ಮೂಡಲಗಿ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಗುರುವಂದನೆ ಕಾರ್ಯಕ್ರಮಗಳು ಅಲ್ಲಲ್ಲಿ ಸಾಕಷ್ಟು ಜರುಗುತ್ತಿರುತ್ತವೆ. ಆದರೆ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಸೇರಿ ಗುರುವಂದನೆ ಮಾಡುತ್ತಿರುವುದು ಪ್ರಥಮ ಹಾಗೂ ಮಾದರಿ ಕಾರ್ಯಕ್ರಮವಾಗಿದ್ದು ಹಾಗೂ ಶ್ಲಾಘನೀಯವಾದದ್ದು ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಚೇರ್ಮನ್ನರಾದ ವೆಂಕಟೇಶ ಸೋನವಾಲ್ಕರ ಅಭಿಪ್ರಾಯಪಟ್ಟರು.
ಅವರು ದಿನಾಂಕ 29 ರಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 1999 ನೇ ಸಾಲಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಗುರುವಂದನ ಹಾಗೂ ಸ್ನೇಹ ಸಮ್ಮೇಳನ ಮತ್ತು 25 ವರ್ಷಗಳ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತಿದ್ದರು.
ನಾನು ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು ನಿವೃತ್ತ ಅಧ್ಯಾಪಕರು ಹಾಗೂ ಹಳೆಯ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸಲಹೆ ಸೂಚನೆಗಳನ್ನು ಕೊಟ್ಟರೆ ತೆರೆದ ಮನಸ್ಸಿನಿಂದ ಸ್ವೀಕರಿಸಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದರು.
ಗುರುವಂದನೆ ಸ್ವೀಕರಿಸಿ ಗುರುವಂದನೆ ಪರವಾಗಿ ಮಾತನಾಡಿದ ವಿಶ್ರಾಂತ ಪ್ರಾಂಶುಪಾಲ ಡಾ. ಆರ್. ಎ. ಶಾಸ್ತ್ರಿಮಠ ಮಾತನಾಡಿ, ಇದು ನಮ್ಮ ಜೀವನದ ಐತಿಹಾಸಿಕ ಸಂತೋಷದ ಘಳಿಗೆ ಇದು ಸ್ಮರಣೀಯವಾಗಿರುತ್ತದೆ. ವಿದ್ಯಾರ್ಥಿಗಳೇ ಮಹಾವಿದ್ಯಾಲಯದ ಆಸ್ತಿ ಒಳ್ಳೆಯ ಶಿಕ್ಷಣವಂತರಾಗಿ ಜೀವನದಲ್ಲಿ ಶ್ರೇಯಸ್ಸು ಕಂಡರೆ ಅದು ಕಾಲೇಜಿಗೆ ಕಿರೀಟ ಮುಡಿಸಿದಂತಾಗುತ್ತದೆ ಎಂದರು.
ವಿಶ್ರಾಂತ ಗ್ರಂಥಪಾಲಕ ಬಾಲಶೇಖರ ಬಂದಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿ ಎಷ್ಟು ಪ್ರಭಾವಿ ವ್ಯಕ್ತಿಗಳಾಗಿರುತ್ತಾರೋ ಅಷ್ಟೇ ಶಿಕ್ಷಕರ ಮೌಲ್ಯಾಂಕನ ಹೆಚ್ಚುತ್ತದೆ ಅದರಂತೆ 1999ನೇ ಸಾಲಿನ ವಿದ್ಯಾರ್ಥಿಗಳು ಪ್ರಭಾವಿ ವ್ಯಕ್ತಿಗಳಾಗಿ ಇಂದು ನಮ್ಮ ಮುಂದೆ ಬಂದು ನಮ್ಮನ್ನು ಮೌಲ್ಯಮಾಪನ ಮಾಡಿ ನಮ್ಮ ಅಂಕಗಳನ್ನು ಹೆಚ್ಚಿಸಿದ್ದೀರಿ ಎಂದು ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಭೂಗೋಳ ಶಾಸ್ತ್ರ ಪ್ರಾಧ್ಯಾಪಕರಾದ ಡಾ. ಎಸ. ಎಲ್. ಚಿತ್ರಗಾರ ಮಾತನಾಡಿ ನಿರಂತರ ಓದುವಿಕೆ ನಿಮ್ಮ ವೃತ್ತಿಪರತೆಯನ್ನು ಹೆಚ್ಚಿಸುತ್ತದೆ ಇಂದು ನೀವು 25 ವರ್ಷಗಳ ನಂತರ ನಮ್ಮ ಮುಂದೆ ಬಂದು ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದರ ಹಿಂದೆ ನಿಮ್ಮ ನಿರಂತರ ಓದು ಆಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬೇಕಾಗುತ್ತದೆ ಎಂದು ಮೆಲುಕು ಹಾಕಿದರು.
ಅಧ್ಯಕ್ಷಿಯ ಪರವಾಗಿ ಮಾತನಾಡಿದ ವಿಶ್ರಾಂತ ಪ್ರಾಂಶುಪಾಲರಾದ ಸಂಗಮೇಶ ಗುಜಗೊಂಡ ಗುರು ಶಿಷ್ಯ ಸಂಬಂಧದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಅವರು ನಮ್ಮ ಕಾಲೇಜಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯೇ ಇಲ್ಲದ ವಿಷಯ ಸಂಯೋಜನೆಗಳಿದ್ದು ವಿದ್ಯಾರ್ಥಿಗಳ ಭವಿಷ್ಯರೂಪಿಸಲು ನೆರವಾಯಿತು ಜೊತೆಗೆ ಪ್ರಾಧ್ಯಾಪಕ ವರ್ಗ ಕೂಡ ಕೇವಲ ವಿಷಯ ಬೋಧನೆ ಮಾಡದೆ ವಿದ್ಯಾರ್ಥಿಗಳನ್ನು ಹಾಗೂ ವಿಷಯಗಳನ್ನು ಜೊತೆಯಾಗಿ ತೆಗೆದುಕೊಂಡು ಹೋದರು ಎಂದು ಸ್ಮರಿಸಿಕೊಂಡರು.
ವಿದ್ಯಾರ್ಥಿಗಳ ಪರ ಅನಿಸಿಕೆ ವ್ಯಕ್ತಪಡಿಸಿದ ಜಮಖಂಡಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ಬಸಮ್ಮ ಬಾಗೋಜಿ ಮಾತನಾಡಿ ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಸಂಪನ್ಮೂಲ ಪ್ರಾಧ್ಯಾಪಕರುಗಳ ಕೈಯಲ್ಲಿ ಕಲಿತ ನಾವು ಇಂದು ಸಂಪನ್ಮೂಲ ಪ್ರಾಧ್ಯಾಪಕರುಗಳಾಗಿ ರೂಪಗೊಂಡಿದ್ದೇವೆ ಎಂದು ಸ್ಮರಿಸಿದರು.
ಮಂಗಳೂರಿನ ಸರ್ಕಾರಿ ವಸತಿ ನಿಲಯ ಮೇಲ್ವಿಚಾರಕರಾದ ಲಕ್ಷ್ಮಣ ಸದಲಗಿ ಮಾತನಾಡಿ, 25 ವರ್ಷಗಳ ಹಿಂದೆ ಗುರುಗಳು ಕಲಿಸಿದ ಪಾಠಗಳು ಇನ್ನೂ ನಮ್ಮ ತಲೆಯಲ್ಲಿ ಹಸಿರಾಗಿವೆ ಅಷ್ಟು ಪ್ರಭಾವಶಾಲಿಯಾಗಿ ಬೋಧಿಸುತ್ತಿದ್ದರು ಎಂದು ಸ್ಮರಿಸಿದರು.
