ಅದೊಂದು ಕಾಲವಿತ್ತು….ಏ ತಮ್ಮ ಟೈಮ್ ಎಷ್ಟ ಆಗೇತಿ ಅಂತ ಯಾವುದೋ ಒಬ್ಬ ಹಿರಿಯರೋ,ಅಥವಾ ಹೆಣ್ಣುಮಕ್ಕಳೋ ಕೈಯ್ಯಲ್ಲಿ ಗಡಿಯಾರ ಕಟ್ಟಿದವರನ್ನ ನೋಡಿ ಸಮಯ ಕೇಳುತ್ತಿದ್ದರು.ಅದಕ್ಕೂ ಮೊದಲಿನ ಹಿರಿಯ ಅನುಭವಿಗಳು ಅಕಾಶದ ಕಡೆಗೆ ಹಣೆಯ ಮೇಲೆ ಕೈ ಇಟ್ಟು ನೋಡಿಯೋ,ಮನೆಯ ಅಥವಾ ಗಿಡದ ನೆರಳು ಎಷ್ಡು ಉದ್ದಕ್ಕೆ ಹರಡಿಕೊಂಡಿದೆ ಅಂತ ನೋಡಿಯೊ ಸಮಯವನ್ನು ಅಂದಾಜಿಸಿ ಕರಾರುವಾಕ್ಕಾಗಿ ಸಮಯವನ್ನು ಹೇಳಿ ಬಿಡುತ್ತಿದ್ದರು.
ಅಲುಗಾಟ ಸ್ಥಬ್ದ ಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ತಂದಾಗ ಮುಂಗೈ ಹಿಂಭಾಗದ ಗಡಿಯಾರ ಕಟ್ಟುವ ಮಣಿಕಟ್ಟಿನ ಮೇಲೆ ತಮ್ಮ ಹೆಬ್ಬೆರಳು ಒತ್ತಿ ಹಿಡಿದು ಕೈಯ್ಯಲ್ಲಿನ ಗಡಿಯಾರದ ಕಡೆ ನೋಡಿದ ಡಾಕ್ಟ್ರು ಇವನ ಟೈಮ್ ಮುಗೀತು ಅಂದಾಗ ಮನೆಯವರ ಆಕ್ರಂದನ ಮುಗಿಲು ಮುಟ್ಟುತ್ತಿದ್ದ ದಿನಗಳವು..
ಆದರೆ ಯಾವಾಗ ಕೊಳ್ಳುಬಾಕ ಸಂಸ್ಕೃತಿ ಅನ್ನುವದು ಆರಂಭವಾಯಿತೋ ಆಗಿನಿಂದಲೇ ಗಡಿಯಾರದ ಜೊತೆಗೆ ಸಮಯವೂ ತನ್ನ ಬೆಲೆ ಕಳೆದುಕೊಳ್ಳಲು ಆರಂಭವಾಯಿತು, ಎಚ್ ಎಮ್ ಟಿ, ಸೋನಾಟಾ, ಸಿಟಿಜನ್, ಮೊದಲಾದ ಕಂಪನಿಗಳ ಹೆಸರಿನಿಂದ ಬರುತ್ತಿದ್ದ ಗಡಿಯಾರದ ಜೊತೆಗೆ ಮದುವೆಯಲ್ಲಿ ಮಾವ ಕಟ್ಟಿದ್ದ ಕೈ ಗಡಿಯಾರದಿಂದ ಹಿಡಿದು ವಾಲ್ ಕ್ಲಾಕ್ ಗಳು ಕೂಡ ಅಪರೂಪವಾಗಿದ್ದ ಹಾಗೂ ಟೇಬಲ್ ಮೇಲೆ ಇಟ್ಟ ಗಡಿಯಾರದ ಕೀ ತಿರುಗಿಸಿ ಅಲಾರಂ ಸೆಟ್ ಮಾಡಲಾಗುತ್ತಿದ್ದ ಗಡಿಯಾರಗಳಿಂದ ಹಿಡಿದು ಗೋಡೆಗೆ ನೇತು ಬಿಟ್ಟ ಗಡಿಯಾರವೊಂದು ಗಂಟೆಗೊಮ್ಮೆ ಸಮಯ ಆದಷ್ಟು ಸಲ ಬೆಲ್ ಬಾರಿಸಿದಂತೆ ಪೆಂಡುಲಮ್ ಅಲುಗಾಡುತ್ತಿದ್ದ ಮತ್ತು ಅಂಧರು ಕೂಡ ಅದರಿಂದ ಸಮಯ ಅಂದಾಜಿಸಬಲ್ಲ ದಿನಗಳಿದ್ದವು.
ಆಗೆಲ್ಲ ಟ್ರೈನು, ಪ್ಲೈಟಿಗೆ ಹೋಗಬೇಕಿದ್ದ ಪ್ರತಿಷ್ಠಿತ ಜನ ತಮ್ಮ ಕೈಯ್ಯಲ್ಲಿನ ಗಡಿಯಾರ ಹಿಂದೆ ಬಿದ್ದಿದ್ದಕ್ಕೆ ತಡವಾಗಿ ನಿಲ್ದಾಣ ತಲುಪಿ ಪ್ರಯಾಣದ ಅವಕಾಶ ಕಳೆದುಕೊಂಡಿದ್ದರಿಂದ ಹಿಡಿದು ಟೈಂ ಬಾಂಬ್ ಅನ್ನುವ ಮತ್ತು ಟೈಂ ಬಾಂಡ್ ಅನ್ನುವ ಪದಗಳಿಗೆ ಎದೆ ಝಲ್ ಅನ್ನುತ್ತಿದ್ದ ದಿನಗಳವು…
ಹಟಕ್ಕೆ ಬಿದ್ದು ಹೀರೋ ಪೆನ್ನು ಖರೀದಿಸಿದಷ್ಟೇ ಪ್ರೀತಿಯಿಂದ ಹೈಸ್ಕೂಲ್ ಕಟ್ಟೆ ಏರುವ ಹೊತ್ತಿಗೆ ಕೈಗೆ ಗಡಿಯಾರ ಕಟ್ಟಿದರೆ ಅದೊಂದು ಪ್ರತಿಷ್ಠೆಯ ವಿಷಯವಾಗಿರುತ್ತಿತ್ತು.
ಅತ್ಯಂತ ದುಬಾರಿ ವಾಚುಗಳಲ್ಲಿ ಇಂದಿಗೂ ರೋಲೆಕ್ಸ್ ಅಗ್ರಗಣ್ಯ ಸ್ಥಾನದಲ್ಲಿ ಇದ್ದರೆ ಕ್ರಮವಾಗಿ ಕಾರ್ಟಿಯರ್, ಒಮೆಗಾ, ಆಡಿಮಾರ್ಸ ಪಿಗೆಟ್,ಫಾಟೆಕ್ ಪಿಲಿಪ್ಪೀ, ರಿಚರ್ಡ್ ಮಿಲ್ಲೆ,ಲೊಂಗಿನೆಸ್,ವಾಚರ್ನ್ ಕಾಂಟೆನಿನ್ ಕಂಪನಿಯ ಕೈಗಡಿಯಾರಗಳು ತಮ್ಮ ಬ್ರಾಂಡ್ ಹೆಸರು ಮತ್ತು ಗುಣಮಟ್ಟದಿಂದ ಹೆಸರು ಕಾಯ್ದುಕೊಂಡಿವೆ.
ಈ ಮೊದಲು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕ್ವಿಜ್ ಕಾಂಪಿಟೇಶನ್ ಗಳಿಂದ ಹಿಡಿದು ಕೌನ್ ಬನೆಗಾ ಕರೋಡ್ ಪತಿಯವರೆಗೆ ಹಾಗೂ ಪ್ರಣಯರಾಜ ಖ್ಯಾತಿಯ ಹಿರಿಯ ನಟ ಶ್ರೀನಾಥ ನಡೆಸಿಕೊಡುತ್ತಿದ್ದ ನಾರಿಗೊಂದು ಸೀರೆ ಕಾರ್ಯಕ್ರಮದ ಸಮಯದಲ್ಲಿ ಯುವರ್ ಟೈಮ್ ಸ್ಟಾರ್ಟ್ ನೌ….. ಅಂದಾಗೆಲ್ಲ ಗಡಿಯಾರದ ಟಿಕ್ ಟಿಕ್ ಸದ್ದು ಕೇಳಿ ರೋಮಾಂಚನ ಗೊಳ್ಳುವ ಜೀವಗಳು ನಾವು.
