spot_img
spot_img

ಕರ್ನಾಟಕ ರಾಜ್ಯೋತ್ಸವ ಒಂದು ನೆನಪು; ಕನ್ನಡ ತಾಯಿ ಭುವನೇಶ್ವರಿಯ ಅವತಾರಗಳು

Must Read

- Advertisement -

ಕರ್ನಾಟಕ ಏಕೀಕರಣಕ್ಕಾಗಿ ಅಹರ್ನಿಶಿ ಶ್ರಮಿಸಿದ ಕಟ್ಟಾ ಕನ್ನಡಿಗ,ತಮ್ಮ ಜೀವಮಾನದಲ್ಲಿ ಕನ್ನಡ ಯುವಕರಿಗೆ ಸೆಲೆಯಾಗಿದ್ದ ಅಂದಾನಪ್ಪ ದೊಡ್ಡ ಮೇಟಿಯವರು ರಚಿಸಿದ‌ ಕರ್ನಾಟಕ ಮಹಿಮ್ನಃ ಸ್ತೋತ್ರ ಗ್ರಂಥದಿಂದ ಆಯ್ದ ಭಾಗಗಳು.ಖ್ಯಾತ ಸಾಹಿತಿ ಅನಕೃ ಅವರು ಮುನ್ನುಡಿ ಬರೆದ ಈ ಗ್ರಂಥದಲ್ಲಿ ಕನ್ನಡ ನಾಡ ತಾಯಿ ಭುವನೇಶ್ವರಿ ಶ್ರೀದೇವಿ ಬೇರೆ ಬೇರೆ ರೂಪಗಳಲ್ಲಿ ರಾಜ್ಯಾದ್ಯಂತ ಪ್ರಕಟವಾಗಿದ್ದಾಳೆಂಬುದನ್ನು ತುಂಬ ಮಾರ್ಮಿಕವಾಗಿ ಹೇಳಲಾಗಿದೆ.

  • ಹಂಪೆ-ಭುವನೇಶ್ವರಿ
  • ಮೈಸೂರು- ಚಾಮುಂಡೇಶ್ವರಿ
  • ಧಾರವಾಡ- ರೇಣುಕಾಂಬಾ
  • ಮುನಿರಾಬಾದ- ಹುಲಿಗೆವ್ವ
  • ಕೊಲ್ಲೂರು-ಮೂಕಾಂಬಿಕಾ
  • ಶಿರ್ಶಿ- ಮಾರಿಕಾಂಬಾ
  • ಬಾದಾಮಿ- ಬನಶಂಕರಿ
  • ಶೃಂಗೇರಿ- ಶಾರದಾ
  • ಸಿದ್ದ ಪರ್ವತ-ಅಂಬಾ ಭವಾನಿ
  • ಗೋಕರ್ಣ- ಭದ್ರಕರ್ಣಿಕೆ

ಈ ದಶರೂಪವನ್ನು ಪ್ರಸ್ತುತ ಪಡಿಸಿದ ಅವರು ದರ್ಶನ ಫಲವಾಗಿ ಮಹಿಮ್ನಃ ಸ್ತೋತ್ರ ರಚಿಸಿದ್ದಾರೆ.

ಅಹಂಕಾರ ಮಮಕಾರಗಳು ಒಂದೆಡೆ ನಿರಾಶಾ ನಿರ್ವೀರ್ಯ ಭಾವಗಳು ಒಂದೆಡೆ ಈ ಇಕ್ಕೆಲದ ದೈತ್ಯ ಶಕ್ತಿಗಳ ನಡುವೆ ಕನ್ನಡ ರಾಜಕಾರಣ ಕಂಗೆಟ್ಟಾಗ ದೊಡ್ಡ ಮೇಟಿಯವರು ಶ್ರೀ ಅರವಿಂದ ಭಗವಾನ್ ಅವರು ಕೃಪೆಯಿಂದ ಅಂತರ್ಮುಖಿಯಾಗಿ ರಾಜರಾಜೇಶ್ವರಿಯನ್ನು ಧ್ಯಾನಿಸಿದಾಗ ಅವರ ಧ್ಯಾನ ದೃಷ್ಟಿಗೆ ದೃಗ್ಗೋಚರಿಸಿದ ಷೋಡಶ ರೂಪ ವಿಶೇಷಗಳ ಕುರಿತು ಅವರು ಹಾಡಿದ ಸ್ತೋತ್ರಗಳಿವು.ಇವುಗಳನ್ನು ಬಳ್ಳಾರಿಯ ಸಿ ವ ಚನ್ನ ಬಸವೇಶ್ವರರು ಅತ್ಯಂತ ತಾಧ್ಯಾತ್ಮತೆಯಿಂದ ಅಕ್ಷರ ಮಾಲೆಯಲ್ಲಿ ಪೋಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಅರ್ಧನಾರೀಶ್ವರ

ವಿಶ್ವವೆಲ್ಲವೂ ಶಿವ ಶಕ್ತಿಯರ ಸಚ್ಚಿದಾನಂದಲೀಲಾವಿಲಾಸ. ಸದ್ರೂಪಿಯೇ ಶಿವನು.ಚಿದ್ರೂಪಿಯೇ ಶಕ್ತಿ. ಶಿವ ಶಕ್ತಿಗಳ ಸಾಮರಸ್ಯದ ಫಲವಾದ ವಿಶ್ವವೇ ಆನಂದ.

ಪರಾಶಕ್ತಿ

ಭಾರತಾಂತರ್ಗತಳಾದ ಪರಾಶಕ್ತಿಯು ಒಂದು ಕೈಯಲ್ಲಿ ಸಮಸ್ತ ಭೂಗೋಳವನ್ನು ಹಿಡಿದು ನಿಂತಿದ್ದಾಳೆ. ಭೂಗೋಳದ ಗೋಳನ್ನು ಕಳೆಯುವ ಅಭಯವನ್ನು ನೀಡುತ್ತಿರುವಂತೆ ಆಕೆಯ ಅಭಯ ಹಸ್ತ ಸೂಚಿಸುತ್ತದೆ. ಮೇಲಿನ ಕೈಗಳೆರಡರಲ್ಲಿ ಪಾಶವನ್ನು ಪರಶುವನ್ನು ಧರಿಸಿದ್ದಾಳೆ. ಪಾಶವು ಬಂಧ ಕಾರಣ ಪರಶುವು ಮೋಕ್ಷ ಹೇಳಿತು. ಜಗತ್ತಿನ ಬಂಧ ಮೋಕ್ಷಗಳೆರಡೂ ಆಕೆಯ ಲೀಲೆಯೇ. ಹಿನ್ನೆಲೆಯಲ್ಲಿ ಪುರುಷನು ಪುರುಷೋತ್ತಮನಾಗಿ ಪರಾಶಕ್ತಿಯ ಲೀಲೆಗೆ ಸಾಕ್ಷಿ ಭೂತನಾಗಿದ್ದಾನೆ.ಶಕ್ತಿಯು ಆಡುವಾಕೆ. ಶಿವನು ನೋಡುವಾತ.

ಭುವನೇಶ್ವರಿ

ಪದ್ಮಾಸನಾಸೀನಳಾಗಿ ಭಗವತಿಯು ಕುಳಿತಿದ್ದಾಳೆ. ಅಭಯ ಹಸ್ತವನ್ನು ಚಿನ್ಮುದ್ರೆಯಲ್ಲಿ ಹಿಡಿದಿದ್ದಾಳೆ. ಸಚ್ಚಿದಾನಂದಾತ್ಮಕವಾದ ಲಿಂಗವನ್ನು ಧರಿಸಿದ್ದಾಳೆ. ಮೇಲಿನ ಕೈಗಳಲ್ಲಿ ಪಾಶವು ಕಂಗೊಳಿಸುತ್ತದೆ. ಹಿನ್ನೆಲೆಯಲ್ಲಿ ವಿಜಯನಗರದ ವಿರೂಪಾಕ್ಷ ದೇವಾಲಯದ ಗೋಪುರವು, ಕನ್ನಡ ನಾಡಿನ ಭೂಪರಿಮಿತಿಯು ಎದ್ದು ಕಾಣಿಸುತ್ತದೆ. ಇಬ್ಬದಿಗಳಲ್ಲಿ ಗಣಪತಿಯ ವಿಗ್ರಹವು ವಿಠ್ಠಲರಾಯ ದೇವಸ್ಥಾನದ ಶಿಲಾರಥವೂ ಇವೆ. ಹಂಪೆ ಯಲ್ಲಿ ಗಣಪತಿಯ ವಿಗ್ರಹವು ( ಸಾಸಿವೆ ಕಾಳು ಗಣಪತಿ ಮತ್ತು ಕಡಲೆ ಕಾಳು ಗಣಪತಿ) ಪೂರ್ಣವಾಗಿದೆ. ಶಿಲಾರಥವಾಗೆ ಆ ರಥವಿರುವ ವಿಠ್ಠಲರಾಯ ದೇವಸ್ಥಾನವಾಗಲಿ‌ ಸಂಪೂರ್ಣವಾಗಿಲ್ಲ , ಅಪೂರ್ಣವಾಗಿ ಹಾಗೆಯೇ ಉಳಿದಿದೆ. ಅದನ್ನು ಮುಗಿಸುವುದರೊಳಗಾಗಿಯೇ ವಿಜಯನಗರದಲ್ಲಿ ಅಂತಃ ಕಲಹಗಳೂ ಹೊರಗಿನ ಕದನಗಳು ತಲೆಯತ್ತಿ ಕನ್ನಡಿಗರೆಲ್ಲರೂ ತಲೆತಗ್ಗಿಸುವಂತಹ ರಕ್ಕಸತಂಗಡಗಿಯ ಯುದ್ಧವಾಯಿತು. ತಲೆಗಳುರುಳಿದವು. ತಲೆಮಾರುಗಳೂ ಕಳೆದವು, ಅವರು ಆರಂಭಿಸಿದ್ದು ಹಾಗೆಯೇ ಆರಂಭದೆಸೆಯಲ್ಲಿಯೇ ಇದೆ. ಈ ಪೂರ್ಣಾಪೂರ್ಣಗಳ ನಡುವೆ ಪರಿಪೂರ್ಣಳಾದ ಭುವನೇಶ್ವರಿಯು ಚಿತ್ರಿತಳಾಗಿದ್ದಾಳೆ. ಮಾನವನ ಸಂಕಲ್ಪ ವಿಕಲ್ಪಗಳಿಂದ ಅಪೂರ್ಣ ವಾದದ್ದು ಪೂರ್ಣವಾಗಬೇಕಾದದ್ದು‌ ಆಕೆಯ ದಿವ್ಯ ಸಂಕಲ್ಪವನ್ನೇ ಕೂಡಿದ್ದು.

- Advertisement -

ಮಾಹೇಶ್ವರಿ

ಮಹೇಶ್ವರ ರೂಪವಾದ ಶಿವಲಿಂಗದಲ್ಲಿ ಸುಖಾಸೀನಳಾಗಿ‌ ನೆಲೆಸಿರುವಂತೆ ಇಲ್ಲಿ ಮಾಹೇಶ್ವರಿಯು ಚಿತ್ರಿತಳಾಗಿದ್ದಾಳೆ. ಲಿಂಗರ್ಭಾವಿಭೂತೆಯಾದ ಆ ಮಹಾಶಕ್ತಿ ಲಿಂಗಧಾರಿಯೂ ಆಗಿದ್ದಾಳೆ. ವಿಶ್ವದ ಸೃಷ್ಟಿ ಸ್ಥಿತಿ ಲಯ ತಿರೋಧಾನ ಅನುಗ್ರಹಗಳೆಂಬ ಪಂಚಕೃತ್ಯಪರಾಯಣಳಾದ ಮಾಹೇಶ್ವರಿಶಕ್ತಿ ನೆಲೆಸಿರುವುದು ಮಹೇಶ್ವರನಲ್ಲಿಯೇ ಅಂಥ ಮಹೇಶ್ವರ ನೆಲೆಸಿರುವುದು ಮಾಹೇಶ್ವರಿಯಲ್ಲಿಯೇ.

ಮಹಾ ಕಾಳಿ

ಇಲ್ಲಿ ಚಿತ್ರಿತವಾಗಿರುವ ಕಾಳಿಯು ರುದ್ರ ಕಾಳಿಯಲ್ಲ ಭದ್ರ ಕಾಳಿ! ಮಹಿಷಾಸುರಾದಿ ರಾಕ್ಷಸರನ್ನು ಸಂಹರಿಸುವ ಕಾಲಕ್ಕೆ ಆಕೆಯು ತಳೆದಿದ್ದ ರೌದ್ರ ಭಾವವನ್ನು ಆಕೆಯೇ ಉಪಸಂಹರಿಸಿಕೊಂಡು ಶಾಂತಿಯಿಂದ ಕಾಂತಿಯಿಂದ ಪ್ರಸನ್ನಚಿತ್ತದಿಂದ ಅಭಯಹಸ್ತವನ್ನು ಹಿಡಿದು ಸಿಂಹಾರೂಢಳಾಗಿದ್ದಾಳೆ. ಬ್ರಹ್ಮಕಪಾಲವಿದೆ ಒಂದು ಕೈಯಲ್ಲಿ ತ್ರಿಶೂಲ; ಒಂದು ಕೈಯಲ್ಲಿ ಪಾಶವಿದೆ. ತ್ರಿಪುಂಡ್ರಧಾರಿಯಾದ ಆಕೆಯ ಹಣೆಯ ಮೇಲೆ ಕಣ್ಣಿದೆ. ಜಟಾ ಮುಕುಟದಲ್ಲಿ ಸೋಮನೂ ,ಸೋಮಶೇಖರನೂ ಇದ್ದಾರೆ.ಕಿರೀಟದ ಹಿನ್ನೆಲೆಯಲ್ಲಿ ಭೇರುಂಡದ ಸಂಕೇತವು ಎದ್ದು ಕಾಣುತ್ತದೆ. ಅದು ಮೈಸೂರಿನ ಮತ್ತು ಮೈಸೂರನ್ನೇ ಮನೆಮಾಡಿಕೊಂಡು ನೆಲೆಸಿರುವ ಶ್ರೀ ಚಾಮುಂಡಿಯ ದಿವ್ಯ ಸಂಕೇತ. ಶಕ್ತಿಗೆ ಭೇರುಂಡೆ ಎನ್ನುವ ನಾಮವೂ ಇದೆ.

ಮಹಾಕಾಳಿಯ ವಾಹನವಾದ ಸಿಂಹವೂ ಕಟಸೂತ್ರದಲ್ಲಿರುವ ರುಂಡಾಮಾಲೆಗಳೂ, ಕೈಯಲ್ಲಿ ಹಿಡಿದಿರುವ ಕಪಾಲವೂ ರುದ್ರಭಯಂಕರವಾಗಿದ್ದರೂ ಆಕೆಯ ಮಂದಸ್ಮಿತಹಾಸದಿಂದೊಪ್ಪುವ ವದನಮಂಡಲವೂ‌ ಆಕೆಯ ಕರುಣಾಕಟಾಕ್ಷವೂ ಆಕೆಯ ವರದಹಸ್ತವೂ ಶಂಕರ ಶಿವಶಂಕರ ವಾಗಿದೆ.

ಮಹಾಲಕ್ಷ್ಮಿ

ಶ್ರೀ ಮನ್ಮಹಾವಿಷ್ಣುವಿನ ನಾಭಿ ಕಮಲದಲ್ಲಿದ್ದಾನೆ. ಅವನ ಹೃತ್ಕಮಲದಲ್ಲಿ ಮಹಾಲಕ್ಷ್ಮೀಯಿದ್ದಾಳೆ. ಈ ಕಲ್ಪನೆ ಎಷ್ಟು ಸಾಂಕೇತಿಕವಾದದ್ದು!

ಶ್ವೇತಪದ್ಮದಲ್ಲಿ ಪದ್ಮಾಸನಾಸೀನೆಯಾಗಿದ್ದಂತೆ ಮಹಾಲಕ್ಷ್ಮಿ ರೂಪಿತಳಾಗಿದ್ದಾಳೆ‌‌ ಇಲ್ಲಿ ಮುಂದಿನ ಎರಡು ಕೈಗಳಲ್ಲಿ ಶ್ರೀಫಲವನ್ನು ಕಮಲವನ್ನೂ ಹಿಡಿದಿದ್ದಾಳೆ. ಹಿಂದಿನ ಎರಡು ಕೈಗಳಲ್ಲಿ ಶಂಖಚಕ್ರಧಾರಿಣಿಯಾಗಿದ್ದಾಳೆ.

ಮಣಿಮುಕುಟದಿಂದಲೂ ಸರ್ವಾಭರಣಗಳಿಂದಲೂ ಸಂಶೋಭಿತಳಾಗಿದ್ದಾಳೆ. ಸದ್ರೂಪಿಯಾದ ಈಶ್ವರನ ಸಂಪದ್ರೂಪಿಯಾದ ಶಕ್ತಿಯಾಕೆ ಅಮರ್ತ್ಯ ಸೌಂದರ್ಯದ ಅಮರ್ತ್ಯ ಸಂಪತ್ತಿನ ಅಮೃತ ರೂಪಿಣಿಯಾದ ಮಹಾಲಕ್ಷ್ಮಿಯ ಮುಂದೆ ಅಮೃತಕಲಶವಿದೆ.

ಮಹಾ ಸರಸ್ವತಿ

ಮಹಾ ಲಕ್ಷ್ಮೀಯು ಭೌತಿಕ ಸಂಪದ್ರೂಪಿಯಾದರೆ ಮಹಾ ಸರಸ್ವತಿ ಬೌದ್ಧಿಕ ಸಂಪದ್ರೂಪಿ.

ವಿಕಸಿತ ಸಹಸ್ರದಳ ಪದ್ಮಪೀಠಸ್ಥಳಾದ ಭಗವತಿಯು ಅರ್ಧೋನ್ಮೀಲಿತ ದೃಷ್ಟಿಯುಳ್ಳವಳಾಗಿದ್ದಾಳೆ. ಜ್ಞಾನ ಜ್ಯೋತಿಗೆ ಆಕೆಯ ಕೈಯಲ್ಲಿರುವ ಪುಸ್ತಕವೂ ಜಪಮಾಲಿಕೆಯೂ‌ ಮಾತು ಮತ್ತು ಮಂತ್ರಗಳ ಸಂಕೇತ. ಮಾತು ವಾಂಗ್ಮಯವಾದರೆ ಮಂತ್ರವು ಮನನೀಯ. ಮಂತ್ರವು ಪರಾವಾಗ್ರೂಪವಾದರೆ ಮಾತು ಪರಾವಾಕ್ಕಿನ ವೈಖರೀರೂಪ. ಹಿಂದಿನ ಕೈಗಳಲ್ಲಿ ಎರಡು ಕಲಶಗಳನ್ನು ಎತ್ತಿ‌ ಹಿಡಿದಿದ್ದಾಳೆ ಶಾರದೆ. ಆ ಎರಡು ಕಲಶಗಳು ವಿದ್ಯಾ ವಿದ್ಯೆಗಳ ಸಂಕೇತ. ಮೃತ್ಯುವನ್ನು ದಾಟಲು ಆ ವಿದ್ಯೆಯೂ ಅಮೃತ್ವವನ್ನು ಪಡೆಯಲು ವಿದ್ಯೆಯೂ ಅವಶ್ಯಕವೆಂಬ ಮಾತನ್ನು ಈಶವಾಸ್ಯಾದಿ ವೇದಾಂತ ಗ್ರಂಥಗಳು ಸಾರುತ್ತಿವೆ.ಜಟಾ ಮುಕುಟ ಮಂಡಿತಳಾದ ಶಾರದೆಯ ಶ್ರೀಲಲಾಟವು ಮುಂಗುರುಳಿನಿಂದ ಮುದ್ದಾಗಿದೆ. ನೀಲಾಲಕ ಲಲಾಟಶೋಭಿಯಾದ ಆಕೆಯ ಭ್ರೂಮಧ್ಯವು ಅರ್ಧ ಚಂದ್ರಾಂಕಿತದಿಂದೊಪ್ಪುತ್ತದೆ. ಮಹಾ ಸರಸ್ವತಿಯ ಪದ್ಮಪೀಠದ ಅಡಿಯಲ್ಲಿ ಮೃಣಾಳನಾಳವನ್ನು ಚಂಚುವಿನಲ್ಲಿ ಹಿಡಿದಿರುವ ಹಂಸವಿದೆ. ಸರಸ್ವತಿಯ ವಾಹನ ಹಂಸವೇ ಹೊರತು ನವಿಲಲ್ಲ. ಭಾರತೀಯ ಚಿತ್ರಕಲೆಯ ಸನಾತನ ಸಂಕೇತಗಳ ಮತ್ತು ಅಧ್ಯಾತ್ಮಿಕ ನಿರ್ದೇಶನಗಳ ಪೂರ್ಣ ಪರಿಚಯವಿಲ್ಲದಿರುವ ರವಿವರ್ಮನಿಂದ ಚಿತ್ರಿತವಾದ ಸರಸ್ವತಿಯ ಚಿತ್ರಗಳಲ್ಲಿ ಮಾತ್ರ ಗರಿಗೆದರಿಕೊಂಡು ನಿಂತಿರುವ ನವಿಲು ಸಿಗುತ್ತದೆ. ಪುರಾತನ ಶಿಲ್ಪಗಳಲ್ಲಿಯೂ ಚಿತ್ರಗಳಲ್ಲಿಯೂ ಅದಿಲ್ಲ. ಹಂಸವೆನ್ನುವ ಜೀವಭಾವದ ಮೇಲೆ ಸೋಹಂ ಎನ್ನುವ ದೇವಭಾವ ಆರೂಢವಾಗಿದೆ. ಜೀವಭಾವರು ಅವಿದ್ಯಾರತವಾದದ್ದು. ಜೀವಿಯಾಗಿ ಅವತಾರವಾಗುವ ದೇವನಲ್ಲಿಯೂ ಅಂತರ್ಯಾಮಿಯಾಗಿರುವ ಶಕ್ತಿಯು ಆಕೆಯೇ. ಬ್ರಹ್ಮಾದಿಕೀಟಪರ್ಯಂತವಾಗಿ ನೆಲೆಗೊಂಡಿರುವ ಸರ್ವಜ್ಞ ಶಕ್ತಿಯು ಆ ಬ್ರಹ್ಮಾಣಿಯೇ. ಸರ್ವಜ್ಞ ಶಬ್ದಕ್ಕೆ ಅರ್ಥ ಸರ್ವ ಜೀವಿಗಳಲ್ಲಿಯೂ ಜ್ಞಾನ ರೂಪದಿಂದಿರುವ ಶಕ್ತಿಯು!

ಮೂಕಾಂಬೆ

ಪದ್ಮಾಸನಸ್ಥಿತಳಾಗಿ ಪ್ರಸನ್ನಭಾವದಿಂದ ಕುಳಿತಿರುವ ಶ್ರೀಮಾತೆ ಸರ್ವಾಲಂಕರಣ ಸಂಶೋಭಿತೆಯಾಗಿ ಸುಖಪ್ರದವಾದ ವರದ ಹಸ್ತವನ್ನೂ ಅಭಯಪ್ರದವಾದ ಅಭ್ಯಹಸ್ತವನ್ನೂ ಸೂಚಿಸುತ್ತ ಶಂಖಚಕ್ರಧಾರಿಣಿಯಾಗಿರುವಂತೆ ಇಲ್ಲಿ ಮೂಕಾಂಬೆ‌ ಚಿತ್ರಿತಳಾಗಿದ್ದಾಳೆ.ಮುಂದಿರುವ ಷಟ್ಕೋನ ಮಧ್ಯದ ಮಾತೃಕೇಂದ್ರದಲ್ಲಿ ಬಿಂದುರೂಪಿಯಾದ ಲಿಂಗವಿದೆ.

ರತ್ನಗರ್ಭೆ

ರತ್ನಗರ್ಭಳಾದ ವಸುಂಧರೆಯು ಭೂಗೋಳದ ಮೇಲೆ ನಿಂತಿದ್ದಾಳೆ. ಈಕೆ ಕನ್ನಡದ ಭೂಶಕ್ತಿ ಬಲಗೈಯಿಂದ ಅಭಯವನ್ನು ನೀಡುತ್ತ ಎಡಗೈಯಲ್ಲಿ ಕಮಲವೊಂದನ್ನು ಹಿಡಿದು ನಿಂತಿದ್ದಾಳೆ. ಆಕೆಯ ಸೊಬಗು ಸುಂದರವೂ ಆದ ನಿಲುವಿನಲ್ಲಿ ಮತ್ತು ಚೆಲುವಿನಲ್ಲಿ ತಾಳ್ಮೆ ಮೂರ್ತಿವೆತ್ತಂತಿದೆ. ಎಲ್ಲರ ,ಎಲ್ಲದರ ಭಾರವನ್ನೂ ವಹಿಸಿ ನಿಂತಿರುವ ಸಹಿಸಿ ನಿಂತಿರುವ ಮಾತೃಮೂರ್ತಿಯ ಶ್ರೀರೂಪವಿದು.

ಶ್ರೀ ದುರ್ಗೆ

ದುರ್ಗಮವಾದ ದಾರಿಯುದ್ದಕ್ಕೂ ಮಾರ್ಗಸ್ಥನಾದವನನ್ನು‌ ಹೆದರಿಸುವಂತೆ ದುರ್ದಮನೀಯವಾದ ದುಷ್ಟ ಶಕ್ತಿಗಳು ಬಾಯ್ದೆರೆದು ನುಂಗುವಂತೆ ನಿಂತಿವೆ. ಈ ಕಷ್ಟಗಳನ್ನೆಲ್ಲ ಕಡೆ ಹಾಯ್ದುಕೊಂಡು ಸಾಧಕನಾದ ಯಾತ್ರಾರ್ಥಿಯು ಮುಂದೆ ನುಗ್ಗಿ ನಡೆದಿದ್ದಾನೆ. ಭಯಂಕರ ಬೆಂಕಿಯ ಜ್ವಾಲೆಯ ಇಬ್ಬದಿಗಳಲ್ಲಿ ಉರಿಯುತ್ತದೆ. ಈ ಅಗ್ನಿಪಥವನ್ನು ನಡೆದು ಬಂದಿರುವ ಸಾಧಕನು ಮಾರ್ಗ ಮಧ್ಯದಲ್ಲಿದ್ದಾನೆ. ಹಿಂದೆ ಎಷ್ಟೋ ದಾರಿ ನಡೆದಿದ್ದಾನೆ. ಆದರೂ ಮುಂದೆ ಇನ್ನೂ ಎಷ್ಟೋ ದಾರಿ ನಡೆಯುವುದಿದೆ. ದೃಢ ಸಂಕಲ್ಪದಿಂದ ನಡೆಯುತ್ತಿರುವ ಅವನಿಗೆ ಕಾಣುತ್ತಿರುವುದು ಮಾರ್ಗದ ಕಷ್ಟಗಳಲ್ಲ,ತನ್ನನ್ನು ಬಾ ಬಾ ಇನ್ನೂ ಮುಂದೆ ಬಾ! ನಾನಿದ್ದೇನೆ ಏನೂ ಭಯವಿಲ್ಲ ಬಾ!ಎಂದು ಕರೆಯುತ್ತಿರುವ ಶ್ರೀ ದುರ್ಗೆಯ ದಿವ್ಯ ದರ್ಶನ ಒಳಗಣ್ಣಿಗೆ ಕಾಣುವ ಆ ಮಾತೃಮೂರ್ತಿಯ ಕೃಪಕಟಾಕ್ಷವನ್ನೇ ನಂಬಿಕೊಂಡು ಹೊರಗಿನ ದುರ್ಗಮ ಪಥವನ್ನು ತುಳಿದು ತನ್ನ ವಿಜಯಕ್ಕೆ ಅಡ್ಡ ಗಟ್ಟಿ ನಿಂತಿರುವ ದುರ್ಗಗಳನ್ನು ಗೆದ್ದು ನಡೆದಿದ್ದಾನೆ. ಕನ್ನಡದ ವೀರಸಾಧಕ. ಕೆಳಗೆ ಕಷ್ಟಗಳಿವೆಯಾದರೂ ಮೇಲೆ ನೋಡಿದಾಗ ಅವುಗಳನ್ನು ಗೆಲ್ಲುವ ಆತ್ಮ ಬಲವನ್ನು ನೀಡುವ ತಾಯಿ ತಾನೇತಾನಾಗಿ ನಿಂತಿದ್ದಾಳೆ. ಅಧೋಗತಿಯನ್ನು ದಾಟಬೇಕೆಂದರೆ ಊರ್ಧ್ವದೃಷ್ಟಿ ಅಗತ್ಯ.

ಇಂದ್ರಾಣಿ

ಉನ್ನತ ಪೀಠದಲ್ಲಿ ಸುಖಾಸೀನಳಾಗಿದ್ದಾಳೆ.ಸರ್ವಾಲಂಕಾರ ಭೂಷಿತೆಯಾಗಿದ್ದಾಳೆ. ತನ್ನ ಶ್ರೀ ಹಸ್ತದಿಂದ ಅಭಯವನ್ನು ನೀಡುತ್ತ ಎಡಗೈಯಲ್ಲಿ ಕಲಶವನ್ನು ಹಿಡಿದಿದ್ದಾಳೆ. ಹಿಂದಿನ ಬಲಗೈಯಲ್ಲಿ ಶಿವಲಿಂಗವೂ ಜಪಮಾಲೆಯೂ ಇವೆ. ಎಡಗೈಯಲ್ಲಿ ತ್ರಿಶೂಲವಿದೆ. ನಮ್ಮ ಬಹಿರಂಗದ ಇಂದ್ರಿಯಗಳೆಲ್ಲವೂ ಈ ಇಂದ್ರಾಣಿಯ ಕರುಣಾಪೂರ್ವವಾಗಬೇಕು. ಕನ್ನಡ ನಾಡಿನ ಐಶ್ವರ್ಯರೂಪಿಯಾದ ಈಕೆಯ ಹಿನ್ನೆಲೆಯಾಗಿ ಕನ್ನಡ ನಾಡಿನ ರೇಖಾಚಿತ್ರವಿದೆ

ವಾರಾಹಿ

ಅಲ್ಲೋಲಕಲ್ಲೋಲವಾದ ನೀರಧಿಯ ಗರ್ಭದಿಂದ ವಾರಾಹಿ ನೆಲವನ್ನು ತನ್ನ ಕೋರೆಯ ಮೇಲೆ ಎತ್ತಿ ನಿಲ್ಲಿಸಿದ್ದಾಳೆ. ವಿಶ್ವದ ಅನಂತ ಗ್ರಹಗಳಲ್ಲಿ, ಗೋಳಗಳಲ್ಲಿ ಭೂಮಿಯು ನಿಂತಿರುವುದು ಆಕೆಯ ದಿವ್ಯ ಬಲದ ಮೇಲೆಯೇ ಭೂಗೋಳದಲ್ಲಿ ಭಾರತವೂ ,ಭಾರತದಲ್ಲಿ ಕರ್ನಾಟಕವೂ ಎದ್ದು ಕಾಣುತ್ತಿವೆ.ವಾರಾಹಿಯ ಕಣ್ಣಿನಲ್ಲಿ ಮಿಂಚುವ ಕರುಣೆಯು ಮನೋಜ್ಞವಾಗಿದೆ.

