ಸಿಂದಗಿ: ಜ್ಞಾನಕ್ಕಾಗಿ ಎಲ್ಲ ಭಾಷೆಗಳನ್ನು ಕಲಿಯಿರಿ ಆದರೆ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ಕೊಡಬೇಕು. ಎಲ್ಲ ಭಾಷೆಗಳಿಗೆ ದ್ವಾರ ಬಾಗಿಲು ಕನ್ನಡವಾಗಿರಲಿ ಅನ್ಯ ಭಾಷೆಗಳು ಕಿಟಕಿಗಳಾಗಿ ಜ್ಞಾನದ ಬೆಳಕಿಗೆ ಸಹಾಯಕವಾಗಲಿ ಎಂದು ಆಲಮೇಲ ವಿರಕ್ತ ಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು ಹೇಳಿದರು.
ಪಟ್ಟಣದ ಎಚ್.ಜಿ.ಕಾಲೇಜಿನ ಸಭಾ ಭವನದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಅವ್ವ ಫೌಂಡೇಷನ್, ರಾಗರಂಜಿನಿ ಸಂಗೀತ ಕೇಂದ್ರ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಶರಣ ಸಾಹಿತ್ಯ ಪರಿಷತ್ತು, ಮಂದಾರ ಪ್ರತಿಷ್ಠಾನ, ಮಕ್ಕಳ ಸಾಹಿತ್ಯ ಪರಿಷತ್, ಮಕ್ಕಳ ಕಲ್ಯಾಣ ಪ್ರತಿಷ್ಠಾನ, ಚುಟುಕು ಸಾಹಿತ್ಯ ಪರಿಷತ್ ಎಬಿಸಿಡಿ ನೃತ್ಯ ಕೇಂದ್ರ, ಸ್ವರ ತರಂಗ ಪಾಠಶಾಲೆ, ಎ.ಕೆ.ನೃತ್ಯ ಕೇಂದ್ರ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಕನ್ನಡಾಂಬೆ ರಥದ ಭವ್ಯ ಸ್ವಾಗತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಕನ್ನಡ ಎನ್ನುವುದು ಬಹಳ ಶ್ರೀಮಂತವಾದ ಭಾಷೆ. ಅದನ್ನು ಕಟ್ಟುವಂತ ಕೆಲಸ ಸಾಹಿತ್ಯ ಸಮ್ಮೇಳನಗಳಲ್ಲಿ ಆಗದೇ ನಿತ್ಯ ಬಳಕೆ ಮಾಡುವುದರಲ್ಲಿ ಆಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಮಾತನಾಡಿ, ಕನ್ನಡ ಭಾಷೆ ಅನ್ಯಭಾಷೆಗಳ ವ್ಯಾಮೋಹದಿಂದ ಬಳಕೆಯಲ್ಲಿ ಕಡಿಮೆಯಾಗುತ್ತಿದ್ದು. ಜ್ಞಾನದ ಭಾಷೆಯಾಗಿ ಆಡಳಿತ ಭಾಷೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಸರಕಾರ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಗಳ ಮೂಲಕ ಕನ್ನಡದ ಜಾಗೃತಿ ಮೂಡಿಸುತ್ತಿದೆ ಆದಾಗ್ಯೂ ಬಳಕೆಯಲ್ಲಿ ತಾಯಿ ಭಾಷೆಯನ್ನು ಮರೆಯುತ್ತಿದ್ದೇವೆ ಅದರ ರಕ್ಷಣೆಗೆ ಇಂದಿನ ಮಕ್ಕಳೇ ಜೀವಂತ ದೇವರುಗಳು, ಶಕ್ತಿದೇವತೆಗಳು ಕಂಕಣಬದ್ಧವಾಗಿ ನಿಲ್ಲಬೇಕಾಗಿದೆ ಎಂದು ಕರೆ ನೀಡಿದರು.
ಮಾಜಿ ಶಾಸಕ ಅಶೋಕ ಶಾಬಾದಿ, ಕನ್ನಡ ರಥದ ಉಸ್ತುವಾರಿ ನಬೀಸಾಬ ಕುಷ್ಠಗಿ, ಹಿರಿಯ ಮಕ್ಕಳ ಸಾಹಿತಿ ಹ.ಮ.ಪೂಜಾರ ಮಾತನಾಡಿದರು.
ಪಿಎಸ್ಐ ಸೋಮೇಶ ಗೆಜ್ಜಿ, ಅಶೋಕ ಗಾಯಕವಾಡ, ಮಹಾಂತೇಶ ಪಟ್ಟಣಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ, ಸದಸ್ಯ ಶಾಂತವೀರ ಬಿರಾದಾರ, ಅಶೋಕ ಅಲ್ಲಾಪುರ, ಅಭಿಷೇಕ ಚಕ್ರವರ್ತಿ, ಎಂ.ಎ.ಖತೀಬ, ಆನಂದ ಶಾಬಾದಿ, ಶಿಲ್ಪಾ ಕುದರಗೊಂಡ, ಶಾರದಾ ಮಂಗಳೂರ, ಎಸ್.ಬಿ.ಚಿಗರಿ, ಶೈಲಜಾ ಸ್ಥಾವರಮಠ, ಜಯಶ್ರೀ ಕುಲಕರ್ಣಿ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.
ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮತನಾಡಿದರು. ಪ್ರೊ. ಸಿದ್ದಲಿಂಗ ಕಿಣಗಿ ನಿರೂಪಿಸಿದರು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಶೇಖರ ಕೂಚಬಾಳ ವಂದಿಸಿದರು.