spot_img
spot_img

ಮಮತೆಯ ಮೂರ್ತಿಯ ಕವಿತೆಗಳು

Must Read

- Advertisement -

(ರೇಷ್ಮಾ ಕಂದಕೂರ, ಅನಸೂಯ ಜಾಗೀರದಾರ,ಮದ್ದಾನೆಪ್ಪಾ ಮನ್ನಾಪೂರ)

ಅಮ್ಮ

ಅಮ್ಮನೆಂಬ ಭಾವ
ತೊರೆಯುವ ಒಳಗಿನ ನಿರ್ಭಾವ
ಕರುಣೆಯ ಕಣ್ಣಬೆಳಕು
ಧರಣಿ ಆಳುವವಗೆ ಶ್ರೀರಕ್ಷೆ.

ತನ್ನದೆಲ್ಲವ ಕಡೆಗಣನೆ
ತಲ್ಲಣಗಳ ಕಡಿವಾಣದ ಕೊಂಡಿ
ಸಲ್ಲುವವನ ಶಕ್ತಿಯ ಧ್ಯೋತಕ
ಬಲ್ಲವನೇ ಬಲ್ಲ ಮಮಕಾರದ ಸವಿಯ.

- Advertisement -

ಅಪ್ಪುಗೆಯೇ ಆನಂದ
ಸಪ್ಪಗಿನ ಮುಖಕೆ ಸಂತೋಷದ ಹನಿಸಿಂಚನ
ತಪ್ಪುಗಳ ತಿದ್ದುವ ಗುರುವು
ಅಂತರ್ ಸತ್ವಗಳ ಪ್ರಜ್ವಲ.

ಸಮಾನತೆಯ ಮೂರ್ತಿ
ಇಲ್ಲದ ಬಿಗುಮಾನ
ಸವಿ ಸೊಲ್ಲಲಿ ಆದರಣೆ
ವಾತ್ಸಲ್ಯದ ಗಂಧದ ಸಿಂಪಡಣೆ.

ಚಿಗುರು ಕುಡಿಯ ಪ್ರವಹಿಸಿ
ಒಗರಿಗು ಸಿಹಿಜೇನ ಸುಧೆ ಸುರಿಸಿ
ತಾಳ್ಮೆಯ ಆಲಂಗಿಸಿ
ಹತಾಶೆಗೂ ಧೈರ್ಯ ತುಂಬುವ ಶಶಿ.

- Advertisement -

ಬಾಂಧವ್ಯದ ನಂಟಿನ ಗಂಟು
ಹಸಿವು ನಿದಿರೆ ನಿರ್ಲಕ್ಷ್ಯ
ಕರುಳಬಳ್ಳಿಯ ಸ್ತುತಿಸಿ
ರಟ್ಟೆಯ ಬಲದಿ ಛಲವ ತುಂಬಿದಾಕೆ.

ಜೀವ ತೇಯುವ ಗಂಧದಂತೆ
ಸುಟ್ಟು ಇದ್ದಿಲಾಗಿ ಪರರ ಬೆಳಕಾಗಿ
ರಕ್ತ ಬಸಿದು ಕವಲಾಗಿ
ಮುಕ್ತಿ ಕಾಣದೆ ಸವೆಸುವ ಭಂಗಿ.

ವಿಶ್ವಾಸವೆ ಶ್ವಾಸವಾಗಿಸಿ
ಉಚ್ವಾಸ ನಿಶ್ವಾಸದಲು ಮೋಹಿಸಿ
ಹಗಲಿರುಳೆನ್ನದ ಭೇದ ಮರೆತು
ಬೇಕು ಬೇಡಗಳ ತೆರೆಮರೆಗೆ ಸರಿಸಿದಾಕೆ.

ಕೋಟಿ ನಮನ ನಿನಗೆ
ಮೇಟಿ ವಿದ್ಯೆ ಕಲಿತರೇನು
ಮೀಟಿ ನಡೆಯದಿರು ತಾಯೆ ಮುಂದೆ
ಮುಕ್ಕೋಟಿ ದೇವರಿಗೂ ಮಿಗಲು ಅಮ್ಮ.

ರೇಷ್ಮಾ ಕಂದಕೂರ


ಅಮ್ಮ…

ಹೇಳುತ್ತಿದ್ದಾಳೆ ಮಗಳು..,

ಅಮ್ಮ ನೀ ಬೇಗ ಆರಾಮಾಗಿಬಿಡು
ಸದಾ ನಮ್ಮಗಳ ಕುಶಲತೆಯ
ಬಯಸಿದ ನಿನ್ನ ತನು ಮನಕೆ.
ಇದೋ ನನ್ನ ಆಶಯದ ಕಾಣಿಕೆ

ಅಕ್ಕರ ಅಂಕಿ ಮಗ್ಗಿ ತೀಡಿ ಬರೆಸಿದ
ತುತ್ತು ಕೊಟ್ಟು ಉಣಿಸಿದ
ಬೆರಳ ಹಿಡಿದು ನಡೆಸಿದ
ಬೆನ್ನು ತಟ್ಟಿ ಪ್ರೋತ್ಸಾಹಿಸಿದ..
ಬಾಚಿ ತಬ್ಬಿದ
ಗಲ್ಲ ಗದ್ದ ಹಿಡಿದು ನೇವರಿಸಿದ
ಆ ಕರಗಳಲ್ಲಿಯ ವಾತ್ಸಲ್ಯಾಮೃತ
ಈ ತನು ಮನದಲಿ ಅಚ್ಚೊತ್ತಿದೆ.

ಬದುಕಲಿ ಏಗಿದ್ದೇ ಬಂತು….
ನಮ್ಮನ್ನೆಲ್ಲ ಏರಿಸಲು ಏಣಿಯಾಗಿ
ಸಂಸಾರ ನೊಗ ಹೊತ್ತು
ಸಾಗಿತು ಬಾಳಬಂಡಿ..
ಭಾರ ಹೊತ್ತದ್ದೇ ಆಯಿತು…

ಭೂಮಿಯಮ್ಮ ನೀನು..!!

ಅದೇನು ಸಂಸ್ಕಾರ ಕೊಟ್ಟೆಯೋ
ಇನ್ನೂ ತಡವರಿಸುತ್ತೇನೆ ನಿನ್ನೆದುರು ಮಾತಾಡಲು
ನಿನ್ನ ತೂಕಬದ್ಧ ನುಡಿ ನಡೆಗೆ ಹ್ಯಾಟ್ಸಾಫ್
ನಿನ್ನ ಮಕ್ಕಳದು…!!
ಅಂತಹ ಸಂಸ್ಕಾರವ ಅದೆಂತು ಕೊಡುವದು..?!
ಕೇಳಬಲ್ಲರೆ ಈಗಿನ ಜನರೇಶನ್ನಿನ ಮಕ್ಕಳು
ಜಿಜ್ಞಾಸೆ..ಚಿಂತೆ ನನಗೆ…!!

ಬದುಕ ಕಾವಲಿಯಲ್ಲಿ ಬೆಂದು
ಎದೆಯ ಗಟ್ಟಿಗೊಳಿಸಿ ನಿಂದು
ಬಂದ ದುರ್ವಿಧಿಯ ಎದುರಿಸಿ
ಸವಾಲು ಬಗೆಹರಿಸಿದವಳು ನೀನು..

ಕಣ್ಣ ಹನಿಸಿ ಹೇಳುತ್ತಾಳೆ ಈ ಮಗಳು..,

ಮನ್ನಿಸಿಬಿಡು..ಎಷ್ಟು ಅನಾದರಿಸಿದೆನೋ..
ಎಷ್ಟು ಅಲಕ್ಷಿಸಿದೆನೋ‌..
ನಿಜ ಹಿತ್ತಲ ಗಿಡ ಮದ್ದಲ್ಲ…
ನಾನೂ ಇದ್ದೇನೆ ಈಗ ಮಕ್ಕಳ ಮುಂದೆ…
ಅವರೂ ಮುಂದೊಂದು ದಿನ..ಹೀಗೆ…!
ಇತಿಹಾಸ ಮರುಕಳಿಸದೇ ಇರದು ಬಿಡು..

ಹೀಗೆಲ್ಲ ಅವಳು ಬಡಬಡಾಯಿಸಿದಾಗೊಮ್ಮೆ
ಹೇಳುತ್ತಾಳೆ ಅವಳಮ್ಮ…
ಚಿಂತಿಸದಿರು ಕಂದಾ..
ನೀರು ಹರಿಯುವುದು ಕೆಳಮುಖವಾಗಿ…
ಹಾಗೆಯೇ ಪ್ರೀತಿಯೂ..!!!

ಮಹದಾಶಯ ಅವಳಿಗೆ…
ಆರ್ತಳಾಗಿ ಹೇಳುತ್ತಾಳೆ…,

ಬೇಗ ಗೆಲುವಾಗಲಿ ನನ್ನಮ್ಮ…
ಹೀಗೆ ಇರಲಿ ಸದಾ ಭೂಮಿಯಾಗಿ
ತೆಕ್ಕೆಗೆ ಪಡೆವೆ ಅವಳನು…
ಕಾಪಿಡುವೆ..ಈ ಜಂಜಡಗಳಲಿ..
ಕಣ್ಣು ಗೊಂಬೆಯ ಮೇಲಿನ ರೆಪ್ಪೆಯಂತೆ..!!

ಆಶಿಸುತ್ತಾಳೆ..ಆರ್ದ್ರಳಾಗಿ…,
ಅಮ್ಮ ಆಗಿ ಬಿಡಲಿ… ಮೊದಲಿನಂತೆ…!!

ಅನಸೂಯ ಜಹಗೀರದಾರ.


ನನ್ನವ್ವ

ಮುಂಜಾನೆದ್ದು ದೀಪಾ ಹಚ್ಚಿ ಕಸ ಮುಸರಿ ಮಾಡಾಕೀ
ಮಕ್ಕಳ ಮುಖ-ಮಾರಿ ತೊಳೆದು ಸ್ವಚ್ಛವಾಗಿ ಇಡಾಕೀ
ಬೂದಿತೆಗೆದು ಒಲೆಯ ತೊಳೆದು ಪೂಜಾ-ಗಿಜ‍ಾ ಮಾಡಾಕೀ
ಏನೇ ಕಷ್ಟ ಬಂದ್ರೂ ಕೂಡ ಮಕ್ಕಳಿಗಾಗಿ ದುಡಿಯಾಕೀ..!! ೦೧ !!

ಬಿಸಿ-ಬಿಸಿ ಚಹಾ ಮಾಡಿ ಇದ್ದಲ್ಲಿಗೆ ತರುವಾಕೀ
ಒಂದು ಕೇಳಿದ್ರೆ ಎರಡು ರೊಟ್ಟಿ ತಂದು-ತಂದು ಕೊಡುವಾಕೀ
ಊಟ ಮಾಡ್ಸಿ ಬಟ್ಟೆ ಹಾಕಿ ಶಾಲೆಗೆ ಬಿಟ್ಟು ಬರುವಾಕೀ
ಏನೇ ಕಷ್ಟ ಬಂದ್ರೂ ಕೂಡ ಮಕ್ಕಳಿಗಾಗಿ ದುಡಿಯಾಕೀ..!!೦೨ !!

ಓದು ಬರಹ ಬರದೇ ಇದ್ರೂ ಅಡುಗೆ ಚೆನ್ನಾಗಿ ಮಾಡಾಕೀ
ಹೊತ್ತು-ಹೊತ್ತಿಗೆ ಕೇಳಿದ್ದನ್ನು ಮಾಡಿ-ಮಾಡಿ ಕೊಡುವಾಕೀ
ಪ್ರೀತಿಯಿಂದ ಕರೆದು ಬಿಟ್ಟು ತಿದ್ದಿ-ಬುದ್ದಿ ಹೇಳಾಕೀ
ಏನೇ ಕಷ್ಟ ಬಂದರೂ ಕೂಡ ಮಕ್ಕಳಿಗಾಗಿ ದುಡಿಯಾಕೀ..!! ೦೩ !!

ಗಂಡ ಮತ್ತು ಮಕ್ಕಳ ನಡುವೆ ಕೊಂಡಿಯಾಗಿರಾಕೀ ಮಕ್ಕಳು ಬೇಡಿದ್ದು ಗಂಡಗನಿಗೆಳೀ ಕೊಡುಸಾಕೀ
ಹರಿದ ಬಟ್ಟೆ ಹುಟ್ಟು ಕೊಂಡು ಕೂಲಿ-ನಾಲಿ ಮಾಡಾಕೀ
ಏನೇ ಕಷ್ಟ ಬಂದ್ರೂ ಕೂಡಾ ಮಕ್ಕಳಿಗಾಗಿ ದುಡಿಯಾಕೀ..!! ೦೪ !!

ಮಕ್ಕಳದ್ದೇ ತಪ್ಪಾಗಿದ್ರೂ ಅದೆ ಸರಿ-ಸರಿ ಅನ್ನಾಕೀ
ಮಕ್ಕಳು ಸಾಧನೆ ಮಾಡಿಬೀಟ್ರೆ ಹಿರಿ-ಹಿರಿ ಹಿಗ್ಗಾಕೀ
ಕಷ್ಟಗಳು ಬಂದ್ರೂ ಕೂಡಾ ಯಾರಿಗೂ ಹೇಳದೆ ಇರಾಕೀ
ಏಷ್ಟೇ ಕಷ್ಟ ಬಂದ್ರೂ ಕೂಡಾ ಮಕ್ಕಳಿಗಾಗಿ ದುಡಿಯಾಕೀ..!! ೦೫ !!

ತರಕಾರಿ ತರಲು ಹೊದ್ರೂ ಕೂಡಾ ಚೌಕಾಸಿ ಮಾಡಾಕೀ
ತಾ ಉಪವಾಸ ಇದ್ದು ಮಕ್ಕ್ಳು ಗಂಡನಿಗೆ ನೀಡಾಕೀ
ಮುಂಜಾನಿಂದ ಸಂಜೆ ತನಕ ಬಿಟ್ಟು ಬಿಡದೆ ದುಡಿಯಾಕೀ
ಏಷ್ಟೇ ಕಷ್ಟ ಬಂದ್ರೂ ಕೂಡಾ ಮಕ್ಕಳಿಗಾಗಿ ದುಡಿಯಾಕೀ..!! ೦೬ !!

ತನ್ನ ಜನ್ಮ ಒತ್ತೆ ಇಟ್ಟು ಧರೆಗೆ ನಮ್ಮನ್ನು ತಂದಾಕೀ
ಇಳಿ ವಯಸ್ಸಿನಲ್ಲಿ ಮಕ್ಕಳಿಗಾಗಿ ದುಡಿಯಾಕೀ
ತನ್ನ ಜೀವನದ ಅಂಗು ತೊರೆದ‍ ನಿಜ ದೇವರಾಕೀ
ಏಷ್ಟೇ ಕಷ್ಟ ಬಂದ್ರೂ ಕೂಡಾ ಮಕ್ಕಳಿಗಾಗಿ ದುಡಿಯಾಕೀ..!! ೦೭ !!

ಮದ್ದಾನೆಪ್ಪ ಹೆಚ್ ಮನ್ನಾಪೂರ
ಸಾ॥ ಕಾಮನೂರು. ತಾ॥ಜಿ॥ ಕೊಪ್ಪಳ


ನಮ್ಮವ್ವಾ ಬಾಳಾ ಶ್ಯಾನೇಕಿ

ಮುಗ್ಧ ನನ್ನವ್ವ ಬಾಳಾ ಶ್ಯಾನೇಕಿ
ತಾ ಕಲಿಯದಿದ್ದರೂ ನಮಗ ಶ್ಯಾಲಿ ಕಲಸಿದಾಕಿ
ಓದಿ ಜಗದಾಗ ದೊಡ್ಡ ಮನುಷ್ಯ ಆಗ್ಯೆನ್ನಾಕಿನ
ನನ್ನ ಕನ್ನಡ ಶ್ಯಾಲಿಗಿ ಕಳಿಸಿ ಖುಷಿ ಪಡಾಕಿ,

ಚಿಮಣಿ ದೀಪ ತೋರಿಸ್ಕೊಂತಾ ರಾತ್ರೆಲ್ಲಾ ಕುಂದ್ರಾಕಿ
ಬುಟ್ಯಾಗಿನ ರೊಟ್ಟಿ ಎಣಿಸಾಕ ಬರಲಿಲ್ಲದಾಕಿ
ಲೆಕ್ಕ ಮಾಡಿ ಅಂಕ ಹೆಚ್ಚು ಪಡಿ ಅನ್ನಾಕಿ
ತಾ ತಂಗಳುಂಡು ಬಿಸಿ ತುತ್ತು ತಿನಿಸಿದಾಕಿ,

ಹಗಲು ರಾತ್ರಿ ನಮಗಾಗಿ ಬೆವರು ಸುರಿಸಿದಾಕಿ
ದೇವ್ರಿಗೆ ದೀಪ ಹಚ್ಚಿ ಹರಕಿ ಹೊತ್ತಾಕಿ
ಪಾಸ್ ಆದ ಸುದ್ದಿ ಕೇಳಿ ಕೇರಿಗೆಲ್ಲಾ ಸಕ್ರಿ ಬೀರಾಕಿ
ಕಷ್ಟದ ಕಾಲ ಕಳಿತು ಅಂತಾ ದಂಡ್ವತ ಹಾಕಾಕಿ,

ನೌಕರಿ ಗಿಟ್ಟಿಸಿ ಸಂಬಳ ಉಡಿಯಾಗ ಹಾಕಿದ್ರೆ ಕಾಗದ ಚೂರು ನಾ ಏನ್ ಮಾಡಲಿ ಅನ್ನಾಕಿ
ವೃದ್ಧಾಶ್ರಮದಾಗ ಕಳಿಸದೆ ಜೋಪಾನ ಮಾಡೆನ್ನಾಕಿ
ಈಗ ನಾವು ನಕ್ಕ ಅವಳ್ನ ಅಳಸೋದ್ಯಾಕ್ರಿ,

ಬಚ್ಚು ಬಾಯಿ ಕಣ್ಣು ಮಂಜು ಹಾಸಿಗಿ ಹಿಡಿದಾಕಿ
ನಮ್ಮ ಬೆರಳು ಹಿಡಿದು ಜೀವನ ದಾರಿ ನೆಡೆಸಿದಾಕಿ
ಈಗ ಅವಳ ಮುಪ್ಪಿನ ಕೈ ಬಿಡದೆ ಅವಳಿಗಾಗಿ ನಮ್ಮ ಎರಡು ಪ್ರೀತಿಯ ನುಡಿ ಸಾಕ್ರಿ..‌.!


ಲೀಲಾವತಿ ರಜಪೂತ ಅಶೋಕ್ ಸಿಂಗ್,
ಜಯನಗರ,ಹುಕ್ಕೇರಿ ಜಿಲ್ಲಾ ಬೆಳಗಾವಿ,
ಮೊಬೈಲ್ ನಂಬರ್: 9113658766

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group