ಬಟನ್ ಒತ್ತಿದಾಗ ದ ಟೈಮ್ ಈಜ್ ನೈನ್ ಓ ಕ್ಲಾಕ್ ಅನ್ನುವ ಧ್ವನಿಯೊಂದಿಗೆ ಸಮಯವನ್ನು ಉಚ್ಚರಿಸುವ, ಕೋಳಿಯ ಧ್ವನಿಯಲ್ಲಿ ಅಲಾರಮ್ಮು ಬಡಿದುಕೊಳ್ಳುವ, ನೈಟ್ ರೇಡಿಯಂ ಅಂಟಿಸಿದ ಮುಳ್ಳುಗಳಿಂದ ಕತ್ತಲಿನಲ್ಲೂ ಸಮಯ ನೋಡಬಹುದಾಗಿದ್ದ ಗಡಿಯಾರಗಳು ನಮಗೆಲ್ಲ ಅಚ್ಚರಿ ಹುಟ್ಟಿಸುತ್ತಿದ್ದ ದಿನಗಳವು
ಆದರೆ ದುರಂತವೆಂದರೆ ಹತ್ತೊಂಬತ್ತನೂರ ಅರವತ್ತೊಂದರಲ್ಲಿ ಹಿಂದುಸ್ತಾನ್ ಮಷೀನ್ ಟೂಲ್ಸ್ (ಎಚ್ ಎಮ್ ಟಿ) ಕಂಪನಿಯಿಂದ ಅಂದಿನ ಪ್ರಧಾನಿ ನೆಹರು ಅವರಿಂದ ಲೋಕಾರ್ಪಣೆ ಆಗಿದ್ದ ಜನತಾ ವಾಚ್ ಅನ್ನುವ ಗಟ್ಟಿಯಾದ ದಾರಕ್ಕೆ ಕಟ್ಟಿ ಟೊಂಕದವರೆಗೆ ನೇತು ಬಿಟ್ಟುಕೊಳ್ಳಬಹುದಾಗಿದ್ದ ಗಡಿಯಾರದಿಂದ ಹಿಡಿದು ದುಡಿಯುವ ಬಂಡವಾಳದ ಕೊರತೆಯಿಂದ ಕಂಪನಿಯ ಬಾಗಿಲು ಮುಚ್ಚಿದ ಈಗ ಕೆಲ ವರ್ಷಗಳ ಹಿಂದಷ್ಟೇ ಇದಕ್, ಚೈನ್ ಹಾಕ್ತೀರಿ ಏನ್ರಿ? ಇದಕ್ ಏನ್ ಆಗೇತಿ ನೋಡ್ರಿ? ಆ ಲೆದರ್ ಬೆಲ್ಟಿಗ್ ಎಷ್ಟ್ರೀ….?,ಈ ಗಡಿಯಾಳ ಹಿಂದ್ ಬೀಳಾಕ್ ಹತ್ತೇತಿ ನೋಡ್ರಿ,ಸೆಲ್ ಹೋಗೆತಿ ಏನ್ರಿ? ಅನ್ನುವದರಿಂದ ಹಿಡಿದು,ತಾರೀಕು ಮತ್ತು ವಾರವನ್ನು ತಿಳಿಸುತ್ತಿದ್ದ ಗಡಿಯಾರ ಕಟ್ಟಿಕೊಂಡವರ ಗೆಳೆತನ ಮಾಡಲು ಹವಣಿಸುತ್ತಿದ್ದ ದಿನಗಳವು.
ಸಾಲ್ಯಾಗ್ ಫಸ್ಟ್ ಬಂದಿ ಅಂದ್ರ ಗಡ್ಯಾಳ ಕೊಂಡಿಸಿ ಕೊಡ್ತನ್ ನಿನಗ ಅಂತ ಮನೆಯೊಳಗಿನ ಕಾಕಾ, ಕಾಕು, ಅಥವಾ ಅಜ್ಜ,ಅಜ್ಜಿ ಮತ್ತು ಅಪ್ಪ,ಅಮ್ಮ ತಮ್ಮ ಮಕ್ಕಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಗಡಿಯಾರ ಕೊಡಿಸುವ ಆಸೆ ಹಚ್ಚಿಸಿ ಮಕ್ಕಳು ಓದುವಂತೆ ಮಾಡುತ್ತಿದ್ದ ದಿನಗಳವು.
ಗಡಿಯಾರವೇ ಇಲ್ಲದ ಬಡವರ ಮನೆಗಳಲ್ಲಿ ಮಸೀದಿಯ ಆಜಾನಿನ ಕೂಗು ಕೇಳಿ ಸಮಯ ಅಂದಾಜಿಸುತ್ತಿದ್ದ ದಿನಗಳಿಂದ ಹಿಡಿದು ಈಗೀಗ ಅಕ್ಕ ಪಕ್ಕದಲ್ಲಿ ಯಾರೋ ಒಬ್ಬರು ಪರಿಚಯದವರು ಕುಳಿತಿದ್ದರೂ ಅವರತ್ತ ನೋಡಲಾಗದಷ್ಟು,ಮಾತನಾಡಿಸಲು ಆಗದಷ್ಟು ಮೊಬೈಲ್ ಗಳಲ್ಲಿ ಮುಳುಗಿ ಹೋಗುವ ಜನರೇಷನ್ನಿಗೆ ಬಹುಶಃ ಈ ಗಡಿಯಾರದ ಬೆಲೆ ತಿಳಿಯಲಿಕ್ಕಿಲ್ಲ ಬಿಡಿ.
ಯಾರು,ಇದ್ದರೂ ಇಲ್ಲದೇ ಇದ್ದರೂ ತನ್ನ ಪಾಡಿಗೆ ತಾನು ಸಾಗುತ್ತಲೇ ಇರುವ ಸಮಯದ ಕಾಲ ಗರ್ಭದ ಒಳಗೆ ಸಿಲುಕಿದ್ದರೂ ಕೂಡ ಸಣ್ಣವರಿದ್ದಾಗ ಬಡತನದ ಕಾರಣದಿಂದ ಮತ್ತು ಮುಂದಿನ ವರ್ಷ ತಗೋಳೋಣು ಬಿಡು ಅನ್ನುವ ಸ್ವ ಆತ್ಮರತಿಯ ಸಮಾಧಾನದಿಂದ ಅದೆಷ್ಟೋ ಕೈಗಳು ಇಂದಿಗೂ ಕೈ ಗಡಿಯಾರಗಳನ್ನು ಬೆರಗು ಗಣ್ಣಿನಿಂದ ನೋಡುವದನ್ನು ಕಂಡಾಗೆಲ್ಲ ನನ್ನ ಹಳೆಯ ದಿನಗಳು ನೆನಪಾಗದೆ ಇರಲಾರವು.
ಕಣ್ಣಿಗೆ ಹಾಕುವ ಗಾಗಲ್ ಅನ್ನುವ ಚಾಳಿಸಿನಿಂದ ಹಿಡಿದು ಗೂಗಲ್ ನಲ್ಲಿ ಸರ್ಚ ಮಾಡಿ ಖರೀದಿಸಿ ಕೈಗೆ ಕಟ್ಟುವ ಗಡಿಯಾರ ಸೇರಿದಂತೆ ಸೊಂಟದ ಬೆಲ್ಟು,ಮೈ ಮೇಲೆ ತೊಡುವ ಬಟ್ಟೆ,ಮತ್ತು ಕಾಲಲ್ಲಿ ಧರಿಸುವ ಶೂಜುಗಳ ಬ್ರಾಂಡ್ ಮೇಲೆಯೇ ಮನುಷ್ಯ ಮತ್ತೊಬ್ಬರನ್ನು ಗೌರವಿಸುವ ದಿನಗಳಿಂದ ಹಿಡಿದು ಒಂದು ಜೊತೆ ಬಟ್ಟೆಯಲ್ಲೇ ಸರಳವಾಗಿ ಬದುಕಿದ ಅದೆಷ್ಟೋ ಹಿರಿಯರ ಆದರ್ಶದ ಕಥೆಗಳನ್ನು ಕೇಳಿ ಬೆಳೆದವರು ನಾವು.
ದುರಂತವೆಂದರೆ ಈಗ ಎಲ್ಲರಿಗೂ ತಮ್ಮ ಕೈಗೆ ಬೇಕಾದ ಅಳತೆಯ ಮತ್ತು ತಮಗಿಷ್ಟವಾದ ಆಕಾರದ ಬಣ್ಣ ಹಾಗೂ ತರಹೇವಾರಿ ಡಿಜೈನ್ ಹೊತ್ತ ಸ್ಟೋನ್ ವಾಚ್ ಧರಿಸುವ ಶಕ್ತಿ ಇದ್ದರೂ ಕೂಡ ಸಮಯದ ಸದುಪಯೋಗ ಪಡೆಯುವ,ಮೊದಲಿನ ಹಿರಿಯರಷ್ಟು ಶ್ರಮ ವಹಿಸಿ ದುಡಿಯುವ ಹಾಗೂ ಪರಸ್ಪರ ಪ್ರೀತಿ ಗೌರವ ಗಳಿಂದ ಬದುಕುವ ಮನಸ್ಥಿತಿ ಉಳಿಯದೆ ಇರುವದು.
