ಬೈಲಹೊಂಗಲ: ಉತ್ತಮ ಶಿಕ್ಷಣವೇ ಬಾಳಿನ ಬೆಳಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಹೇಳಿದರು.
ಮೊರಾರ್ಜಿ, ನವೋದಯ, ಆಳ್ವಾಸ ಮುಂತಾದ ವಸತಿ ಶಾಲೆಗಳಿಗೆ ಮಕ್ಕಳು ಆಯ್ಕೆಯಾಗುವಲ್ಲಿ ಉತ್ತಮ ತರಬೇತಿ ನೀಡಿದ ಮೂಡಲಗಿ ತಾಲ್ಲೂಕಿನ ಹುಣಶ್ಯಾಳ(ಪಿ.ವಾಯ್) ಗ್ರಾಮದ ಆರೂಢ ಜ್ಯೋತಿ ಚೈತನ್ಯ ಶಾಲೆಯ ಶಿಕ್ಷಕರಾದ ಶಿವಾನಂದ ಬಸನಾಯ್ಕ ಪಟ್ಟಿಹಾಳ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಕಾಶ ನೀಡಿ ಹಳ್ಳಿಯ ವಿದ್ಯಾರ್ಥಿಗಳು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗುವಲ್ಲಿ ಶಿವಾನಂದ ಅವರ ಪ್ರಯತ್ನ ಹಾಗೂ ಪರಿಶ್ರಮ ಹೆಚ್ಚಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ತರಬೇತುದಾರರಾದ ಶಿವಾನಂದ ಪಟ್ಟಿಹಾಳ ಮಾತನಾಡಿ, ಸಂಸ್ಥೆ ಹಾಗೂ ಪಾಲಕರ ಸಹಕಾರದಿಂದ ಮಾತ್ರ ಮಕ್ಕಳಿಗೆ ಮಾರ್ಗದರ್ಶನ ನೀಡಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮೋಹನ ಬಸವನಗೌಡ ಪಾಟೀಲ ಮಾತನಾಡಿ ಪ್ರತಿವರ್ಷ ಕನಿಷ್ಠ 15 – 20 ವಿದ್ಯಾರ್ಥಿಗಳನ್ನು ಆಯ್ಕೆಯಾಗುವಂತೆ ಉತ್ತಮ ಮಾರ್ಗದರ್ಶನ ಮಾಡುತ್ತಿರುವ ಶಿವಾನಂದ ಅವರ ಕಾರ್ಯ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ, ಶಿಕ್ಷಕ ವೃತ್ತಿಯ ಜೊತೆಗೆ ಉದಯೋನ್ಮುಖ ಕವಿಗಳಾಗಿ ಮಕ್ಕಳಲ್ಲಿಯೂ ಕೂಡ ಸೃಜನಶೀಲತೆ ಬೆಳೆಸುವ ಗುಣ ಹೊಂದಿದ್ದಾರೆ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾಧ್ಯಕ್ಷರಾದ ಡಾ. ಎಫ್.ಡಿ. ಗಡ್ಡಿಗೌಡರ ಮಾತನಾಡಿ, ಶಿಕ್ಷಣ ಕಾಶಿ, ಸರ್ವಧರ್ಮಗಳ ಶ್ರೀಕ್ಷೇತ್ರ ಇಂಚಲ ಗ್ರಾಮದ ಪ್ರತಿಷ್ಠಿತ ಮನೆತನದ ಶಿವಾನಂದ ಅವರ ಸಾಧನೆ ಮುಂದುವರೆಯಲಿ ಎಂದು ಶುಭ ಕೋರಿದರು. ಕನ್ನಡ ಜಾನಪದ ಪರಿಷತ್ತಿನ ಬೈಲಹೊಂಗಲ ತಾಲ್ಲೂಕು ಘಟಕದ ಅಧ್ಯಕ್ಷರಾದ ಚಂದ್ರಶೇಖರ ರುದ್ರಪ್ಪ ಕೊಪ್ಪದ ಮಾತನಾಡಿ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶ ಕಲ್ಪಿಸುತ್ತಿರುವುದು ಖುಷಿಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು. ಪ್ರತ್ಯೂಷ ಮೆಟಗುಡ ಸ್ವಾಗತಿಸಿದರು. ಆನಂದ ಗಣಾಚಾರಿ ವಂದಿಸಿದರು.