ಬೀದರ್: ಕೊರೋನಾ ಮೂರನೇ ಅಲೆಯ ಭೀತಿ ಬೆನ್ನಲ್ಲೇ ಗಡಿ ಜಿಲ್ಲೆ ಬೀದರ್ ನ ಮಕ್ಕಳಿಗೆ ಉಸಿರಾಟದ ಸಮಸ್ಯೆ, ಜ್ವರ, ಶೀತ ಹಾಗೂ ಕೆಮ್ಮು ಸೇರಿದಂತೆ ಹಲವು ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಆಂತಕಕ್ಕೆ ಕಾರಣವಾಗಿದೆ.
ಜಿಲ್ಲೆಯಾದ್ಯಂತ 12 ವರ್ಷದ ಒಳಗಿನ ಹೆಚ್ಚಿನ ಮಕ್ಕಳು ಸದ್ಯ ಬ್ರೀಮ್ಸ್ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.ಬ್ರೀಮ್ಸ್ ನಲ್ಲಿ ಮಕ್ಕಳಿಗಾಗಿ ತಯಾರಿ ಮಾಡಿಕೊಂಡಿರುವ 70 ಬೆಡ್ ಪೈಕಿ 35 ರಿಂದ 40 ಬೆಡ್ ಗಳು ಭರ್ತಿಯಾಗಿದ್ದು ಮುಂದಿನ ಕೆಲವು ದಿನಗಳಲ್ಲಿ ಎಲ್ಲಾ ಬೆಡ್ ಗಳು ಭರ್ತಿಯಾಗುವ ಸೂಚನೆಗಳು ಕಂಡುಬರುತ್ತಿವೆ.
ಹೀಗಾಗೀ ಕೊರೋನಾ ಮೂರನೇಯ ಅಲೆಯ ಎಫೆಕ್ಟ್ ಬೀದರ್ ನಲ್ಲಿ ಮಕ್ಕಳ ಮೇಲೆ ಕಾಣಿಸಿಕೊಂಡು ಬಿಟ್ಟಿತಾ ಎಂಬ ಭಯ ಮಕ್ಕಳ ಪೋಷಕರಲ್ಲಿ ಶುರುವಾಗಿದೆ.
ನಮ್ಮ ಮಕ್ಕಳಿಗೆ ಹೆಚ್ಚಿನ ಉಸಿರಾಟ,ಜ್ವರ, ಶೀತ,ಕಮ್ಮು ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು ಖಾಸಗಿ ಆಸ್ಪತ್ರೆಯವರು ಯಾರೂ ಚಿಕಿತ್ಸೆ ನೀಡದ ಕಾರಣ ನಾವು ಬ್ರೀಮ್ಸ್ ಆಸ್ಪತ್ರೆ ಬಂದು ದಾಖಲು ಮಾಡಿದ್ದೇವೆ ಎನ್ನುತ್ತಾರೆ ಮಕ್ಕಳ ಪೋಷಕರು.
ಜನಾಶೀರ್ವಾದ ಸೈಡ್ ಎಫೆಕ್ಟ್ ಆಯಿತಾ ?
ಇಲ್ಲಿಯ ತನಕ ಶಾಂತವಾಗಿದ್ದ ಬೀದರನಲ್ಲಿ ಹೀಗೆ ಒಮ್ಮೆಲೆ ಮಕ್ಕಳಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು ಇತ್ತೀಚೆಗೆ ನಡೆದ ಜನಾಶೀರ್ವಾದ ಸಮಾರಂಭಗಳ ಪರಿಣಾಮವೇ ಎಂಬ ಪ್ರಶ್ನೆ ಇದೀಗ ಮೂಡುತ್ತಿದೆ.ಬೀದರ್ ನಲ್ಲಿ ಸತತವಾಗಿ ನಾಲ್ಕು ದೊಡ್ಡ ಮಟ್ಟದಲ್ಲಿ ಜನಾಶೀರ್ವಾದ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರು ಸೇರಿಕೊಂಡು ಭರ್ಜರಿ ಕಾರ್ಯಕ್ರಮ ನಡೆಸಿದ್ದರು.
ರಾಜ್ಯದ ಮುಖ್ಯ ಮಂತ್ರಿ ಹಾರ, ತುರಾಯಿ, ರಾಜಕಾರಣಿಗಳ ಸಭೆ ನಡೆಸಬಾರದು ಎಂದು ಆದೇಶ ಇದ್ದರೂ ಕೇಂದ್ರ ಸಚಿವರು ಮುಖ್ಯ ಮಂತ್ರಿ ಆದೇಶ ದಿಕ್ಕರಿಸಿ ಜನಾಶೀರ್ವಾದ ಕಾರ್ಯಕ್ರಮ ಮಾಡಿಕೊಂಡ ಪರಿಣಾಮ ಇವತ್ತು ಬೀದರ್ ನಲ್ಲಿ ಅನೇಕ ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದೆ ಎಂದು ಮಾತನಾಡಿಕೊಳ್ಳುವಂತಾಗಿದೆ.
ಜನ ಸಾಮಾನ್ಯರು ಒಂದೆಡೆ ಸೇರಿದರೆ ಕ್ರಮ ಕೈಗೊಳ್ಳುವ ಆಡಳಿತ ಈ ಜನ ಪ್ರತಿನಿಧಿಗಳಿಗೆ ಯಾವುದೇ ನಿರ್ಬಂಧ ವಿಧಿಸಲಿಲ್ಲ.
ರಾಜಾರೋಷವಾಗಿ ಜನಾಶೀರ್ವಾದ ಯಾತ್ರೆ ಹಮ್ಮಿಕೊಂಡು ಕೋವಿಡ್ ನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಅದರ ಪರಿಣಾಮವೇ ಇಂದು ಚಿಕ್ಕ ಮಕ್ಕಳು ಅನುಭವಿಸುವಂತಾಗಿದೆಯೇನೊ ಎನ್ನುವಂತಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