ಸಿಂದಗಿ– ಈ ದೇಶದ ಭವಿಷ್ಯ ಶಿಕ್ಷಣದ ಮೇಲೆ ನಿಂತಿದೆ. ಜಗತ್ತು ವೈಜ್ಞಾನಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತ ಮುನ್ನುಗ್ಗಲು ದೊಡ್ಡ ಅಸ್ತ್ರವೇ ಶಿಕ್ಷಣವಾಗಿದೆ ಎಂದು ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಅಧ್ಯಕ್ಷ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಿ ಮಾತನಾಡಿ,. ಪ್ರಾಥಮಿಕ ಶಿಕ್ಷಣ ಮಗುವಿನ ಸರ್ವಾಂಗೀಣ ಪ್ರಗತಿಗೆ ಸಹಕಾರಿಯಾಗಿದೆ. ಈ ಶಿಕ್ಷಣ ಸಮಾಜದ ಆಧಾರ ಸ್ಥಂಬವಾಗಿ ಕಾರ್ಯನಿರ್ವಹಿಸುತ್ತದೆ ಈ ಹಂತದಲ್ಲಿ ಶಿಕ್ಷಕರು ಅತ್ಯಂತ ರಚನಾತ್ಮಕವಾಗಿ ಶಿಕ್ಷಣ ನೀಡುವಂತಾಗಬೇಕು ನಮ್ಮ ಸಂಸ್ಥೆಯಿಂದ ಪ್ರತಿ ವರ್ಷ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ನೀಡಲಾಗುವುದು. ಶಿಕ್ಷಕರು ಹೆಚ್ಚು ಅಧ್ಯಯನ ಶೀಲರಾಗಿ ಪಾಠಬೋಧನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಈ ಸಂಧರ್ಭದಲ್ಲಿ ಎಚ್.ಜಿ. ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಮಾತನಾಡಿ, ಪ್ರಾಥಮಿಕ ಶಿಕ್ಷಣ ಮಗುವಿನ ವಿಕಾಶದ ಶಿಕ್ಷಣವಾಗಿದೆ. ಈ ಹಂತದಲ್ಲಿ ಗಟ್ಟಿಯಾದ ಹಾಗೂ ಸಂಸ್ಕಾರಯುತವಾದ ಶಿಕ್ಷಣ ಸಿಕ್ಕಲ್ಲಿ ಮಗುವಿನ ಮುಂದಿನ ಹಂತ ಸ್ವಾವಲಂಬಿಯಾಗುತ್ತದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಶಾಲೆಯ ಸುಮಾರು 280 ಮಕ್ಕಳಿಗೆ ಸಂಸ್ಥೆಯವತಿಯಿಂದ ಉಚಿತ ಸಮವಸ್ತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯ ಮಹಾಂತಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಸಂತೋಷ ಹರನಾಳ, ಪರುಶುರಾಮ ಕಾಂಬಳೆ, ಶಾಲಾ ಮುಖ್ಯಗುರು ಚಂದ್ರಶೇಖರ ಚೌಧರಿ ಇದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಎಸ್.ಆರ್.ನಾಯಕ, ಎಸ್.ಎಸ್.ಹತ್ತಿ, ಆರ್.ಎಸ್.ಜೋಷಿ, ಪಿ.ಎಮ್.ಬಿರಾದಾರ,ಎಸ್.ಎಮ್.ಪಾಟೀಲ, ವ್ಹಿ.ಎಸ್.ಬಿರಾದಾರ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಆರ್.ವ್ಹಾ.ಪರೀಟ್ ನಿರೂಪಿಸಿದರು, ಶಿಕ್ಷಕಿ ವಿದ್ಯಾ ಕೊಟೇನ್ನವರ ವಂದಿಸಿದರು.