ಸಿಂದಗಿ: ಚಂದ್ರನ ದಕ್ಷಿಣ ದ್ರುವದಲ್ಲಿ ಲ್ಯಾಂಡರ್ ಇಳಿಸುವ ಮೂಲಕ ವಿಶ್ವದ ಯಾವ ರಾಷ್ಟ್ರವೂ ಮಾಡದ ಸಾಧನೆಯನ್ನು ಭಾರತ ಮಾಡಿದೆ. ಇದು ಭಾರತೀಯರು ಹೆಮ್ಮೆ ಪಡುವ ವಿಷಯ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣಕುಮಾರ ಹೇಳಿದರು.
ಪಟ್ಟಣದ ಸಾರಂಗಮಠದ ಆವರಣದಲ್ಲಿ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ದೇಶದ ಖ್ಯಾತ ವಿಜ್ಞಾನಿಗಳಿಗೆ ಕೊಡ ಮಾಡುವ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಚಂದ್ರಯಾನ-3 ಅತ್ಯಂತ ವಿಶಿಷ್ಟ ಕಾರ್ಯಾಚರಣೆ. ನಿಜಕ್ಕೂ ಭಾರತೀಯ ವಿಜ್ಞಾನಿಗಳ ಕಾರ್ಯ ಈ ಜಗತ್ತು ಕೊಂಡಾಡಿದೆ. ಈ ಮೊದಲು ಚಂದ್ರಯಾನ-1ದಲ್ಲಿ ಚಂದ್ರನ ಅಂಗಳದಲ್ಲಿ ನೀರಿನ ಕುರುಹು, ನೀರಿನ ಅಂಶಗಳನ್ನು ಪತ್ತೆ ಮಾಡಿದೆ. ಜಗತ್ತಿನಲ್ಲಿ ಈ ಕಾರ್ಯ ಮಾಡಿದ ಮೊದಲ ದೇಶ ಭಾರತ. ಸೂರ್ಯನ ಅಧ್ಯಯನಕ್ಕೆ ಮುಖ ಮಾಡಿದ್ದು, ಆದಿತ್ಯ ಉಪಗ್ರಹ ಮಹತ್ವದ ಅಧ್ಯಯನ ಮಾಡಿ ಮಾಹಿತಿ ರವಾನಿಸುತ್ತಿದೆ. ಸೂರ್ಯನ ಕುರಿತಾದ ಮಾಹಿತಿಯಿಂದ ಭೂಮಿಗೆ ಸಂಭವಿಸಬಹುದಾದ ಅನೇಕ ಅವಘಡ ತಪ್ಪಿಸಲು ಅನುಕೂಲವಾಗಲಿದೆ. ಅನೇಕ ಕಷ್ಟಗಳ ಮಧ್ಯೆಯೂ ಭಾರತೀಯ ಬಾಹ್ಯಾಕಾಶ ಸಂಸ್ಥೆ ತನ್ನ ವಿಶಿಷ್ಟ ಕಾರ್ಯಗಳ ಮೂಲಕ ಜಗತ್ತಿನ ಗಮನ ಸೆಳೆದಿದೆ ಎಂದರು.
ಇದೇ ವೇಳೆ ವಿದ್ಯಾರ್ಥಿಗಳ ಅನೇಕ ಪ್ರಶ್ನೆಗಳಿಗೆ ಅವರು ಡಾ.ಕಿರಣಕುಮಾರ ಉತ್ತರಿಸಿದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಹಾಸನ ಜಿಲ್ಲೆಯ ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಎ.ಎಸ್. ಕಿರಣಕುಮಾರ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಗಳು ದೊರೆತಿವೆ ಆದರೆ ಶ್ರೀಮಠದಿಂದ ಕೊಡಮಾಡುವ ಶ್ರೇಷ್ಠ ವಿಜ್ಞಾನಿಗೆ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿಯಿಂದ ಇಡೀ ಕರ್ನಾಟಕ ಇತ್ತ ಕಡೆ ಹೊರಳಿ ನೋಡುವಂತಾಗುತ್ತದೆ ಅಲ್ಲದೆ ಈ ಬಾಗದ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರೇರಣೆ ದೊರಕಲಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ವಿಪ ಸದಸ್ಯ ಅರುಣ ಶಹಾಪೂರ ಮಾತನಾಡಿ, ಒಂದು ಧಾರ್ಮಿಕ ಸಂಸ್ಥೆ ದೇಶದ ಖ್ಯಾತ ವಿಜ್ಞಾನಿಗಳನ್ನು ಗುರುತಿಸಿ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಕೊಡುತ್ತಿರುವುದು ಶ್ಲಾಘನೀಯ ಎಂದರು.
ಶ್ರೀಮಠದ ಪೀಠಾಧ್ಯಕ್ಷ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಲಿಂ.ಸಿದ್ದೇಶ್ವರ ಶ್ರೀಗಳ ಪ್ರೇರಣೆಯಿಂದ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. ಈವರೆಗೆ ಭಾರತದ ಶ್ರೇಷ್ಠ ವಿಜ್ಞಾನಿಗಳಾದ ಸಿ.ಎನ್.ರಾವ್, ಯು.ಆರ್.ರಾವ್, ಡಾ.ಎ.ಎಸ್.ಪಾಟೀಲ, ಕೆ.ಕಸ್ತೂರಿರಂಗನ್ ಅವರಿಗೆ ನೀಡಲಾಗಿದೆ ಎಂದು ತಿಳಿಸಿದರು.
ಸಮ್ಮುಖ ವಹಿಸಿದ ಕನ್ನೊಳ್ಳಿಯ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಕೊಣ್ಣೂರಿನ ಹೊರಗಿನಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಪ್ರವಚನಕಾರ ಪ್ರೊ. ಬಿ.ಎನ್.ಪಾಟೀಲ, ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ನಿರ್ದೇಶಕರಾದ ನೆಹರೂಜಿ ಪೋರವಾಲ, ಡಾ.ವ್ಹಿ.ವ್ಹಿ.ಸಾಲಿಮಠ, ವಿಶ್ವನಾಥ ಜೋಗೂರ, ಹ.ಮ. ಪೂಜಾರ ಸೇರಿದಂತೆ ಹಲವರು ವೇದಿಕೆ ಮೇಲೆ ಇದ್ದರು.
ನಿರ್ದೇಶಕ ಅಶೋಕ ವಾರದ ಸ್ವಾಗತಿಸಿದರು. ಪ್ರೊ. ರವಿ ಗೋಲಾ, ಪೂಜಾ ಹಿರೇಮಠ ನಿರೂಪಿಸಿದರು. ಪ್ರಾಚಾರ್ಯ ಡಾ. ಶರಣಬಸವ ಜೋಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು