spot_img
spot_img

ನನಗೆ ಸಮಯವಿಲ್ಲ ತುಂಬಾ ಬಿಜಿಯಾಗಿದ್ದೇನೆ

Must Read

ವಾಟ್ಸಪ್‍ನಲ್ಲಿ ಹತ್ತಾರು ಗುಂಪುಗಳು ಫೇಸ್ ಬುಕ್‍ನಲ್ಲಿ ಸಾವಿರಾರು ಸ್ನೇಹಿತರು, ಸಿನಿಮಾ, ಪಾರ್ಕ್ ಸುತ್ತಾಟಗಳ ನಡುವೆ ಮಾಡುವ ಕೆಲಸಕ್ಕೆ ಸಮಯವೇ ಸಿಗುತ್ತಿಲ್ಲ. ಒಂದು ವೇಳೆ ಮಾಡಲು ಆರಂಭಿಸಿದರೂ ಎಲ್ಲವೂ ಅರ್ಧಂಬರ್ಧ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಜಾಲದಲ್ಲಿ ಸಿಕ್ಕಿ ಹಾಕಿಕೊಂಡ ಬಹುತೇಕ ಯುವ ಜನತೆಯ ಪರದಾಟವಿದು. ಉಜ್ವಲ ಭವಿಷ್ಯ ರೂಪಿಸುವಂಥ ಕೆಲಸದಲ್ಲಿ ತೊಡುಗುವಂತೆ ಹಿರಿಯರು ಸಲಹೆ ನೀಡಿದರೆ ‘ನನಗೆ  ಸಮಯವಿಲ್ಲ ತುಂಬಾ ಬಿಜಿಯಾಗಿದ್ದೇನೆ’ಎಂದು ಒರಟಾಗಿ ನುಡಿಯುವ ಯುವಕರ ಸಂಖ್ಯೆ ಹೆಚ್ಚುತ್ತಿದೆ.

ಯಾವುದಕ್ಕೂ ಸಮಯ ಸಾಲುತ್ತಿಲ್ಲವೆಂದು ಹೇಳಬೇಡಿ ಏಕೆಂದರೆ ಸ್ವಾಮಿ ವಿವೇಕಾನಂದ ಅಲ್ಬರ್ಟ್ ಐನ್‍ಸ್ಟೀನ್, ಮೇಡಮ್ ಕ್ಯೂರಿ , ಸಿ ವಿ ರಾಮನ್, ಸರ್ ಎಮ್ ವಿಶ್ವೇಶ್ವರಯ್ಯನವರಿಗೆ ಸಮಯ ಎಷ್ಟಿತ್ತೋ ನಿಮಗೂ ಅಷ್ಟೇ ಸಮಯ ಇದೆ. ಹೌದಲ್ಲ, ಸಮಯ ಎಲ್ಲರಿಗೂ ಸಮಾನವಾಗಿದೆ. ಹಾಗಾದರೆ ಸಮಯವಿಲ್ಲವೆಂದು ಹೇಳದೇ, ಕಾರ್ಯ ನಿರ್ವಹಿಸಿ ಯಶ ಗಳಿಸುವುದು ಹೇಗೆ ಅಂತಿರೇನು? ಹಾಗಾದರೆ ಮುಂದಕ್ಕೆ ಓದಿ. 

ನನ್ನ ಸಮಯ ಅಮೂಲ್ಯ:

ಅಪ್ರತಿಮ ಸಾಧಕರಿಗೂ ದಿನಕ್ಕೆ 24 ಗಂಟೆಗಳು ಮಾತ್ರ ಇದ್ದವು ಅದ್ಹೇಗೆ ಅವರು ನಮ್ಮಂತೆ ಕೆಲಸದೊಂದಿಗೆ ಗುದ್ದಾಡದೇ, ಲೀಲಾಜಾಲವಾಗಿ  ಅಚ್ಚುಕಟ್ಟುತನದಿಂದ ಸಾಧಿಸಿದರು ಎನ್ನುವ ಪ್ರಶ್ನೆ ತಲೆ ಹೊಕ್ಕಿತೆ? ಅದಕ್ಕೆ ಉತ್ತರ ಬಹಳ ಸರಳವಾಗಿದೆ. ಅವರೆಲ್ಲ ತಮ್ಮ ಸಮಯ ಅಮೂಲ್ಯವೆಂದು ತಿಳಿದಿದ್ದರಷ್ಟೇ ಅಲ್ಲ. ಪಾಲಿಸುವುದನ್ನೂ ರೂಢಿಸಿಕೊಂಡಿದ್ದರು. ನನಗೆ ಸಮಯವಿಲ್ಲ ತುಂಬಾ ಬಿಜಿಯಾಗಿದ್ದೇನೆ ಎನ್ನುವ ವ್ಯಕ್ತಿ ಪಲಾಯನ ಮನೋಭಾವವುಳ್ಳವನು ಎನ್ನದೇ ವಿಧಿಯಿಲ್ಲ ಎನ್ನುತ್ತಾನೆ, ಫೋರ್ಡ್  ಕಾರ್ ಸಂಸ್ಥಾಪಕ ಹೆನ್ರಿ ಫೋರ್ಡ್.  ಬದುಕೊಂದು ಪುನರಾವರ್ತನೆಯ ಕಸರತ್ತು ಎಂದು ತಿಳಿದು ಸಮಯ ಕಳೆದರೆ ಯಾವುದೇ ಪ್ರಯೋಜನವಿಲ್ಲ. ನಿಮ್ಮ ಖಾತೆಯಲ್ಲಿ ಹೊಸ ದಿನದ ಹೆಸರಿನಲ್ಲಿ ಜಮೆ ಆದ 86,400 ಸೆಕೆಂಡ್ ಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದೇ ಜಾಣತನ.ಕೈಯಲ್ಲಿರುವ ಕಾಸನ್ನು ಬ್ಯಾಂಕಿನಲ್ಲಿಟ್ಟು ಮತ್ತೆ ಬೇಕಾದಾಗ ಉಪಯೋಗಿಸಿಕೊಳ್ಳುವಂತೆ ಟೈಂ ಬ್ಯಾಂಕಿನಲ್ಲಿ ಆ ವ್ಯವಸ್ಥೆಯಿಲ್ಲ. ಸಮಯ ಹಾರಿ ಹೋಗುತ್ತದೆ. ನೀವು ಚಾಲಕರಾಗಿರುತ್ತಿರೋ? ಪ್ರಯಾಣಿಕರಾಗಿರುತ್ತಿರೋ?  ಎಂಬ ಗಾದೆ ಮಾತಿನಂತೆ.

ಚಾಲಕರಾದವರು ಸಾಧಕರಾಗುತ್ತಾರೆ ಎಂದು ಒತ್ತಿ ಹೇಳುವ ಅವಶ್ಯಕತೆಯಿಲ್ಲ. ಆಳವಾದ ನೀರಿನಲ್ಲಿ ಮುಳುಗಿದವನಿಗೆ ಮಾತ್ರ ಮುತ್ತು ದೊರೆಯುತ್ತದೆ. ದಂಡೆಯಲ್ಲಿ ಕುಳಿತವನು ಬರಿಗೈಯಲ್ಲಿ ಮರಳಬೇಕಾಗುತ್ತದೆ. ಸಮಯವನ್ನು ದುರುಪಯೋಗ ಮಾಡುತ್ತಿದ್ದರೆ ಅದರ ಬೆಲೆಯನ್ನೂ ನೀವೇ ಕಟ್ಟಬೇಕಾಗುತ್ತದೆ. ಆ ಬೆಲೆ ಕೆಲವು ಬಾರಿ ಅಧಿಕವಾಗಿರಬಹುದು ಜೋಕೆ!

ಪಾರ್ಕಿನ್ಸನ್‍ನ ಸೂತ್ರ:

ಸಮಯವನ್ನು ವ್ಯಯಿಸುವಲ್ಲಿ ಒಂದು ಶಿಸ್ತು ಇಲ್ಲದೇ ಹೋದರೆ ಅದು ಜೀವನದಲ್ಲಿ ನಮಗೆ ನಾವೇ ಮಾಡಿಕೊಳ್ಳುವ ದೊಡ್ಡ ಹಾನಿಯೇ ಸರಿ.ಸಮಯವೇ ಜೀವನ. ಸಮಯ ನಿರ್ವಹಣೆಯೆಂದರೆ ಮಾಡುವ ಕೆಲಸವನ್ನು ಬೇಗ ಬೇಗನೆ ಮುಗಿಸುವುದಲ್ಲ.

ಮಾಡಬೇಕಾದ ಮುಖ್ಯವಾದ ಕೆಲಸವನ್ನು ಮಾಡಬೇಕಾದ ಸಮಯದಲ್ಲಿ ಪೂರ್ತಿ ಮಾಡುವುದು. ಒಂದು ಕೆಲಸ ಮಾಡಲು ಎಷ್ಟು ಸಮಯ ಕೊಟ್ಟರೆ ಅಷ್ಟೇ ಸಮಯ ತೆಗೆದುಕೊಳ್ಳುತ್ತೇವೆ.

ಆ ಸಮಯಕ್ಕಿಂತ ಮುಂಚೆಯೇ ಮಾಡುವುದಿಲ್ಲ. ಇದು ಪಾರ್ಕಿನ್ಸನ್‍ನ ಸೂತ್ರ. ನಿಜ, ಮಾಡುವ ಕೆಲಸಕ್ಕೆ ನಿಗದಿಗೊಳಿಸಿದ ಸಮಯದವರೆಗೆ ಕಾದು ಕೊನೆಗೆ ಕೆಲಸ ಪ್ರಾರಂಭಿಸುವುದು ಬಹುತೇಕ ಜನರ ಚಟ. ಈ ಚಟ ಒತ್ತಡವನ್ನು ತಂದೊಡ್ಡುತ್ತದೆ ಅಲ್ಲದೇ ಕೆಲಸದ ಗುಣಮಟ್ಟವನ್ನೂ ಹಾಳುಗೆಡುವುತ್ತದೆ. ನಿಗದಿತ ಸಮಯದೊಳಗೆ ಕೆಲಸ ಮುಗಿಯುವ ಹಾಗೆ ನೋಡಿಕೊಂಡರೆ ಗೆಲುವು ನಮ್ಮ ಕೈ ಹಿಡಿಯುತ್ತದೆ. 

ಸಮಯ ಯೋಜನೆ:

ದಿನ ನಿತ್ಯ ಮಾಡಲೇಬೇಕಾದ ಅನೇಕ ಕೆಲಸ ಕಾರ್ಯಗಳಿಗೆ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಒಂದು ಕಲೆಯೇ ಸರಿ. ಈ ಕಲೆ ಕರಗತ ಮಾಡಿಕೊಳ್ಳದಿದ್ದರೆ ಬರಬರುತ್ತ ಬದುಕು ಹತಾಶೆಯತ್ತ ಹೆಜ್ಜೆ ಹಾಕಲು ಶುರು ಹಚ್ಚಿಕೊಳ್ಳುತ್ತದೆ. ಹತಾಶಾ ಭಾವದಿಂದ ತಪ್ಪಿಸಿಕೊಳ್ಳಲು ವಿವಿಧ ಬಗೆಗಳಲ್ಲಿ ಪ್ರಯತ್ನಿಸುತ್ತೀರಿ. ಊಹ್ಞೂಂ ಫಲ ನೀಡುವುದಿಲ್ಲ. ಇಲ್ಲಿ ಸಮಯ ಯೋಜನೆ ಮುಖ್ಯವಾಗಿರುತ್ತದೆ. ಎಂಬುದು ತಲೆಗೆ ಹೊಳೆದಾಗ ಹತಾಶೆ ದೂರ ಓಡುತ್ತದೆ. ಯೋಜನೆಗೋಸ್ಕರ ಖರ್ಚು ಮಾಡುವ 1 ಗಂಟೆ ಕಾಲ ಕಾರ್ಯಾನುಷ್ಠಾನದಲ್ಲಿ 10 ಗಂಟೆಗಳನ್ನು ಉಳಿಸುತ್ತದೆ. ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿಕೊಂಡು ತಗಲುವ ಸಮಯವನ್ನು ಯೋಜಿಸಿಕೊಂಡರೆ ಉತ್ತಮ ಫಲಿತಾಂಶ ನೀಡುವುದು. ಹೆಚ್ಚಿನ ಸಂದರ್ಭದಲ್ಲಿ ಕೆಲಸ ಪೂರ್ತಿಗೊಳಿಸಲು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ತಗಲಬಹುದು. ಇತರರು ಇನ್ನಾವುದೋ ಅಮುಖ್ಯ ಕೆಲಸಕ್ಕೆ ನಿಮ್ಮನ್ನು ಆಹ್ವಾನಿಸಬಹುದು. ಆಗ ದೃಢ ಮನಸ್ಸಿನಿಂದ ‘ಇಲ್ಲ’ ಈಗ ನನ್ನಿಂದಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವುದು ಮಹತ್ವದ್ದೆನಿಸುತ್ತದೆ.

ಪೂರ್ವ ಸಿದ್ಧತೆ:

ಸಾಕಷ್ಟು ಪೂರ್ವ ಸಿದ್ಧತೆ ಇಲ್ಲದೇ ಕಾರ್ಯದಲ್ಲಿ ತೊಡಗಿದರೆ ಸಮಯವೆಂಬ ಸಂಪನ್ಮೂಲದ ಅಪವ್ಯಯವೇ ಸರಿ. ಪೂರ್ವ ಸಿದ್ಧತೆಯಿಲ್ಲದೇ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚಿನ ಸಂದರ್ಭಗಳಲ್ಲಿ ವ್ಯತಿರಿಕ್ತ ಫಲಿತಾಂಶಗಳಲ್ಲಿ ಕೊನೆಗೊಳ್ಳುತ್ತದೆ. ನಾಳೆಯ ದಿನಕ್ಕಾಗಿ ಉತ್ತಮ ಸಿದ್ಧತೆ ಯಾವುದೆಂದರೆ ಇಂದಿನ ದಿನವನ್ನು ಅಚ್ಚುಕಟ್ಟಾಗಿ ಕಳೆಯುವುದಾಗಿದೆ ಎನ್ನುತ್ತಾರೆ. ಎಚ್ ಜಾಕ್ಸನ್ ಬ್ರೌನ್. 

ಮುಂದೂಡದಿರಿ:

ಜನ ನನ್ನ ಬಗ್ಗೆ ಏನೆಂದು ಕೊಳ್ಳುತ್ತಿದ್ದಾರೋ? ಎಂಬ ಒಣ ಚಿಂತೆಯಲ್ಲಿ ನೀವು ಮಾಡಲೇಬೇಕಾದ ಕೆಲಸಗಳನ್ನು ಮುಂದೂಡಬೇಡಿ. ಬಹುಶಃ ಅವರು ನಿಮ್ಮ ಬಗ್ಗೆ ವಿಚಾರ ಮಾಡುತ್ತಿಲ್ಲವೇನೋ? ಸಮಯದ ಬಗ್ಗೆ ನಿಮಗಿರುವ ಮನೋವೃತ್ತಿ ನಿಮ್ಮ ನಡವಳಿಕೆ, ನೀವು ಮಾಡುವ ಕೆಲಸಗಳ ಮೇಲೆ ಬಹಳಷ್ಟು ಪ್ರಭಾವ ಬೀರುತ್ತವೆ.ಮೊದಲೇ ಸಿದ್ದ ಮಾಡಿದ  ಮುಖ್ಯವಾದ ಕೆಲಸಗಳು ಎಷ್ಟೇ ಕ್ಲಿಷ್ಟವಾಗಿರಲಿ ಶಕ್ತಿ ಸಾಮರ್ಥ್ಯ ಪ್ರತಿಭೆ ಉಪಯೋಗಿಸಿ ಮಾಡಿ ಬಿಡಬೇಕು. ಮುಂದೂಡಬಾರದು. ಗುರಿಗೆ ಸಹಕಾರಿಯಾದ ಕೆಲಸಗಳನ್ನು ಮಾಡಿ ಮುಗಿಸಿದಾಗ  ನಿಮ್ಮ ಮೇಲೆ ನಿಮಗೆ ಹೆಮ್ಮೆ ಮತ್ತು ಸಂತೃಪ್ತಿ ಭಾವ ಚಿಗುರುತ್ತವೆ.ಈ ಹೆಮ್ಮೆ ನಿಮ್ಮ ಕೆಲಸದ ವೇಗವನ್ನು ಹೆಚ್ಚಿಸುತ್ತದೆ.

ಉನ್ನತ ಸ್ಥಾನಕ್ಕೇರಲು ಸಮಯ ನಿರ್ವಹಣೆಯಂಥ ಮೆಟ್ಟಿಲನ್ನು ಕಡೆಗಣಿಸಿ ಕೊರಗದಿರಿ. 

ಮೂರ್ಖರಾಗದಿರಿ!

ಮನರಂಜನೆ ಅನ್ನೋದು ಸಮಯ ವ್ಯರ್ಥ ಅಲ್ಲ. ವಾಸ್ತವದಲ್ಲಿ ಮನಸ್ಸಿಗೆ ಆಗಾಗ ಚಿಕ್ಕ ವಿರಾಮ ಬೇಕು. ಮನರಂಜನೆ ನಿಮ್ಮ ಮನಸ್ಸು ಮುಂದಿನ ಹಲವು ಗಂಟೆಗಳವರೆಗೆ ಕೆಲಸ ಮಾಡುವಂತೆ ಪುನಶ್ಚೇತನಗೊಳಿಸುತ್ತದೆ. ಬುದ್ಧ ಪುನಃ ಪುನಃ ಕಥೆಯೊಂದನ್ನು ಹೇಳುತ್ತಿದ್ದರು. ಐದು ಜನ ಮೂರ್ಖರು ನದಿಯೊಂದನ್ನು ದಾಟಿದರು.

ನಂತರ ಅವರಿಗೆ ಚಿಂತೆ ಶುರು ಆಯಿತು. ಏಕೆಂದರೆ ನಾವೆ ಅವರಿಗೆ ಬಹಳ ನೆರವಾಗಿತ್ತು. ಮಳೆಗಾಲ ಬಿರುಗಾಳಿ ಬೀಸುತ್ತಿತ್ತು. ನಾವೆಯ ನೆರವಿಲ್ಲದೇ ನದಿಯನ್ನು ದಾಟಲಾಗುತ್ತಿರಲಿಲ್ಲ. ಹೆಚ್ಚೂ-ಕಮ್ಮಿ ಅಸಂಭವವಾಗಿತ್ತು.

ಹೀಗಾಗಿ ಅವರು ತೀರ್ಮಾನಿಸಿದರು. ಈ ನಾವೆ ನಮಗೆ ಇಷ್ಟೊಂದು ಸಹಾಯ ಮಾಡಿದೆ ನಾವು ಇದನ್ನು ಇಲ್ಲಿಯೇ ಬಿಟ್ಟು ಹೋಗುವುದು ಸರಿಯಲ್ಲ. ನಾವು ಇದಕ್ಕೆ ಕೃತಜ್ಞರಾಗಿರಬೇಕು ಎಂದು ಅವರು ಆ ನಾವೆಯನ್ನು ತಲೆಯ ಮೇಲೆ ಹೊತ್ತು ನಡೆದರು. ಜನ ಕೇಳಿದರು ನೀವು ಇದೇನು ಮಾಡುತ್ತಿದ್ದೀರಿ? ನಾವೆ ನಮ್ಮ ಜೀವನ ಉಳಿಸಿದೆ. ಜೀವನವಿಡೀ ಹೊತ್ತು ತಿರುಗಿದರೂ ಕಡಿಮೆಯೇ ಎಂದರು. ಆ ಐವರಂತೆ ಮನರಂಜನೆಯ ಹೆಸರಲ್ಲಿ ಸಮಯ ಹಾಳು ಮಾಡುವ ಟಿವಿ ವಾಟ್ಸಪ್ ಫೇಸ್‍ಬುಕ್‍ಗಳ ಬೆನ್ನು ಬಿದ್ದು ಮೂರ್ಖರಾಗದಿರಿ!.


ಜಯಶ್ರೀ.ಜೆ. ಅಬ್ಬಿಗೇರಿ, ಬೆಳಗಾವಿ                                            9449234142

- Advertisement -

1 COMMENT

Comments are closed.

- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!