“ಭಾರತದ ಪಾರಂಪರಿಕ ಖಾದಿ ಕಲೆಗಾರಿಕೆಗೆ ಜಾಗತಿಕ ಮನ್ನಣೆ ದೊರೆತಿದೆ” ಎಂದು ಭಾರತ ಸರ‍್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ‘ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ’(ಕೆವಿಐಸಿ)ದ ತಜ್ಞ ಸದಸ್ಯರಾದ ಲಲಿತಕುಮಾರ್ ಷಾ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ‘ಜಯಂತಿಯನ್ ಹಳೆಯ ವಿದ್ಯಾರ‍್ಥಿ ಉದ್ಯಮಿಗಳ ವೇದಿಕೆ’ ವತಿಯಿಂದ ಭಾರತ ಸರ‍್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ‘ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ’(ಕೆವಿಐಸಿ) ಸಹಯೋಗದಲ್ಲಿ ‘ಖಾದಿ ಮತ್ತು ಉದ್ಯಮಶೀಲತೆಯ ಉತ್ತೇಜನ’ಕ್ಕಾಗಿ ಆಯೋಜಿಸಲಾಗಿದ್ದ ‘ಜನರ ಶಿಕ್ಷಣ ಕಾರ‍್ಯಕ್ರಮ’ದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಖಾದಿ ಉದ್ಯಮದೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ವಸಾಹತುಶಾಹಿ ಕಾಲವು ಖಾದಿಯ ಕಲೆಗಾರಿಕೆಯನ್ನು ಹತ್ತಿಕ್ಕಿತು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ದ ಯೋಜಿತ ಕಾರ‍್ಯಾನುಷ್ಠಾನದಲ್ಲಿ ಕೇಂದ್ರ ಸರ‍್ಕಾರದ ‘ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ’ವು(ಕೆವಿಐಸಿ) ಭಾರತದ ಸಾಂಪ್ರದಾಯಿಕ ಕೈಗಾರಿಕೆಗಳನ್ನು ಹೇಗೆ ಪುನರುಜ್ಜೀವನಗೊಳಿಸುತ್ತಿದೆ. ಜಿ-೨೦ ಶೃಂಗಸಭೆಯ ಸಂದರ‍್ಭದಲ್ಲಿ ಗಣ್ಯ ಅತಿಥಿಗಳಿಗೆ ಖಾದಿ ಶಾಲುಗಳನ್ನು ನೀಡಿದ್ದು ಭಾರತೀಯ ಪರಂಪರೆಯ ಜಾಗತಿಕ ಮನ್ನಣೆಯನ್ನು ಸಂಕೇತಿಸುತ್ತದೆ ಎಂದು ತಿಳಿಸಿದರು.
‘ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ’ದ ರಾಜ್ಯ ನಿರ‍್ದೇಶಕ ಡಾ.ಇ.ಮೋಹನ್ ರಾವ್ ಅವರು ಮಾತನಾಡುತ್ತಾ, ಗ್ರಾಮೀಣ ಕುಶಲಕರ‍್ಮಿಗಳು ಮತ್ತು ಉದ್ಯಮಿಗಳ ಸಬಲೀಕರಣದ ಮೇಲೆ ಆಯೋಗದ ಕಾರ‍್ಯಕ್ರಮಗಳು ಬಹಳಷ್ಟು ಪ್ರಭಾವವನ್ನು ಬೀರುತ್ತಿವೆ. ಭಾರತದಾದ್ಯಂತ ಜನಸಮುದಾಯಗಳನ್ನು ಉನ್ನತೀಕರಿಸುವ ಆಯೋಗದ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಕುರಿತು ವಿವರಿಸಿದರು.
