ಮೂಡಲಗಿ – ಶೌಚಾಲಯ ಫಲಾನುಭವಿಗಳಿಗೆ ಸ್ವಂತ ಜಾಗವಿಲ್ಲದ ಕಾರಣ ಸರ್ಕಾರಿ ಜಾಗದಲ್ಲಿ ಶೌಚಾಲಯ ಕಟ್ಟಿಸಿ ಅವರವರ ಹೆಸರು ಹಾಕಿಸಿ ಉಪಯೋಗಕ್ಕೆ ನೀಡಿದರೂ ಸಾರ್ವಜನಿಕರು ಶೌಚಾಲಯ ಉಪಯೋಗ ಮಾಡದ ಕಾರಣ ಸರ್ಕಾರಿ ಹಣ ಶೌಚಾಲಯಕ್ಕೆ ಸುರುವಿದಂತಾಗಿದೆ.
ತಾಲೂಕಿನ ಕುಲಗೋಡದಲ್ಲಿ ಗ್ರಾಮ ಪಂಚಾಯಿತಿಯ ಎದುರಿನಲ್ಲಿ ಸುಮಾರು ಒಂದು ನೂರರಷ್ಟು ಶೌಚಾಲಯಗಳನ್ನು ವ್ಯವಸ್ಥಿತವಾಗಿ ಕಟ್ಟಲಾಗಿದ್ದು ಅವುಗಳ ಮೇಲೆ ಫಲಾನುಭವಿಗಳ ಹೆಸರು ಬರೆಯಲಾಗಿದೆ. ಇದಕ್ಕೆ ಕಾರಣವೇನೆಂದರೆ ಮನೆ ಮನೆಗೆ ಶೌಚಾಲಯ ಎಂಬ ಧ್ಯೇಯದಡಿ ಶೌಚಾಲಯ ಸ್ಯಾಂಕ್ಷನ್ ಆಗಿದ್ದರೂ ಫಲಾನುಭವಿಗಳಿಗೆ ಸ್ವಂತ ಜಾಗವಿಲ್ಲದ ಕಾರಣ ಸರ್ಕಾರಿ ಜಾಗದಲ್ಲಿ ಕಟ್ಟಿಸಿಕೊಡಲಾಗಿದೆ ಅವುಗಳಿಗೆ ಬೀಗ ಹಾಕಿ ಬೀಗದ ಕೈಯನ್ನೂ ಕೊಡಲಾಗಿದೆ ! ಆದರೆ ಫಲಾನುಭವಿಗಳು ಶೌಚಾಲಯಗಳನ್ನು ಉಪಯೋಗಿಸುತ್ತಿಲ್ಲದ ಕಾರಣ ಸರ್ಕಾರದ ಉದ್ದೇಶ ಹಳ್ಳ ಹಿಡಿದಿದೆ.
ಈ ಬಗ್ಗೆ ತಾಲೂಕಾ ಪಂಚಾಯತ ಅಧಿಕಾರಿ ಎಫ್ ಜಿ ಚಿನ್ನನ್ನವರ ಅವರನ್ನು ಸಂಪರ್ಕಿಸಿದಾಗ, ಸಾರ್ವಜನಿಕರು ಬಯಲು ಶೌಚಕ್ಕೆ ಹೋಗಬಾರದು ಎಂಬ ಉದ್ದೇಶದಿಂದ ಅವರ ಸ್ವಂತ ಜಾಗ ಇಲ್ಲದಿದ್ದರೂ ಅವರಿಗೆ ಶೌಚಾಲಯ ಕಟ್ಟಿಕೊಡಲಾಗಿದೆ ಆದರೂ ಫಲಾನುಭವಿಗಳು ಉಪಯೋಗಿಸುತ್ತಿಲ್ಲ. ದಿ. ೩ ರಂದು ಮಹಿಳಾ ಸಭೆ ಕರೆದು ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಬಯಲು ಶೌಚಕ್ಕೆ ಹೋಗುವವರಿಗೆ ಮಾಲೆ ಹಾಕಿ, ಹೂವು ಕೊಟ್ಟು ತಿಳಿವಳಿಕೆ ಹೇಳಿದರೂ ಜನ ಕೇಳುತ್ತಿಲ್ಲ ಈ ಶೌಚಾಲಯಗಳನ್ನು ಬಳಸುತ್ತಿಲ್ಲ ಎಂದರು.
ಕುಲಗೋಡ ಗ್ರಾಮ ಪಂಚಾಯತ ಕಚೇರಿಯ ಎದುರಿಗೇ ಇರುವ ಶೌಚಾಲಯ ಕಟ್ಟಡಗಳು ಸರ್ಕಾರಿ ದುಡ್ಡಿನ ಪೋಲಾದ ಕತೆ ಹೇಳುತ್ತಿವೆ. ಸರ್ಕಾರಗಳು ಸಾರ್ವಜನಿಕರಿಗೆ ಅನುಕೂಲವಾಗಲು ಅನೇಕ ಯೋಜನೆಗಳಡಿ ಅನುದಾನ ನೀಡುತ್ತವೆ. ಅವುಗಳಲ್ಲಿ ಶೌಚಾಲಯವೂ ಒಂದು ಸರ್ಕಾರ ಶೌಚಾಲಯ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಅದನ್ನು ಸರಿಯಾಗಿ ಬಳಸಿಕೊಂಡು ಸಾರ್ವಜನಿಕರು ಹೊಣೆಗಾರಿಕೆ ಮೆರೆಯುವುದೂ ಒಂದು ಸಾರ್ವಜನಿಕರ ಕರ್ತವ್ಯವೇ ಆಗಿದೆ ಈ ಬಗ್ಗೆ ಇನ್ನೂ ಜನರಲ್ಲಿ ತಿಳಿವಳಿಕೆ ಮೂಡಿಲ್ಲವೆಂಬುದೇ ವಿಪರ್ಯಾಸ.
ವರದಿ : ಉಮೇಶ ಬೆಳಕೂಡ, ಮೂಡಲಗಿ