spot_img
spot_img

ಉದ್ವಿಗ್ನತೆಯಿಂದ ಹೊರ ಬರುವುದು ಹೀಗೆ…

Must Read

ಬೆಳದಿಂಗಳ ಚೆಲ್ಲುವ ಚಂದಿರನನ್ನು ನೋಡಿ ನಕ್ಕು ಅದೆಷ್ಟೋ ವರ್ಷಗಳೇ ಗತಿಸಿವೆ. ಚಿಕ್ಕವರಿದ್ದಾಗ ಅಮ್ಮನ ಮಡಿಲಲ್ಲಿ ಕುಳಿತು ಚುಕ್ಕಿ ಎಣಿಸುವಾಗ ಅದೇನೋ ಸಂತಸ. ಮನಸ್ಸು ಪ್ರಫುಲ್ಲತೆಯಿಂದ ಉಬ್ಬಿ ಹೋಗಿರುತ್ತಿತ್ತು.

ಅಂತಹ ಆನಂದದ ಕ್ಷಣಗಳು ಈಗೀಗ ಅಪರೂಪವಾಗಿವೆ. ಆ ಅಮೋಘ ಕ್ಷಣಗಳು ಆಗೆಲ್ಲ ಸಹಜವಾಗಿದ್ದವು. ಅವುಗಳಿಗಾಗಿ ಜೀವಮಾನವೆಲ್ಲ ಹಪಹಪಿಸಬೇಕಿರಲಿಲ್ಲ. ಹಲವಾರು ಕ್ಷೇತ್ರಗಳಲ್ಲಿ ಮೇರು ನಕ್ಷತ್ರಗಳಂತೆ ಹೊಳೆದವರು ಹಗಲು ಹನ್ನೆರಡು ತಾಸು ಮುಖದಲ್ಲಿ ನಗು ತುಂಬಿಕೊಂಡೇ ಓಡಾಡುತ್ತಿದ್ದರು.

ಮೊದಲೆಲ್ಲ ಹಿರಿಜೀವಗಳಿಗೆ ಉದ್ವಿಗ್ನತೆ ಕಾಡಲಿಲ್ಲವೇನೋ? ರೊಟ್ಟಿ ಖಾರ ಗಂಜಿಯುಂಡು ಕಟ್ಟೆಗಳ ಮೇಲೆ ಒಟ್ಟುಗೂಡಿ ನಗುತ್ತಿದ್ದರು. ನಾವೀಗ ಗಗನಚುಂಬಿ ಕಟ್ಟಡದಲ್ಲಿದ್ದು, ಸುತ್ತಲೂ ಅಹಂಮ್ಮಿನ ಕೋಟೆ ಕಟ್ಟಿಕೊಂಡು ಪಕ್ಕದ ಮನೆಯವರ ಮುಖವನ್ನೇ ನೋಡುವುದಿಲ್ಲ.

ಇದೂ ಸಾಲದೆಂಬಂತೆ ಮನೆ ಮಂದಿಯ ಮುಖ ನೋಡಲು ಪುರಸೊತ್ತಿಲ್ಲದಂತೆ ಮೊಬೈಲ್‍ನಲ್ಲಿ ಮುಳುಗಿರುತ್ತೇವೆ. ಆತುರಾತುರದ ಬದುಕಿಗೆ ಅಂಟಿಕೊಂಡದ್ದಕ್ಕೆ ಒತ್ತಡ ಪೀಡಿತ ಮನಸ್ಸು ಮುದುಡಿ ಬಿಟ್ಟಿದೆ. ಸುಂದರ ಸಂಸಾರಗಳು ಮತ್ತು ಯುವ ಚೇತನಗಳು ಮನಸ್ಸಿನ ಉದ್ವಿಗ್ನತೆಗೆ ಬಲಿಯಾಗುತ್ತಿದ್ದಾರೆ.

ಎಲ್ಲವೂ ಇದ್ದು ಇದ್ದವರನ್ನು ಕಳೆದುಕೊಂಡು ಖಾಲಿ ಬದುಕನ್ನು ದೂಡುವ ಸ್ಥಿತಿ ನಿರ್ಮಾಣವಾಗಿದೆ. ಅಕಾರಣವಾಗಿ ಅಗ್ಗವಾಗಿ ಸುಮಧುರ ಸಂಬಂಧ ಕಳೆದುಕೊಂಡು ನೋವು ಅನುಭವಿಸುತ್ತಿದ್ದೇವೆ. ಸನಿಹ ಇರುವಾಗಿನಕಿಂತ ಕಳೆದುಕೊಂಡಾಗಲೇ ಸಂಬಂಧಗಳ ಬೆಲೆ ಗೊತ್ತಾಗೋದು.ಇತ್ತೀಚೆಗಂತೂ ಬದುಕು ನೀರ ಮೇಲಿನ ಗುಳ್ಳೆಯಂತಾಗಿ ಬಿಟ್ಟಿದೆ.

ಯಾವಾಗ ಯಾರನ್ನು ಕಳೆದುಕೊಳ್ಳುತ್ತೇವೆಯೋ ಗೊತ್ತಿಲ್ಲ. ನಮ್ಮ ಸರದಿಯೂ ಗೊತ್ತಿಲ್ಲ. ಇಂತಹ ಅಯೋಮಯ ಕಾಲದಲ್ಲಿ ಮನಸ್ಸಿನ ಉದ್ವಿಗ್ನತೆ ಇನ್ನಿಲ್ಲದಂತೆ ಹೆಚ್ಚುತ್ತಿದೆ. ಇದಕ್ಕೆ ಶಮನೋಪಾಯಗಳನ್ನು ಹುಡುಕುವ ಸಮಯ ಸನ್ನಿಹಿತವಾಗಿದೆ. ಹಾಗಾದರೆ ಮನಸ್ಸಿನ ಉದ್ವಿಗ್ನತೆಗೆ ಉತ್ತರ ಹುಡುಕೋಣ ಬನ್ನಿ.

ಅತಿಯಾದ ನಿರೀಕ್ಷೆ ಬೇಡ

ಗೆಳೆಯರಿಂದ ಮನೆಯವರಿಂದ ನಾವಂದುಕೊಂಡ ಹಾಗೆ ನೆರವು ಸಿಗದಿದ್ದಾಗ, ಅಂದಕೊಂಡದ್ದು ಮಾಡಲಾಗದೇ ಹೋದಾಗ, ನಡೆಯುವ ದಾರಿಯಲ್ಲಿ ಆಯತಪ್ಪಿ ಬಿದ್ದಾಗ ನಿರೀಕ್ಷೆಗಳು ಅನಿರೀಕ್ಷಿತವಾಗಿ ಹುಸಿಯಾದಾಗ ಮನಸ್ಸು ಉದ್ವಿಗ್ನತೆಯಲ್ಲಿ ಬೇಯತೊಡಗುತ್ತದೆ. ಅದನ್ನು ಆಚೆಗೆ ತರಲು ಬಹಳಷ್ಟು ಸಮಯ ಬೇಕಾಗುವುದು. ಕೆಲವೊಮ್ಮೆ ಅದನ್ನು ತಹಬದಿಗೆ ತರಲು ಕಾಲವೇ ದಿವ್ಯ ಔಷಧಿಯಾಗುವುದು.

