spot_img
spot_img

ಭಾರತದ ಹೆಮ್ಮೆಯ ಮಾಜಿ ಪ್ರಧಾನಿ ಶಾಸ್ತ್ರಿ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ

Must Read

spot_img
- Advertisement -

 

ಈ ಎರಡು ಮಹಾನ್ ವ್ಯಕ್ತಿಗಳ ವ್ಯಕ್ತಿತ್ವಗಳ ಬಗ್ಗೆ ಇಂದು ಸ್ವಲ್ಪ ಸ್ಮರಿಸೋಣ.

🌹ಲಾಲ್ ಬಹದ್ದೂರ್ ಶಾಸ್ತ್ರಿ 🌹

ಎರಡು ಗಂಟೆ ಯುದ್ಧ ಮುಂದುವರಿದಿದ್ದರೆ, ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ ತನಕ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿತ್ತು.

- Advertisement -

ಎಚ್ಚೆತ್ತ ಪಾಕಿಸ್ತಾನ ಅಮೇರಿಕದ ಮುಂದೆ ಮಂಡಿಯೂರಿ ಕೂತಿತು. ಯುದ್ಧವನ್ನು ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೇ ಗೋಗರೆಯಿತು.

ಆಗ ಅಮೇರಿಕದ ಗೋಧಿ ಭಾರತಕ್ಕೆ ಆಮದಾಗುತ್ತಿತ್ತು. ಆ ಗೋಧಿಯ ಗುಣಮಟ್ಟ ಹೇಗಿತ್ತೆಂದರೆ, ಪ್ರಾಣಿಗಳು ತಿನ್ನಲೂ ಅಸಾಧ್ಯವಾದದ್ದು. ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ನಿಲ್ಲಿಸದಿದ್ದರೆ, ಗೋಧಿಯ ರಫ್ತನ್ನು ನಿಲ್ಲಿಸುತ್ತೇವೆಂಬ ಸೂಚನೆ ಅಮೇರಿಕದಿಂದ ಶಾಸ್ತ್ರೀಜಿಯವರಿಗೆ ಬಂತು. ಶಾಸ್ತ್ರೀಜಿಯವರಿಂದ ಬಂದ ಉತ್ತರ, “ನಿಲ್ಲಿಸಿ ತೊಂದರೆಯಿಲ್ಲ”

“ಹೊಟ್ಟೆಗೆ ಆಹಾರವಿಲ್ಲದಿದ್ದರೆ ಭಾರತೀಯರು ಸಾಯುತ್ತಾರೆ” ಅಮೇರಿಕದ ಕುಚೋದ್ಯ ಪ್ರತಿಕ್ರಿಯೆ..!!

- Advertisement -

“ದುಡ್ಡು ಕೊಟ್ಟು ನಿಮ್ಮ ಕಳಪೆ ಗುಣಮಟ್ಟದ ಗೋಧಿಯನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ, ಹಸಿವಿನಿಂದ ಸಾಯುವುದೇ ವಾಸಿ. ಇಂದಿನಿಂದ ನಿಮ್ಮ ಗೋಧಿ ನಮಗೆ ಬೇಕಿಲ್ಲ” ಶಾಸ್ತ್ರೀಜಿಯವರ ತೀಕ್ಷ್ಣ ಪ್ರತಿಕ್ರಿಯೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಶಾಸ್ತ್ರೀಜಿ ಮಾತನಾಡುತ್ತಾರೆ..

ಪಾಕಿಸ್ತಾನದೊಂದಿಗೆ ಯುದ್ಧ ನಡೆಯುತ್ತಿದೆ. ಅಮೇರಿಕದಿಂದ ಗೋಧಿ ಆಮದಾಗುವುದು ನಿಂತಿದೆ. ದೇಶದ ಜನ ಸಹಕರಿಸಬೇಕಿದೆ.

ಒಂದು.. ನೀವು ನೇರವಾಗಿ ಸೇನೆಗೆ ಧನ ಅಥವಾ ಆಹಾರದ ಸಹಾಯವನ್ನು ಮಾಡಬಹುದು. 

