ಅದ್ವೈತ ತತ್ವವನ್ನು ಪ್ರತಿಪಾದನೆ ಮಾಡುವುದಕ್ಕೆ ಜೀವ ಇದ್ದಾಗ ಬಹಳ ಕಷ್ಟ. ಇಲ್ಲಿ ನಾನೆಂಬುದಿಲ್ಲ ಎನ್ನುವಾಗಲೆ ನಾನು ಕಾಣುವಾಗ ಒಪ್ಪಿಕೊಳ್ಳುವವರಲ್ಲಿ ನಾನಿರಬಾರದು. ಎಲ್ಲರಲ್ಲಿಯೂ ಅಡಗಿರುವ ನಾನು ಇದ್ದಾಗ ಪರಮಾತ್ಮ ಕಾಣೋದಿಲ್ಲ.
ನಾನು ಹೋದ ಮೇಲೆ ನಾನೇ ಪರಮಾತ್ಮನಾಗಿ ಕಾಣುವ ಮಾನವನ ಜ್ಞಾನವನ್ನು ಪರಮಾತ್ಮನ ಜ್ಞಾನ ಎಂದರೆ ಜಗತ್ತು ಒಪ್ಪದು. ಹೀಗೇ ಕಣ್ಣಿಗೆ ಕಾಣುವ ನಾನು ಬೇರೆ ಕಾಣದ ನಾನು ಬೇರೆಯಾಗಿ ದ್ವೈತ ಬೆಳೆಯಿತು.
ಶ್ರೀ ಶಂಕರಾಚಾರ್ಯರು ಬೇರೆ ಶಂಕರನೆ ಬೇರೆ, ಶ್ರೀ ಕೃಷ್ಣ ಬೇರೆ ಶ್ರೀ ರಾಮ ಬೇರೆ, ಬ್ರಹ್ಮ ಬೇರೆ ಬ್ರಹ್ಮಜ್ಞಾನಿ ಬೇರೆ… ಇವೆಲ್ಲವೂ ಒಂದೇ ಶಕ್ತಿಯ ವಿವಿಧ ರೂಪಗಳು. ಹಾಗೆ ನಾವೀಗ ಭೂಮಿ ಮೇಲಿರುವ ಭೂ ತಾಯಿಯ ಮಕ್ಕಳು ಎನ್ನುವುದು ಅದ್ವೈತ ವೆ. ಆದರೂ ನಮ್ಮಲ್ಲಿ ಭೂಮಿಯ ಸತ್ವ,ಸತ್ಯ ಜ್ಞಾನವಿಲ್ಲದಿದ್ದರೆ ಭೂಮಿ ಬೇರೆ ನಾನೇ ಬೇರೆ ಎಂದರೆ ಸತ್ಯವಾಗುವುದೆ?
ಹಾಗೆ ಭಾರತ ದೇಶದೊಳಗೆ ಇರುವ ಪ್ರಜೆಗಳೆಲ್ಲರೂ ಭಾರತೀಯರೆ, ಆದರೆ ನಮ್ಮಲ್ಲಿ ಭಾರತೀಯತೆ ಇಲ್ಲವಾದರೆ ದೇಶ ಬೇರೆ ದೇಹ ಬೇರೆ. ಇಲ್ಲಿ ನಾವು ಅದ್ವೈತ ದೊಳಗೆ ದ್ವೈತ ಅಡಗಿರುವುದನ್ನು ಗಮನಿಸಿದರೆ ಇಲ್ಲಿ ನಾನೆಂಬುದಿಲ್ಲವಾದರೂ ನನ್ನಿಂದ ಎಲ್ಲಾ ನಡೆದಿದೆ. ನನ್ನ ಧರ್ಮ ಕರ್ಮಕ್ಕೆ ನಾನೇ ಕಾರಣ.
ಪರಮಾತ್ಮನೇ ಎಲ್ಲವನ್ನೂ ನಡೆಸಿರುವುದಾಗಿದ್ದರೆ ನನ್ನ ಪ್ರಯತ್ನದಿಂದ ಏನೂ ಆಗೋದಿಲ್ಲ. ಆಗಿಲ್ಲವೆನ್ನುವುದು ಸತ್ಯವಾಗಿರುತ್ತಿತ್ತು. ಮಾನವ ಪ್ರಯತ್ನ ಭೂಮಿಯನ್ನು ನಡೆಸುತ್ತಿದೆ.ಪ್ರಯತ್ನದಲ್ಲಿ ಅಜ್ಞಾನದ ಅಹಂಕಾರಸ್ವಾರ್ಥ ಬೆಳೆದಾಗ ಭೂಮಿಯಲ್ಲಿ ಅಧರ್ಮ ಹೆಚ್ಚಾಗುತ್ತದೆ. ಇದು ನನಗೇ ತಿರುಗಿ ಬರುವುದರಿಂದ ನಾನೇ ಸರಿಯಾಗಬೇಕು.
ಹೀಗೇ ನಮ್ಮ ಅನುಭವವೇ ನಮ್ಮ ಗುರುವಾಗಿ ಅರಿವೇ ಗುರುವಾಗುತ್ತದೆ. ಅನುಭವಕ್ಕೆ ಬಂದ ಸತ್ಯವನ್ನು ಸಮಾನ ಮನಸ್ಕರಿಗೆ ತಿಳಿಸಬಹುದು. ಸಂನ್ಯಾಸಿಗಳ ಅನುಭವಕ್ಕೆ ಸಂನ್ಯಾಸಿಗಳೇ ಸಾಕ್ಷಿ. ಸಂಸಾರಿಗಳ ಅನುಭವಕ್ಕೆ ಸಂಸಾರಿಗಳೆ ಸಾಕ್ಷಿ. ಹೀಗೇ ತತ್ವಜ್ಞಾನವನ್ನು ತತ್ವಜ್ಞಾನದಿಂದಲೇ ಅರ್ಥ ಮಾಡಿಕೊಂಡರೆ ಅದ್ವೈತ. ತತ್ವಜ್ಞಾನವನ್ನು ತಂತ್ರಜ್ಞಾನದಿಂದ ಬಳಸಿದರೆ ದ್ವೈತ.
ಭೂಮಿ ಒಂದೇ, ಯುಗಯುಗದಿಂದಲೂ ನಡೆದುಬಂದ ಇದರ ಮೇಲಿರುವ ಮಹಾತ್ಮರುಗಳು, ಮಹಾಶಕ್ತಿ ದೇವತೆಗಳೆಲ್ಲರೂ ಒಂದೆ ಶಕ್ತಿಯೊಳಗಿದ್ದರೂ ಬೇರೆ ಬೇರೆ. ಒಟ್ಟಿನಲ್ಲಿ ಭೂಮಿಯಲ್ಲಿ ಧರ್ಮ ಉಳಿಸಲು ಒಗ್ಗಟ್ಟು, ಏಕತೆ, ಐಕ್ಯತೆಯನ್ನು ಹೆಚ್ಚಿಸಿಕೊಳ್ಳಲು ತತ್ವ ಒಂದಾಗಿರಬೇಕು.
ಎಲ್ಲಾ ತತ್ವಗಳೂ ಮನುಕುಲದ ಒಗ್ಗಟ್ಟನ್ನು ಎತ್ತಿ ಹಿಡಿದು ಪರಮಾತ್ಮನ ಸಾಕ್ಷಾತ್ಕಾರ ಆತ್ಮಜ್ಞಾನಕ್ಕೆ ದಾರಿದೀಪವಾಗಿದೆ. ಕಾಲ ಬದಲಾದಂತೆ ಮಾನವನ ಅಜ್ಞಾನವೂ ಹೆಚ್ಚಾಗುತ್ತಾ ಸತ್ಯ ಅಸತ್ಯ ಅರ್ಧ ಸತ್ಯದಿಂದ ಮಧ್ಯೆನಿಂತು ನಾನೇ ಸರಿ ಎಂದಾಗ ಇದನ್ನು ವಾದ ವಿವಾದದಿಂದ ಮತ್ತಷ್ಟು ಗೊಂದಲಕ್ಕೆ ತಳ್ಳುವ ಬದಲಾಗಿ ಇದ್ದಲ್ಲಿಯೇ ನಾನ್ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಆಧ್ಯಾತ್ಮ ಸಾಧನೆಗೆ ನಾನು ಹೋಗಬೇಕು.
ಇದು ಸ್ವತಂತ್ರವಾಗಿ, ನಿಸ್ವಾರ್ಥ ನಿರಹಂಕಾರದ ಸರ್ವಸಂಗ ಪರಿತ್ಯಾಗಿಗಳಿಗೇ ಸಂನ್ಯಾಸಿಗಳಿಗೆ ಅನುಭವಕ್ಕೆ ಬಂದರೂ ತಿಳಿಸಲಾಗಿಲ್ಲ. ಜನ್ಮಜನ್ಮದಲ್ಲಿ ಬದಲಾಗುವ ಹೆಸರು ಹಿಡಿದುಕೊಂಡು ನಾನು ಎನ್ನಬಹುದು.
ಆದರೆ ಒಳಗಿರುವ ಶಕ್ತಿ ಒಂದೇ. ಅದೇ ಆತ್ಮ.ಒಳಗೆ ಹೊರಗೆ ಆವರಿಸಿರುವಾಗ ಹೊರಗೆ ಹುಡುಕುವುದು ಕಷ್ಟ.ಒಳಗೆ ಸಾಧ್ಯವಿದೆ. ಸತ್ಯದ ಹುಡುಕಾಟ ಆಂತರಿಕವಾಗಿರಲಿ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು