ಹಾಸನದ ಸಕಲಕಲಾವಲ್ಲಭರಾದ ಗೊರೂರು ಅನಂತರಾಜು ರವರು ಬರೆದಿರುವ *ಹಾಸ್ಯ ಸವಿ* ಎನ್ನುವ ಹನಿಗವನ ಸಂಕಲನವು ಇದೇ ತಿಂಗಳ ೧೧ನೇ ತಾರೀಖು ನನಗೆ ದೊರೆಯಿತು. ನೀರ್ನಳ್ಳಿ ಗಣಪತಿಯವರ ಮುಖಪುಟ ವ್ಯಂಗ್ಯ ಚಿತ್ರದಿಂದ ನಳನಳಿಸುವ ಈ ಪುಸ್ತಕವನ್ನು ತಮ್ಮ ತಾಯಿಯವರಾದ ಶ್ರೀಮತಿ ಪುಟ್ಟಲಕ್ಷ್ಮಮ್ಮ ಇವರಿಗೆ ಗೊರೂರು ಅನಂತರಾಜು, ಶ್ರೀಮತಿ ಕಾಂತಾಮಣಿ ಪಾಪಣ್ಣಶೆಟ್ಟಿ (ಅಕ್ಕ) ಜಿ.ಬಿ. ಶಿವಣ್ಣ (ತಮ್ಮ) ಮೂವರೂ ಸೇರಿ ಅರ್ಪಣೆ ಮಾಡಿದ್ದಾರೆ.
೨೦೦೫ ರಲ್ಲಿ ಮೊದಲ ಮುದ್ರಣ ಕಂಡಿರುವ ಈ ಪುಸ್ತಕ ೫೩ ಪುಟಗಳಿದ್ದು. ಇದರ ಬೆಲೆ ಕೇವಲ ೩೦ ರೂಪಾಯಿಗಳಾಗಿವೆ. ವಸಂತಕುಮಾರ್ ಪೆರ್ಲ ಅವರು ಮುನ್ನುಡಿ ಬರೆದಿದ್ದಾರೆ.
ಗೊರೂರು ಅನಂತರಾಜುರವರು ತಮ್ಮ ಮಿನಿ ಮಾತಿನಲ್ಲಿ ಸಂಸ್ಕ್ರತಿ ಎನ್ನುವುದು ಸಮೂಹ ಸಮ್ಮತ ಜೀವನ ಪದ್ಧತಿಯಾಗಿದ್ದು ಸಂಸ್ಕ್ರತಿಯೆಂದರೆ ಮಾನವನನ್ನು ಸಂಸ್ಕರಿಸುವುದು ಎಂದು ಆರ್ಕಿನಿಗಸ್ ಹೇಳಿದ್ದಾನೆ. ಸಂಸ್ಕ್ರತಿಯು ನಮ್ಮ ವಿವಿಧ ಚಟುವಟಿಕೆಗಳ ಮೊತ್ತ ಮಾತ್ರವಾಗಿರದೆ ಜೀವನ ವಿಧಾನವೇ ಆಗಿದೆ ಎಂದಿದ್ದಾರೆ.
ಗೌಡನಕಟ್ಟೆ ತಿಮ್ಮಯ್ಯ ಅವರು ಹಾಸ್ಯ ಕವಿ ಕುರಿತು ಬರೆಯುತ್ತಾ ಸಾಹಿತ್ಯ ಕಲೆ ಸಾಂಸ್ಕೃತಿಕ ಚಟುವಟಿಕೆಗಳ ಜೊತೆ ಜೊತೆಯಲ್ಲೇ ಬೆಳೆದ ಹಾಸನ ತಾಲ್ಲೂಕಿನ ಗೊರೂರು ಗ್ರಾಮದ ಅನಂತರಾಜು ಕವಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಅಡಿಯಿಟ್ಚವರು. ನೂರಾರು ಕವನ, ಹನಿಗವನ, ಹಾಡುಗಳನ್ನು ರಚಿಸಿದ್ದಾರೆ. ಈಗಾಗಲೇ ನಾಡಿನ ಪ್ರಸಿದ್ದ ಪತ್ರಿಕೆಗಳಲ್ಲಿ ಇವುಗಳು ಪ್ರಕಟಗೊಂಡಿವೆ. ಸಮ್ಮಿಲನ, ವಸಂತ ಎಂಬ ಎರಡು ಕವನ ಸಂಕಲನಗಳನ್ನು ಸಂಪಾದಿಸಿರುವ ಇವರು ಮೇಳದ ಹಾಡುಗಳು ಜನಪ್ರಿಯ ಗೀತೆಗಳು ಕೃತಿಗಳಿಂದ ಜನಪ್ರಿಯರಾಗಿದ್ದಾರೆ.
ಗೊರೂರು ಅನಂತರಾಜು ಅವರ ಹಾಸ್ಯ ಎಷ್ಟರಮಟ್ಟಿಗೆ ಇದೆ ಎಂದರೆ ಓದಿದಾಕ್ಷಣ ನಗು ತರಿಸುತ್ತದೆ. ಉದಾಹರಣೆಗೆ:
1. ಕೆಲವೊಮ್ಮೆ ಹೆಗಡೆಯಂತೆ
ಗಡ್ಡ ಬಿಡುವ ಮನಸ್ಸಾಗುತ್ತದೆ
ಆದರೆ
ನನ್ನ ನಲ್ಲೆಯ ಗಲ್ಲಕ್ಕೆ ಚುಚ್ಚುವುದಲ್ಲ….
ಅದಕ್ಕೆ
ದೇವೇಗೌಡನಾಗುತ್ತೇನೆ.
2. ನಮ್ಮ ಡ್ಯಾಡಿ
ಆಡುತ್ತಾರೆ
ಹೊರಗೆ ರಮ್ಮಿ
ಡ್ಯಾಡಿಯನ್ನೇ ಆಡಿಸುತ್ತಾರೆ
ಮನೆಯೊಳಗೆ ಮಮ್ಮಿ.
3. ಒರಿಸ್ಸಾಗೆ ಕಳಿಸಲು
ಅಕ್ಕಿ ರಾಗಿ ಕೊಟ್ಟಿದ್ದರು
ನಮ್ಮೂರಿನ
ಮುಗ್ದ ಜನ
ಅದನ್ನು ಇಲ್ಲೇ
ಮಿಲ್ ಮಾಡಿಸಿಕೊಂಡರು
ಕದ್ದ ಜನ..
4. ಯುವಕರೇ
ಏಳಿ ಎದ್ದೇಳಿ
ಕರೆ ಕೊಟ್ಟರು
ಮಲ್ಯರು
ಯುವಕರು
ಮಲಗೇ ಇದ್ದರು
ಏಕೆಂದರೆ ಅವರು
ಕುಡಿದಿದ್ದರು
ಹೀಗೆ ನಗೆಗಡಲಲ್ಲಿ ತೇಲಿಸುವ ಹಾಸ್ಯವು ಇದರಲ್ಲಿ ನೂರ ಐವತ್ತಕ್ಕೂ ಹೆಚ್ಚು ಹನಿಗವನಗಳು ಈ *ಹಾಸ್ಯಸವಿ* ಹನಿಗವನ ಸಂಕಲನದಲ್ಲಿವೆ. ಇಂತಹ ಅನೇಕ ಪುಸ್ತಕಗಳು ಗೊರೂರು ಅನಂತರಾಜು ರವರಿಂದ ಹೊರಬರಲಿ ಎಂದು ಆಶಿಸುವೆ.
—
ಸಾವಿತ್ರಮ್ಮ ಓಂಕಾರ
ಅರಸೀಕೆರೆ