ಬೇಗುದಿಯ ಆತಂಕದ ತಲ್ಲಣದ ಗಳಿಗೆಯನ್ನು ಅನುಭವಿಸಿ ಸಮಾಧಾನ ಮನಸ್ಕರಾಗಿ ದಡ ಸೇರುವುದು ಸುಲಭದ ಸಂಗತಿಯಲ್ಲಿ. ಆದರೂ ಆ ಕಲೆಯನ್ನು ಕರಗತ ಮಾಡಿಕೊಂಡರೆ ಬದುಕು ಹಿತವೆನಿಸುತ್ತದೆ. ಮನೆ ಮಂದಿಯಿಂದ ಗೆಳೆಯರಿಂದ ಆತ್ಮೀಯರಿಂದ ಅತಿಯಾಗಿ ನಿರೀಕ್ಷಿಸುವುದು ಒಳ್ಳೆಯದಲ್ಲ.

ನಿರೀಕ್ಷೆಗಳು ಕೈಗೂಡದಿದ್ದಾಗ ಮನಸ್ಸಿಗೆ ಆಗುವ ನೋವು ಅಷ್ಟಿಷ್ಟಲ್ಲ. ಆ ನೋವು ಕೆಲವೊಮ್ಮೆ ಚಿಂತೆಯಾಗಿ ಬದಲಾಗುವ ಸಾಧ್ಯತೆ ಇರುತ್ತದೆ. ಕಾರಣ ವೃಥಾ ವ್ಯಥೆ ಪಡದೆ ಸ್ವಾವಲಂಬಿತನ ರೂಢಿಸಿಕೊಳ್ಳಬೇಕು. ಆಗ ನಮ್ಮ ಸಾಮರ್ಥ್ಯ ದೌರ್ಬಲ್ಯಗಳು ಅರ್ಥವಾಗುತ್ತವೆ. ಹೆಚ್ಚಿನ ಆಸೆಗಳನ್ನು ಈಡೇರಿಸಲು ಸಾಧ್ಯವೋ ಇಲ್ಲವೋ ಎಂದು ವಿಚಾರ ಮಾಡಿ ಹೆಜ್ಜೆ ಇಡುವಂತೆ ಎಚ್ಚರಿಕೆ ವಹಿಸಬಹುದು. ವಿವೇಕ ವಿವೇಚನೆಯುಕ್ತ ನಡವಳಿಕೆ ಮನೋನಿಗ್ರಹಕ್ಕೆ ಮಾರ್ಗೋಪಾಯ.

ಸಂಯಮವಿರಲಿ

ಆಧುನಿಕತೆಯ ಹಳವಂಡದಲ್ಲಿ ಮೌಲ್ಯಗಳ ಸೆರೆಯಿಟ್ಟು ಉಸಿರಾಡುವುದು ಸಾಮಾನ್ಯವೆನಿಸುತ್ತಿದೆ. ಏನು ಬೇಕಾಗಿದೆಯೋ ಏನು ಬೇಡವಾಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಬೇಕಾದ್ದು ಬೇಡವಾದದ್ದು ಎಂದು ನೋಡದೇ ಸಾರಾಸಗಟಾಗಿ ಮನವೆಂಬ ಚೀಲದಲ್ಲಿ ಎಲ್ಲವನ್ನೂ ತುಂಬಿಕೊಳ್ಳುತ್ತಿದ್ದೇವೆ. ತುಂಬಿಕೊಂಡ ಭಾರ ಹೆಚ್ಚಾಗಿ ಗೊಣಗೊಡುತ್ತ ತಿರುಗುವುದನ್ನು ಚಾಳಿ ಮಾಡಿಕೊಂಡಿದ್ದೇವೆ.

ಮನೆಯಲ್ಲಿದ್ದರೂ ಶಾಂತಿಯಿಲ್ಲ. ದೇವರ ಮುಂದೆ ಕುಳಿತರೂ ಶಾಂತಿಯಿಲ್ಲ. ಮನೆಯಲ್ಲಿರುವಾಗ ಕಛೇರಿ ಕೆಲಸದ ಚಿಂತೆ. ಕಛೇರಿಯಲ್ಲಿರುವಾಗ ಮನೆಯ ಚಿಂತೆಗಳ ಸರಮಾಲೆ. ಗೆಳೆಯರೊಂದಿಗಿದ್ದರೂ ಅದೇ, ಮನೆ ಮಂದಿಯೊಂದಿಗಿದ್ದರೂ ಅದೇ ಅಶಾಂತ ಮನಸ್ಥಿತಿ. ಎಲ್ಲೋ ಕಳೆದುಕೊಂಡದ್ದನ್ನು ಎಲ್ಲೋ ಹುಡುಕುತ್ತಿರುವ ಸ್ಥಿತಿ. ಉದ್ವಿಗ್ನ ಮನಸ್ಥಿತಿಯನ್ನು ನಮ್ಮ ನಮ್ಮದೇ ದೃಷ್ಟಿಕೋನದಿಂದ ಚಿತ್ರಿಸುತ್ತೇವೆ.

ಆಗಿಂದಾಗಲೇ ಮುಕ್ತಾಯವಾಗುವುದನ್ನು ಸುಮ್ಮನೆ ಹಿಡಿದು ಜಗ್ಗಾಡುತ್ತಿದ್ದೇವೆ ಎಂದು ಗೊತ್ತಿದ್ದರೂ ಜಗ್ಗಾಡುವುದನ್ನು ಬಿಡುವುದಿಲ್ಲ. ತೊಂದರೆಗಳನ್ನು ಕಣ್ಣೀರಿನ ಅಸ್ತ್ರಗಳನ್ನಾಗಿಸಿದ್ದೇವೆ. ಹೀಗಾಗಿ ಮನಸ್ಸು ಮತ್ತಷ್ಟು ಕುಬ್ಜಗೊಳ್ಳುತ್ತಿದೆ. ಅಲ್ಬರ್ಟ್ ಐನ್‍ಸ್ಟೀನ್ ಹೇಳಿದಂತೆ ‘ತೊಂದರೆ ಮಧ್ಯದಲ್ಲಿ ಅವಕಾಶ ಇರುತ್ತವೆ.’ ಎಂಬುದನ್ನು ನೆನಪಿನಲ್ಲಿಡಬೇಕು. ಸಾಧಕರಿಗೆ ಉದ್ವಿಗ್ನತೆ ಕೈ ತೊಳೆದುಕೊಂಡು ಬೆನ್ನು ಹತ್ತಿದ್ದರೂ ಅವು ತಮ್ಮ ಮೇಲೆ ಸವಾರಿ ಮಾಡದಂತೆ ಸಂಯಮದಿಂದ ಮನೋನಿಗ್ರಹದಿಂದ ನಿಯಂತ್ರಿಸುವ ಮಾರ್ಗೊಪಾಯಗಳನ್ನು ಕರತಲಾಮಲಕ ಮಾಡಿಕೊಂಡಿರುತ್ತಾರೆ. ಇನ್ನೊಂದು ಮೂಲದ ಪ್ರಕಾರ ಈ ರೀತಿಯ ಉದ್ವಿಗ್ನತೆಯ ನೋವನ್ನು ಅನುಭವಿಸುವುದರಲ್ಲಿ ಅವರು ಸುಖವನ್ನು ಅನುಭವಿಸುತ್ತಾರೆ ಅಂಬೋದು ಪ್ರಾಜ್ಞರ ಹೇಳಿಕೆ.

ಅರಿವಿನ ಪ್ರಜ್ಞೆ

ತೊಂದರೆಗಳನ್ನು ಮೈ ಮೇಲೆ ಎಳೆದುಕೊಳ್ಳುವುದರಿಂದ ಆತಂಕ ಉದ್ವಿಗ್ನತೆ ತಪ್ಪುವುದಿಲ್ಲ. ಅಂತರಂಗದ ತುಮುಲ, ಅಧೀರತೆ ಎಷ್ಟು ಉತ್ಕಟವಾಗಿರುತ್ತದೆ ಅಂದರೆ ಹೊಸ ಅರಿವನ್ನು ಮೂಡಿಸುವ ಇಲ್ಲವೇ ವ್ಯಕ್ತಿತ್ವವನ್ನು ಬದಲಿಸುವ ಸಾಧ್ಯತೆಯೇ ಇಲ್ಲ ಎನ್ನುವಷ್ಟು.

ಅರಿವಿನ ಪ್ರಜ್ಞೆಯ ದೃಷ್ಟಿಕೋನದಿಂದ ಮನದ ದುಗುಡವನ್ನು ಎಲ್ಲ ತೀವ್ರತೆಯೊಂದಿಗೆ ಅಳೆಯಲು ನೋಡಿದರೆ ಮೋಡಕಟ್ಟಿ ಧಗೆಯಿದ್ದ ವಾತಾವರಣದಂತೆ ನಿರೀಕ್ಷಿತ ಫಲಿತಾಂಶ ಸಿಗದು. ಮಳೆ ಸುರಿದು ತಂಪಾದಂತೆ ಉದ್ವಿಗ್ನಗೊಂಡ ಮನಸ್ಸು ನಿರಾಳವಾಗುವುದೇ ಇಲ್ಲ.

ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಸುಂದರ ವಸ್ತುವೊಂದು ಮನಸ್ಸನ್ನೆಲ್ಲ ಕಲಕಿ ಅಸ್ವಸ್ಥವಾಗಿಸುತ್ತದೆ. ಕಂಡದ್ದೆಲ್ಲ ನನಗೇ ಬೇಕೆಂಬ ದುರಾಸೆ ಅತಿಯಾಗುತ್ತಿದೆ. ಆ ಕ್ಷಣಕ್ಕೆ ಅತಿಯಾಸೆ ಹಿಂದೆ ಬಿದ್ದ ಮನಸ್ಸು ಮುಂದಿರುವ ಕೆಲಸ ಕಾರ್ಯಗಳ ಮೇಲೆ ಕೇಂದ್ರೀಕೃತವಾಗಲು ಒಪ್ಪುವುದೇ ಇಲ್ಲ.

ಉದ್ವಿಗ್ನತೆ ಒಮ್ಮೆ ಹೊರ ಬಿದ್ದರೆ ಮನಸ್ಸು ಹೂವಿನಂತೆ ಹಗುರ. ಹೊಸ ವಿಚಾರವೊಂದು ಹೊಳೆದೊಡೆನೆ ಮನಸ್ಸು ಉಲ್ಲಸಿತ ಸ್ಥಿತಿಗೆ ಬರುತ್ತದೆ. ಆದರೆ ಹೊಸ ವಿಚಾರ ವಾಸ್ತವದಲ್ಲಿ ನನಸಾಗೋದು ಕಷ್ಟ ಅಂತ ಗೊತ್ತಾದ ತಕ್ಷಣ ಮನಸ್ಸು ಮತ್ತೆ ತನ್ನ ಮೂಲ ಉದ್ವಿಗ್ನ ಸ್ಥಿತಿಗೆ ಮರಳುತ್ತದೆ.ಮರಳದಂತೆ ಮಾಡಲು ನಾವು ಬದಲಾಗಬೇಕು. ಬರಾಕ್ ಒಬಾಮಾ ಹೇಳಿದಂತೆ ‘ಪರಿವರ್ತನೆ ಆಗುವುದಕ್ಕೆ ಯಾವುದೇ ಅಥವಾ ಯಾರದೇ ವಿಶೇಷ ಸಮಯಕ್ಕಾಗಿ ಕಾಯಬೇಕಿಲ್ಲ. ಅದು ನಿನ್ನಲ್ಲಿಯೇ ಇದೆ.ಅದನ್ನು ನೀನು ಕಾಣಬೇಕು.’

ಗತಕಾಲದ ಕಹಿ ಅನುಭವಗಳು

ಇನ್ನು ಹೊರ ಪ್ರಪಂಚದ ವಿಚಾರಗಳು, ಕೌಟುಂಬಿಕ, ಆರ್ಥಿಕ, ದೈಹಿಕ ಸಮಸ್ಯೆಗಳು ಇದರ ಜೊತೆ ಬೆರೆತರೆ ಮುಗಿದೇ ಹೋಯಿತು. ಉದ್ವಿಗ್ನತೆಯು ನಮ್ಮನ್ನು ದಾಳವಾಗಿಸಿ ದಹಿಸುತ್ತಿದೆ. ವಿನಾಕಾರಣ ಇದಕ್ಕೆ ಬಲಿಯಾಗುವುದು ಬೇಡವೆಂದು ಎಷ್ಟೋ ಸಲ ನಿರ್ಧರಿಸಿದರೂ ಯಾವುದೇ ಪ್ರಯೋಜನವಿಲ್ಲ. ಮರುಗಳಿಗೆ ಅದರ ತೆಕ್ಕೆಯಲ್ಲಿ ಬಿದ್ದಿರುತ್ತೇವೆ.

ಎಷ್ಟೋ ಸಲ ವರ್ತಮಾನದಲ್ಲಿ ಯಾವುದೇ ಉದ್ವಿಗ್ನತೆ ಬಾಧಿಸದಿದ್ದರೂ ಗತಕಾಲದ ಕಹಿ ಅನುಭವಗಳು ಜೀವ ತಿನ್ನುತ್ತಿರುತ್ತವೆ. ಇವುಗಳಿಂದ ಪಾರಾಗಲು ಉಪಾಯಗಳನ್ನು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಆರೋಗ್ಯ ಹದಗೆಡುವುದು ಖಂಡಿತ. ಅವುಗಳಿಗೆ ಒಂದು ಸ್ಪಷ್ಟವಾದ ರೂಪವನ್ನು ಕೊಟ್ಟು ಶಾಶ್ವತವಾಗಿ ದೂರ ಸರಿಸಿದರೆ ಮನಸ್ಸು ನಿರಾಳ. ಆದರೆ ಅದು ನಾವು ಅಂದುಕೊಂಡಷ್ಟು ಸುಲಭವಲ್ಲ.

ಬೇತಾಳನಂತೆ ಕಾಡುತ್ತಿರುವ ಉದ್ವಿಗ್ನತೆಯ ವಿರುದ್ಧ ಬಂಡೇಳುವ ಧೈರ್ಯ ಮಾಡಲೇಬೇಕು. ಇಲ್ಲದಿದ್ದರೆ ಉಳಿಗಾಲವಿಲ್ಲ. ಉದ್ವಿಗ್ನತೆ ಅದೆಷ್ಟು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದೆಯೆಂದರೆ ಪ್ರೀತಿಯೆಂಬ ಚುಂಬಕ ಸೆಳೆತವನ್ನು ನುಂಗಿ ಹಾಕಿದೆ. ಸಂವೇದನೆಗಳನ್ನು ಸಾಮರ್ಥ್ಯಗಳನ್ನು ಇನ್ನಿಲ್ಲದಂತೆ ತೊಡೆದು ಹಾಕುತ್ತಿದೆ. ಕೆಲವೊಂದಿಷ್ಟು ಕೆಲಸಗಳನ್ನು ಮಾಡಲಾಗದೆ ಬಿಡಲಾಗದೆ ದ್ವಂದ್ವಗಳನ್ನು ಸೃಷ್ಟಿಸುತ್ತದೆ.

ಒಮ್ಮೊಮ್ಮೆಯಂತೂ ಪುಟ್ಟ ಮಗುವಿನಂತೆ ಹಟ ಹಿಡಿದು ಬಿಡುತ್ತದೆ. ತಣ್ಣನೆಯ ನೆಲದಿ ಮಲಗಿ ಕಣ್ತುಂಬ ನಿದ್ದೆ ಮಾಡಬೇಕೆಂದರೂ ಬಿಡುವುದಿಲ್ಲ. ಆದ್ದರಿಂದ ಗತಕಾಲದ ಕಹಿ ಮರೆತು ವರ್ತಮಾನದ ಸಿಹಿ ಅನುಭವಿಸುವುದನ್ನು ಕಲಿಯಬೇಕು.

ತಾಳ್ಮೆಯ ನಿಲುವು

ಈ ತೆರನಾದ ಒಳಮನದ ಬೇಗುದಿಗಳಿಗೆ ಉದ್ವಿಗ್ನತೆಗೆ ನೊಂದು ಬೆಂದು ಹೈರಾಣಾಗುತ್ತೇವೆ. ಇಂಥ ಪರಿಸ್ಥಿತಿಯಲ್ಲಿ ಸಿಕ್ಕು ವಿಲಿ ವಿಲಿ ಒದ್ದಾಡುವ ಬದಲು ತಾಳ್ಮೆಯ ನಿಲುವನ್ನು ರೂಢಿಸಿಕೊಂಡರೆ ವೃಥಾ ನೋವು ಅನುಭವಿಸುವುದನ್ನು ತಪ್ಪಿಸಬಹುದು.ಅಷ್ಟೇ ಅಲ್ಲ ಬೇಸರದ ನಿಟ್ಟುಸಿರಿನಿಂದ ದೂರವಿರಬಹುದು. ತಾಳ್ಮೆ ನಾವು ಅಂದಕೊಂಡಂತೆ ಸುಲಭವಾಗಿ ದಕ್ಕುವಂಥದಲ್ಲ.

ಅದಕ್ಕೆ ಧ್ಯಾನ ಪ್ರಾರ್ಥನೆ ಯೋಗ ಸತ್ಸಂಗ ಒಳ್ಳೆಯ ಪುಸ್ತಕಗಳ ಓದು ಆಧ್ಯಾತ್ಮ ಚಿಂತನೆ ಸದ್ವಿಚಾರಗಳ ಚಿಂತನೆ ಬೇಕಾಗುತ್ತದೆ.ಇಂತಹ ಉದಾತ್ತ ವಿಚಾರಗಳಿಂದ ಇಲ್ಲ ಸಲ್ಲದ ವಿಚಾರಗಳು ಮನದಲ್ಲಿ ಮೂಡುವುದಿಲ್ಲ. ಸಾಹಿತ್ಯ,ಕಲೆ, ಸಂಗೀತ, ನಾಟಕ, ನೃತ್ಯಚಟುವಟಿಕೆಗಳಲ್ಲಿ ಭಾಗವಹಿಸುವುದು ಮನಸ್ಸನ್ನು ರಂಜಿಸುತ್ತವೆ. ಮಹಾಕಾವ್ಯಗಳ ವಾಚನಗಳು ಮನಸ್ಸನ್ನು ತಿಳಿಯಾಗಿಸುತ್ತವೆ.

ಪ್ರಫುಲ್ಲವಾಗಿರಲು ಸಹಕರಿಸುತ್ತವೆ. ನಮಗಿಂತ ಕೆಳಗಿನವರ ಬದುಕಿನೆಡೆ ನೋಡಿದಾಗಲೇ ಗೊತ್ತಾಗೋದು ನಾವು ಎಷ್ಟೊಂದು ಸುಖವಾಗಿದ್ದೇವೆಂದು. ಇಲ್ಲದವುಗಳ ಸುತ್ತ ಗಿರಕಿ ಹೊಡೆಯುವುದನ್ನು ಬಿಟ್ಟು ಇದ್ದುದರ ಕಡೆ ನೋಡಿದರೆ ಉದ್ವಿಗ್ನತೆ ಮರೆಯಾಗುತ್ತದೆ. ಸಂತೋಷ ಬಳಿ ಬಂದು ಮೈ ತಡವುತ್ತದೆ.


ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!