ಹಾಸನ – 50 ವರ್ಷಗಳಲ್ಲಿ ಸ್ಥಳೀಯ ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ ಎಂದು ಅಮೆರಿಕದ ಸಮಾಜ ವಿಜ್ಞಾನಿ ಡಾ. ಸುಸಾನ್ ಹ್ಯಾಂ ಸೆಟ್ ತಿಳಿಸಿದರು.
ಅವರು ನಗರದ ಸರ್ಕಾರಿ ಸ್ವಾಯತ್ತ ಕಲಾ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ವಿಭಾಗದಿಂದ ಏರ್ಪಡಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
55 ವರ್ಷಗಳ ಹಿಂದೆ ತಮ್ಮ ಪತಿಯೊಂದಿಗೆ ಗ್ರಾಮೀಣ ಸಾಮಾಜಿಕ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನಕ್ಕಾಗಿ ಗೊರೂರು ಮತ್ತು ಪೊನಾಥಪುರವನ್ನು ಆಯ್ಕೆ ಮಾಡಿಕೊಂಡು ಕ್ಷೇತ್ರಕಾರ್ಯ ಮಾಡಿದ ಸಂದರ್ಭಕ್ಕೂ , ಪ್ರಸ್ತುತ ಸಂದರ್ಭಕ್ಕೂ ಆಚಾರ ವಿಚಾರ ಉಡುಗೆ ತೊಡುಗೆ ಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿದೆ. ನನ್ನ ವಿದೇಶಿ ಉಡುಪುಗಳನ್ನು ಕಂಡು ಸೀರೆಯನ್ನು ಉಡಲು ಒತ್ತಾಯಿಸಿದ ಅಂದಿಗೂ ಇಂದು ಬಹುತೇಕರು ಚೂಡಿದಾರ ಸೆಲ್ವಾರ್ ಕಮೀಜ್ ನಂತಹ ಉಡುಪಿಗೆ ಬದಲಾಗಿರುವುದನ್ನು ಗಮನಿಸಿದ್ದೇನೆ . ಜೊತೆಗೆ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ಸ್ತ್ರೀಯರ ಸ್ಥಾನಮಾನ ಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ಗಮನಿಸಿದ್ದೇನೆ ಎಂದರು.
ಭಾರತದ ಸಮಾಜಶಾಸ್ತ್ರದ ಅಧ್ಯಯನ ಸಂಸ್ಕೃತಿಯ ಅಧ್ಯಯನಕ್ಕೆ ಸೀಮಿತವಾಗಿದ್ದರೆ ಅಮೆರಿಕದ ಸಮಾಜಶಾಸ್ತ್ರದ ಅಧ್ಯಯನ ಸಂಸ್ಕೃತಿ ಅಧ್ಯಯನವನ್ನು ಮೀರಿ ರಾಜಕೀಯ ಚುನಾವಣೆ ಅವುಗಳ ಪ್ರಭಾವದ ಅಧ್ಯಯನವನ್ನು ಒಳಗೊಂಡಿದೆ ಎಂದು ವಿವರಿಸಿದ ಅವರು
ಪ್ರಸ್ತುತ ತಾವು ಭಾರತದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸ್ತ್ರೀಯರ ಸ್ಥಾನಮಾನ ಕುರಿತಾಗಿ ಅಧ್ಯಯನ ಮಾಡಲು ಆಸಕ್ತರಾಗಿರುವುದಾಗಿ ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ಎಂ ಡಿ ಇರ್ಷಾದ್ ರವರು ಮಾತನಾಡಿ ಸ್ವತಂತ್ರ ಪೂರ್ವದಲ್ಲಿ ಶೆಟ್ಟಿಹಳ್ಳಿ ಹಾಸನ ಜಿಲ್ಲೆಯ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದ್ದು ಟಿಪ್ಪುವಿನ ಕಾಲಕ್ಕೆ ಗೊರೂರು ಶೆಟ್ಟಿಹಳ್ಳಿ ಮಗ್ಗೆ ಮೂಲಕ ಸಕಲೇಶಪುರಕ್ಕೆ ಮಾರ್ಗ ಕಲ್ಪಿಸಲಾಗಿತ್ತು ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೇಖಕ ಗೊರೂರು ಶಿವೇಶ್ ಮಾತನಾಡಿ ಜೀವಶಾಸ್ತ್ರದ ಅಧ್ಯಯನದಷ್ಟೇ ಸಮಾಜಶಾಸ್ತ್ರದ ಅಧ್ಯಯನವು ಬಹಳ ಮುಖ್ಯವಾದದ್ದು. ಸಂಸ್ಕೃತಿಯು ಆಚರಣೆಗಳ ಮೊತ್ತವಾಗಿದ್ದು ಪ್ರತಿಯೊಂದು ಪ್ರಾಂತದಲ್ಲೂ ಆಚರಣೆಯಲ್ಲಿರುವ ಹಬ್ಬಗಳು ಮದುವೆ ಹುಟ್ಟು, ಸಾವುಗಳ ಆಚರಣೆಗಳು ವಿಭಿನ್ನವಾಗಿದ್ದು ಅವು ಆಯಾ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ ಎಂದು ವಿವರಿಸಿದರು
ಲೇಖಕ ಗೊರೂರು ಅನಂತರಾಜು ಮಾತನಾಡಿ, ಸುಸಾನ್ ಹ್ಯಾಂಸೆಟ್ ಅವರ ಪತಿ ಸ್ಟ್ಯಾನ್ಲಿ ರಜೆಲ್ಸನ್ ರಚಿಸಿರುವ ಸಂಶೋಧನಾ ಗ್ರಂಥ ಫುಡ್ ಕಮ್ಯುನಿಟಿ ಅಂಡ್ ಸ್ಪಿರಿಟ್ ವರ್ಲ್ಡ್ ಜಿಲ್ಲೆಯ ಮಲೆನಾಡಿನ ಸಂಸ್ಕೃತಿಯನ್ನು ವಿಭಿನ್ನ ನೆಲೆಯಲ್ಲಿ ಸಾಕ್ಷಾಧಾರಗಳ ಮೂಲಕ ಕಟ್ಟಿಕೊಡುವ ಕೃತಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರದ ವಿಭಾಗದ ಪ್ರಮುಖರಾದ ವೆಂಕಟರಸಯ್ಯ ಹಾಗೂ ಅಧೀಕ್ಷಕರಾದ ಸತ್ಯಮೂರ್ತಿ ಉಪಸ್ಥಿತರಿದ್ದರು ಶ್ರೀಮತಿ ಧನಲಕ್ಷ್ಮಿ ಪ್ರಾರ್ಥಿಸಿದರು ಶ್ರೀಮತಿ ಡಾಕ್ಟರ್ ವನಿತಾ ರವರು ಕಾರ್ಯಕ್ರಮ ನಿರೂಪಿಸಿದರು . ಕರ್ನಾಟಕ ರಾಜ್ಯ ಬರಹಗಾರ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್ಎಸ್ ಪ್ರತಿಮಾ ಹಾಸನ್ ಕಲಾವಿದ ಯಾಕೂಬ್ ಜಯಮ ಗೊರೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು