ನೆಪಗಳ ಬಲೆಯಿಂದ ಹೊರ ಬರುವುದು ಹೇಗೆ?

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಒಬ್ಬನು ಬೀದಿ ದೀಪದ ಕೆಳಗಡೆ ಏನೋ ಹುಡುಕುತ್ತಿದ್ದ ಅದನ್ನು ಕಂಡ ಅದೇ ದಾರಿಯಲ್ಲಿ ಹೊರಟಿದ್ದ ಆತನ ಗೆಳೆಯ ‘ಏನು ಹುಡುಕುತ್ತಿರುವೆ? ಎಂದು ಕೇಳಿದ. ಕೀಲಿಕೈ ಹುಡುಕುತ್ತಿದ್ದೇನೆ ಎಂದುತ್ತರಿಸಿದ. ಆತನೂ ಹುಡುಕಹತ್ತಿದ. ಎಷ್ಟು ಹೊತ್ತು ಹುಡುಕಿದರೂ ಕೀಲಿಕೈ ಸಿಗಲೇ ಇಲ್ಲ.

ಆಗ ಆತನ ಗೆಳೆಯ ಬೇಸತ್ತು ಕೇಳಿದ. “ನೀನು ಕೀಲಿ ಕೈ ಕಳೆದುಕೊಂಡಿದ್ದಾದರೂ ಎಲ್ಲಿ?” ನನ್ನ ಕೋಣೆಯೊಳಗಡೆ ಕಳೆದುಕೊಂಡಿದ್ದೇನೆ. ಆದರೆ ಅಲ್ಲಿ ಕತ್ತಲಿದೆ ಅದಕ್ಕೆ ಇಲ್ಲಿ ಹುಡುಕುತ್ತಿದ್ದೇನೆ ಎಂದುತ್ತರಿಸಿದ. ಕಳೆದುಕೊಂಡದ್ದನ್ನು ಕಳೆದುಕೊಂಡ ಜಾಗದಲ್ಲೇ ಹುಡುಕಿದರೆ ಸಿಗುವುದು. ಅದನ್ನು ಬಿಟ್ಟು ಬೇರೆಡೆ ಹುಡುಕಿದರೆ ಸಿಗುವುದಾದರೂ ಹೇಗೆ? ಈ ದೃಷ್ಟಾಂತದಲ್ಲಿರುವಂತೆ ನಮ್ಮ ಸೋಲಿಗೆ ಇಲ್ಲವೇ ತಪ್ಪುಗಳಿಗೆ ನಮ್ಮೊಳಗೆ ಹೊಕ್ಕು ಉತ್ತರ ಹುಡುಕದೇ,ಇತರರನ್ನು ಜವಾಬ್ದಾರಿ ಮಾಡಿದರೆ ನೆಪಗಳನ್ನು ಹೇಳಿದರೆ ದೂರಿದರೆ ಪ್ರಯೋಜನವಿಲ್ಲ. ಅದರ ಹೊಣೆ ನಾವೇ ಹೊರಬೇಕು.

ಯಾವುದೇ ಕೆಲಸದಲ್ಲಿ ಹೆಚ್ಚು ಕಡಿಮೆ ಆಗಿ ಸಮಸ್ಯೆ ಆಯಿತೆಂದರೆ ಅದಕ್ಕೆ ಕಾರಣ ತಿಳಿಯದೆ ಅವರಿವರೆಡೆ ಬೆರಳು ತೋರುವುದು. ಚೆನ್ನಾಗಿ ಮುಗಿಯಿತೆಂದರೆ ಅದಕ್ಕೆ ನನ್ನ ಪ್ರಯತ್ನವೇ ಕಾರಣ ಎಂದು ಉಬ್ಬುವುದು ಸಾಮಾನ್ಯ. ಆದರೆ ನಮ್ಮ ತಪ್ಪುಗಳಿಗೆ ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳದೇ ಹೋದರೆ ಇನ್ನೂ ದೊಡ್ಡ ದೊಡ್ಡ ಸಮಸ್ಯೆಗಳನ್ನು ನಾವೇ ಕೈ ಮಾಡಿ ಕರೆದಂತೆ. ನಾವು ಸೋತದ್ದಕ್ಕೆ, ಹಣವನ್ನು ಗಳಿಸದೆ ಹೋದದ್ದಕ್ಕೆ ಬೇರೆಯವರು ಕಾರಣರೆಂದು ನೆಪ ಹೇಳುತ್ತೇವೆ.

- Advertisement -

ವಾಸ್ತವದಲ್ಲಿ ನಮ್ಮ ತಪ್ಪುಗಳನ್ನು ಮುಚ್ಚಿಡಲು ಬಳಸುವ ನೆಪಗಳ ಬಲೆಯಿಂದ ಹೊರ ಬರುವುದು ಹೇಗೆಂಬುದು ಗೊತ್ತಾಗದೆ ಅದರಲ್ಲೇ ಬಿದ್ದು ಒದ್ದಾಡುತ್ತಿರುತ್ತೇವೆ. ಹಾಗಿದ್ದರೆ ಸುಲಭವಾಗಿ ಬೀಳಿಸಿಕೊಳ್ಳುವ ನೆಪಗಳ ಬಲೆಯಿಂದ ಹೊರ ಬರುವುದು ಹೇಗೆ? ಎಂಬುದನ್ನು ನೋಡೋಣ ಬನ್ನಿ.

ದೃಢ ಸಂಕಲ್ಪ 

ನಾವಂದುಕೊಂಡ ಕೆಲಸ ಮಾಡಲು ಇಲ್ಲವೇ ನಮ್ಮ ನಿರ್ಧಿಷ್ಟ ಗುರಿ ತಲುಪಲು ಸಾಕಷ್ಟು ಹಲವು ದಾರಿಗಳಿವೆ. ಯಾವುದು ನಮ್ಮ ಬಳಿಯಿಲ್ಲ ಅದರ ಕುರಿತು ನೆಪ ಹೇಳದೇ ನಮ್ಮಲ್ಲಿರುವುದರ ಬಗೆಗೆ ಹೆಚ್ಚು ಗಮನ ನೀಡಿದರೆ ಅಂದುಕೊಂಡದ್ದನ್ನು ಸಾಧಿಸಬಹುದು. ಗುರಿ ಸಾಧಿಸಲು ಬೇರೆ ಬಳಿಯಿರುವುದನ್ನು ಗಮನಿಸಿ ಗೊಣಗುವ ಬದಲು ನನ್ನಲ್ಲಿ ಇದು ಇದೆಯಲ್ಲ ಎಂದು ತೃಪ್ತಿಪಟ್ಟುಕೊಳ್ಳಬೇಕು. ಸಾಧನೆಯ ಏಣಿಯೇರಿಸಲು ಸಹಾಯಕ್ಕೆ ಹೆತ್ತವರು ಗುರುಗಳಿದ್ದಾರೆ ಎಂಬುದನ್ನು ಮರೆಯದೇ ನೆನಪಿನಲ್ಲಿಟ್ಟುಕೊಳ್ಳಬೇಕು. ಅವರ ಮಾರ್ಗದರ್ಶನದಲ್ಲಿ ನಡೆಯಬೇಕು.

ನೆಪಗಳ ಬೆನ್ನು ಹತ್ತದೆ ಮತ್ತೊಬ್ಬರೊಂದಿಗೆ ಹೋಲಿಕೆಗೆ ಮುಂದಾಗದೆ ಈ ಹಿಂದೆ ನನ್ನ ಬದುಕು ಹೇಗಿತ್ತು ಅದರ ಬದಲಾವಣೆಗೆ ನಾನೇನು ಮಾಡಿದ್ದೇನೆಂದು ಒಮ್ಮೆ ಸಿಂಹಾವಲೋಕನ ಮಾಡಿಕೊಂಡರೆ ಆಸೆಗಳನ್ನು ಪೂರೈಸುವ ದೃಢ ಸಂಕಲ್ಪ ಶಕ್ತಿಯ ಮಹತ್ವದ ಅರಿವಾಗುತ್ತದೆ. ಆದ್ದರಿಂದ ಇಂದಿನಿಂದಲೇ ದೃಢ ಸಂಕಲ್ಪದ ಕುರಿತು ಗಮನ ನೀಡಿ. ನಿಮಗೆ ಮಾಡಲು ಸಾಧ್ಯವಾದುದನ್ನು ಮಾಡಿ ಆನಂದ ಪಡಿ. ಆಲಸ್ಯತನ ಮಾಡಿ ಪರಿತಪಿಸಬೇಡಿ. ಆಗ ಆತ್ಮವಿಶ್ವಾಸ ತುಂಬಿ ತುಳುಕುತ್ತದೆ. ನೆಪಗಳು ಹೇಳ ಹೆಸರಿಲ್ಲದಂತೆ ಹಾರಿ ಹೋಗುತ್ತವೆ.

ಸಕಾರಾತ್ಮಕ ಮನೋಭಾವ

ದೃಢ ಸಂಕಲ್ಪವೆಂಬುದು ಕಣ್ಣಿಗೆ ಕಾಣದ ಅತ್ಯದ್ಭುತ ಚೈತನ್ಯ. ಅದು ಅಗಾಧವಾದ ಸಕಾರಾತ್ಮಕ ಆಲೋಚನೆಗಳತ್ತ ದೂಡುತ್ತದೆ. ಆಲೋಚಿಸುವ ರೀತಿಯನ್ನು ಬದಲಿಸಿಕೊಳ್ಳುವುದು ಪ್ರಬಲ ಮಾರ್ಗ.

ಸುತ್ತಲೂ ಸಕಾರಾತ್ಮಕ ಮನಸ್ಥಿತಿ ಬೆಳೆಸಿಕೊಂಡರೆ ನೆಪಗಳ ಬಲೆಯಿಂದ ಹೊರಬರಲು ಸಾಧ್ಯವಾಗುವುದು. ಜೀವನವನ್ನು ಬಂದಂತೆ ಸ್ವೀಕರಿಸಬೇಕು. ಇಲ್ಲಿ ಯಾವ ಗಳಿಗೆಯೂ ಯಾವ ಪರಿಸ್ಥಿತಿಯೂ ಪರಿಪೂರ್ಣವಿರುವುದಿಲ್ಲ. ಬದಲಿಸಲಾಗದ ಪರಿಸ್ಥಿತಿಯನ್ನು ಸ್ವೀಕರಿಸಿ. ಬದಲಿಸಲು ಸಾಧ್ಯವಾದುದನ್ನು ಬದಲಿಸಿ. ಮನುಷ್ಯನಲ್ಲಿ ಬದಲಾವಣೆ ಇರಬೇಕು ನಿಜ ಆದರೆ ತನ್ನನ್ನು ತಾನು ಕಳೆದುಕೊಳ್ಳುವಷ್ಟು ಅಲ್ಲ.

ಸುತ್ತಲೂ ಎಷ್ಟೇ ಗದ್ದಲ ಗಲಾಟೆಗಳಿದ್ದರೂ ನಕಾರಾತ್ಮಕ ಸುಳಿಗಳಿದ್ದರೂ ಅದರ ಸುಳಿಗೆ ಬೀಳದೇ ಶಾಂತಚಿತ್ತರಾಗಿ ಸಕಾರಾತ್ಮಕ ಸುಳಿಗಾಳಿಯಲ್ಲಿ ತೇಲಲು ಕಲಿಯಬೇಕು. ಯಶಸ್ವಿ ವ್ಯಕ್ತಿಗಳು ತಾವು ಎಲ್ಲಿಗೆ ಸಾಗುತ್ತಿದ್ದಾರೆ ಮತ್ತು ತಮಗೆ ಏನು ಬೇಕೆನ್ನುವುದನ್ನು ಚೆನ್ನಾಗಿ ತಿಳಿದಿರುತ್ತಾರೆ. ಮನದಲ್ಲಿ ಸ್ಪಷ್ಟವಾದ ಚಿತ್ರವನ್ನು ಹೊಂದಿರುತ್ತಾರೆ. ಹೀಗಾಗಿ ನಕಾರಾತ್ಮಕ ವಲಯ ಅವರನ್ನು ಬಾಧಿಸದು.

ಅವರು ನೆಪಗಳ ಸುಳಿಯಲ್ಲಿ ಸಿಲುಕಿಕೊಳ್ಳಲಾರರು. ವಾಸ್ತವ ಅನುಭವದಲ್ಲಿ ಸಕಾರಾತ್ಮಕತೆಗೆ ಹೆಚ್ಚು ಒತ್ತು ನೀಡುವ ಗುಣ ನೆಪದ ಬಲೆಯಲ್ಲಿ ಬೀಳುವುದನ್ನು ತಡೆಗಟ್ಟಬಲ್ಲದು. ಸಮಸ್ಯೆಗಳ ಉದ್ಭವವಾಗದಿರುವಿಕೆಯೇ ಯಶಸ್ಸಿನ ಮಂತ್ರ ಎಂದರೆ ತಪ್ಪಾಗುವುದು.

ಸಕಾರಾತ್ಮಕ ಹುಮ್ಮಸ್ಸಿದ್ದರೆ ಅದು ಖಂಡಿತ ಸಮಸ್ಯೆಗಳನ್ನು ಸರಳೀಕರಣದತ್ತ ಒಯ್ಯುವುದು.ಅಷ್ಟೇ ಅಲ್ಲ ಅದು ಎಲ್ಲರಿಗೂ ತಿಳಿಯುವಂತೆ ಪ್ರಕಟಗೊಳ್ಳುತ್ತದೆ. ಸಕಾರಾತ್ಮಕತೆ ಬದುಕಿಗೆ ಪ್ರಾಣವಾಯುವಿನಂತೆ ಕೆಲಸ ಮಾಡುತ್ತದೆ.

ಹೊಂದಿಕೊಳ್ಳಿ

‘ಹೊಂದಿಕೊಳ್ಳಲು ಕಷ್ಟವಾಗುವ ವ್ಯಕ್ತಿಯೊಂದಿಗೆ ವ್ಯವಹರಿಸಲು ಒಂದು ಸುಲಭವಾದ ನಿಯಮ. ಅವನು ತನ್ನ ದೊಡ್ಡಸ್ತಿಕೆಯನ್ನು ಸಾಧಿಸಲು ಹೆಣಗುತ್ತಿದ್ದಾನೆಂದು ನೆನಪಿನಲ್ಲಿಡಿ.

ಅವನ ಜೊತೆ ಆ ದೃಷ್ಟಿಯಿಂದ ವ್ಯವಹರಿಸಬೇಕು.’ ಎನ್ನುತ್ತಾನೆ ಆಲ್‍ಫ್ರೆಡ್ ಅಡಲರ್. ‘ಹೊಂದಿಕೊಳ್ಳುವವನೇ ನಿಜವಾದ ಜಾಣ.’ ಎನ್ನುತ್ತದೆ ಆಂಗ್ಲ ಗಾದೆಯೊಂದು. ಬದುಕಿನಲ್ಲಿ ಒಂದು ವಿಚಿತ್ರ ವಿಶೇಷ ಸಂಗತಿಯೆಂದರೆ ಯಾವುದೇ ಆಗಲಿ ಶಾಶ್ವತವಾಗಿ ಒಂದೇ ತೆರನಾಗಿ ಉಳಿಯುವುದಿಲ್ಲ. ಬದಲಾವಣೆ ಅನಿವಾರ್ಯ. ಬದಲಾವಣೆ ನಾಳೆ ಬರಬಹುದು ಇಲ್ಲವೇ ಮುಂದಿನ ತಿಂಗಳು ಇಲ್ಲವೇ ಮುಂದಿನ ವರ್ಷ ಬರಬಹುದು.

ಬದಲಾವಣೆಯನ್ನು ದುಃಖಕ್ಕೆ ಬದಲಿಸಿಕೊಳ್ಳದೇ ಅವಕಾಶವೆಂದು ತಿಳಿದು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಬದಲಾವಣೆಯನ್ನು ಅಡೆತಡೆ ಎಂದು ಭಾವಿಸಿ ಹೆದರಬಾರದು. ಅದಕ್ಕೆ ಹೊಂದಿಕೊಳ್ಳಬೇಕು.

ಬದಲಾವಣೆಯಲ್ಲಿರುವ ಒಳ್ಳೆಯ ಅಂಶಗಳತ್ತ ಗಮನ ಹರಿಸಬೇಕು. ಹೆಚ್ಚು ಪರಿಶ್ರಮ ವಹಿಸುವ ಮೂಲಕ ಕಾರ್ಯನಿರ್ವಹಣೆಯನ್ನು ಸುಧಾರಿಸಿಕೊಳ್ಳಬಹುದು.ಕಾರ್ಯ ನಿರ್ವಹಣೆಯ ಸುಧಾರಣೆ ಸ್ವಪರಿಕಲ್ಪನೆಯ ಮಟ್ಟವನ್ನು ಉತ್ತಮಗೊಳಿಸುತ್ತದೆ. ನೆಪಗಳ ಸಂಖ್ಯೆಯನ್ನು ತಗ್ಗಿಸುತ್ತದೆ. ಬದಲಾವಣೆಗೆ ಹೊಂದಿಕೊಳ್ಳುವ ಮೂಲಕ ಅಂತಸತ್ವ ಬೆಳೆಯುವುದಕ್ಕೆ ಅವಕಾಶ ನೀಡಿದಂತಾಗುತ್ತದೆ. ಅವಕಾಶಗಳು ಸಿಗದಿದ್ದರೆ ಸಾಮಥ್ರ್ಯ ಉಪಯೋಗಕ್ಕೆ ಬರುವುದಿಲ್ಲ ನೆನಪಿರಲಿ.

ಗಮನವಿರಲಿ

‘ಉತ್ಸಾಹದಿಂದ ಕಲಿ ಅದನ್ನು ಪದೇ ಪದೇ ಪ್ರಶ್ನಿಸು. ಅದನ್ನು ಎಚ್ಚರಿಕೆಯಿಂದ ವಿಶ್ಲೇಷಿಸು ಬಳಿಕ ನೀನು ಕಲಿತಿದ್ದನ್ನು ಬುದ್ಧಿವಂತಿಕೆಯಿಂದ ಕಾರ್ಯರೂಪಕ್ಕೆ ಇಳಿಸು.’ ಎಂದು ಬಹು ಮಾರ್ಮಿಕವಾಗಿ ನೆಪ ಹೇಳುವವರನ್ನು ಉದ್ದೇಶಿಸಿ ಹೇಳಿದಂತೆ ಕನ್‍ಫ್ಯೂಷಿಯಸ್ ಹೇಳಿದ್ದಾನೆ. ಕಳೆದು ಹೋದ ನಿನ್ನೆಯನ್ನು,ಆಗಿ ಹೋದದ್ದನ್ನು ಬದಲಿಸಲು ಸಾಧ್ಯವಾಗದು. ಹಾಗಂತ ನಾಳೆಯ ಬಗ್ಗೆ ಅತಿಯಾಗಿ ಯೋಚಿಸುವುದು ನಿರರ್ಥಕ. ನಿನ್ನೆಯ ಬಗ್ಗೆ ದೂರಿದರೆ ಯಾವುದೇ ಪ್ರಯೋಜನವಿಲ್ಲ. ನಿನ್ನೆ ಆದ ಅನುಭವದಿಂದ ಕಲಿಯುವ ಪಾಠಗಳನ್ನು ಮರೆಯಬಾರದು. ‘ಏನೇ ಒಳ್ಳೆಯ ಕೆಲಸ ಮಾಡುವುದಕ್ಕೆ ಅತಿ ಉತ್ತಮ ಸಮಯ ಇಂದು ಈ ಗಳಿಗೆ ಹೊರತು ಮತ್ತಾವುದೂ ಅಲ್ಲ.’ ಮನಸ್ಸಿನಲ್ಲಿ ಓಡುವ ನಕಾರಾತ್ಮಕ ವಿಚಾರಗಳನ್ನು ಗುರುತಿಸಿ. ಅವುಗಳ ಜಾಗದಲ್ಲಿ ಸಕಾರಾತ್ಮಕ ವಿಚಾರಗಳನ್ನು ಹೊಂದಲು ಪ್ರಯತ್ನಿಸಬೇಕು. ಕೈಯಲ್ಲಿರುವ ಗಳಿಗೆ ವ್ಯರ್ಥ ಕಳೆದು ಹೋಗದಂತೆ ನೋಡಿಕೊಳ್ಳುವುದೇ ಜಾಣತನ. ಸಂಕಷ್ಟದ ಪರಿಸ್ಥಿತಿಗಳಲ್ಲೂ ಒಳಿತಿನ ಅಂಶಗಳು ಅಡಗಿಕೊಂಡಿರುತ್ತವೆ. ಅವುಗಳನ್ನು ಹುಡುಕುವ ವ್ಯವಧಾನ ಬೆಳೆಸಿಕೊಳ್ಳಬೇಕು.

ಕೊನೆ ಹನಿ

ಅಕ್ಕ ಪಕ್ಕದಲ್ಲಿ ಹೊಲವಿರುವ ಇಬ್ಬರು ರೈತರು ಬಿತ್ತಿರುವ ಬೀಜ ಒಂದೇ ಮಣ್ಣಿನ ಫಲವತ್ತತೆ ಒಂದೇ ಮಳೆಯ ಪ್ರಮಾಣವೂ ಒಂದೇ ಆದರೆ ಇಳುವರಿ ಒಬ್ಬ ರೈತನಿಗೆ ಹೆಚ್ಚು ಇನ್ನೊಬ್ಬನಿಗೆ ಕಡಿಮೆ. ಹೀಗೇಕೆ? ಬರಿ ಫಲವತ್ತತೆಯ ಮಣ್ಣಿದ್ದರೆ ಉತ್ತಮ ಬೀಜವಿದ್ದರೆ ಒಳ್ಳೆಯ ಬೆಳೆ ಬರಲಾರದು. ಅದಕ್ಕೆ ಸಕಾಲದಲ್ಲಿ ನೀರು ಗೊಬ್ಬರ ಆರೈಕೆ ಬೇಕೇ ಬೇಕು.ಅತ್ಯುತ್ತಮ ಮಟ್ಟದ ಪ್ರಯತ್ನ ಮಾಡಿದ ರೈತನಿಗೆ ಚಿನ್ನದ ಬೆಳೆ ಬರುವುದು. ಒತ್ತಡದ ಜೀವನದಲ್ಲಿ ನೆಪ ಹೇಳುವುದು ಮತ್ತು ದೂರುವುದು ಸಾಮಾನ್ಯ ಎಂದುಕೊಳ್ಳುತ್ತೇವೆ.

ಆದರೆ ನೆಪ ಹೇಳುವುದು ಮತ್ತು ದೂರುವುದು ನಮ್ಮ ಮೆದುಳಿನ ಮೇಲೆ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದುಃಖವನ್ನು ಕಡಿಮೆ ಮಾಡಿಕೊಳ್ಳುವ ಮಾರ್ಗವೆಂದು ತಿಳಿದು ಇವುಗಳನ್ನು ಉಪಯೋಗಿಸಿ ಮತ್ತಷ್ಟು ದುಃಖಕ್ಕೆ ಒಳಗಾಗುತ್ತೇವೆ. ಡೆನಿಸ್ ಪ್ರೇಗರ್ ಹೇಳಿದಂತೆ ‘ಹೆಚ್ಚು ದೂರಿದಷ್ಟು ಹೆಚ್ಚು ದುಃಖಿತರಾಗುತ್ತೇವೆ.’ ಬರಬರುತ್ತ ದೈನಂದಿನ ಜೀವನದಲ್ಲಿ ನೆಮ್ಮದಿಯನ್ನೇ ಕಳೆದುಕೊಂಡುಬಿಡುತ್ತೇವೆ. ಮನಸ್ಸು ಶಾಂತವಾಗಿದ್ದರೆ ಅದು ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತದೆ. ಫ್ರೆಂಚ್ ಕಾದಂಬರಿಕಾರ ನಾಟಕಕಾರ ವಿರ್‍ಜಿಲ್ ಹೇಳಿದ ಮಾತು ಸಾರ್ವಕಾಲಿಕ ಸತ್ಯವಾದ ಮಾತು.

‘ನಾನು ಮಾಡಬಲ್ಲೆ ಎನ್ನುವವನು ಎಲ್ಲವನ್ನೂ ಮಾಡಬಲ್ಲನು.’ ಮಾಡಲಾರೆ ಎನ್ನುವವನು ನೆಪಕ್ಕಂಟಿಕೊಂಡು ನರಳುವನು.ಹಾಗಿದ್ದರೆ ವಿರ್‍ಜಿಲ್ ಹೇಳಿದಂತೆ ನಾನು ಮಾಡಬಲ್ಲೆ ಎನ್ನುವ ಧೋರಣೆಗೆ ಸೇರಿ ನೆಪಗಳ ಬಲೆಯಿಂದ ಹೊರ ಬರುವುದು ಸೂಕ್ತ. ನೆಪಗಳಲ್ಲಿ ಸೋಲಿನ ವಾಸನೆಯಿದೆ ಎಂಬುದನ್ನು ಅರಿತು ನಡೆಯಬೇಕು. ಒಂದು ಗಿಡ ದೃಢವಾಗಿದ್ದರೆ ಅದು ಬಿರುಗಾಳಿಗೆ ಏಕೆ ಹೆದರಬೇಕು? ಹಾಗೆಯೇ ಮಾಡುವ ಕೆಲಸದಲ್ಲಿ ದೃಢತೆಯಿದ್ದರೆ ನೆಪದ ಆಸರೆ ಬೇಕಾಗುವುದೇ ಇಲ್ಲ. ನಿಮ್ಮ ವೈಫಲ್ಯಕ್ಕೆ ಇತರರ ಮೇಲೆ ಗೂಬೆ ಕೂರಿಸದೆ ನಿಮಗೆ ನೀವೇ ಯಶಸ್ಸಿನ ಒಳ್ಳೆಯ ಸಂಗಾತಿಗಳಾದರೆ ವಿಜಯ ಮಾಲೆ ನಿಮ್ಮ ಕೊರಳು ಅಲಂಕರಿಸುವುದು.


ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142

- Advertisement -

1 COMMENT

Comments are closed.

- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!