ಮೂಡಲಗಿ: 2020-21ರಲ್ಲಿ ಭಾರತವು ಕೃಷಿ ಮತ್ತು ಕೃಷಿ ಸಂಬಂಧಿತ ಉತ್ಪನ್ನಗಳ ರಫ್ತುಗಳಲ್ಲಿ ಅತ್ಯುತ್ತಮ ($ 41.869 ಶತಕೋಟಿ ) ಬೆಳವಣಿಗೆಯನ್ನು ದಾಖಲಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕೃಷಿ ಉತ್ಪನ್ನಗಳ ರಫ್ತುಗಳ ಸಂಬಂಧಿಸಿದಂತೆ ಸಂಸದ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೃಷಿ ಉತ್ಪನ್ನಗಳಾದ ಬಾಸುಮತಿ ಅಕ್ಕಿಯ ರಫ್ತು $ 4,018.41 ಮಿಲಿಯನ್, ಗೋಧಿ $ 567.93 ಮಿಲಿಯನ್, ರಾಗಿ ಮತ್ತು ಜೋಳ $ 694.14 ಮಿಲಿಯನ್, ಅಡುಗೆ ಎಣ್ಣೆ $ 1585.04 ಮಿಲಿಯನ್, ಸಕ್ಕರೆ $ 2789.91 ಮಿಲಿಯನ್, ತಾಜಾ ತರಕಾರಿಗಳು $ 723.97 ಮಿಲಿಯನ್ ಮತ್ತು ತರಕಾರಿ ಎಣ್ಣೆಗಳು $ 602.77 ಮಿಲಿಯನ್ ಜೊತೆಗೆ ಸಾಂಬಾರ ಪದಾರ್ಥಗಳ ರಫ್ತು ಅತ್ಯಧಿಕ ಮಟ್ಟದ ಸುಮಾರು $ 4 ಶತಕೋಟಿ ರಫ್ತು ಬೆಳವಣಿಗೆಯನ್ನು ದಾಖಲಿಸಿದೆ ಎಂದರು.
ಭಾರತದ ಕೃಷಿ ಉತ್ಪನ್ನಗಳ ದೊಡ್ಡ ಮಾರುಕಟ್ಟೆಗಳೆಂದರೆ ಅಮೇರಿಕಾ, ಚೀನಾ, ಯುಎಇ, ವಿಯೆಟ್ನಾಂ, ಸೌದಿ ಅರೇಬಿಯಾ, ಇಂಡೋನೇಷಿಯಾ, ನೇಪಾಳ, ಇರಾನ್, ಮಲೇಷ್ಯ ಮತ್ತು ಬಾಂಗ್ಲಾದೇಶ ಈ ಹೆಚ್ಚಿನ ದೇಶಗಳಿಗೆ ರಫ್ತು ಮಾಡಲಾಗಿದೆ. ಭಾರತವು 12 ಮುಕ್ತ ವ್ಯಾಪಾರ ಒಪ್ಪಂದಗಳು ಮತ್ತು 6 ಆದ್ಯತೆಯ ವ್ಯಾಪಾರ ಒಪ್ಪಂದಗಳಿಗೆ ತನ್ನ ವ್ಯಾಪಾರ ಪಾಲುದಾರರೊಂದಿಗೆ ಕೃಷಿ ಉತ್ಪನ್ನಗಳು ಸೇರಿದಂತೆ ಭಾರತೀಯ ಉತ್ಪನ್ನಗಳಿಗೆ ವರ್ಧಿತ ಮಾರುಕಟ್ಟೆ ಪ್ರವೇಶಕ್ಕಾಗಿ ಸಹಿ ಹಾಕಿದೆ ಎಂದು ಮಾನ್ಯ ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿರುತ್ತಾರೆ.