ಅದಿತಿ

ದೇವಮಾತೆಯಾದ ಅದಿತಿಯು ಹಸನ್ಮುಖಿಯಾಗಿ ಪ್ರಸನ್ನ ಭಾವದಿಂದ ತನ್ನ ಕಲ್ಯಾಣ ಕಾರ್ಯಕ್ಕೆ ಕಂಕಣ ಕಟ್ಟಿ ನಿಂತಿರುವ ಕನ್ನಡಿಗರನ್ನು ಕೈಯತ್ತಿ ಹರಸುತ್ತಿದ್ದಾಳೆ. ಕನ್ನಡಿಗನ ಆತ್ಮ ಜ್ಯೋತಿಯ ನಿದರ್ಶನವಾಗಿ ಚಿತ್ರದ ಮುಂಬದಿಯಲ್ಲಿ ಅವಿರಳ ಜ್ಯೋತಿ ಅಖಂಡವಾಗಿ ಉರಿಯುತ್ತಿದೆ. ಶ್ರೀ ಅರವಿಂದರು ತಮ್ಮ ವೇದಭಾಷ್ಯದಲ್ಲಿ ಹೇಳುವಂತೆ ಅದಿತಿಯಂದರೆ ಅದ್ವಯ ಅಥವಾ ನಿರ್ದ್ವಂದ್ವ ಮನೋಭಾವ ದಿತಿಯೆಂದರೆ ದ್ವೈತ ಮನೋಭಾವ ದ್ವಂದ್ವಾತೀತ ಮನೋಭಾವ ಉಳ್ಳವರೇ,ಅದಿತಿಯ ಸಂತಾನವಾದಿ ಆದಿತ್ಯರು. ದ್ವಂದ್ವ ಮನೋಭಾವ ಉಳ್ಳವರೇ ದಿತಿಯ ಸಂತಾನವಾದ ದೈತ್ಯರು. ಕನ್ನಡ ಸಾಧಕನು ಆದಿತ್ಯ ಸಂತತಿಗೆ ಸೇರಿದ ದೇವಮಾನವ!

ಕೌಮಾರಿ

ಕುತ್ಸಿತವನ್ನು ಅಳಿಯುವ ಶಕ್ತಿಯೇ ಕೌಮಾರಿ.ನಿತ್ಯ ಜವ್ವನೆಯಾದ ಆಕೆ ಸತ್ಯಶೀಲಳೂ ಆಗಿದ್ದಾಳೆ. ಕೆಟ್ಟದ್ದನ್ನು ದಮನಗೈಯುವ ತ್ರಿಶೂಲವೂ ಒಳ್ಳೆಯದನ್ನು ಉಳಿಸುವೆನೆಂಬ ಬೆಳೆಸುವೆನೆಂಬ ಅಭಯ ಹಸ್ತವೂ ಸಾಂಕೇತಿಕವಾಗಿವೆ. ಪ್ರಭಾವಲಯಕ್ಕೆ ಪ್ರತಿಯಾಗಿ ಮತ್ತು ಪ್ರತ್ಯೇಕವಾಗಿ ಶ್ರೀ ಅರವಿಂದಾಶ್ರಮದ ಶ್ರೀ ಮಾತೆಯ ಆಧ್ಯಾತ್ಮಿಕ ಸಂಕೇತವನ್ನೇ ಬಳಸಲಾಗಿದೆ

ಕುಂಡಲಿನೀ

ಮೂಲಾಧಾರದಿ ಸಹಸ್ರಾರು ಪರ್ಯಾಯವಾಗಿರುವ ಷಟ್ ಕ್ರಮಗಳನ್ನು ಭೇದಿಸಿಕೊಂಡು ಮುನ್ನಡೆದು ಶಿವಜೀವೈಕ್ಯವನ್ನು ಸಾಧಿಸುವುದು ಈ ಕುಂಡಲಿನೀ ನಾಮಕ ಯೋಗ ಶಕ್ತಿಯೇ ಕುಂಡಲಿನೀ ಶಕ್ತಿಯ ಊರ್ಧ್ವ ಗಮನವನ್ನು ಮಾತ್ರವೇ ಪುರಾತನ ಯೋಗ ಪದ್ದತಿಗಳು ಹೇಳುತ್ತಿವೆ.

