ಮೂಡಲಗಿ : ಇತ್ತೀಚಿನ ಹವಾಮಾನ ವೈಪರಿತ್ಯದಿಂದ ಪರಿಸರ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದು, ಸರಿಯಾದ ಸಮಯಕ್ಕೆ ಮಳೆ ಬಾರದೆ ನೀರಿನ ಸಲುವಾಗಿ ಸಾಕಷ್ಟು ಕಷ್ಟಗಳನ್ನು ಅನುಭವಿಸುವಂತಾಗಿದೆ ಆದರಿಂದ ಪ್ರತಿಯೊಬ್ಬರು ಕೂಡಾ ಮರಗಳನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಮೂಡಲಗಿ ದಿವಾಣಿ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.
ಬುಧವಾರದಂದು ಪಟ್ಟಣದ ದಿವಾಣಿ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ಪ್ರಾದೇಶಿಕ ಅರಣ್ಯ ವಲಯ ಗೋಕಾಕ ಇವರ ಆಶ್ರಯದಲ್ಲಿ ಜರುಗಿದ, ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಸಿ ನೆಟ್ಟರೆ ಸಾಲದು ನೆಟ್ಟ ಸಸಿಗಳನ್ನ ಆರೈಕೆ ಮಾಡಿ ಅದನ್ನು ಬೆಳೆಸಿದಾಗ ಮಾತ್ರ ಪರಿಸರ ದಿನಾಚರಣೆಗೆ ಕಾರ್ಯಕ್ರಮಕ್ಕೆ ಸಾರ್ಥಕತೆ ಪಡೆಯಲಿದೆ. ಅವಾಗಲೆ ಮಳೆ ಚೆನ್ನಾಗಿ ಬಂದು ಉತ್ತಮ ಬೆಳೆ ಬೆಳೆದು ಜನ, ಜಾನುವಾರುಗಳು ಸಮೃದ್ಧಿಯಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.
ಉಪ ವಯಲದ ಅರಣ್ಯ ಅಧಿಕಾರಿ ಅಶೋಕ ಮಾಧುರಿ ಮಾತನಾಡಿ, ಜನರಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಇಲಾಖೆಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪರಿಸರ ದಿನಾಚರಣೆ ಅಂಗವಾಗಿ ಸುಮಾರು 500 ಸಸಿಗಳನ್ನು ನೆಟ್ಟು ಆರೈಕೆ ಮಾಡಲಾಗುವುದು. ಜನರು ಕೂಡಾ ನಮ್ಮ ಇಲಾಖೆಯ ಜೊತೆ ಕೈ ಜೋಡಿಸಿದರೇ ಉತ್ತಮವಾದ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಗಸ್ತು ಅಧಿಕಾರಿಗಳಾದ ಮಹಾಂತೇಶ ಹಿಪ್ಪರಗಿ, ಕವನ್ ನಂದಿ, ನ್ಯಾಯವಾಧಿಗಳ ಸಂಘದ ಅಧ್ಯಕ್ಷ ಆರ್ ಆರ್ ಭಾಗೋಜಿ, ಸಂಘದ ಸಹ ಕಾರ್ಯದರ್ಶಿ ಎಸ್ ವಾಯ್ ಸಣ್ಣಕ್ಕಿ, ಖಂಜಾಚಿ ಆರ್ ಎಸ್ ತೋಳಮರಡಿ, ಹಾಗೂ ನ್ಯಾಯವಾಧಿಗಳು, ನ್ಯಾಯಾಲದ ಸಿಬ್ಬಂದಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.