spot_img
spot_img

ಬಸವಣ್ಣನ ನಾಡಿನಲ್ಲಿ ಅಸ್ಪೃಶ್ಯತೆಯ ಘಟನೆ

Must Read

ಅಂಗನವಾಡಿಯಲ್ಲಿ ದಲಿತ ಸಹಾಯಕಿಗೆ ಸವರ್ಣೀಯರ ಅಸಹಕಾರ.

ಬೀದರ: ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಅಸ್ಪೃಶ್ಯತೆಯ ಘಟನೆಯೊಂದು ನಡೆದಿದ್ದು ತಾಲೂಕಿನ ಹತ್ಯಾಳ ಗ್ರಾಮದ ಅಂಗನವಾಡಿಯಲ್ಲಿ ಸಹಾಯಕಿ ಹುದ್ದೆಯಲ್ಲಿ ದಲಿತ ಮಹಿಳೆ ಇದ್ದಾಳೆ ಎಂಬ ಕಾರಣಕ್ಕೆ ಸವರ್ಣೀಯರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡವೊಂದು ಶನಿವಾರ ಹತ್ಯಾಳ ಗ್ರಾಮಕ್ಕೆ ಭೇಟಿ ನೀಡಿ ಅವಲೋಕನ ನಡೆಸಿದರು.

ಹತ್ಯಾಳ ಗ್ರಾಮದ ಸಾಮಾನ್ಯ ಜನರು ವಾಸಿಸುವ ಓಣಿಯಲ್ಲಿಯ ಅಂಗನವಾಡಿ ಕೇಂದ್ರದಲ್ಲಿ ದಲಿತ ಮಹಿಳೆಯೊಬ್ಬಳು ಸಹಾಯಕಿಯಾಗಿ ಕರ್ತವ್ಯದಲ್ಲಿ ಇದ್ದಾರೆ ಎನ್ನುವ ಕಾರಣಕ್ಕೆ ಕೆಲಸಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಆರೋಪ ಕೇಳಿಬರುತ್ತದೆ. ಗ್ರಾಮಸ್ಥರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸುತ್ತಿಲ್ಲ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಈ ವಿಷಯ ತಿಳಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದರೂ ಸಭೆ ವಿಫಲವಾಗಿದೆ.

ತಹಸೀಲ್ದಾರ ಸಾವಿತ್ರಿ ಸಲಗರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರವೀಂದ್ರ ರತ್ನಾಕರ್, ಸಮಾಜ ಕಲ್ಯಾಣ ಇಲಾಖೆ ಉಪ ನಿದೇರ್ಶಕಿ ವಿಜಯಲಕ್ಷೀ, ತಾಪಂ ಇಒ ಕಿರಣ ಪಾಟೀಲ್, ಸಿಡಿಪಿಒ ಶ್ರೀಕಾಂತ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇರ್ಶಕ ಗಿರೀಶ ರಂಜೋಳಕರ್, ಬಿಇಒ ಸಿ.ಜಿ ಹಳ್ಳದ, ಗ್ರೇಡ್-2 ತಹಶೀಲ್ದಾರ ಪಲ್ಲವಿ ಬೆಳಕೇರೆ, ಸಿಪಿಐ ರಘುವೀರಸಿಂಗ್ ಠಾಕೂರ, ಪಿಎಸ್‌ಐ ಬಸಲಿಂಗಪ್ಪ, ಅಂಗನವಾಡಿ ಮೇಲ್ವಿಚಾರಕಿ ಯಶೋಧಾ ಯಾದವ ಸೇರಿದಂತೆ ಅಧಿಕಾರಿಗಳ ತಂಡ ಸಂಜೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಹನುಮಾನ ಮಂದಿರದಲ್ಲಿ ಎರಡು ಸಮುದಾಯದವರ ಸಭೆ ನಡೆಸಿ, ಚರ್ಚಿಸಿದರು.

30 ವರ್ಷದ ದಲಿತ ಮಹಿಳೆ ಮಿಲನಾ ಬಾಯಿ ಅವರನ್ನು ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಸಹಾಯಕಿಯಾಗಿ ನೇಮಕ ಮಾಡಿತು.

10 ಜೂನ್ 2021ರಂದು ನೇಮಕಾತಿ ದೃಢೀಕರಣ ದೊರಕಿತು. ಅಂಗನವಾಡಿ ಆವರಣದ ನಿರ್ವಹಣೆ ಹಾಗೂ ಅಡುಗೆ ಮಾಡುವ ನಿರೀಕ್ಷೆಯಲ್ಲಿದ್ದ ಮಿಲನಾ ಅವರಿಗೆ ಆಘಾತ ಕಾದಿತ್ತು. ಮಿಲನಾ ಅವರಿಗೆ ನೇಮಕಾತಿ ದೊರೆತ ಸಮಯದಲ್ಲಿ ಕೋವಿಡ್‌ ಸಮಸ್ಯೆ ಬಿಗಡಾಯಿಸಿದ್ದರಿಂದ ಶಾಲೆಗಳು ಮುಚ್ಚಿದವು.

ಜೂನ್ 4, 2022ರಂದು ಮತ್ತೆ ಶಾಲೆಗಳು ತೆರೆದಾಗ ದಲಿತ ಸಹಾಯಕಿ ಅಂಗನವಾಡಿಗೆ ಪ್ರವೇಶಿಸದಂತೆ ಗ್ರಾಮದ ಮರಾಠರು ಹಾಗೂ ಇತರ ಸವರ್ಣೀಯರು ತಡೆದರು ಎಂಬ ಆರೋಪಗಳಿವೆ.

ಮಿಲನಾ ಬಾಯಿ ಅವರ ಜಾತಿ ಕಾರಣಕ್ಕಾಗಿ ಸ್ಥಳೀಯ ಗ್ರಾಮಸ್ಥರು ತಮ್ಮದೇ ಮರಾಠ ಜಾತಿಯ ಸ್ವಯಂ ಸೇವಕಿಯನ್ನು ಅಂಗನವಾಡಿಯಲ್ಲಿ ಅಡುಗೆ ಮಾಡಲು ನೇಮಿಸಿಕೊಂಡರು. 10 ಕಿ.ಮೀ. ದೂರದಲ್ಲಿರುವ ಪಕ್ಕದ ಸಿರ್ಗಾಪುರ ಗ್ರಾಮಕ್ಕೆ ವರ್ಗಾವಣೆಯಾಗುವಂತೆ ಮಿಲನಾ ಬಾಯಿಯವರಿಗೆ ಮನವಿ ಮಾಡಿದ್ದರು ಎಂಬ ದೂರುಗಳು ಬಂದವು.

ಮಿಲನಾ ಬಾಯಿ ಅವರ ಪತಿ ಜೈಪಾಲ್ ರಾಣೆಯವರು ಇತ್ತೀಚೆಗೆ ಪ್ರತಿಕ್ರಿಯೆ ನೀಡಿ, “ನಮ್ಮ ಗ್ರಾಮದಲ್ಲಿ ಮೂರು ಅಂಗನವಾಡಿಗಳಿವೆ. ನನ್ನ ಪತ್ನಿಯನ್ನು ಮೆರಿಟ್ (ಸಾಮಾನ್ಯ ವರ್ಗ) ಆಧಾರದ ಮೇಲೆ ಶಾಲೆಯೊಂದರಲ್ಲಿ ಸಹಾಯಕಿಯಾಗಿ ನೇಮಿಸಲಾಗಿದೆ. ಈ ಅಂಗನವಾಡಿ ಭಾಗದಲ್ಲಿ ಸವರ್ಣೀಯರು ಹೆಚ್ಚಿದ್ದಾರೆ. ಸವರ್ಣೀಯರು ನನ್ನ ಹೆಂಡತಿಗೆ ಅಂಗನವಾಡಿಯಲ್ಲಿ ಕೆಲಸ ಮಾಡಲು, ಅಡುಗೆ ಮಾಡಲು ಅವಕಾಶ ನೀಡಲಿಲ್ಲ” ಎಂದು ದೂರಿದ್ದರು.

ಅಂಗನವಾಡಿಯಲ್ಲಿ ಪರಿಶಿಷ್ಟ ಜಾತಿಯವರು ಸಹಾಯಕ ಹುದ್ದೆಗೆ ನೇಮಕವಾಗಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಇತರ ವರ್ಗದ ಒಬ್ಬರನ್ನು ನೇಮಕ ಮಾಡುವ ಮೂಲಕ ನಮಗು ನ್ಯಾಯ ಕಲ್ಪಿಸಬೇಕು ಎನ್ನುವದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಗ್ರಾಮದ ಕೆಲ ಪ್ರಮುಖರು ಅಧಿಕಾರಿಗಳ ಮುಂದೆ ಬೇಡಿಕೆ ಮಂಡಿಸಿದರು.

ಇದೇ ಸಂದರ್ಭದಲ್ಲಿ ಮುಖಂಡ ಹರೀಶ್ ಕಾಂಬಳೆ ಮಾತನಾಡಿ, ಗ್ರಾಮದ ಅಂಗನವಾಡಿಯಲ್ಲಿ ಪರಿಶಿಷ್ಟ ಜಾತಿ ಮಹಿಳೆ ನೇಮಕವಾಗಿದ್ದಾಗಿನಿಂದ ಸವರ್ಣಿಯರು ಮಕ್ಕಳನ್ನು ಶಾಲೆಗೆ ಕಳಿಸುತ್ತಿಲ್ಲ. ಸಹಕಾರವನ್ನೂ ನೀಡುತ್ತಿಲ್ಲ. ಬಹಳ ದಿನಗಳಿಂದ ಹೀಗೆ ನಡೆಯುತ್ತಿದೆ. ಹೀಗಾದರೆ ಅಸ್ಪೃಶ್ಯತೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಎರಡೂ ಸಮುದಾಯದವರೊಂದಿಗೆ ಚರ್ಚಿಸಿದ ಅಧಿಕಾರಿಗಳು, ಅಂಗನವಾಡಿ ಸಹಾಯಕಿ ಹುದ್ದೆಗೆ ನಿಯಮದ ಪ್ರಕಾರವೇ ನೇಮಕವಾಗಿದೆ.ಮಕ್ಕಳನ್ನು ಶಾಲೆಗೆ ಕಳಿಸದಿದ್ದರೆ ರಾಜ್ಯಕ್ಕೆ ತಪ್ಪು ಸಂದೇಶ ಹೋಗುತ್ತದೆ. ಮಕ್ಕಳನ್ನು ಕಳಿಸದ ಜನರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಮಕ್ಕಳನ್ನು ಅಂಗನವಾಡಿಗೆ ಕಳಿಸಿ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!