ಹುನಗುಂದ : ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬೆಳಿಗ್ಗೆ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಎಂ ಬಿ ವಂದಾಲಿ ಮಾತನಾಡಿ, ಸ್ವಾತಂತ್ರ್ಯಾನಂತರ ವಿವಿಧ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಿ ವಿಶಾಲ ಮೈಸೂರು ರಾಜ್ಯ ಸ್ಥಾಪನೆಯಾಯಿತು. 1973 ನವೆಂಬರ್ 1ರಂದು ಕರ್ನಾಟಕ ಎಂದು ನಾಮಕರಣಗೊಂಡ ಪರಿಣಾಮ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ವರ್ಷಾಚರಣೆ ಮಾಡಿ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು, ನುಡಿಯ ಬಗ್ಗೆ ಪ್ರತಿಯೊಬ್ಬರಲ್ಲಿ ಅಭಿಮಾನ ಮೂಡಿಸುವುದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.
ಇನ್ನೋರ್ವ ಶಿಕ್ಷಕ ಎಸ್ ಎಲ್ ಕಣಗಿ ಮಾತನಾಡುತ್ತಾ, ಜಗತ್ತು ವಿಶಾಲವಾದಂತೆ ಇಂಗ್ಲೀಷ್ ಜಾಗತಿಕ ಭಾಷೆಯಾಗಿ ಬೆಳೆಯುತ್ತಾ ಪ್ರಾದೇಶಿಕ ಭಾಷೆಗಳು ಅವನತಿಯತ್ತ ಸಾಗಿದ್ದು ವಿಪರ್ಯಾಸದ ಸಂಗತಿ. ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆ ಶಾಸ್ತ್ರೀಯ ಭಾಷೆ ಎಂದು ಗೌರವಿಸಲ್ಪಟ್ಟರೆ ಸಾಲದು. ನಿರಭಿಮಾನದಿಂದ ಮುಕ್ತವಾಗಿ ಮಾತೃ ಹೃದಯದ ಪ್ರೀತಿ, ಅಭಿಮಾನದಿಂದ ನಿತ್ಯವೂ ಬಳಕೆಯಲ್ಲಿ ಬರಬೇಕು ಅಂದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯಎಂದರು.
ಮುಖ್ಯಗುರು ಪಿ ಎಸ್ ಮಾಲಗಿತ್ತಿ ಅಧ್ಯಕ್ಷೀಯ ನುಡಿಗಳಾಡುತ್ತ, ನಾವೆಲ್ಲರೂ ನವೆಂಬರ್ ಕನ್ನಡಿಗರಾಗೋದಕ್ಕಿಂತ ನಂಬರ್ ಒನ್ ಕನ್ನಡಿಗರಾಗಬೇಕಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ನಮ್ಮದು. ಕನ್ನಡ ಅಂಕಿಗಳ ಬಳಕೆ, ಕನ್ನಡದಲ್ಲಿಯೇ ಸಹಿ ಮಾಡುವುದು, ಬೇರೆ ಭಾಷಿಕರೊಂದಿಗೆ ಕನ್ನಡದಲ್ಲಿ ವ್ಯವಹರಿಸುವುದು ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವೀರಪ್ಪ ಮಾಗಿ, ಪಿಕೆಪಿಎಸ್ ಸದಸ್ಯ ಕೂಡ್ಲಯ್ಯ ಹಿರೇಮಠ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಅಂದಾನಪ್ಪ ಕೊಣ್ಣೂರ, ಉಪಾಧ್ಯಕ್ಷೆ ರತ್ನವ್ವ ಕಡಿವಾಲ, ಸದಸ್ಯರಾದ ಸಂಗಪ್ಪ ಈರಣ್ಣವರ, ಮಲ್ಲಿಕಸಾಬ ನದಾಫ್, ಲಕ್ಷ್ಮಪ್ಪ ಮಾದರ, ಸಂಗನಬಸಪ್ಪ ಸೂಳಿಬಾವಿ, ಬಸಪ್ಪ ಬಾರಕೇರ ಹಿರಿಯರಾದ ವೀರಭದ್ರಪ್ಪ ಕೊಳ್ಳೊಳ್ಳಿ, ಬಸವಂತಪ್ಪ ಕೊಣ್ಣೂರ, ಮಹಾಂತೇಶ ಈರಣ್ಣವರ, ಶಿಕ್ಷಕರಾದ ಎಂ ಜಿ ಬಡಿಗೇರ, ಅಶೋಕ ಬಳ್ಳಾ, ಬಸಮ್ಮ ಗಟ್ಟಿಗನೂರ ಉಪಸ್ಥಿತರಿದ್ದರು.
ಗಮನ ಸೆಳೆದ ಕನ್ನಡ ಬಾವುಟ:
ಶಾಲಾ ಮಕ್ಕಳ ಪ್ರಭಾತಪೇರಿಯೊಂದಿಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು 40 ಮೀಟರ್ ಉದ್ದದ ಕನ್ನಡ ಬಾವುಟ ಹಿಡಿದು ಕನ್ನಡಪರ ಘೋಷಣೆಗಳನ್ನು ಕೂಗುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಾಷಾಭಿಮಾನ ಮೆರೆದದ್ದು ಎಲ್ಲರ ಗಮನ ಸೆಳೆಯಿತು.