ಅದರ ನಿರ್ಗಮನವನ್ನೂ ಸಾಧಿಸಿ ಸಹಸ್ರಾರದಲ್ಲಿರುವ ಸಚ್ಚಿದಾನಂದಾನುಭೂತಿಯನ್ನು ಪೃಥ್ವಿ ಚಕ್ರ ಪರ್ಯಂತ ತಂದಿಳಿಸಬೇಕಾದದ್ದು ಪೂರ್ಣ ಯೋಗ ಸಾಧಕನಿಗೆ ಅವಶ್ಯಕವೆಂಬ ಮಾತನ್ನು ಶ್ರೀ ಮಾತಾರವಿಂದರು ಹೇಳುತ್ತಾರೆ. ಅದನ್ನು ಅನುಸರಿಸಿಯೇ ಕುಂಡಲಿನೀ ಶಕ್ತಿಯ ಊರ್ಧ್ವ ಮತ್ತು ಅಧೋಗಮನಗಳೆರಡನ್ನೂ ಇಲ್ಲಿ ಚಿತ್ರಿಸಲಾಗಿದೆ. ಕುಂಡಲಿನೀಯ ಕ್ರತುಶಕ್ತಿಯನ್ನು ಇಲ್ಲಿ ಚಿತ್ರಿಸಲಾಗಿದೆ.

ಸಾವಿತ್ರಿ

ಪರಾಶಕ್ತಿಯ ಚಿತ್ರಕ್ಕೂ ಈ ಸಾವಿತ್ರಿಯ ಚಿತ್ರಕ್ಕೂ ಪರಸ್ಪರ ಸಂಬಂಧವಿದೆ ಪರಮಪುರುಷನ ದಿವ್ಯ ಕಾರ್ಯಕ್ಕಾಗಿಯೇ ಕೆಳಗಿಳಿದು ಬಂದು ಭಾರತದಲ್ಲಿ ಅವತಾರ ಮಾಡಿದ ಪರಾಶಕ್ತಿಯು ತನ್ನ ಈಶ್ವರ ಕಾರ್ಯವನ್ನು ನೆರವೇರಿಸಿ ಪರಮಪುರುಷನೊಡನೆ ಒಂದಾಗುತ್ತಾಳೆ.

ಈ ಚಿತ್ರದಲ್ಲಿ ಪ್ರಕೃತಿ ಪುರುಷರ ದ್ವಿವಿಧ ರೂಪಗಳನ್ನು ಒಮ್ಮುಖವಾಗಿ ಚಿತ್ರಿಸುವ ಜಾಣ್ಮೆ ಕಂಡುಬರುತ್ತದೆ. ಅಮೋಘವಾಗಿದೆ! ಅಭಿನಂದನವಾಗಿದೆ! ಯಾವ ಆಧ್ಯಾತ್ಮಿಕವಾದ ಅತಿಮಾನಸ ದಿವ್ಯ ಚೇತನವನ್ನು ಭಾರತದಲ್ಲಿ ತನ್ಮೂಲಕ ಯಾವ ಜಗತ್ತಿನಲ್ಲಿ ನೆಲೆಗೊಳಿಸಲು ಪರಾಶಕ್ತಿಯು ಶ್ರಮಿಸಿದಳೋ‌ ಆ ಸಿದ್ದಿಯು ಭಾರತೋರ್ವಿಯಲ್ಲಿ ಸಾಕ್ಷತ್ಕರಿಸಿದೆ.

ಆ ಅತಿನಸ ದಿವ್ಯ ಚೇತನವು ಭಾರತದ ಮೂಲಕ ಯಾವ ದ್ವಿಶ್ವವರನ್ನೂ ಹಬ್ಬಿಕೊಳ್ಳಬೇಕು. ಷೋಡಶ ದಳಗಳ ಸಂಕೇತವಿರುವ ಈ ಷೋಡಶಿಯ ಹಿನ್ನೆಲೆಯಲ್ಲಿ ತ್ರಿಶೂಲವಿದೆ.ಅದು ಪರಾಶಕ್ತಿಯ‌ ಪ್ರಭುಶಕ್ತಿಗೆ ಸಂಕೇತ. ಅದಕ್ಕಿರುವ ಡಮರು ಭಾರತದ ಜಯ ಡಿಂಡಿಮದ ಸಂಕೇತ.


ಇಂಗಳಗಿ ದಾವಲಮಲೀಕ
ಶಿಕ್ಷಕ, ಸಾಹಿತಿಗಳು ಹತ್ತಿಮತ್ತೂರು

- Advertisement -
- Advertisement -

Latest News

ಕವನ : ಎಲ್ಲರಂತೆ ನಕ್ಕು ಬಿಡು

ಎಲ್ಲರಂತೆ ನಕ್ಕು ಬಿಡು ನೀನು ಒಳಗೊಳಗೆ ಎಷ್ಟು ಅತ್ತಿರುವೆ ಗೊತ್ತಿಲ್ಲ ಗೆಳತಿ ಹೊರಗೆ ಸೂಸಿರುವೆ ಚಂದ್ರನ ಸವಿ ನಗೆಯ ದಿವ್ಯ ಬೆಳಕು ನೂರು ಮೈಲಿಯ ನಡೆ ಹಗಲು ಇರುಳು ಮಳೆ ಕಲ್ಲು ಮುಳ್ಳು ದಿಬ್ಬದಲಿ ಕನಸು ಕೈ ಹಿಡಿದು ಬವಣೆ ಭರವಸೆಯ ಒಂಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group