ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ ಅಭಿಮತ
ಮೈಸೂರು -ತಾಲ್ಲೂಕಿನ ಕೆಂಚಲಗೂಡುವಿನ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ಸಂಘದಿಂದ ಗ್ರಾಮದಲ್ಲಿ ಇತ್ತೀಚೆಗೆ ಶ್ರೀ ವಾಲ್ಮೀಕಿ ಜಯಂತಿ ಆಯೋಜಿಸಲಾಗಿತ್ತು.
ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ದ್ಯಾವಪ್ಪ ನಾಯಕ ಅವರು ಮಾತನಾಡಿ, ದೇಶಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ನೀಡಿದರೆ, ಜಗತ್ತಿಗೆ ಮೊಟ್ಟ ಮೊದಲ ಸಂವಿಧಾನ ನೀಡಿದ್ದು ಮಹರ್ಷಿ ವಾಲ್ಮೀಕಿ. ಈ ಇಬ್ಬರು ಮಹಾನ್ ನಾಯಕರು ಜಗತ್ತಿಗೆ ಬೆಳಕಾಗಿರುವುದು ನಮ್ಮ ದೇಶದ ಹೆಮ್ಮೆ ಎಂದು ಅಭಿಪ್ರಾಯಿಸಿದರು.
ಪ್ರತಿಯೊಬ್ಬರಿಗೂ ಆತ್ಮ ಚರಿತ್ರೆ ಎನ್ನುವುದು ಇರುತ್ತದೆ. ಆದರೆ, ನಮ್ಮ ದೇಶದ ಆತ್ಮ ಚರಿತ್ರೆ ಎಂದರೆ ಅದು ವಾಲ್ಮೀಕಿ ಬರೆದ ಮಹಾನ್ ಕಾವ್ಯ ರಾಮಾಯಣ. ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಕೆಂಪೇಗೌಡ, ಬಾಬು ಜಗಜೀವನ ರಾಮ್ ಇವರೆಲ್ಲರೂ ಯಾವುದೇ ಜಾತಿಗೆ ಸೀಮಿತವಾಗದೇ ಜಗತ್ತಿಗೆ ಬೆಳಕು ನೀಡುವ ಜ್ಯೋತಿಯಾಗಿದ್ದಾರೆ. ಆದ್ದರಿಂದ ಈ ಮಹಾನ್ ನಾಯಕರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಾಲ್ಮೀಕಿ ರಾಮಾಯಣವನ್ನು ಜಗತ್ತಿನ ಹಲವಾರು ದೇಶಗಳು ತಮ್ಮ ದೇಶದ ಭಾಷೆಗಳಿಗೆ ತರ್ಜುಮೆ ಮಾಡಿಕೊಂಡು ಅಭಿವೃದ್ಧಿ ಹೊಂದುತ್ತಿವೆ. ಅದರಲ್ಲಿ ಜಪಾನ್, ಜರ್ಮನ್, ಇಟಲಿ ಇನ್ನೂ ಮುಂತಾದ ದೇಶಗಳು ಒಳಗೊಂಡಿವೆ ಎಂದರು.
ವೇದಿಕೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಭಾಕರ ಹುಣಸೂರು, ನಾಯಕರ ಉದ್ಬೂರು ಎಂ.ಸೋಮಣ್ಣ, ಪ್ರಮುಖರಾದ ಕೋಟೆ ಹುಂಡಿ ಮಹದೇವ, ಧನಗಳ್ಳಿ ನಿಂಗರಾಜು, ಜಯಣ್ಣ, ಸಾಲುಂಡಿ ಭಾಸ್ಕರ, ಮಂಚನಾಯಕ, ಜಯಪುರ ಜವರನಾಯಕ, ಪ್ರಿನ್ಸ್, ಸಿದ್ದನಾಯಕ, ನಂದೀಶ, ಸಿದ್ದರಾಜು ಮಹೇಶ, ಬಸಪ್ಪ ನಾಯಕ, ಬೀರೇಶ, ಅರ್ಜುನ ಮುಂತಾದವರು ಇದ್ದರು.