ಕ್ರಿಸ್ತು ಜಯಂತಿ ಕಾಲೇಜಿನ ಉಪಪ್ರಾಂಶುಪಾಲರೂ ಹಣಕಾಸು ಅಧಿಕಾರಿಗಳೂ ಆದ ಡಾ.ಫಾ.ಲಿಜೋ ಪಿ. ಥಾಮಸ್ ಅವರು ಅಧ್ಯಕ್ಷ ಭಾಷಣ ಮಾಡುತ್ತಾ, ಖಾದಿ ಉತ್ಪನ್ನಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು ಮತ್ತು ಭಾರತೀಯ ಸಾಂಪ್ರದಾಯಿಕ ಕರಕುಶಲಗಳನ್ನು ಪುನರುಜ್ಜೀವನಗೊಳಿಸುವಲ್ಲಿ ‘ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ’ವು(ಕೆವಿಐಸಿ) ಅಮೂಲ್ಯ ಕೊಡುಗೆ ನೀಡಿದೆ. ಸುಸ್ಥಿರ ಅಭಿವೃದ್ಧಿ ಮತ್ತು ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸುತ್ತಿದೆ. ಭಾರತದ ಸಾಮಾಜಿಕ-ಆರ‍್ಥಿಕ ಅಭಿವೃದ್ಧಿಗೆ ಖಾದಿ ಮತ್ತು ಗ್ರಾಮೋದ್ಯೋಗ ಉದ್ಯಮಶೀಲತೆಯು ಪ್ರಸ್ತುತವಾದುದು ಎಂದು ತಿಳಿಸಿದರು.
ಕೆವಿಐಸಿ ವಲಯ (ದಕ್ಷಿಣ) ಕಚೇರಿಯ ಉಪ ನಿರ‍್ವಹಣಾಧಿಕಾರಿಗಳಾದ ಎಲ್.ಮದನ್ ಕುಮಾರ್ ರೆಡ್ಡಿ ಮತ್ತು ಕೆವಿಐಸಿಯ ರಾಜ್ಯ ಸಹಾಯಕ ನರ‍್ದೇಶಕರಾದ ಎಂ.ಲಿಂಗದುರೈ ಅವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಧ್ಯಾಪಕ ಡಾ.ಲರ‍್ದುನಾಥನ್ ಅವರು ಸ್ವಾಗತಿಸಿದರು. ಕಾರ‍್ಯಕ್ರಮದಲ್ಲಿ ನೆರೆದಿದ್ದ ವಿದ್ಯಾರ‍್ಥಿ ಹಾಗೂ ಶಿಕ್ಷಕರು ‘ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ’ದ ಸದಸ್ಯರೊಂದಿಗೆ ಸಂವಾದ ನಡೆಸಿದರು. ಮಾರುಕಟ್ಟೆಯಲ್ಲಿ ಖಾದಿ ಉತ್ಪನ್ನಗಳ ಗುಣಮಟ್ಟದ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡರು. ಕಾರ‍್ಯಕ್ರಮದ ನಿಮಿತ್ತ ಆಯೋಜಿಸಲಾಗಿದ್ದ ಚರ್ಚಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಿ ಅಭಿನಂದಿಸಲಾಯಿತು.
ಒಟ್ಟಾರೆಯಾಗಿ, ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಜನರ ಶಿಕ್ಷಣ ಕಾರ‍್ಯಕ್ರಮ’ವು ಪಾರಂಪರಿಕ ಜ್ಞಾನದ ಉತ್ತೇಜಕ ಮತ್ತು ಸ್ಪೂರ‍್ತಿದಾಯಕ ಎಂದು ಸಾಬೀತಾಯಿತು. ಇದು ‘ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ’ದೊಂದಿಗಿನ ಯಶಸ್ವಿ ಸಹಯೋಗದ ಸಾರ‍್ಥಕ್ಯ ವನ್ನು ಒತ್ತಿಹೇಳುವ ಮೂಲಕ ಉದ್ಯಮಶೀಲತೆಯನ್ನು ಅಳವಡಿಸಿಕೊಳ್ಳಲು ವಿದ್ಯಾರ‍್ಥಿಗಳನ್ನು ಪ್ರೇರೇಪಿಸಿತು. ‘ಭಾರತದಲ್ಲಿ ತಯಾರಿಸಿ’ ಎಂಬ ಆಶಯದಲ್ಲಿ ಸ್ವಾವಲಂಬಿ ಮತ್ತು ಸುಸ್ಥಿರ ಭಾರತವನ್ನು ನಿರ‍್ಮಿಸುವಲ್ಲಿ ಸಾಂಪ್ರದಾಯಿಕ ಕರಕುಶಲ ಮತ್ತು ಸ್ಥಳೀಯ ಕೈಗಾರಿಕೆಗಳನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಈ ಕಾರ‍್ಯಕ್ರಮವು ಬಲಪಡಿಸಿತು.