ಆಂದ್ರಪ್ರದೇಶದ ವೆಲ್ಲಟೂರು ಜಿಲ್ಲೆಯ ರಾಮಪುರದ ರಡ್ಡಿ ಪಂಗಡದ ನಾಗರಡ್ಡಿ-ಗೌರಮ್ಮ ಎಂಬ ದಂಪತಿಗಳಿಗೆ ಜನಿಸಿದ ಮಲ್ಲಮ್ಮ, ಬಾಲ್ಯದಲ್ಲಿಯೇ ಸದಾಕಾಲ ಇಷ್ಟಲಿಂಗ ಪೂಜೆ, ಜಪ, ಧ್ಯಾನಗಳಲ್ಲಿ ಮಗ್ನಳಾಗುತ್ತಿದ್ದರು.
ಬಸವಾದಿ ಶರಣ ಪರಂಪರೆಯ ಅಕ್ಕಮಹಾದೇವಿ ಹಾಗೂ ಗುಡ್ಡಾಪುರದ ದಾನಮ್ಮ ಶರಣೆಯರ ಮುಂದುವರೆದ ಭಾಗವಾಗಿ, ಭರಮರಡ್ಡಿ (ಪ್ರಸಿದ್ಧ ರಾಜಮನೆತನ ಹೇಮರಡ್ಡಿ ವಂಶಸ್ಥರು) ಎಂಬುವವರ ಜೊತೆ ವಿವಾಹವಾಗುತ್ತಾರೆ. ಲೌಕಿಕ-ಅಲೌಕಿಕ ಎಂಬ ಎರಡು ತರಹದ ಜೀವನ ವೈವಿಧ್ಯತೆಯಲ್ಲಿ ಬದುಕಿ ಬಾಳಿ, ಲಿಂಗಾಯತ ಪರಂಪರೆಯಂತೆ ಸಂಸಾರದಲ್ಲಿ ಸದ್ಗತಿಯನ್ನು ಕಂಡವರು ಮಲ್ಲಮ್ಮ.
ಎನಗೆ ಲಿಂಗವು ನೀವೆ ಬಸವಯ್ಯಾ,
ಎನಗೆ ಸಂಗವು ನೀವೆ ಬಸವಯ್ಯಾ,
ಎನಗೆ ಪ್ರಾಣವು ನೀವೆ ಬಸವಯ್ಯಾ,
ಎನಗೆ ಪ್ರಸಾದವು ನೀವೆ ಬಸವಯ್ಯಾ,
ಎನಗೆ ಪ್ರಭೆಯಮೂರ್ತಿಯು ನೀವೆ ಬಸವಯ್ಯಾ. ಎನಗೆ ಸಂಗಯ್ಯನು ನೀವೆ ಬಸವಯ್ಯಾ
ಎನ್ನುವ ಬಸವಣ್ಣನವರ ವಿಚಾರಪತ್ನಿ ನೀಲಮ್ಮ ತಾಯಿಯ ವಚನದಂತೆ ಗಂಡನನ್ನೇ ದೈವವೆಂದು ತಿಳಿದು ಇಹ-ಪರವನ್ನು ಏಕವಾಗಿಸಿಕೊಂಡಿದ್ದ ಮಲ್ಲಮ್ಮ, ವಿಷಯಲಂಟಪನಾಗಿದ್ದ ತನ್ನ ಮೈದುನ ವೇಮನನನ್ನು ಕೂಡ ಸುಪ್ರಸಿದ್ದ ಮಹಾಯೋಗಿಯನ್ನಾಗುವಂತೆ ಮಾಡಿದರು.
ಲಿಂಗಾಯತ ಪರಂಪರೆಯ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುವ ಮಹಾಸಾದ್ವಿ ಮಲ್ಲಮ್ಮ, ಹೆದರದಿರು ಮನವೇ, ಬೆದರದಿರು ಮನವೇ, ನಿಜವನರಿತು ನಿಶ್ಚಿಂತನಾಗಿರು ಮನವೆ. ಫಲವಾದ ಮರಕ್ಕೆ ಕಲ್ಲು ಹೊಡೆಯುವವರು ಬಹಳ ಜನ ಎನ್ನುವಂತೆ ಕುಟುಂಬ ವ್ಯವಸ್ಥೆಯಲ್ಲಿ ಬಹಳಷ್ಟು ನೋವುಗಳನ್ನು ಉಂಡು, ಸಾಂಸಾರಿಕ ವಿಷಯಗಳ ಕಲಹವಾಗಿ ಕೆಲವು ಕಾಲ ಮನೆಯಿಂದ ಬಹಿಷ್ಕೃತಗೊಳ್ಳುವ ಮಲ್ಲಮ್ಮ, ಕೆಲವು ಕಾಲ ದನಕಾಯುವ ಕಾಯಕವನ್ನು ಕೂಡ ನಿರ್ವಹಿಸಿ, ಕಾಯಕ ತತ್ವವನ್ನು ಕೂಡ ಎತ್ತಿ ಹಿಡಿಯುವುದರ ಜೊತೆಜೊತೆಯಲ್ಲಿ ಇಷ್ಟಲಿಂಗ ಪೂಜೆಯನ್ನು ಸದಾಕಾಲ ಕೈಗೊಳ್ಳುತ್ತಾರೆ.
“ಬೈದವರನ್ನ ಬಂಧುಗಳೆಂಬೆ, ಜರಿದವರನ್ನ ಎನ್ನ ಜನ್ಮ ಬಂಧುಗಳೆಂಬೆ” ಎನ್ನುವ ಬಸವಣ್ಣನವರ ವಚನ ಸೂಕ್ತಿಯಂತೆ ಸೌಮ್ಯ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದ ಮಲ್ಲಮ್ಮ, ಕಾಲಕಳೆದಂತೆ ಮನೆಯವರಿಂದಲೂ ಹಾಗೂ ಹೊರಗಿನ ತಾಮಸ ಗುಣಹೊಂದಿದ್ದ ವಿರೋಧಿಗಳಿಂದಲೂ ಸಹ ಬಹಳಷ್ಟು ಮೆಚ್ಚುಗೆ ಪಡೆಯುತ್ತಾರೆ.
ಈ ರೀತಿಯಾಗಿ ಜೀವನ ಸಾರ್ಥಕತೆಯನ್ನು ಮೆರೆದ ಇಂತಹ ಮಹಾಸಾಧ್ವಿ ಮಲ್ಲಮ್ಮ, ಪುರುಷ ಪ್ರಧಾನ ವ್ಯವಸ್ಥೆಯ ಭಾಗವಾಗಿ ಹೇಮರಡ್ಡಿ-ಮಲ್ಲಮ್ಮ ಎಂದು ಪ್ರಸಿದ್ಧಿಯಾಗಿದ್ದಾರೆ. ಇವರ ಕುರಿತು ಹಲವಾರು ಕಾಲ್ಪನಿಕ ಪುರಾಣ ಕಥೆಗಳು ಹೆಣೆಯಲ್ಪಟ್ಟಿದ್ದು, ಇವರ ನೈಜ ವಾಸ್ತವಿಕ ಜೀವನವನ್ನು ಮರೆಮಾಚಿಸಿದ್ದಾರೆ.
ಇವರು ಇಂದಿನ ನಮ್ಮ ಕುಟುಂಬ ವ್ಯವಸ್ಥೆಯಲ್ಲಿರುವ ಎಲ್ಲಾ ಸಮುದಾಯಗಳ ಮಹಿಳೆಯರಿಗೆ ಮಾದರಿಯಾಗಲಿ ಎಂದು ಆಶಿಸುತ್ತೇವೆ.
ಅಶೋಕ ಮಳಗಲಿ
ಬೆಳಗಾವಿ