ಎರಡು.. ಪ್ರತಿ ಸೋಮವಾರ ನೀವು ಉಪವಾಸ ವ್ರತವನ್ನು ಆಚರಿಸಬಹುದು. ಇದರಿಂದ ದೇಶದ ಹಣಕಾಸಿನ ವ್ಯವಹಾರ ಸರಾಗವಾಗಿ ನಡೆಯಬಹುದು. ಇಲ್ಲದಿದ್ದರೆ ದೇಶ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು”

ಶಾಸ್ತ್ರೀಜಿಯವರ ಈ ಕರೆಗೆ ಇಡೀ ದೇಶ ಓಗೊಟ್ಟಿತು. ಹಲವರು ಸೇನೆಗೆ ಸಹಾಯ ಮಾಡಿದರು. ಲಕ್ಷಾಂತರ ಜನ ಸೋಮವಾರದ ಉಪವಾಸವನ್ನು ಆರಂಭಿಸಿದರು. ಸ್ವತಃ ಶಾಸ್ತ್ರೀಜಿಯವರೂ ಸೋಮವಾರದಂದು ಉಪವಾಸ ವ್ರತವನ್ನು ಕೈಗೊಂಡರು.

ಶಾಸ್ತ್ರೀಜಿಯವರ ಪತ್ನಿ, ಲಲಿತಾದೇವಿಯವರು ಅನಾರೋಗ್ಯ ಪೀಡಿತರಾಗಿದ್ದರು. ಮನೆಗೆಲಸಕ್ಕೆಂದು ಕೆಲಸದವಳೊಬ್ಬಳು ಬರುತ್ತಿದ್ದಳು. ಶಾಸ್ತ್ರೀಜಿಯವರು ಮಹಿಳೆಗೆ ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದರು. ಆಕೆ ”ಅಲ್ಲ, ನಿಮ್ಮ ಬಟ್ಟೆಯನ್ನು ತೊಳೆಯುವುದು, ಮನೆಯನ್ನು ಸ್ವಚ್ಛಗೊಳಿಸುವುದು, ನಿಮ್ಮ ಪತ್ನಿಯ ಆರೈಕೆಯನ್ನು ಯಾರು ಮಾಡಿಕೊಡುತ್ತಾರೆ ಸ್ವಾಮೀ” ಎಂದು ಕೇಳಿದಳು.

“ದೇಶಕ್ಕಾಗಿ ಇದು ಅನಿವಾರ್ಯವಮ್ಮಾ. ನಿನಗೆ ಕೊಡುವ ಸಂಬಳದ ಹಣವಾದರೂ ಉಳಿದೀತು. ದೇಶದ ಒಳಿತಿಗಾದೀತು”  ಎಂದು ಹೇಳಿದರು. ನಂತರ ಮನೆಯ ಪ್ರತಿಯೊಂದು ಕೆಲಸವನ್ನೂ ಶಾಸ್ತ್ರೀಜಿಯವರೇ ನಿಭಾಯಿಸುತ್ತಿದ್ದರು.

ಶಾಸ್ತ್ರೀಜಿಯವರ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡಲೆಂದು ಟ್ಯೂಟರ್ ಬರುತ್ತಿದ್ದರು. ಅವರನ್ನೂ ಕೆಲಸದಿಂದ ವಿಮುಕ್ತಗೊಳಿಸಿದರು. ”ಮಕ್ಕಳು ಇಂಗ್ಲೀಷಿನಲ್ಲಿ ಫೇಲಾಗುತ್ತಾರೆ” ಟ್ಯೂಟರ್ ಹೇಳಿದ್ದಕ್ಕೆ ಶಾಸ್ತ್ರೀಜಿ, ”ಆಗಲಿ ಬಿಡಿ ಇಂಗ್ಲೀಷ್ ನಮ್ಮ ಭಾಷೆಯಲ್ಲ. ಇಂಗ್ಲಿಷರು ಹಿಂದಿಯನ್ನು ಬರೆದರೆ ಅವರೂ ಫೇಲಾಗುತ್ತಾರೆ” ಎಂದರು. 

