spot_img
spot_img

ಹೊಲಗಳಲ್ಲಿ ಶಾಲೆಗಳು ಬಂದರೆ ರೈತ ಎಲ್ಲಿ ಹೋಗಬೇಕು ?

Must Read

spot_img

ರೈತ ಈ ನಾಡಿನ ಬೆನ್ನೆಲುಬು ಎಂದೆಲ್ಲ ಬುರುಡೆ ಬಿಡುವ ರಾಜಕೀಯ ನಾಯಕರು, ಸರ್ಕಾರಗಳು ರೈತನ ಹೊಲ ಇದ್ದ ಕಡೆಯೆಲ್ಲ ಬೇಕಾಬಿಟ್ಟಿಯಾಗಿ ಶಾಲೆ ತೆರೆಯಲು ಪರವಾನಿಗೆ ನೀಡಿ ರೈತನ ಬೆನ್ನೆಲುಬನ್ನೇ ಮುರಿಯಲು ಹೊರಟಿದ್ದಾರೆ. ಪ್ರಸ್ತುತ ಶಾಲೆ ತೆರೆಯುವುದನ್ನೇ ದಂಧೆಯಾಗಿಸಿಕೊಂಡಿರುವ ಕೆಲವರು ಯಾವುದೆ ಸುರಕ್ಷತಾ ಕ್ರಮಗಳಿಲ್ಲದೆ ಹೊಲಗಳಲ್ಲಿ  ಶಾಲೆ ತೆರೆದು ರೈತನ ಜೀವನಕ್ಕೆ ಕಂಟಕವಾಗಿ ಪರಿಣಮಿಸುತ್ತಿದ್ದಾರೆ.

ಹೌದು, ಈಗಿನ ದಿನಗಳಲ್ಲಿ ರೈತನು ಬೆಳೆದ ಬೆಳೆ ನೈಸರ್ಗಿಕ ಕಾರಣಗಳಿಂದಾಗಿ ಕೈಗೆ ಸಿಗದೇ ರೈತ ಬೇರೆ ಬೇರೆ ಆದಾಯ ಮೂಲಗಳತ್ತ ಹೋಗುವುದು ಸ್ವಾಭಾವಿಕವಾಗಿದೆ. ಬೇರೆ ಆದಾಯ ಮೂಲಗಳೆಂದರೆ, ಹೊಲದಲ್ಲಿ ಕೋಳಿ ಫಾರಂ ಮಾಡುವುದು, ಆಡು ಸಾಕಣೆ, ಪಶು ಸಾಕಣೆ, ಸಾವಯವ ಎಣ್ಣೆ ಮಿಲ್ ಸ್ಥಾಪನೆಯಂಥ ಕೆಲಸ ಮಾಡುತ್ತಿದ್ದರೆ ಹೊಲಗಳಲ್ಲಿ ಬಂದು ಕುಳಿತ ಶಾಲೆಗಳ ವಿರೋಧ ಎದುರಿಸಬೇಕಾಗುತ್ತದೆ. ರೈತನ ಈ ಉದ್ಯೋಗಗಳಿಂದಾಗಿ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ ಶಾಲೆಗಳನ್ನು ಊರೊಳಗೆ ಸ್ಥಾಪನೆ ಮಾಡಬೇಕು ತಾನೆ ? ಈ ಬಗ್ಗೆ ಬಂಡವಾಳ ಶಾಹಿಗಳಿಗೆ ಹೇಳುವವರು ಯಾರು.

ಅಷ್ಟಕ್ಕೂ ಹೊಲಗಳಲ್ಲಿ ಶಾಲೆ ಸ್ಥಾಪಿಸಿದರೆ ಮಕ್ಕಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸುತ್ತಮುತ್ತ ಬೆಳೆ ಇರುತ್ತದೆ, ಸಮೀಪವೇ ಕೆನಾಲ್ ಇರುತ್ತದೆ, ಇಕ್ಕಟ್ಟಾದ ರಸ್ತೆ ಇರುತ್ತದೆ ಇಂಥದರಲ್ಲಿ ಶಾಲಾ ವಾಹನ ಚಲಾಯಿಸುವುದು ಸರ್ಕಸ್ ಮಾಡಿದಂತೆ. ಒಂದು ಶಾಲೆಗೆ ಪರವಾನಿಗೆ ನೀಡುವಾಗ ಈ ಎಲ್ಲ ವಿಷಯಗಳನ್ನು ಶಿಕ್ಷಣ ಇಲಾಖೆ ಗಮನಿಸಬೇಕು. ಆದರೆ ಶಿಕ್ಷಣ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಬಂಡವಾಳಶಾಹಿಗಳ ಮರ್ಜಿಗೆ ಒಳಪಟ್ಟು ಬೇಕಾಬಿಟ್ಟಿಯಾಗಿ ಅನಧಿಕೃತವಾಗಿ ಶಾಲೆಗಳಿಗೆ ಪರವಾನಿಗೆ ನೀಡಿದರೆ ನಂತರ ಸಂಭವಿಸುವ ಮಕ್ಕಳ ಪ್ರಾಣ ಹಾನಿಗೆ ಇಲಾಖೆಯ ಅಧಿಕಾರಿಗಳು ಹೊಣೆಗಾರರಾಗುತ್ತಾರೆಯೇ ?

ರೈತನ ಉದ್ಧಾರಕ್ಕಾಗಿ ಸರ್ಕಾರಗಳು ಪಂಚೆ ಕಟ್ಟಿ ನಿಲ್ಲುತ್ತವೆ, ನಕಲಿ ಹೋರಾಟಗಾರರು ಉದ್ಭವಿಸುತ್ತಾರೆ, ರೈತ ಸಂಘ ಕಟ್ಟಿಕೊಂಡು ಉದ್ದುದ್ದ ಭಾಷಣ ಮಾಡುತ್ತಾರೆ ಆದರೆ ರೈತನ ನಿಜವಾದ ಸಮಸ್ಯೆಗಳ ಬಗ್ಗೆ ವಿಚಾರ ಮಾಡುವವರಿಲ್ಲ. ಮೊಸಳೆ ಕಣ್ಣೀರು ಮಾತ್ರ ತುಂಬಾ ಸುರಿಸುತ್ತಾರೆ. ಬೆಳೆಗೆ ಬೆಂಬಲ ಬೆಲೆ ಸಿಗದೇ ಇರುವುದು, ನೈಸರ್ಗಿಕ ವಿಕೋಪಗಳಿಗೆ ಬೆಳೆ ಹಾನಿ ಅನುಭವಿಸುವುದು.

ಇವಷ್ಟೇ ರೈತನ ಸಮಸ್ಯೆಗಳಲ್ಲ. ಹೊಲಗಳಿದ್ದ ಕಡೆ ಜನವಸತಿ ಹೆಚ್ಚುವುದು, ಶಾಲೆಗಳ ನೆಪದಲ್ಲಿ ರೈತನ ಜಮೀನು ಅತಿಕ್ರಮಿಸುವುದು, ಮಕ್ಕಳ ಆರೋಗ್ಯದ ನೆಪದಲ್ಲಿ ರೈತನ ಸಹ ಉದ್ಯೋಗಗಳಿಗೆ ( ಕೋಳಿ ಫಾರ್ಮ, ಆಡು ಸಾಕಾಣಿಕೆ, ದನ ಸಾಕಾಣಿಕೆ ಮುಂತಾದವು )  ತಡೆ ಒಡ್ಡುವುದು ಇವೇ ಮೊದಲಾದ ಸಮಸ್ಯೆಗಳು ರೈತನ ಬೆನ್ನೆಲುಬು ಮುರಿಯುತ್ತಿವೆ. ರೈತ ಹೊಲಕ್ಕೆ ಸಗಣಿ ಗೊಬ್ಬರ ಹಾಕುತ್ತಾನೆ, ಕೋಳಿ ಗೊಬ್ಬರ, ಆಡಿನ ಹಿಕ್ಕೆಯ ಗೊಬ್ಬರ ಹಾಕಬೇಕಾಗುತ್ತದೆ ಹಾಕಿದಾಗ ಸಹಜವಾಗಿ ಭೂಮಿಯಲ್ಲಿ ಡೊಣ್ಣೆ ಹುಳುಗಳು, ವಾತಾವರಣದಲ್ಲಿ ಇತರೆ ಕೀಡೆಗಳು, ನೊಣಗಳು ಆಗುತ್ತವೆ. ಮೊದಲೇ ಬೆಳೆಗೆ ಸಾಕಷ್ಟು ಖರ್ಚು ಮಾಡಿ ಹೈರಾಣಾಗಿರುವ ರೈತ ಈ ಕೀಟಗಳ ನಿರ್ವಹಣೆಗೆ ಮತ್ತಷ್ಟು ಖರ್ಚು ಮಾಡಬೇಕಾಗುತ್ತದೆ. ಇಷ್ಟೆಲ್ಲದರ ಜೊತೆಗೆ ಕೃಷಿ ಉದ್ಯಮಗಳಿಗಾಗಿ ರೈತ ಅಪಾರ ಪ್ರಮಾಣದಲ್ಲಿ ಬಂಡವಾಳ ಹಾಕಿರುತ್ತಾನೆ. ಅದೂ ಕೂಡ ಹಾನಿಯಾದರೆ ರೈತನನ್ನು ಕಾಪಾಡುವವರಾರು?

ಸರ್ಕಾರ, ತಾಲೂಕಾಡಳಿತ, ಗ್ರಾಮ ಪಂಚಾಯಿತಿಗಳು ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಈ ಬಗ್ಗೆ ವಿಚಾರ ಮಾಡಬೇಕು. ರೈತನನ್ನು ಮೊದಲು ಬಂಡವಾಳ ತೊಡಗಿಸಲು ಪ್ರೇರೇಪಿಸಿ ಆಮೇಲೆ ದುರುದ್ದೇಶಪೂರ್ವಕವಾಗಿ ಉದ್ಯಮ ಬಂದ್ ಮಾಡಿಸಲು ಹೊರಡುವ ಕೆಲ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕ್ರಮ ಜರುಗಿಸಿ ರೈತನಿಗೆ ನ್ಯಾಯ ಕೊಡಿಸುವ ಕೆಲಸವಾಗಬೇಕು.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!