spot_img
spot_img

ಹರೇ ಶ್ರೀನಿವಾಸ ! ಆಷಾಢ ಏಕಾದಶಿಗೆ ಪಂಢರಪುರ ವಾರಿ

Must Read

- Advertisement -

ಹರೇ ಶ್ರೀನಿವಾಸ ||
ಜುಲೈ 17 –ಆಷಾಢ ಶುದ್ಧ ಏ ಕಾದಶಿ – – ನಿಮಿತ್ತ ಪಂಡರಾಪುರದಲ್ಲಿ ಮಹಾಉತ್ಸವ – ವಾರಿ
ತದಂಗವಾಗಿ ಸಕಾಲಿಕ ಚಿಂತನ
ಜಯ ಪಾಂಡುರಂಗವಿಠಲ

ಆಷಾಢ ಮಾಸ ಆರಂಭವಾಗುತ್ತಿದ್ದಂತೆ ಪಂಢರಪುರ ವಿಠ್ಠಲನ ಭಕ್ತರ ಮನದಲ್ಲಿ ಈ ಅಭಂಗದ (ಮರಾಠಿ ಭಕ್ತಿಗೀತೆ) ಧಾವಾ ಧಾವಾ ಅತಾ ಪಂಢರಿ ವಿಸಾವ (ಓಡಿ ಓಡಿ ವಿಠ್ಠಲ ದರ್ಶನ ನೀಡಲು ನಿಂತಿದ್ದಾನೆ) ಸಾಲು ಅನುಕರಣಿಸುತ್ತದೆ. ಲಕ್ಷಾಂತರ ಜನ ಪಂಢರಪುರಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಾರೆ. ಕೀರ್ತನೆ, ಭಜನೆಗಳಲ್ಲಿ ತಣಿಯುತ್ತಾರೆ. ಆಷಾಢ ಶುದ್ಧ ಏಕಾದಶಿ ವಿಠ್ಠಲ ದರ್ಶನ ಪಡೆದು ನಡಿಗೆಯ ನೋವನ್ನೇ ಮರೆಯುತ್ತಾರೆ. ಇದು ನಡಿಗೆ ಹಾಗೂ ನಾದೋಪಾಸನೆಗೆ ಇರುವ ಅದ್ಭುತ ಶಕ್ತಿ. ತೀರ್ಥಕ್ಷೇತ್ರಗಳಿಗೆ ಕಾಲ್ನಡಿಗೆ ಮೂಲಕ ತೆರಳುವುದು ಒಂದು ದಿವ್ಯ ಅನುಭವ. ಈ ಸಂಪ್ರದಾಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇದರಲ್ಲಿ ಪಂಢರಪುರಕ್ಕೆ ತೆರಳುವವರ ಸಂಖ್ಯೆ ಅಧಿಕ.

ಆಷಾಢ ಶುದ್ಧ ಏಕಾದಶಿ. ಪಂಢರಪುರ ವಿಠ್ಠಲನ ಭಕ್ತರಿಗೆ ಇದು ಅತ್ಯಂತ ಮಹತ್ವದ ದಿನ. ಈ ದಿನದಂದು ಚಂದ್ರಭಾಗಾ ನದಿಯಲ್ಲಿ ಮಿಂದು ವಿಠ್ಠಲನ ದರ್ಶನ ಪಡೆದು ಅವನ ಪಾದ ಕಮಲಗಳಿಗೆ ನೊಸಲು ಹಚ್ಚಿದರೆ ನಮ್ಮ ಬದುಕೇ ಧನ್ಯವಾದಂತೆ ಎಂಬುದು ಭಕ್ತರ ನಂಬಿಕೆ. ಅದಕ್ಕಾಗಿ ಲಕ್ಷಾಂತರ ಭಕ್ತರು ಈ ಪವಿತ್ರ ಏಕಾದಶಿ ದಿನದಂದು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.

