ಮುಂಬೈ – ಭಾರತೀಯ ಚಿತ್ರರಂಗದ ಧ್ರುವತಾರೆ, ಹೀ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ಧರ್ಮೇಂದ್ರ (೮೯) ವಯೋಸಹಜ ಕಾಯಿಲೆಯಿಂದ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ಕೆಲವು ದಿನಗಳ ಹಿಂದೆಯೇ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿತ್ತು ಅಲ್ಲದೆ ಆಗಲೇ ಅವರು ತೀರಿಕೊಂಡಿದ್ದಾರೆಂಬ ವದಂತಿಗಳು ಹರಿದಾಡಿದ್ದವು.
ಸುಮಾರು ೩೦೦ ಚಿತ್ರಗಳಲ್ಲಿ ನಟಿಸಿದ್ದ ಧರ್ಮೇಂದ ಅವರ ಶೋಲೆ ಚಲನಚಿತ್ರ ಐವತ್ತು ವರ್ಷಗಳ ನಂತರವೂ ಇನ್ನೂ ಹಿಟ್ ಚಿತ್ರಗಳ ಸಾಲಿನಲ್ಲಿದೆ. ದಿಲ್ ಭಿ ತೇರಾ ಹಂ ಭಿ ತೇರೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಧರ್ಮೇಂದ್ರ ಬಾಲಿವುಡ್ ನಲ್ಲಿಯೇ ಅತಿ ಹೆಚ್ಚು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ.
ಶೋಲೆ, ಧರ್ಮ ವೀರ, ಚುಪ್ಕೆ ಚುಪ್ಕೆ, ಮುಂತಾದ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ೨೦೧೨ ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದುಕೊಂಡಿದ್ದರು. ನಟಿ ಹೇಮಾಮಾಲಿನಿಯವರನ್ನು ಮದುವೆಯಾಗಿದ್ದರು
ಇನ್ನೊಂದು ಕಾಕತಾಳೀಯ ಎಂದರೆ ನ.೨೪ ರಂದೇ ಕನ್ನಡದ ನಟ ಅಂಬರೀಷ್ ನಿಧನರಾಗಿ ಏಳು ವರ್ಷಗಳಾಗಿದ್ದು ಇಂದೇ ಬಾಲಿವುಡ್ ನಟ ಧರ್ಮೇಂದ್ರ ನಿಧನರಾಗಿದ್ದಾರೆ. ಮುಂಬೈನ ವಿಲೆ ಪಾರ್ಲೆಯಲ್ಲಿ ಧರ್ಮೇಂದ್ರ ಅವರ ಅಂತ್ಯ ಸಂಸ್ಕಾರ ನಡೆಯಲಿದ್ದು ಬಾಲಿವುಡ್ ಎಲ್ಲ ತಾರೆಯರು ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೋದಿ ಸಂತಾಪ: ಬಾಲಿವುಡ್ ನಟ ಧರ್ಮೇಂದ್ರ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರೊಬ್ಬ ಮರೆಯಲಾಗದ ಕಲಾವಿದ ಅವರ ನಿಧನದಿಂದ ಚಿತ್ರರಂಗದ ಯುಗವೊಂದು ಮುಕ್ತಾಯವಾದಂತಾಗಿದೆ ಎಂದು ಹೇಳಿದ್ದಾರೆ

