ಹುನಗುಂದ: ಜಾನಪದ ಸಾಹಿತ್ಯ ನೆಲ ಮೂಲದ ಸಂಸ್ಕೃತಿ ಬಿಂಬಿಸುತ್ತದೆ ಎಂದು ಪಟ್ಟಣದ ವಿ. ಎಂ.ಎಸ್ . ಆರ್. ವಸ್ತ್ರದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್. ಎಸ್. ಮುಡಪಲದಿನ್ನಿ ಹೇಳಿದರು.
ಶನಿವಾರ ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ನಡೆದ ವಿಶ್ವ ಜಾನಪದ ದಿನ ಹಾಗೂ ಬುಡಕಟ್ಟು ದಿನಾಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಬುಡಕಟ್ಟು ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಚಾಮರಾಜನಗರ ಜಿಲ್ಲೆಯ ಸೋಲಿಗರನ್ನು ಮುಖ್ಯವಾಹಿನಿಗೆ ಕರೆತಂದ ಡಾ. ಸುದರ್ಶನ ಅವರ ಕಾರ್ಯ ಶ್ಲಾಘನೀಯ ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಂ. ಸಾಹುಕಾರ ಮಾತನಾಡಿ, ಜಾನಪದ ಎಂಬುದು ಸಾಂಸ್ಕೃತಿಕ, ಸಾಮಾಜಿಕ ವ್ಯವಸ್ಥೆಯ ಮೂಲವೇ ಆಗಿದೆ, ಜಾನಪದ ಮತ್ತು ಜನರ ಬದುಕಿನಲ್ಲಿ ಅವಿನಾಭಾವ ಸಂಬಂಧವಿದೆ. ಜಾನಪದಕ್ಕೆ ಈ ಹಿಂದೆ ರಾಜಾಶ್ರಯವಿತ್ತು. ಕಲಾ ಪೋಷಕರನ್ನು ಪ್ರೋತ್ಸಾಹಿಸುತ್ತಿದ್ದರು. ಆದರೆ ಇವತ್ತಿನ ಆಧುನಿಕ ಕಾಲಘಟ್ಟದಲ್ಲಿ ಜಾನಪದ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ತಿಳಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಬುಡಕಟ್ಟು ಸಮುದಾಯ ತಮ್ಮದೆ ಆದ ಸಂಸ್ಕೃತಿ, ಭಾಷೆ, ಜೀವನ ಶೈಲಿ ಹೊಂದಿದ್ದು, ಅವರು ಪ್ರಕೃತಿ ಆರಾಧಕರಾಗಿ ಪರಿಸರದ ಅವಿಭಾಜ್ಯ ಅಂಗವಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಆಕರ್ಷಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ನಿರ್ದೇಶಕ ಅರುಣೋದಯ ದುದ್ದಗಿ ಮಾತನಾಡಿ, ಕನ್ನಡ ಜಾನಪದ ಪರಿಷತ್ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕನ್ನಡ ಜಾನಪದ ಪರಿಷತ್ತಿನ ತಾಲೂಕ ಅಧ್ಯಕ್ಷ ಬಿ ಡಿ , ಚಿತ್ರರಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಪರಶುರಾಮ ಇಟಗಿ ಹಾಗೂ ಸಂಗಡಿಗರು ಚೌಡಕಿ ಪದ ಹಾಡುವ ಮೂಲಕ ಗಮನ ಸೆಳೆದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ ನಬಿವಾಲ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಎಸ್. ಎಸ್. ಕಟಗಿ, ಮಹಾಂತೇಶ ಅಂಗಡಿ ಇತರರಿದ್ದರು.