- Advertisement -

ವಿಠಲ ಸಲಹೋ ಸ್ವಾಮಿ ನಮ್ಮನು : ನಾಮಸಂಕೀರ್ತನೆ ಸುಖದಲ್ಲಿ ನಡೆಯುವ ಇವರು ಜಾತಿ, ಜನಾಂಗದ ನಡುವಿನ ಭೇದ ಮರೆಯುತ್ತಾರೆ. ಬದುಕಿನುದ್ದಕ್ಕೂ ತ್ಯಾಗ, ಕ್ಷಮೆ, ಅನುಕಂಪ, ಶಾಂತಿ, ಅಹಿಂಸೆ, ಪ್ರೀತಿ, ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸರಳ ಜೀವನ ನಡೆಸುತ್ತಾರೆ. ಶಾಖಾಹಾರಿಗಳಾಗಿ ತುಳಸಿ ಮಾಲೆ ಧರಿಸುತ್ತಾರೆ. ಏಕಾದಶಿ ಉಪವಾಸ ವ್ರತ ಆಚರಿಸುತ್ತಾರೆ. ಹರಿಪದ ಓದಿ, ಭಜನೆ ಕೀರ್ತನೆಗಳಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಬಿಂಬದಲ್ಲಿ ಭಗವಂತನ ಸ್ವರೂಪ ಕಂಡು ಸಂತೃಪ್ತಿ ಪಡುವ ಇವರಿಗೆ ಉಳಿದ ಭೋಗ ವಿಷಯಗಳು ಗೌಣವಾಗುತ್ತವೆ. ಇದು ಪಾದಯಾತ್ರೆ, ಉಪವಾಸದಿಂದ ಕಲಿಯಬಹುದಾದ ಪಾಠ. ಸತ್ಯ ಶೋಧನೆಯ ತುಡಿತದಲ್ಲಿರುವ ಇವರ ಅಂತರ್ಯಾನ ಇತರರಿಗಿಂತ ಭಿನ್ನವಾಗಿರುತ್ತದೆ. ಭಕ್ತಿಯ ನಡಿಗೆ ಅಂತರಂಗ ಶೋಧನೆಗೆ ಸಾಧಕ, ಏಕತೆ ಭಾವನೆ ಮೂಡಿಸಲು ಪ್ರೇರಕ ಎನ್ನುವ ಅಂಶ ಅವರ ಅನುಭವಕ್ಕೆ ಬಂದಿರುತ್ತದೆ.

ವಾರಕರಿ ಸಂಪ್ರದಾಯ: ಪಂಢರಪುರದಲ್ಲಿ ಆಷಾಢ, ಶ್ರಾವಣ, ಕಾರ್ತಿಕ ಹಾಗೂ ಮಾಘ ಮಾಸಗಳಲ್ಲಿ ಉತ್ಸವ ನಡೆಯುತ್ತವೆ. ವಿಶೇಷವಾಗಿ ಆಷಾಢ ಶುದ್ಧ ಏಕಾದಶಿಗೆ ಹೆಚ್ಚು ಭಕ್ತರು ಆಗಮಿಸುತ್ತಾರೆ. ಈ ಯಾತ್ರೆಗೆ ವಾರಕರಿ ಸಂಪ್ರದಾಯ ಎನ್ನುತ್ತಾರೆ. ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾಮ ಈ ಸಂಪ್ರದಾಯದಲ್ಲಿ ಬಂದ ಪ್ರಮುಖರು. ಇವರ ಹೆಸರಿನ ವಾರಕರಿಗಳು ಇಂದಿಗೂ ಪಂಢರಪುರಕ್ಕೆ ಪಲ್ಲಕ್ಕಿಗಳನ್ನು ಹೊತ್ತು ಆಗಮಿಸುತ್ತವೆ. ವಾರಕರಿ ಸಂಪ್ರದಾಯದಲ್ಲಿ ಎರಡು ಪ್ರಮುಖ ಆಚರಣೆಗಳಿವೆ ಅವೆಂದರೆ ರಿಂಗಣ ಮತ್ತು ಧಾವಾ. ಇವರು ಶುದ್ಧ ಶಾಕಾಹಾರಿಗಳಾಗಿ ಭಗವಂತನ, ಸಂತರ ಭಜನೆಗಳಲ್ಲಿ ಸಮಯ ಕಳೆಯುತ್ತ ಕಾಲ್ನಡಿಗೆಯಲ್ಲಿ ಬಂದು ದೇವರ ದರ್ಶನ ಪಡೆಯುತ್ತಾರೆ. ಅಂತರಂಗ ಶುದ್ಧಿಗೆ ಪಾದಯಾತ್ರೆ ಒಂದು ದಿವ್ಯ ಸಾಧನ ಎಂಬುದು ಇವರ ನಂಬಿಕೆ.

