ಹಿಪ್ ರಿಪ್ಲೇಸ್ ಮೆಂಟ್ ಶಸ್ತ್ರಚಿಕಿತ್ಸೆ ಯಶಸ್ವಿ

0
108

ಸಿಂದಗಿ: ಪಟ್ಟಣದ ಪಾರ್ವತಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಹಿಪ್‌ ರಿಪ್ಲೇಸ್‌ಮೆಂಟ್‌ (ಸೊಂಟದ ಮೂಳೆ ಬದಲಿ ಜೋಡಣೆ) ಶಸ್ತ್ರಚಿಕಿತ್ಸೆಯನ್ನು ಡಾ.ಅರ್ಜುನ ಗೊಟಗುಣಕಿ ಅವರ ನೇತೃತ್ವದಲ್ಲಿ ನಡೆಸಲಾಗಿದೆ.

ಸಿಂದಗಿ ಪಾರ್ವತಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ತಾಲೂಕಿನ ಸಿಂದಗಿ ನಗರದ ನಿವಾಸಿ, 25 ವರ್ಷದ ಅಕ್ಷಯ ತಿಳಗೂಳ ಎಂಬ ಯುವಕನ ಸೊಂಟದ ಮೂಳೆ ಬದಲಿ ಜೋಡಣೆ ಶಸ್ತ್ರಚಿಕಿತ್ಸೆಯನ್ನು 2ದಿನಗಳ ಹಿಂದೆ ಮಿರಜ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಸಂಪೂರ್ಣ ಹಿಪ್‌ ರಿಪ್ಲೇಸ್‌ಮೆಂಟ್‌ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ತೀವ್ರ ಸೊಂಟ ನೋವಿನಿಂದ ಬಳಲುತ್ತಿದ್ದ ಅಕ್ಷಯ ಅವರು ಈಗ ಚೇತರಿಸಿಕೊಂಡಿದ್ದು ಮರು ದಿನವೇ ಆಸ್ಪತ್ರೆಯಲ್ಲಿ ಎದ್ದು ತಿರುಗಾಡುತಿದ್ದಾರೆ.
ಈ ವೇಳೆ ವೈದ್ಯ ಡಾ.ಅರ್ಜುನ ಗೊಟಗುಣಕಿ ಮಾತನಾಡಿ, ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಮಾಡುವುದರಲ್ಲಿ ಫೆಲೋಶಿಪ್‌ ಪಡೆದವರು ನಮ್ಮಲ್ಲಿದ್ದಾರೆ. ಹಾಗಾಗಿ, ಶಸ್ತ್ರಕ್ರಿಯೆ ನಡೆಸಲು ಯಾವುದೇ ಕಷ್ಟವಾಗಲಿಲ್ಲ. ಶಸ್ತ್ರಕ್ರಿಯೆಗೆ ಬೇಕಾದಂತಹ ಎಲ್ಲ ಸೌಲಭ್ಯಗಳೂ ಆಸ್ಪತ್ರೆಯಲ್ಲಿವೆ. ನಮ್ಮಲ್ಲಿ ಎಲ್ಲ ಬಗೆಯ ಶಸ್ತ್ರಚಿಕಿತ್ಸೆ ಮಾಡಲಿದ್ದೇವೆ. ತಾಲೂಕಿನ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ವೇಳೆ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಅಕ್ಷಯ ಅವರ ತಂದೆ ಮಾನಪ್ಪ ಮಾತನಾಡಿ, ಸತತ 7 ವರ್ಷಗಳಿಂದ ಸೊಂಟ ನೋವಿನಿಂದ ನನ್ನ ಮಗನಿಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಶಸ್ತ್ರಕ್ರಿಯೆ ಮಾಡಿದ ನಂತರ ನೋವು ಕಡಿಮೆಯಾಗಿದೆ. ಚೇತರಿಸಿಕೊಳ್ಳುತ್ತಿದ್ದಾನೆ. ಎರಡೇ ದಿನದಲ್ಲಿ ನಡೆದಾಡಲು ಪ್ರಾರಂಭ ಮಾಡಿದ್ದಾನೆ. ಆಸ್ಪತ್ರೆಯಲ್ಲಿ ಚೆನ್ನಾಗಿ ನೋಡಿಕೊಂಡಿದ್ದಾನೆ ಎಂದರು.

ಈ ಶಸ್ತ್ರ ಚಿಕಿತ್ಸೆಯಲ್ಲಿ ವೈದ್ಯರಾದ ಡಾ.ಗಿರೀಶ ಕೊಡ್ನಾಪುರ, ಡಾ.ಶಿವರಾಜ ಸಜ್ಜನ, ಆಸ್ಪತ್ರೆಯ ಆಡಳಿತಾಧಿಕಾರಿ ಚನ್ನಬಸವ ಗೊಟಗುಣಕಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ.