ಭಾವುಕರಾದ ಶಾಸಕ ರೇಣುಕಾಚಾರ್ಯ
ಬೆಂಗಳೂರು – ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ ಎಂಬುದಾಗಿ ತಿಳಿಯುತ್ತಿದ್ದಂತೆಯೇ ರಾಜ್ಯ ಬಿಜೆಪಿ ಹಾಗೂ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಶುಕ್ರವಾರದಂದು ಮಾತನಾಡಿದ ಯಡಿಯೂರಪ್ಪ ತಾವು ರಾಜಕಾರಣದಿಂದ ನಿವೃತ್ತಿ ಹೊಂದುವುದಾಗಿ ತಿಳಿಸಿ, ತಮ್ಮ ಜಾಗದಲ್ಲಿ ಮಗ ವಿಜಯೇಂದ್ರ ಅವರಿಗೆ ಶಿಕಾರಿಪುರದ ಜನತೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಭಾವುಕರಾದ ರೇಣುಕಾಚಾರ್ಯ ಅವರು ಯಡಿಯೂರಪ್ಪನವರು ಇನ್ನು ಒಂದಾದರೂ ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದರಲ್ಲದೆ ಅದನ್ನು ಹೇಳಬೇಕಾದರೆ ಕಣ್ಣೀರಾದರು.
ಇತ್ತ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಯಡಿಯೂರಪ್ಪ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಯಾವ ಪಕ್ಷದಲ್ಲಿ ಕುಟುಂಬ ರಾಜಕೀಯ ಇಲ್ಲ ಹೇಳಿ?
ಯಡಿಯೂರಪ್ಪ ಅವರು ತಮ್ಮ ಮಗನಿಗಾಗಿ ಸ್ಥಾನ ಬಿಡುವುದಾಗಿ ಹೇಳುತ್ತಲೇ ಕಾಂಗ್ರೆಸ್ ಪಕ್ಷದವರು ಕುಟುಂಬ ರಾಜಕಾರಣ ಎಂಬ ಕ್ಯಾತೆ ತೆಗೆದಿದ್ದು ಈಶ್ವರಪ್ಪ ಅವರನ್ನು ಕೆರಳಿಸಿತು.
ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ ? ಕಾಂಗ್ರೆಸ್ ನಲ್ಲಿ ನೆಹರೂ ಕಾಲದಿಂದ ಹಿಡಿದು ಪ್ರಿಯಾಂಕಾ ಗಾಂಧಿ ವರೆಗೆ ಅವರದೇ ಕುಟುಂಬ ಇದೆ, ಜೆಡಿಎಸ್ ನಲ್ಲಿ ದೇವೇಗೌಡರಿಂದ ಹಿಡಿದು ಪ್ರಜ್ವಲ್ ರೇವಣ್ಣ ತನಕ ಒಂದೇ ಕುಟುಂಬದವರಿದ್ದಾರೆ ಇದು ಸಹಜವಾದುದು ಎಂದು ಈಶ್ವರಪ್ಪ ಹೇಳಿದರು.