ಕಲ್ಲೋಳಿ: ಭಾರತೀಯ ಸಂಸ್ಕೃತಿ ಮನತಣಿಸುತ್ತದೆ. ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಪ್ರಶಂಸನೀಯ. ನಮ್ಮ ಪೂರ್ವಜರು ನಮಗೆ ಬಳುವಳಿಯಾಗಿ ನೀಡಿದ ಪರಂಪರೆ, ಆಚಾರ ವಿಚಾರ, ಉಡುಗೆ ತೊಡುಗೆ ಮುಂತಾದ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಗೋಕಾಕದ ಸಾಹಿತಿ ಶಿಕ್ಷಕ ರಮೇಶ ಮಿರ್ಜಿ ಹೇಳಿದರು.
ಅವರು ಗುರುವಾರ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ 2022-23ನೇ ಸಾಲಿನ ನಮ್ಮ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪದವಿ ವ್ಯಾಸಂಗದ ನಂತರ ಉನ್ನತ ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಷ್ಟ್ರದ ಶ್ರೇಷ್ಠ ನಾಯಕರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
ಮೆರವಣಿಗೆ:
ಮೈದಾನ ತುಂಬ ಇಲಕಲ್ ಸೀರೆಯುಟ್ಟು, ಗುಳೇದಗುಡ್ಡ ಕುಬಸ ತೊಟ್ಟು, ಬುತ್ತಿ ಗಂಟು ತಲೆಮೇಲೆ ಹೊತ್ತು ಹಳ್ಳಿಯ ಕಳೆಯನ್ನೇ ಸೃಷ್ಟಿಸಿದ ವಿದ್ಯಾರ್ಥಿನಿಯರು, ನಾವೇನು ಕಮ್ಮಿ ಎನ್ನುವಂತೆ ಧೋತುರ, ಜುಬ್ಬಾ, ಪೈಜಾಮ ಟೊಪ್ಪಿಗೆ, ಪಟಗಾ ಹಾಕಿಕೊಂಡು ಎತ್ತುಗಳನ್ನು, ಕೊಲ್ಲಾರಿ ಬಂಡಿ , ಟ್ರ್ಯಾಕ್ಟರ್ ಗಳನ್ನು ಅಲಂಕರಿಸಿಕೊಂಡು ಬಂದ ವಿದ್ಯಾರ್ಥಿಗಳು ವೀರಗಾಸೆ, ಡೊಳ್ಳು, ನಗಾರಿ, ಕರಡಿ ಮಂಜಲುಗಳ ಸದ್ದಿನೊಂದಿಗೆ ಪಟ್ಟಣ ಪಂಚಾಯತದಿಂದ ಕಾಲೇಜಿನ ಮೈದಾನದ ವರೆಗೆ ಮೆರವಣಿಗೆ ಕೈಗೊಂಡರು. ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರಮನ್ನರಾದ ಬಸಗೌಡ ಪಾಟೀಲ ಮಾತನಾಡಿ, ಇಂದು ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳಾದ ಸಕ್ಕಸರಗಿ, ಕುಂಟೆಬಿಲ್ಲೆ, ಚಿನ್ನಿದಾಂಡು, ಲಗೋರಿ, ಗೋಲಿಗಜಗ, ಹಗ್ಗಜಗ್ಗಾಟ, ದುಬ್ಬಚಂಡು ಹಾಗೂ ವೇಷ ಭೂಷಣಗಳು ಆಧುನಿಕ ಭರಾಟೆಯಲ್ಲಿ ಮರೆಯಾಗುತ್ತಿರುವುದು ಶೋಚನೀಯ ಎಂದರು.
ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕವಾಗಿ ಮತನಾಡುತ್ತಾ, ಶಿಕ್ಷಣ, ಸಾಹಿತ್ಯ, ಕ್ರೀಡೆ ಈ ಎಲ್ಲ ಕ್ಷೇತ್ರಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮಾಡಿದ ಸಾಧನೆಯನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಬಿ. ಎಸ್. ಕಡಾಡಿ, ಎಸ್. ಎಂ. ಖಾನಾಪೂರ, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಡಾ. ಕೆ. ಎಸ್. ಪರವ್ವಗೋಳ, ಕ್ರೀಡಾ ಕಾರ್ಯದರ್ಶಿ ಬಿ.ಬಿ.ವಾಲಿ, ಯುವ ರೆಡ್ ಕ್ರಾಸ್ ಕಾರ್ಯದರ್ಶಿ ಎಂ.ಬಿ.ಕುಲಮೂರ, ಮಹಿಳಾ ವಿಭಾಗದ ಕಾರ್ಯದರ್ಶಿ ವ್ಹಿ. ವಾಯ್. ಕಾಳೆ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶಂಕರ ಎಂ. ನಿಂಗನೂರ, ಪಿ. ಎಫ್.ಅತ್ತಾರ, ಬಿ. ಕೆ. ಸೊಂಟನವರ, ಆರ್.ಎಸ್.ಪಂಡಿತ, ಎಸ್. ಎಂ. ಬಂಡಿ, ಬಿ. ಸಿ. ಮಾಳಿ, ಎಮ್. ಎನ್. ಮುರಗೋಡ, ಎಮ್. ಆರ್. ಕರಗಣ್ಣಿ, ಆರ್. ಎ. ಮೇತ್ರಿ. ಬಿ.ಎಂ.ಶೀಗಿಹಳ್ಳಿ, ನಿರಂಜನ ಪಾಟೀಲ, ಮಂಜುನಾಥ ಗೊರಗುದ್ದಿ, ಮಹೇಶ ಹೊಸಮನಿ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಗೀತಾ ಮನ್ನಿಕೇರಿ ಇನ್ನಿತರರು ಉಪಸ್ಥಿತರಿದ್ದರು.
ಪ್ರೊ. ಆರ್.ಎನ್. ತೋಟಗಿ ನಿರೂಪಿಸಿದರು. ಕುಮಾರಿ ವೀಣಾ ಕಂಕಣವಾಡಿ ಪ್ರಾರ್ಥಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಿ.ಎಸ್. ಹುಗ್ಗಿ ಸ್ವಾಗತಿಸಿದರು. ವ್ಹಿ.ಪಿ. ಕೆಳಗಡೆ ವಂದಿಸಿದರು.