ಗೋಕಾಕ – ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರು ತಮಗೆ ಬರುವ ೨೦೦೦ ರೂ. ಗಳನ್ನು ಹತ್ತು ತಿಂಗಳ ಕಾಲ ಕೂಡಿಟ್ಟು ಕಣ್ಣಿನ ಆಪರೇಶನ್ ಮಾಡಿಸಿಕೊಂಡರೆಂಬ ಒಂದು ವರದಿಯು ಕಾಂಗ್ರೆಸ್ ಸರ್ಕಾರದ ಹೆಗ್ಗಳಿಕೆಯೋ ಅಥವಾ ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಉಡಾಫೆಯೋ ಎಂಬ ಚರ್ಚೆ ಹುಟ್ಟು ಹಾಕಿದೆ.
ಕರ್ನಾಟಕ ಸರ್ಕಾರದ ಆರೋಗ್ಯ ಕರ್ನಾಟಕ, ಯಶಸ್ಸಿನಿ ಹಾಗೂ ಭಾರತ ಸರ್ಕಾರದ ಆಯುಷ್ಮಾನ ಭಾರತ ಯೋಜನೆಗಳಿವೆ, ಸರ್ಕಾರಿ ಆಸ್ಪತ್ರೆಗಳಿದ್ದರೂ ಈ ಬಡ ಮಹಿಳೆ ಹಣಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆಂದರೆ ಇದು ಸರ್ಕಾರದ ಆರೋಗ್ಯ ಇಲಾಖೆಯ ವೈಫಲ್ಯವೆ ಸರಿ.
ರಾಜ್ಯ ಸರ್ಕಾರ ತನ್ನ ಹಾಗೂ ಕೇಂದ್ರದ ಯೋಜನೆಗಳನ್ನ ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ ಹಾಗೂ ಸರ್ಕಾರಿ ಆಸ್ಪತ್ರೆಗಳನ್ನ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಉಚಿತ ಗ್ಯಾರಂಟಿಗಳಿಂದ ಹಾಗೂ ಗೃಹಲಕ್ಷ್ಮಿಯಂಥ ಯೋಜನೆಯಿಂದ ಬಡ ಮಹಿಳೆಯರಿಗೆ ಅನುಕೂಲವಾಗಿದೆಯೇನೋ ನಿಜ ಆದರೆ ಬಡಜನತೆಗೆ ಉಚಿತ ಚಿಕಿತ್ಸೆಗೆ ಇದರಿಂದ ಪೆಟ್ಟು ಬಿದ್ದಿದೆಯೆಂಬ ಗುಮಾನಿ ಬರುತ್ತಿದೆ. ಉಚಿತ ಯೋಜನೆಗಳ ಕಾರಣದಿಂದ ಅನೇಕ ಯೋಜನೆಗಳು ಹಾಗೂ ಸೌಕರ್ಯಗಳಿಗೆ ಕೊಕ್ಕೆ ಬಿದ್ದಂತೆ ಆರೋಗ್ಯ ಇಲಾಖೆಗೂ ಇದೆ ಪರಿಸ್ಥಿತಿ ಒದಗಿದೆ. ಹಾಗಾದರೆ ಭಾಗ್ಯಲಕ್ಷ್ಮಿ ಹಣ ಪಡೆಯದ ಬಡವರು ಚಿಕಿತ್ಸೆಗೆ ಹಣ ಎಲ್ಲಿಂದ ತರಬೇಕು? ಇದಕ್ಕೆಲ್ಲ ಸರ್ಕಾರವೆ ನೇರ ಹೊಣೆಯಲ್ಲವೆ ?
ಮಲ್ಲಿಕಾರ್ಜುನ ಚೌಕಶಿ, ವಕೀಲರು