇವರ ಜನಪದ ಕಥಾ ಸಂಕಲನ ಶಕುನದ ಹಕ್ಕಿ ಮತ್ತು ಇತರ ಜನಪದ ಕಥೆಗಳು ೧೯೬೯ರಲ್ಲಿ ಪ್ರಕಟವಾಗಿದೆ. ಇದರಲ್ಲಿ ೧೧ ಕತೆಗಳಿದ್ದು ಅವುಗಳನ್ನು ಹಾಸನ ದಕ್ಷಿಣ ಕನ್ನಡ ಧಾರವಾಡ ಬೆಳಗಾಂ ಚಿತ್ರದುರ್ಗ ಜಿಲ್ಲೆಗಳಲ್ಲಿ ಸಂಗ್ರಹಿಸಿದ್ದಾರೆ. ಗುರುವಾಕ್ಯ, ತಾರ್ಕಿಕ ಜ್ಞಾನಿ ಭಲ್ಲೂಕಪುರದ ಅಪ್ಪಾಜಿಭಟ್ಟ, ಕೋಮಲೆ ಮತ್ತು ಮೈಲಾರಲಿಂಗ ಕಥೆಗಳು ತುಂಬಾ ಸ್ವಾರಸ್ಯಕರವಾಗಿ ಸಾಂದರ್ಭಿಕ ವಿವರಗಳನ್ನು ಒಳಗೊಂಡಿವೆ.

ಇವರ ಗೃಹಿಣಿ ಗೀತೆಗಳು ೧೯೮೨ರಲ್ಲಿ ಪ್ರಕಟವಾಗಿದ್ದು ೧೧೭೯ ಪುಟಗಳ ೫೧೫ ಗೀತೆಗಳನ್ನೊಳಗೊಂಡ ಕೃತಿ. ಅರೆ ವಿದ್ಯಾವಂತ ಬ್ರಾಹ್ಮಣ ಹೆಣ್ಣು ಮಕ್ಕಳು, ಮಧ್ಯಮ ವರ್ಗದವರ ಹಾಡುಗಳು ಇಲ್ಲಿ ಹೆಚ್ಚಾಗಿವೆ. ಇಲ್ಲಿಯ ಹಾಡುಗಳು ಸಾಮಾನ್ಯ ಜನಪದರಿಂದ ಮೇಲೇರಿದ ತಮ್ಮದೇ ಅದಂತಹ ತಾತ್ವಿಕ ನೆಲೆಯನ್ನು ಹೊಂದಿದವರ ಹಾಡುಗಳಾಗಿವೆ.

ಮತಿಘಟ್ಟ ಕೃಷ್ಣಮೂರ್ತಿಯವರ ನಾಟಕಗಳು ಗಂಡನ ಪೂಜೆ, ಹೊಂಬಾಳೆ, ಭರತಪ್ಪನ ಸೊಂಟಕ್ಕೆ ಗಂಟೆ, ಮೂರು ರೇಡಿಯೋ ನಾಟಕಗಳ ಕಲ್ಯಾಣಿ ಮತ್ತು ಹೊಸಹಳ್ಳಿ. ಕಾದಂಬರಿಗಳು ಸರ್ವೋದಯ, ಮರುಗಿ, ಕಳಾಸಪುರದ ಹುಡುಗರು. ಪೆಚ್ಚೆತೆನೆ ಕಥಾ ಸಂಕಲನ. ಕನ್ನಡ ಜನಪದ ಮಕ್ಕಳು ಕಥೆಗಳು ಮೊದಲಾಗಿ ಮತಿಘಟ್ಟರ ಸಮಗ್ರ ಕೃತಿಗಳನ್ನು ಲೇಖಕರು ವಿಮರ್ಶಿಸಿದ್ದಾರೆ. ಕಡೆಯಲ್ಲಿ ಮತಿಘಟ್ಟ ಕೃಷ್ಣಮೂರ್ತಿಯವರು ಹೀಗೆ ಬರೆದಿದ್ದಾರೆ. “ನಾನು ಸಂಗ್ರಹಿಸಿದ ಜನಪದ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕೆಂಬ ನನ್ನ ಮಹದಾಸೆ ೧೯೪೭ರಲ್ಲಿ ಫಲಿಸಿತು. ನಾಡಪದ ಪ್ರಕಟವಾಯಿತು. ಅಚಾರ‍್ಯ ಬಿ.ಎಂ.ಶ್ರೀಯವರು ಮುನ್ನುಡಿ ಬರೆಯುತ್ತ ತಮಗೆ ಗುರುಕಾಣಿಕೆ ಸಂದಿತೆಂದು ಹರ್ಷಪಟ್ಟರು. ಈ ಪುಸ್ತಕ ಪ್ರಕಟಣೆಯಿಂದ ತಮ್ಮ ಪ್ರಯೋಜನವೇನೂ ಆಗಲಿಲ್ಲ. ತಮ್ಮ ಈ ಹಲವು ಕಷ್ಟ ನಿರಾಸೆಗಳ ಕಾರ್ಮೋಡಗಳ ನಡುವೆ ಬೆಳಕು ಬೀರುವ ತಂಗಿರಣಗಳಿಗೂ ಕೊರತೆಯಿರಲಿಲ್ಲ. ಮದರಾಸು ಆಕಾಶವಾಣಿ ನಿಲಯದವರು ಕನ್ನಡ ಜನಪದ ಗೀತೆಗಳ ಕಾರ‍್ಯಕ್ರಮದಲ್ಲಿ ಭಾಗವಹಿಸಲು ಮೇಲಿಂದ ಮೇಲೆ ಕರೆಸುತ್ತಿದ್ದರು. ಅದೇ ಸಮಯದಲ್ಲಿ ತಮ್ಮ ಸಂಗ್ರಹದ ಸುಮಾರು ೮ ಗೀತೆಗಳನ್ನು ಗ್ರಾಮಫೋನ್ ರೆಕಾರ್ಡುಗಳಲ್ಲಿ ಹಾಡಿಸಲಾಯಿತು. ಇದರಿಂದ ಜನಪದ ಗೀತೆಗಳಿಗೆ ಒಳ್ಳೆಯ ಪ್ರಚಾರ ದೊರೆಯಿತು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಧೃತಿಗೆಡದೆ ಹೆಂಡತಿ ಮಕ್ಕಳು ಆಗ ನನಗೆ ಭೀಮಬಲ ಒದಗಿಸಿಕೊಟ್ಟರು. ಪರಿಚಯವಿಲ್ಲದ ದೂರ ಪ್ರದೇಶಗಳಲ್ಲಿ ಸಾಹಿತ್ಯ ಸಂಗ್ರಹಕ್ಕೆ ಹೋದಾಗ ಕೈಲಿದ್ದ ಹಣ ಮುಗಿದು ಹೋಗಿ ಊಟ ವಸತಿಗೆ ತೊಂದರೆಯಾದಾಗ ಆ ಪ್ರದೇಶಗಳ ಶಾಲಾ ಶಿಕ್ಷಕರು ನನ್ನ ನೆರವಿಗೆ ಬರುತ್ತಿದ್ದರು. ಪ್ರೌಢಶಾಲೆಯಲ್ಲಿ ನನ್ನ ಉಪನ್ಯಾಸ ಏರ್ಪಡಿಸಿ ಯಥಾಶಕ್ತಿ ಹಣದ ನೆರವನ್ನು ಕೊಡುತ್ತಿದ್ದರು. ಸಾಮಾನ್ಯವಾಗಿ ಹಾಡು ಹೇಳುವ ಜನ ಕೂಲಿನಾಲಿ ಮಾಡುವ ಹಾಗೂ ಭಿಕ್ಷೆ ಬೇಡುವ ಬಡ ಜನ. ಶ್ರೀಮಂತ ವರ್ಗದವರು ಹಾಡು ಹೇಳುವುದು ತಮ್ಮ ಗೌರವಕ್ಕೆ ತಕ್ಕದಲ್ಲವೆಂಬ ನಿಲುವನ್ನು ತಳೆದಿರುವುದು ಸರ್ವೆಸಾಮಾನ್ಯ”

ಹಲವು ವೇಳೆ ಸಂಗ್ರಹ ಕಾಲದಲ್ಲಿ ಹಾಡು ಹೇಳುವವರಿಗೆ ದುಡ್ಡು ಕೊಡಬೇಕಾಗುತ್ತಿತ್ತು. ಕೆಲವು ಸಲ ೧೫-೨೦ ಪೈಸೆ ಬೆಲೆಯ ಜನಪ್ರಿಯ ಜನಪದ ಗೀತೆಗಳ ಕಿರುಹೊತ್ತಿಗೆಗಳನ್ನು ಪ್ರಕಟಿಸಿ, ಉಪನ್ಯಾಸಗಳ ಸಮಯದಲ್ಲಿ ವಿದ್ಯಾರ್ಥಿ ಗಳಿಗೆ ಮಾರಾಟ ಮಾಡುತ್ತಾ ತನ್ನ ಖರ್ಚುವೆಚ್ಚಗಳಿಗೆ ಹಣ ಒದಗಿಸಿಕೊಳ್ಳುತ್ತಿದ್ದ ಪ್ರಸಂಗ ತಿಳಿಸಿದ್ದಾರೆ. ಮತಿಘಟ್ಟ ಕೃಷ್ಣಮೂರ್ತಿಯವರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಜಾನಪದ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ೩ನೇ ಬೇಲೂರು ತಾಲ್ಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಮತಿಘಟ್ಟ ಕೃಷ್ಣಮೂರ್ತಿ ಯವರ ಜೀವಾತ್ಮವು ೨೦೦೬ ಜುಲೈ ೨೭ರಂದು ದೇಹವನ್ನು ತೊರೆಯಿತು.

ಗೊರೂರು ಅನಂತರಾಜು
ಮೊ: ೯೪೪೯೪೬೨೮೭೯.
ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ ಹಾಸನ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group