ಬೀದರ : ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಸಂಬಳ ಹಾಗೂ ಕಾರಂಜಾ ಸಂತ್ರಸ್ತರ ಪರಿಹಾರ ವಿಷಯಗಳನ್ನು ಇಟ್ಟುಕೊಂಡು ರಾಜ್ಯೋತ್ಸವ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಎದುರಿನಲ್ಲಿ ಜನರು ಪ್ರತಿಭಟನೆ ಮಾಡಿದರು.
ನೆಹರೂ ಕ್ರೀಡಾಂಗಣದಲ್ಲಿ ಸಚಿವ ಖಂಡ್ರೆ ರಾಜ್ಯೋತ್ಸವ ಭಾಷಣದಲ್ಲಿ ತೊಡಗಿದ್ದಾಗ ಜಿಲ್ಲೆಯ ಕೆಲವು ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿದರು. ಕಾರಂಜಾ ಸಂತ್ರಸ್ತರ ಪರಿಹಾರ ಹಾಗೂ ಕಾರ್ಮಿಕರ ಸಂಬಳ ಕುರಿತಂತೆ ಘೋಷಣೆ ಕೂಗತೊಡಗಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ತಮ್ಮ ಸಂಬಳ ಬಾಕಿ ಯಾವಾಗ ಕೊಡುತ್ತೀರಿ ಎಂದು ಪ್ರಶ್ನಿಸಿದಾಗ ಖಂಡ್ರೆಯವರಿಗೂ ಪ್ರತಿಭಟನಾಕಾರರಿಗೂ ಮಾತಿನ ಚಕಮಕಿ ನಡೆಯಿತು. ಈ ಹಿಂದೆ ಕೂಡ ಸಚಿವರು ಸಂಬಳ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದನ್ನು ಹೇಳಿದಾಗ ಸಚಿವ ಖಂಡ್ರೆ ಕೋಪಗೊಂಡು ತಮ್ಮನ್ನೆಲ್ಲ ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿಸುವುದಾಗಿ ಹೇಳಿ ಹೊರಟರು.
ಪ್ರತಿಭಟನಾಕಾರರು ಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ಬೀದರ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಅರ್ಜುನ್ ತಮಗಿಕರ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ನೆಹರೂ ಕ್ರೀಡಾಂಗಣದವರೆಗೆ ಪ್ರತಿಭಟನಾ ರ್ಯಾಲಿ ನಡೆಯಿತು. ಪ್ರತಿಭಟನಾಕಾರರು ರಸ್ತೆಯುದ್ದಕ್ಕೂ ಧಿಕ್ಕಾರ ಕೂಗುತ್ತ, ರಸ್ತೆ ಮೇಲೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ವರದಿ : ನಂದಕುಮಾರ ಕರಂಜೆ, ಬೀದರ