spot_img
spot_img

ಭೀಮಪ್ಪ ಗಡಾದ ಹೇಳಿದ ಕತೆ ; ಅಧಿಕಾರಕ್ಕಾಗಿ ಬೆಳೆಸಿದವರು ಮೂಲೆಗುಂಪಾಗುತ್ತಾರೆ !

Must Read

spot_img
- Advertisement -

ರಾಜಕಾರಣವೆಂಬುದು ಹೊಲಸಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇದರಲ್ಲಿ ಗೆದ್ದೆತ್ತಿನ ಬಾಲ ಹಿಡಿಯುವವರ ಸಂಖ್ಯೆಯೇ ಜಾಸ್ತಿ ಇರುತ್ತದೆ. ನೈತಿಕತೆ ಎಂಬುದು ರಾಜಕಾರಣದಿಂದ ಮಾರು ದೂರ. ಆತ್ಮಾವಲೋಕನ ಎಂಬುದೂ ಕೂಡ ರಾಜಕಾರಣಕ್ಕೆ ಸಂಬಂಧಿಸಿದ್ದಲ್ಲ. ರಾಜಕಾರಣ ಮಾಡುವವರು ಆತ್ಮಾವಲೋಕನದಂಥ ಅಪಾಯಕಾರಿ ಕೆಲಸಕ್ಕೆ ಕೈ ಹಾಕಬಾರದು. ಬೇರೆಯವರಿಗೆ ಮಾತ್ರ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಉಪದೇಶ ನೀಡಬಹುದು ! ಇತ್ತೀಚೆಗೆ ಮುಡಾ ಹಗರಣದಲ್ಲಿ ಸಿಕ್ಕಿಹಾಕಿಕೊಂಡ ನಂತರ ಮಾತು ಮಾತಿಗೂ ಸಿದ್ಧರಾಮಯ್ಯನವರು ಆತ್ಮ ಸಾಕ್ಷಿಯ ಮಾತನ್ನಾಡಿದಂತೆ ರಾಜಕಾರಣದಲ್ಲಿ ಮಾತನಾಡುವುದು ಅವಶ್ಯಕ ಆದರೆ ನುಡಿದಂತೆ ನಡೆಯುವುದು ಮಾತ್ರ ಶೂನ್ಯ ! ಅದು ಇರಲಿ ಈಗ ಈ ವಿಷಯ ಯಾಕೆ ಬಂತೆಂದರೆ….