ಇದಕ್ಕೆಲ್ಲ ಕಾರಣ ಸೆಕೆಂಡ್ ಕಾಪಿ ಅನ್ನುವ ನಕಲಿ ಬ್ರಾಂಡ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಅನ್ನುವದಕ್ಕಿಂತ ಕಾಲ ಕಳೆದಂತೆಲ್ಲ ನಾವು ಬದಲಾವಣೆಯ ಬಿರುಗಾಳಿಗೆ ಸಿಲುಕಿ ನಲುಗುತ್ತಿದ್ದೇವೆ ಅನ್ನುವದಂತೂ ಕಹಿ ಸತ್ಯವೇ ಸರಿ..
ಮೊನ್ನೆಯಷ್ಟೇ ಆನ್ ಲೈನ್ ಮೂಲಕ ಖರೀದಿಸಿದ ಒಂದು ಖರೀದಿಸದರೆ ಇನ್ನೊಂದು ಉಚಿತ ಅನ್ನುವ ಯಾವ ಬ್ರಾಂಡಿನ ಹಂಗೂ ಇಲ್ಲದೇ ಸೇಲ ಆಗುತ್ತಿರುವ ನೂರೈವತ್ತಕ್ಕೆ ಎರಡು ಗಡಿಯಾರಗಳನ್ನು ತರಿಸಿದ ಬಳಿಕ ಅದರ ಪೋಟೊ ತೆಗೆದು ಪೇಸ್ ಬುಕ್ಕಿನ ಪುಟಕ್ಕೆ ಹಾಕಿ ಬೆಲೆ ಅಂದಾಜಿಸಿ ಅಂದಾಗ ಬೆಲೆ ಕಟ್ಟಲಾಗದ ಬದುಕಿನ ಪುಟಗಳು ಕಣ್ಣ ಮುಂದೆ ಚಲಿಸಿದಂತಾಗಿ ಇದನ್ನೆಲ್ಲ ಬರೆಯಬೇಕಾಯಿತು….
ಈ ಬರಹವನ್ನ ಓದುವ ಮುನ್ನ ಗಡಿಯಾರ ನೋಡಿದವರು ಮತ್ತು ಓದಿದ ಬಳಿಕ ಯಾರಿಗೋ ಸಮಯ ಎಷ್ಟಾಯಿತು ಅನ್ನುವ ಪ್ರಶ್ನೆಗೆ ಉತ್ತರಿಸಿದವರು ಹಾಗೂ ಕೈಗೆ ಗಡಿಯಾರವನ್ನು ಕಟ್ಟಲು ಮರೆತು ಬಂದು ಅಗಲಿಕೆಯನ್ನು ಅನುಭವಿಸಿದವರು ಹಾಗೂ ಒಂದು ಕಾಲದಲ್ಲಿ ಯಾರೊ ಸಮಯ ಕೇಳಿದಾಗ ದೊಡ್ಡ ಅಥವಾ ಸಣ್ಣ ಮುಳ್ಳು ಗಡಿಯಾರದಲ್ಲಿ ಇಲ್ಲದೆ ಅಂದಾಜು ಸಮಯ ಹೇಳಿದವರಿಂದ ಹಿಡಿದು ಬಂದು ಬಿದ್ದ ಗಡಿಯಾರ ಜೀವಂತವಾಗಿದೆಯಾ ಅಂತ ತಮ್ಮ ಕಿವಿಯತ್ತ ಹಿಡಿದು ಅದರ ನಾಡಿ ಮಿಡಿತ….ಅಲ್ಲಲ್ಲ….ಮಷೀನಿನ ಟಿಕ್ ಟಿಕ್ ಕೇಳಿಸಿಕೊಂಡವರು ಮತ್ತು ಛೇ ಇವ ಎನೇನೋ ಬರೀತಾನೆ ಮಾರಾಯ ವೆಸ್ಟಿಂಗ್ ಆಫ್ ಅವರ್ ಪ್ರೆಸ್ಟೀಜಿಯಸ್ ಟೈಮ್ ಅಂತ ಗೊಣಗಿದವರಿಗೂ….ಅವರು ಇವರೆನ್ನದೆ ಎಲ್ಲರಿಗೂ ನನ್ನ ನಮಸ್ಕಾರ….
ದೀಪಕ ಶಿಂಧೇ
9482766018