ಓಮನ್ ದೇಶದಿಂದ ಆಗಮಿಸಿದ ಆಶಾ ಬೆಳಕೂಡ ಕೇವಲ ಪಠ್ಯ ವಿಷಯಗಳನ್ನಷ್ಟೇ ಬೋಧಿಸದೆ ತನ್ನನ್ನು ತಾನು ತಿಳಿಯುವ ಜ್ಞಾನವನ್ನು ತಿಳಿಸಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿದ ಗುರುಗಳ ಋಣವನ್ನು ತೀರಿಸಲು ಸಾಧ್ಯವಾಗುವುದಿಲ್ಲ ಆದರೆ ಅವರನ್ನು ಗೌರವಿಸುವ ಮೂಲಕವಾದರೂ ಕೃತಜ್ಞರಾಗಿರೋಣ ಎಂದರು.
ವಿವಿಧ ಕಡೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇನ್ನೂ ಅನೇಕ ಹಳೆಯ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳನ್ನು ಸ್ಮರಿಸಿಕೊಂಡರು
ಪ್ರಾಚಾರ್ಯರಾದ ಜಿ.ವ್ಹಿ. ನಾಗರಾಜ ಸೇರಿದಂತೆ ಮುಖ್ಯ ಅತಿಥಿಗಳು ಹಾಗೂ ಸತ್ಕಾರ ಮೂರ್ತಿಗಳಾದ ವಿಶ್ರಾಂತ ಪ್ರಾಂಶುಪಾಲರಾದ ಎಸ್.ಎನ್. ಕೊಕಟನೂರ ಡಾ. ಎ. ಪಿ.ರೆಡ್ಡಿ, ವಿಶ್ರಾಂತ ದೈಹಿಕ ನಿರ್ದೇಶಕ ಎಂ.ಎಸ್.ಮುನ್ನೊಳ್ಳಿ, ಜಿ ಸಿದ್ದರಾಮ ರೆಡ್ಡಿ, ಡಾ. ಬಿ.ಸಿ. ಪಾಟೀಲ, ಎಸ್.ಜಿ.ನಾಯಕ್, ಗ್ರಂಥಪಾಲಕರಾದ ಡಾ. ಬಸವಂತ ಬರಗಾಲಿ, ವಿಶ್ರಾಂತ ಶಿಕ್ಷಕೇತರ ಸಿಬ್ಬಂದಿಯವರಾದ ಡಿ.ಬಿ. ಮುತ್ನಾಳ ಕೆ.ಕೆ. ಕಾಂಬಳೆ ಡಿ.ಡಿ. ಹೊಸಮನಿ ಸೇವಾನಿರತ ಶಿಕ್ಷಕೇತರ ಸಿಬ್ಬಂದಿಯವರಾದ ಮನೋಹರ ಲಮಾಣಿ ಪಾಂಡು ಬುದ್ನಿ ಅರ್ಜುನ ಗಸ್ತಿ ಅವರನ್ನು ವಿದ್ಯಾರ್ಥಿಗಳು ಶಾಲು ಹೊದಿಸಿ ಫಲ ಪುಷ್ಪಗಳನ್ನು ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಿದರು.
ಪ್ರಾರಂಭದಲ್ಲಿ ಶ್ರೀಮತಿ ವಿರಜಾ ದೇಶಪಾಂಡೆ ಪ್ರಾರ್ಥಿಸಿದರು ಶ್ರೀಮತಿ ದೀಪ ಮಲ್ಲಾಪುರ ಸ್ವಾಗತ ಗೀತೆ ಹಾಡಿದರು ಡಾ. ಎಂ. ಕೆ. ಕಂಕನವಾಡಿ ಸ್ವಾಗತಿಸಿದರು ಸದಾಶಿವ ಮಸರಗುಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು ಎಸ್.ಎಸ್.ಗೋಡಿಗೌಡರ ಸತ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ಬಸಮ್ಮ ಬಾಗೋಜಿ ಕಾರ್ಯಕ್ರಮ ನಿರ್ವಹಿಸಿದರು. ವಿ ಪಿ ಉದ್ದನ್ನವರ ವಂದಿಸಿದರು