ಇತ್ತೀಚೆಗೆ ನಮ್ಮ ಅರಭಾವಿ ಕ್ಷೇತ್ರದ ಮೂಡಲಗಿ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ವಿರೋಧ ಪಕ್ಷದಲ್ಲಿದ್ದವರು ಕೂಡ ಅಡ್ಡ ಮತದಾನ ಮಾಡಿ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ ವಿಷಯ ಚರ್ಚೆಗೆ ಬಂತು. ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಅವರ ಇಬ್ಬರು ಅನುಯಾಯಿಗಳು ಊಸರವಳ್ಳಿಗಳಂತೆ ತಮ್ಮ ಬಣ್ಣ ಬದಲಿಸಿ, ಪಕ್ಷ ಬದಲಿಸಿದ ವಿಷಯ ಚರ್ಚೆಗೆ ಬಂತು.
ಹಾಗೆ ನೋಡಿದರೆ ಗಡಾದ ಅವರಿಂದಲೇ ಹೆಸರು, ಹಣ, ವರ್ಚಸ್ಸು ಗಳಿಸಿಕೊಂಡು ಈಗ ಒಮ್ಮೆಲೆ ತಕ್ಕಡಿ ಬದಲಿಸಿದ ಕಪ್ಪೆಯಂತೆ ಬೇರೊಂದು ತಕ್ಕಡಿಗೆ ಜಿಗಿದು ನಿಂತಿರುವವರ ಬಗ್ಗೆ ವಿಷಾದದಿಂದಲೇ ಮಾತನಾಡಿದ ಭೀಮಪ್ಪ ಗಡಾದ ಅವರು, ಯಾರು ಎಲ್ಲಿಗೆ ಹೋಗುತ್ತಾರೋ ಹೋಗಲಿ ಅವರಿಗೂ ಒಳ್ಳೆಯದಾಗಲಿ ಎಂಬ ಹಾರೈಕೆ ಕೂಡ ನೀಡಿದರು. ಆದರೆ ಜನ ಹೀಗೇಕೆ ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದಾಗ ಸಾಂದರ್ಭಿಕವಾಗಿ ಗಡಾದ ಅವರು ಕಥೆಯೊಂದನ್ನು ಹೇಳಿದ್ದು ನಮ್ಮ ಕ್ಷೇತ್ರದಲ್ಲಿನ ವಾಸ್ತವ ಪರಿಸ್ಥಿತಿ ಗೆ ಕನ್ನಡಿ ಹಿಡಿದಂತಿತ್ತು. ಆ ಕಥೆ ಹೀಗಿದೆ.
ನಮ್ಮ ರಾಜ್ಯದಲ್ಲಿನ ( ದೇಶದ್ದೂ ಕೂಡ ಅನ್ನಿ ) ಚುನಾವಣೆ ಹೇಗೆ ನಡೆಯುತ್ತದೆ ? ಇಲ್ಲಿನ ಜನ ಯಾವ ರೀತಿ ಮತ ಹಾಕುತ್ತಾರೆ ಎಂಬುದನ್ನು ಅಧ್ಯಯನ ಮಾಡಲು ವಿದೇಶದವರೊಬ್ಬರು ಬಂದರಂತೆ. ಒಂದು ಹಳ್ಳಿಯ ಅರಳಿ ಕಟ್ಟೆಯ ಮೇಲೆ ಕೆಲವೊಂದಿಷ್ಟು ಜನ ಕುಳಿತಿದ್ದರು. ಅವರಿಗೆ ಒಬ್ಬ ಮುಖಂಡ. ಅಂದು ಚುನಾವಣಾ ಪ್ರಚಾರ ಕಾರ್ಯಕ್ರಮ ಇತ್ತು ವಿವಿಧ ಪಕ್ಷದ ನಾಯಕರು ಆ ಹಳ್ಳಿಗೆ ಬರುವವರಿದ್ದರಂತೆ ಜನರು ದಾರಿ ಕಾಯುತ್ತಿದ್ದರು.
ತಕ್ಷಣವೇ ಒಬ್ಬ ಓಡುತ್ತ ಬಂದು ಜನರಿಗೆ ಹೇಳುತ್ತಾನೆ, ಈಗ ಬಿಜೆಪಿಯವರು ಬರುತ್ತಿದ್ದಾರೆ ಬಿಜೆಪಿ ಧ್ವಜ ಹಿಡಿಯಿರಿ ಎಂದ. ಎಲ್ಲರೂ ಬಿಜೆಪಿ ಧ್ವಜ ಹಿಡಿದರು ಅವರು ಬಂದರು, ದುಡ್ಡು ಕೊಟ್ಟು ಹೋದರು. ಆಮೇಲೆ ಅದೇ ವ್ಯಕ್ತಿ ಬಂದ. ಕಾಂಗ್ರೆಸ್ ಜನ ಬರುತ್ತಿದ್ದಾರೆ ಕಾಂಗ್ರೆಸ್ ಧ್ವಜ ಹಿಡಿಯಿರಿ ಎಂದ ! ತಕ್ಷಣವೇ ಎಲ್ಲ ಜನ ಕಾಂಗ್ರೆಸ್ ಧ್ವಜ ಹಿಡಿದರು, ಅವರು ಬಂದರು, ದುಡ್ಡು ಕೊಟ್ಟು ಹೋದರು. ನಂತರ ಬೇರೆ ಪಕ್ಷದವರು ಬಂದಾಗ ಅವರ ಧ್ವಜ ಇವರ ಧ್ವಜ ಹಿಡಿದು ಎಲ್ಲರಿಗೂ ಇವರು ಸಾಚಾ ಆದರು.
ಅದೆಲ್ಲ ಮುಗಿದ ಮೇಲೆ ವಿದೇಶಿ ವ್ಯಕ್ತಿ ಆ ಜನರನ್ನು ಕೇಳಿದ.
ನೀವು ಹೀಗೆ ಮಾಡುತ್ತೀರಲ್ಲ ಕೊನೆಗೆ ಯಾರಿಗೆ ಓಟು ಹಾಕುತ್ತೀರಿ ?
ಯಾರು ಯೋಗ್ಯರಿರುತ್ತಾರೋ ಅವರಿಗೆ ಹಾಕುತ್ತೇವೆ.
ಯಾರೂ ಯೋಗ್ಯರು ಸಿಗಲಿಲ್ಲವೆಂದರೆ ?
ಜನ ಹೇಳಿದರು ; ನಮ್ಮ ಜಾತಿಯ ಅಭ್ಯರ್ಥಿಗೆ ಓಟು ಹಾಕುತ್ತೇವೆ.
ಒಂದು ವೇಳೆ ಅಭ್ಯರ್ಥಿಗಳಲ್ಲಿ ನಿಮ್ಮ ಜಾತಿಯ ಜನ ಯಾರೂ ಇರದಿದ್ದರೆ ?
ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ !
ಎಲ್ಲ ಅಭ್ಯರ್ಥಿಗಳೂ ಎರಡು ಸಾವಿರ ಮಾತ್ರ ಕೊಟ್ಟರೆಂದು ತಿಳಿದುಕೊಳ್ಳಿ ಆಗ ?
ಆಗ ಸಂಭಾವಿತರನ್ನು ಬಿಟ್ಟು ಅತಿ ಕೆಟ್ಟವನಿಗೆ ಮಾತ್ರ ಓಟು ಹಾಕುತ್ತೇವೆ.
ಅರೆ! ಕೆಟ್ಟವನಿಗೆ ಮಾತ್ರ ಯಾಕೆ ಸರ್?
ನೋಡಿ, ಎಲ್ಲರೂ ನಮಗೆ ಹಣ ಕೊಡುತ್ತಾರೆ ಆದರೂ ನಾವು ಒಬ್ಬನಿಗೆ ಮಾತ್ರ ಓಟು ಹಾಕಬೇಕು. ಅವರಲ್ಲಿ ಸಂಭಾವಿತನಿಗೆ ಓಟು ಹಾಕದಿದ್ದರೂ ನಡೆಯುತ್ತದೆ ಯಾಕೆಂದರೆ, ಅವರು ಹೋದರೆ ಹೋಗಲಿ ಅಂತ ಸುಮ್ಮನಾಗುತ್ತಾರೆ. ಈ ಕೆಟ್ಟವನು ಮಾತ್ರ ತನಗೆ ಓಟು ಬರದಿದ್ದರೆ ಎಲ್ಲರನ್ನೂ ಕರೆಸಿ ಬಡಿಗೆ ಆಡಿಸುತ್ತಾನೆ. ಅದಕ್ಕೆ ಅವನಿಗೇ ಓಟು ಹಾಕಲೇಬೇಕಾಗುತ್ತದೆ ಎಂದರು !
ಇದರರ್ಥ ಅಧಿಕಾರದ ಪ್ರಶ್ನೆ ಬಂದಾಗ ಇಷ್ಟು ದಿನ ಬೆಳೆಸಿದವರು ಮೂಲೆಗುಂಪಾಗುತ್ತಾರೆ. ಸಹಾಯ ಪಡಕೊಂಡು ಬೆಳವಣಿಗೆ ಹೊಂದಿದವರು ತಾವು ಮೇಲೆ ಹತ್ತಿದ ಎಣಿಯನ್ನು ಒದ್ದು ಹೋಗುತ್ತಾರೆ. ರಾಜಕಾರಣವೆಂದರೆ ಇದೇ ಆಗಿದೆ ಇಂದಿನ ದಿನಗಳಲ್ಲಿ……

ಉಮೇಶ ಬೆಳಕೂಡ, ಮೂಡಲಗಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group