ಬೆಳಗಾವಿ – ಅರಭಾವಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಪಕ್ಷೇತರ (ಬಂಡಾಯ) ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಭೀಮಪ್ಪ ಗಡಾದ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಶಿಸ್ತು ಸಮಿತಿಯ ಚೇರಮನ್ ಕೆ. ರಹಮಾನ್ ಖಾನ್ ಅವರು, ಗಡಾದ ಅವರ ಜೊತೆ ಸೇರಿ ಪಕ್ಷದ ವಿರುದ್ಧ ಪ್ರಚಾರ ಕಾರ್ಯಕ್ಕೆ ನಿಂತಿರುವ ಭೀಮಪ್ಪ ಹಂದಿಗುಂದ ಹಾಗೂ ರಮೇಶ ಉಟಗಿಯವರನ್ನೂ ಕೂಡ ಸದಸ್ಯತ್ವದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಮೊದಲು ಜೆಡಿಎಸ್ ನಲ್ಲಿ ಇದ್ದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿ, ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು ಆದರೆ ಸಿಕ್ಕಿರಲಿಲ್ಲ. ಅದಕ್ಕೂ ಮುಂಚೆ ಕಾಂಗ್ರೆಸ್ ಟಿಕೆಟ್ ಗಾಗಿ ಪೈಪೋಟಿ ಹೆಚ್ಚಾದಾಗ ಸಭೆಯೊಂದರಲ್ಲಿ ಎಲ್ಲರೂ ಸೇರಿ ಯಾರಿಗೇ ಟಿಕೆಟ್ ಸಿಕ್ಕರೂ ಅವರ ಪರವಾಗಿ ಎಲ್ಲರೂ ಕೆಲಸ ಮಾಡಿ ಚುನಾವಣೆ ಎದುರಿಸುವುದು ಎಂದು ಮಾತನಾಡಿದ್ದರು. ಈ ಬಗ್ಗೆ ಗಡಾದ ಅವರು ಒಂದು ಸಂದರ್ಭದಲ್ಲಿ ದೇವರಾಣೆ ಕೂಡ ಮಾಡಿದ್ದರು.
ಆದರೆ ಅರವಿಂದ ದಳವಾಯಿಯವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದರಿಂದ ಅಂದಿನ ಸಭೆಯಲ್ಲಿ ಹಾಜರಿದ್ದ ಎಲ್ಲರೂ ಮಾತಿಗೆ ತಪ್ಪಿ ಗಡಾದ ಅವರಿಗೆ ಬೆಂಬಲ ಸೂಚಿಸಿ ಅವರು ಪಕ್ಷೇತರವಾಗಿ ಸ್ಪರ್ಧಿಸುವಂತೆ ಮಾಡಿ ಪ್ರಚಾರ ಕಾರ್ಯಕ್ಕೂ ತೊಡಗಿಕೊಂಡಿದ್ದು ಜನಜನಿತವಾಗಿದೆ.ಕಾಂಗ್ರೆಸ್ ಪಕ್ಷವು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಭೀಮಪ್ಪ ಗಡಾದ, ಕಾಂಗ್ರೆಸ್ಸಿಗರಾದ ಭೀಮಪ್ಪ ಹಂದಿಗುಂದ ಹಾಗೂ ರಮೇಶ ಉಟಗಿಯವರನ್ನು ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದು ಕೆಪಿಸಿಸಿ ಶಿಸ್ತು ಸಮಿತಿಯ ಪ್ರಕಟಣೆ ತಿಳಿಸಿದೆ.