ಮೂಡಲಗಿ: ಸಂಘರ್ಷ ಮತ್ತು ಹಿಂಸಾಚಾರ ಮಾರ್ಗಗಳನ್ನು ತೊಡೆದು ಹಾಕಿ ಸಹಕಾರ, ಅಹಿಂಸೆ ಹಾಗೂ ಸಮಾಲೋಚನೆ ವಿಧಾನಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗವನ್ನು ಅನುಸರಿಸಬೇಕು ಎಂದು ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಕರೆ ನೀಡಿದರು.
ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ‘ಸದ್ಭಾವನಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆಗಳ ಹೆಸರಿನಲ್ಲಿ ಒಡೆದು ಹೋಗುತ್ತಿರುವ ನಮ್ಮ ದೇಶಕ್ಕೆ ಏಕತೆ ತಂದು ಕೊಡುವುದೇ ಈ ಸೌಹಾರ್ದತೆ ಮತ್ತು ಸದ್ಭಾವನೆಗಳು. ದೇಶದ ಪ್ರತಿಯೊಬ್ಬ ಪ್ರಜೆಯು ಈ ಗುಣವನ್ನು ತಮ್ಮಲ್ಲಿ ಅಳವಡಿಸಿಕೊಂಡರೆ ನಮ್ಮ ದೇಶ ವಿಶ್ವದಲ್ಲಿಯೇ ಒಂದು ಪ್ರಬಲ ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ. ಭಾರತದಲ್ಲಿ ಪ್ರತಿವರ್ಷ ಆಗಸ್ಟ್ 20ನೇ ದಿನಾಂಕವನ್ನು ರಾಷ್ಟ್ರೀಯ ಸದ್ಭಾವನಾ ದಿನ ಎಂದು ಆಚರಿಸಲಾಗುತ್ತದೆ. ಅಂದು ಎಲ್ಲರಿಗೂ ಸದ್ಭಾವನೆ, ಸೌಹಾರ್ದತೆ, ಶಾಂತಿ, ರಾಷ್ಟ್ರೀಯ ಏಕತೆಗಳ ಮಹತ್ವವನ್ನು ಸಾರುವ ಕಾರ್ಯಕ್ರಮಗಳು ಜರುಗುತ್ತವೆ.
ಆಗಸ್ಟ್ 20 ಭಾರತದ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮ ದಿನವೂ ಹೌದು. ತಮ್ಮ ಆಡಳಿತ ಅವಧಿಯಲ್ಲಿ ರಾಷ್ಟ್ರೀಯ ಸೌಹಾರ್ದತೆಗೆ ವಿಶೇಷವಾಗಿ ಶ್ರಮಿಸಿದ ಅವರಿಗೆ ಗೌರವ ನೀಡುವ ಸಲುವಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಸದ್ಭಾವನಾ ದಿನವನ್ನಾಗಿ ಆಚರಿಸಲು ಆಗಿನ ಕಾಂಗ್ರೆಸ್ ಸರ್ಕಾರ ನಿರ್ಧರಿಸಿತ್ತು. ಈ ಆಚರಣೆ ಈಗಲೂ ಮುಂದುವರಿದಿದೆ ಎಂದರು.
ರಾಸೇಯೋ ಸಹ ಕಾರ್ಯಕ್ರಮ ಅಧಿಕಾರಿ ಪ್ರೊ. ಡಿ.ಎಸ್. ಹುಗ್ಗಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರುಗಳಾದ ಡಾ. ಎಂ.ಬಿ. ಕುಲಮೂರ, ಆರ್.ಎಸ್. ಪಂಡಿತ, ವಸುಂದರಾ ಕಾಳೆ, ಎಸ್.ಎಂ. ಬಂಡಿ, ಸಂತೋಷ ಜೋಡಕುರಳಿ, ಎಂ.ಎನ್. ಮುರಗೋಡ, ಬಿ.ಸಿ. ಮಾಳಿ, ಸಾಗರ ಐದಮನಿ, ಗ್ರಂಥಪಾಲಕ ಬಿ.ಬಿ. ವಾಲಿ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.