ಏಕಾದಶಿ ವಿಶೇಷ : ಆಷಾಢ ಶುದ್ಧ ಏಕಾದಶಿ ದಿನ ನಗರ ಪ್ರದಕ್ಷಿಣೆ, ಸಂಜೆ ವಿಠ್ಠಲ ಮತ್ತು ರುಕ್ಮಿಣಿ ದೇವಿಯ ಉತ್ಸವ ಮೂರ್ತಿಗಳ ಸಹಿತ ಬೃಹತ್ ರಥೋತ್ಸವ ನಡೆಯುತ್ತದೆ. ಕುಶಲ ಕರ್ಮಿಗಳು, ಗೃಹ ಉದ್ಯೋಗಗಳಿಂದ ಬದುಕು ಕಟ್ಟಿಕೊಂಡಿರುವ 12 ಜನಾಂಗದವರು ರಥೋತ್ಸವದಲ್ಲಿ ಪ್ರಧಾನವಾಗಿ ಪಾಲ್ಗೊಳ್ಳುತ್ತಾರೆ. ನೇರವಾಗಿ ದೇವರ ದರ್ಶನ ಪಡೆಯಲು ಸಾಧ್ಯವಾಗದೇ ಇದ್ದವರು ಈ ರಥೋತ್ಸವದ ದರ್ಶನ ಪಡೆದರೂ ದೇವರ ದರ್ಶನ ಪಡೆದ ಪುಣ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ. ಈ ಸಂದರ್ಭದಲ್ಲಿ ಭಕ್ತರಿಗಾಗಿ ನಾನಾ ಸಂಸ್ಥೆಗಳು ಫಲಾಹಾರ, ಪಾನೀಯಗಳ ವ್ಯವಸ್ಥೆ ಕೈಗೊಂಡಿರುತ್ತಾರೆ.

- Advertisement -

ತಲುಪುವುದು ಹೇಗೆ? : ಬೆಂಗಳೂರಿನ ಅಂದಾಜು 650, ಪುಣೆದಿಂದ 210, ವಿಜಯಪುರದಿಂದ 120 ಹಾಗೂ ಸೊಲ್ಲಾಪುರದಿಂದ 74 ಕಿ.ಮೀ. ದೂರದಲ್ಲಿರುವ ಪಂಢರಪುರಕ್ಕೆ ಸಾಕಷ್ಟು ಬಸ್ ಹಾಗೂ ರೈಲುಗಳ ಸೌಲಭ್ಯವಿದೆ. ಜಿಲ್ಲಾ ಕೇಂದ್ರವಾದ ವಿಜಯಪುರ ಹಾಗೂ ಸೊಲ್ಲಾಪುರಗಳಿಂದ ಉತ್ಸವ ಸಂದರ್ಭದಲ್ಲಿ ಹೆಚ್ಚಿನ ಸಾರಿಗೆ ವ್ಯವಸ್ಥೆ ಇರುತ್ತದೆ.

ಭಕ್ತಿಗೆ ಮೆಚ್ಚಿ ಭುವಿಗೆ ಬಂದ : ಜಾನುದೇವ ಹಾಗೂ ಸತ್ಯವತಿ ಅವರ ಪುತ್ರನೇ ಪುಂಡಲೀಕ. ತಂದೆ ತಾಯಿಯ ಜತೆ ಕಾಶಿಯಾತ್ರೆಗೆಂದು ಹೊರಟು ನಿಂತ. ದಾರಿಯಲ್ಲಿ ಅವರು ಆಶ್ರಮವೊಂದರಲ್ಲಿ ತಂಗಿದರು. ಅಂದು ರಾತ್ರೆ ಪುಂಡಲೀಕನಿಗೆ ಒಂದು ಸ್ವಪ್ನವಾಯಿತು. ಕೊಳಕು ಬಟ್ಟೆ ಧರಿಸಿ ಕುರೂಪಿಗಳಂತೆ ಕಾಣಿಸುತ್ತಿದ್ದ ಮಹಿಳೆಯರು ಆಶ್ರಮವನ್ನು ಸ್ವಚ್ಛಗೊಳಿಸುತ್ತಿದ್ದರು. ನಂತರ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರ ಬರುವಾಗ ಶುಭ್ರವಾಗಿ ಕಾಣಿಸುತ್ತಿದ್ದರು. ಇದೇನು ವಿಚಿತ್ರ ಎಂದು ಪುಂಡಲೀಕ ಅವರನ್ನು ಪ್ರಸ್ನಿಸುತ್ತಾನೆ. ಆಗ ಅವರೆನ್ನುತ್ತಾರೆ. ನಾವು ನದಿ ದೇವತೆಗಳು. ಅನೇಕ ಭಕ್ತರು ಪುಣ್ಯ ಸ್ನಾನ ಮಾಡುವ ನೆವದಲ್ಲಿ ತಮ್ಮ ಪಾಪಗಳನ್ನು ಬಿಟ್ಟು ಹೋಗುತ್ತಾರೆ. ಅವರಲ್ಲಿ ಗುರು, ಹಿರಿಯರನ್ನು ಗೌರವಿಸದವರು ಇರುತ್ತಾರೆ. ಹೀಗೆ ಪಾಪಕರ್ಮಗಳನ್ನು ಭರಿಸಿದ ಕಾರಣ ನಾವು ಕುರೂಪಿಗಳಾಗುತ್ತೇವೆ. ಸತ್ಪುರುಷರ ಸೇವೆಯಿಂದ ಮತ್ತೆ ಶುಭ್ರರಾಗುತ್ತೇವೆ ಎನ್ನುತ್ತಾರೆ. ನದಿ ದೇವತೆಗಳ ಮಾತನ್ನು ಕೇಳಿದ ಪುಂಡಲೀಕನಿಗೆ ಜ್ಞಾನೋದಯವಾಗುತ್ತದೆ. ಅಂದಿನಿಂದ ತಂದೆ, ತಾಯಿಯರ ಸೇವೆಯನ್ನು ತಪ್ಪದೇ ಮಾಡುತ್ತಾನೆ. ಅವನ ಭಕ್ತಿಗೆ ಮೆಚ್ಚಿದ ವಿಠಲ ಪುಂಡಲೀಕನ ಮನೆಯ ಮುಂದೆ ನಿಲ್ಲುತ್ತಾನೆ. ಆ ಸಮಯದಲ್ಲಿ ಪುಂಡಲೀಕ ತಂದೆ, ತಾಯಿಯ ಸೇವೆಯಲ್ಲಿ ನಿರತನಾಗಿರುತ್ತಾನೆ. ಮನೆಯ ಮುಂದೆ ಕೆಸರಿರುವ ಕಾರಣ ವಿಠಲ ಮುಂದೆ ಇಟ್ಟಿಗೆಯೊಂದನ್ನು ಎಸೆಯುತ್ತಾನೆ. ಅದರ ಮೇಲೆ ನಿಲ್ಲುವಂತೆ ಭಗವಂತನಿಗೆ ಸೂಚಿಸುತ್ತಾನೆ. ಹೀಗೆ ಭಕ್ತಜನ ಪ್ರಿಯ ವಿಠಲ ಭೂಲೋಕದಲ್ಲ ಅಂದರೆ ಪಂಢರಪುರದಲ್ಲಿ ನೆಲೆಸುತ್ತಾನೆ. ನಂತರ ರುಕ್ಮಿಣಿದೇವಿಯೂ ನೆಲೆಸುತ್ತಾಳೆ.

ಡಾ|| ಗುರುರಾಜ ಪೋಶೆಟ್ಟಿಹಳ್ಳಿ , ಸಂಸ್ಕೃತಿ ಚಿಂತಕರು – 97339369621

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್. ಶಿಬಿರ ಸಹಕಾರಿ: ಡಾ. ಸಂಜೀವ ತಳವಾರ

ಮೂಡಲಗಿ: ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಲು ಮತ್ತು ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಎನ್‌.ಎಸ್‌.ಎಸ್‌ ವಾರ್ಷಿಕ ವಿಶೇಷ ಶಿಬಿರಗಳು ಉತ್ತಮ ಅವಕಾಶ ಒದಗಿಸಿಕೊಡುತ್ತವೆ ಎಂದು ರಾಣಿ...
- Advertisement -

More Articles Like This

- Advertisement -
close
error: Content is protected !!
Join WhatsApp Group