ಒಂದು ದಿನ ಶಾಸ್ತ್ರೀಜಿಯವರ ಪತ್ನಿ, ಹರಿದು ಹೋಗಿರುವ ಅವರ ಧೋತಿಯನ್ನು ನೋಡಿ  “ಒಂದು ಹೊಸ ಧೋತಿಯನ್ನಾದರೂ ತೆಗೆದುಕೊಳ್ಳಬಾರದೇ?” ಎಂದು ಕೇಳುತ್ತಾರೆ. ”ಅದನ್ನು ಕೊಳ್ಳಲು ಹಣವೆಲ್ಲಿದೆ..? ಬರುವ ಸಂಬಳವನ್ನೂ ಬಿಟ್ಟಾಗಿದೆ. ಮನೆಯ ಖರ್ಚುಗಳನ್ನು ಕಡಿಮೆ ಮಾಡು” ಎಂದಿದ್ದರು.

ಹೀಗೆ ತಮ್ಮದೆಲ್ಲವನ್ನು ದೇಶಕ್ಕಾಗಿ ಅರ್ಪಿಸಿದ್ದ ಮಹಾನ್ ದೇಶಭಕ್ತ ಇವರು.

ಭಾರತದ ಎರಡನೇ ಪ್ರಧಾನಿ, ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಪಾರದರ್ಶಕ ವ್ಯಕ್ತಿತ್ವ, ನೈತಿಕ ಮೌಲ್ಯಗಳ ಗಣಿ, “ಜೈ ಜವಾನ್, ಜೈ ಕಿಸಾನ್” ಎಂಬ ಘೋಷಣೆಯ ಮೂಲಕ ನಮ್ಮ ದೇಶದ ಬೆನ್ನೆಲುಬುಗಳಾದ ರೈತ ಹಾಗೂ ಸೈನಿಕರಿಗೆ ಗೌರವ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಧೀಮಂತ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬ.

ಶಾರದ ಪ್ರಸಾದ್ ಹಾಗೂ ರಾಮ್ದುಲಾರಿ ದೇವಿ ದಂಪತಿಗಳ ಮಗನಾದ ಶಾಸ್ತ್ರೀಜಿಯವರು 1904 ಅಕ್ಟೋಬರ್ 2 ರಂದು ಉತ್ತರ ಪ್ರದೇಶದ ರುದ್ರ ಪ್ರಯಾಗದಲ್ಲಿ ಜನಿಸಿದರು.

ಒಮ್ಮೆ ಇವರು ಬಾಲ್ಯದಲ್ಲಿದ್ದಾಗ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದರು. ದಾರಿಯಲ್ಲಿ ಇದ್ದ ಮಾವಿನ ತೋಟದಲ್ಲಿ ಸ್ನೇಹಿತರೊಂದಿಗೆ ಸೇರಿ ಹಣ್ಣುಗಳನ್ನು ಕೀಳುತ್ತಿದ್ದರು. ತೋಟದ ಮಾಲಿ ಬಂದದ್ದನ್ನು ನೋಡಿದ ಕೂಡಲೇ ಎಲ್ಲಾ ಹುಡುಗರು ಓಡಿ ಹೋದರು. ಆದರೇ ಇವರು ಮಾಲಿಯ ಕೈಗೆ ಸಿಕ್ಕಿ ಬಿದ್ದರು. ಆಗ ಮಾಲಿಯು “ನೀನು ಯಾರ ಮಗ ನಿಮ್ಮ ತಂದೆ ತಾಯಿಗಳು ಇದನ್ನೇ ಏನು ನಿನಗೆ ಕಲಿಸಿದ್ದು.. ನಿನ್ನ ಗುರುಗಳು ಯಾರು ಹೇಳು, ಅವರು ನಿನಗೆ ಕಳ್ಳತನ ಮಾಡುವಂತೆ ಬೋಧಿಸಿದರೇನು ?”  ಎಂದು ಚೆನ್ನಾಗಿ  ಬೈದನು. ಇದನ್ನು ಕೇಳಿ ಶಾಸ್ತ್ರಿಯವರಿಗೆ ಬಹಳ ದುಃಖವಾಯಿತು. ನಾನು ಮಾಡಿದ ತಪ್ಪಿಗೆ ಯಾವುದೇ ತಪ್ಪನ್ನು ಮಾಡದ ನನ್ನ ಅಪ್ಪ ಅಮ್ಮ ಮತ್ತು ನನ್ನ ಶಿಕ್ಷಕರು ನಿಂಧನೆಗೆ ಗುರಿಯಾಗಬೇಕಾಯಿತು ಎಂಬ ಪಶ್ಚಾತ್ತಪದ ನೋವು ಅವರ ಜೀವನದ ದಿಕ್ಕನ್ನೇ ಬದಲಿಸಿತು. ಇನ್ನು ಮುಂದೆ ನನ್ನ ನಡೆ ನುಡಿಗಳು ಇತರರಿಗೆ ಆದರ್ಶಪ್ರಾಯವಾಗಬೇಕು ಎಂದು ದೃಡ ಸಂಕಲ್ಪ ಮಾಡಿಯೇ ಬಿಟ್ಟರು. ಅದರಂತೆ ನಡೆದು ಎಲ್ಲರಿಗೂ ಮಾದರಿಯಾದರು.

“ನೀನು ಬಯಸಿದ ಬದಲಾವಣೆ ಮೊದಲು ನಿನ್ನಿಂದಲೇ ಆಗಲಿ” ಎನ್ನುವ ಗಾಂಧೀಜಿಯವರ ಮಾತನ್ನು ಸ್ವತಃ ಪಾಲಿಸಿ ಆದರ್ಶದ ಮುನ್ನುಡಿ ಬರೆದವರು ನಮ್ಮ ಈ ಶಾಸ್ತ್ರೀಜಿಯವರು. 

ಇವರು ದೇಶ ಸೇವೆಗಾಗಿ ಬಳಸಲು ಬ್ಯಾಂಕಿನಿಂದ ಸಾಲ ಪಡೆದು ಖರೀದಿಸಿದ ಕಾರಿನ ಸಾಲವನ್ನು ಲಲಿತ ಶಾಸ್ತ್ರಿಯವರು ತಮ್ಮ ಪತಿಯ ಮರಣದ ನಂತರ ಬರುತ್ತಿದ್ದ ಪೆನ್ಷನ್ ಹಣದಿಂದ ತೀರಿಸಿದರೆಂದರೇ…. ಇವರೆಂತಹ ಆದರ್ಶ ಪತ್ನಿಯಾಗಿದ್ದರು ಎನಿಸುತ್ತದೆ.

ಅಕ್ಟೋಬರ್ 2, ಇಂದು ಶಾಸ್ತ್ರೀಜಿಯವರ ಜನ್ಮದಿನ. ಇಂತಹ ಸರಳ, ಸಜ್ಜನ ಮಹಾಪುರುಷನನ್ನು ನಾವು ಸ್ಮರಿಸಲೇಬೇಕಿದೆ.

🌹ಮಹಾತ್ಮ ಗಾಂಧಿ🌹

“ಗಾಂಧೀಜಿ ಮತ್ತು ಆತ ಪ್ರತಿಪಾದಿಸಿರುವ ಎಲ್ಲವನ್ನೂ ಸಂಪೂರ್ಣವಾಗಿ ಹೊಸಕಿ ಹಾಕಬೇಕು” ಗಾಂಧೀಜಿಯವರ ಸತ್ಯಾಗ್ರಹಗಳಿಂದ, ಚಳುವಳಿಗಳಿಂದ ಕಂಗೆಟ್ಟಿದ್ದ ಚರ್ಚಿಲ್ ಸಿಟ್ಟಿನಿಂದ ಕೆಂಡಾಮಂಡಲನಾಗಿ ಈ ಮಾತುಗಳನ್ನಾಡಿದ್ದರು. ಗಾಂಧೀಜಿಯ ರಾಜಕೀಯ ಕಟು ವಿರೋಧಿಯಾಗಿದ್ದ ಚರ್ಚಿಲ್ ಗಾಂಧೀಯವರನ್ನು “ಅರೆ ಬೆತ್ತಲೆ ಫಕೀರ” ಎಂದೂ  ಕೂಡ ಜರಿದಿದ್ದರು. ಗಾಂಧೀಯವರೊಂದಿಗಿನ ಭೇಟಿಯನ್ನು ನಿರಾಕರಿಸಿದ್ದರು.

ಆದರೆ ಇಷ್ಟೆಲ್ಲಾ ವೈರತ್ವದ ನಡುವೆ ಗಾಂಧೀಜಿ ಹತ್ಯೆಯಾದ ದಿನ ಹತ್ಯೆಯ ಸುದ್ದಿ ಚರ್ಚಿಲ್ ನ ಕೋಣೆಯ ದೂರದರ್ಶನದ ಪರದೆಯ ಮೇಲೆ ಮೂಡುತ್ತಿದ್ದಂತೆ ಕುಡಿಯುತ್ತಿದ್ದ ವಿಸ್ಕಿ ಬಾಟಲನ್ನು ಅಸಹನೆಯಿಂದ ದೂರಕ್ಕೆ ಎಸೆದು ಸಿಗಾರನ್ನು ಸರ್ರನೆ ಜೋರಾಗಿ ಒಳಗೆಳೆದುಕೊಂಡು ಹೊಗೆ ಬಿಡುತ್ತ ಆಶ್ಚರ್ಯಚಕಿತನಾಗಿ ಚರ್ಚಿಲ್ ಚೀರಿದ್ದ “ನನ್ನ ಜೀವನದಲ್ಲಿ ನನ್ನನ್ನು ಸ್ತಂಭಿತಗೊಳಿಸಿದ ಅಮಾನುಷ ಘಟನೆ ಇದು. ನಾವು ಇಪ್ಪತ್ತೆಂಟು ವರ್ಷ ಗಾಂಧೀಯ ಮೇಲೆ ಒಂದು ಪೆಟ್ಟು ಬೀಳದ ಹಾಗೆ ನೋಡಿಕೊಂಡೆವು. ಆದರೆ ಭಾರತೀಯರಿಗೆ ಸ್ವತಂತ್ರ ಭಾರತದಲ್ಲಿ ಅವರನ್ನು ಇಪ್ಪತ್ತೆಂಟು ವಾರಗಳೂ ಉಳಿಸಿಕೊಳ್ಳಲಾಗಲಿಲ್ಲ” ಎಂದು. 

ಕೊನೆಗೆ ಯಾವ ಚರ್ಚಿಲ್ ಗಾಂಧೀಜಿಯನ್ನು ಕಟುವಾಗಿ ವಿರೋಧಿಸಿದ್ದರೋ ಅವರ ಜೊತೆಗೆ, ಯಾವ ಸಾಮ್ರಾಜ್ಯದ ವಿರುದ್ಧ ಗಾಂಧೀಜಿ ಹೋರಾಡಿದ್ದರೋ ಆ ದೇಶದ ಪಾರ್ಲಿಮೆಂಟ್‌ನ ಮುಂದೆ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಇಂದು ನಿಂತಿದೆ. ಯಾವುದೇ ಅಧಿಕಾರ ಹೊಂದದ ಸಾಮಾನ್ಯ ವ್ಯಕ್ತಿಯೊಬ್ಬನ ಪುತ್ಥಳಿ ಲಂಡನ್ ನ ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಇರುವದು ಕೇವಲ ಗಾಂಧೀಯವರೊಬ್ಬರದೇ.

ಸತ್ಯ ಅಹಿಂಸೆಗಳ ಪ್ರವಾದಿ, ಭಾರತದ ಸ್ವಾತಂತ್ರ್ಯ ಶಿಲ್ಪಿ, ರಾಷ್ಟ್ರಪಿತ, ಮಹಾತ್ಮ, ಮನುಕುಲದ ಬಗ್ಗೆ ಉನ್ನತ ಮಟ್ಟದ ಆಲೋಚನಾ ಭಾವನೆ, ಕಾರ್ಯಗಳಿಗೆ ಪ್ರೇರೇಪಿಸಿ ಜನರನ್ನು ಮೇಲೆತ್ತಲು ಪ್ರಯತ್ನಿಸಿದ ಮನುಕುಲದ ಉದ್ಧಾರಕ, ಶಾಂತಿಧೂತ, ತ್ಯಾಗಮಯಿ, ಸದ್ಗುಣಗಳ ಗಣಿ, ಭಾರತ ಮಾತೆಯ ಹೆಮ್ಮೆಯ ಸುಪುತ್ರ ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬ. ಗಾಂಧೀಜಿ ಗೆದ್ದದ್ದು ಕೇವಲ ಮಿತ್ರರ ಮನಸ್ಸನ್ನಲ್ಲ, ಶತ್ರುಗಳ ಮನಸ್ಸನ್ನೂ. ಕೊನೆಗೆ ಗೆದ್ದಿದ್ದು ಮಹಾತ್ಮ ಗಾಂಧೀಜಿಯ ಸತ್ಯ, ಶಾಂತಿ ಮತ್ತು ಅಹಿಂಸೆ…

ಇಂತಹ ಗಾಂಧೀಜಿಯವರು ಗುಜರಾತಿನ ಕಾಥೇವಾಡದ ರಾಜಕೋಟೆಯ ಸಮೀಪದ ಪೋರಬಂದರಿನಲ್ಲಿ ಕರಮಚಂದ ಗಾಂಧಿ ಪುತಲಿಬಾಯಿ ದಂಪತಿಗಳಿಗೆ ಕ್ರಿ.ಶ. 1869 ಅಕ್ಟೋಬರ್ 2 ರಂದು ಜನಿಸಿದರು. ಇವರ ಪೂರ್ಣ ಹೆಸರು ಮೋಹನದಾಸ ಕರಮಚಂದ ಗಾಂಧಿ.

ಇವರು ಬಾಲ್ಯದ ಪ್ರಾಥಮಿಕ ಶಿಕ್ಷಣವನ್ನು ರಾಜಕೋಟೆಯಲ್ಲಿ ಮುಗಿಸಿ ತಮ್ಮ 14 ನೇ ವಯಸ್ಸಿನಲ್ಲಿ ಕಸ್ತೂರಿಬಾ ಅವರೊಂದಿಗೆ ವಿವಾಹವಾದರು. 1888 ಸೆ. 4 ರಂದು ಬ್ಯಾರಿಸ್ಟರ್ ಪದವಿಗಾಗಿ ಇಂಗ್ಲೆಂಡಿಗೆ ತೆರಳಿ 1891 ರಲ್ಲಿ ಪದವಿ ಪಡೆದು ಹಿಂದುರಿಗಿ 1892 ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು.

ಗಾಂಧೀಜಿಯವರ ಮೇಲೆ ಬಹಳ ಪ್ರಭಾವ ಭೀರಿದ ಎರಡು ನಾಟಕಗಳೆಂದರೆ ಸತ್ಯಹರಿಶ್ಚಂದ್ರ ಮತ್ತು ಶ್ರವಣಕುಮಾರ. ಇವುಗಳ ಪ್ರಭಾವ ಎಷ್ಟಾಯಿತೆಂದರೆ ಮುಂದೆ ಸತ್ಯ ಹಾಗೂ ಅಹಿಂಸೆಗಳೇ ಇವರ ಸ್ವಾತಂತ್ರ ಹೋರಾಟದ ಹಾಗೂ ಇವರ ಬದುಕಿನ  ಪರಮ ಆದರ್ಶಗಳಾದವು.

1893 ರಲ್ಲಿ ದಕ್ಷಿಣ ಆಪ್ರಿಕಾಗೆ ತೆರಳಿ ವರ್ಣಭೇದ ನೀತಿಯ ದಬ್ಬಾಳಿಕೆಯ ವಿರುದ್ಧ 1914 ರ ವರೆಗೆ ಹೋರಾಡಿ ಬಿಳಿಯರ ಸರಿ ಸಮಾನ ಸ್ಥಾನಮಾನಗಳನ್ನು ಕಿರಿಯರಿಗೆ ಕೊಡಿಸುವಲ್ಲಿ ಯಶಸ್ವಿಯಾದರು.

ಈ ಸಮಯದಲ್ಲಿ ಗಾಂಧೀಜಿಯವರು ರೈಲು ಪ್ರಯಾಣ ಮಾಡುತ್ತಿದ್ದರು. ಆಗ ಆ ರೈಲಿನಲ್ಲಿದ್ದ ಒಬ್ಬ ಬ್ರಿಟಿಷ್ ಪ್ರಜೆ ಗಾಂಧಿಯವರನ್ನು ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿದನು. ಬಹುಶಃ ಅವನಿಗೆ ಮುಂದೊಂದು ದಿನ ಭಾರತದಲ್ಲಿ ಬ್ರಿಟಿಷರ ಅಧಿಪತ್ಯ ಕೊನೆಗಾಣಿಸಿ ಭಾರತದಿಂದ ಅವರನ್ನು ಹೊರದಬ್ಬುವಂತಹ ವ್ಯಕ್ತಿ ಇವರಾಗುವರೆಂಬ ಕಲ್ಪನೆಯೂ ಕೂಡ ಇರಲಿಲ್ಲವೆನ್ನಬಹುದು.

ಗಾಂಧೀಜಿಯವರಿಗೆ ಪ್ರಿಯವಾದ ವಸ್ತುಗಳೆಂದರೇ ಭಗವದ್ಗೀತೆ.. ಗಡಿಯಾರ.. ಮರದ ಬಟ್ಟಲು ಹಾಗೂ ಸೌಟು… ಚರಕ…..

ರೌಲಟ್ ಶಾಸನದ ವಿರುದ್ಧ ಚಳುವಳಿ, ಅಸಹಕಾರ ಚಳುವಳಿ, ದಂಡಿ ಸತ್ಯಾಗ್ರಹ, ದುಂಡು ಮೇಜಿನ ಪರಿಷತ್ ಹಾಗೂ ಕ್ವಿಟ್ ಇಂಡಿಯಾ ಆಕ್ಟ್ ಗಳ ಮೂಲಕ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದವರು ಗಾಂಧೀಜಿ.

1942 ಆಗಸ್ಟ್ 8 ರಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಮೊಳಗಿತು. ಆಗ ಸಭೆಯನ್ನು ಉದ್ದೇಶಿಸಿ “ನಾನು ನಿಮ್ಮ ಆಜ್ಞಾಪಕನಲ್ಲಾ, ನಿಯಂತ್ರಕನೆಂದು ಅಲ್ಲ. ಆದರೇ ನಿಮ್ಮೆಲ್ಲರ ವಿನಮ್ರ ಸೇವಕನೆಂದು ನಾನು ಈ ಹೋರಾಟವನ್ನು ನಡೆಸುವ ನೇತೃತ್ವವನ್ನು ಕೈಗೊಳ್ಳುತ್ತಿದ್ದೇನೆ” ಎಂದು ಘೋಷಿಸಿದರು.

ಗಾಂಧೀಜಿಯವರು ಸೂಟು ಬೂಟು ಧರಿಸಿ ರೈಲಿನಲ್ಲಿ ಹೋಗುವಾಗ ಮಹಿಳೆಯೊಬ್ಬರು ತಾನು ಧರಿಸಿದ್ದ ಸೀರೆಯಲ್ಲಿ ಅರ್ಧವನ್ನು ತೊಳೆದು ಒಣಹಾಕಿ ಉಳಿದರ್ಧ ಸೀರೆಯನ್ನು ತನ್ನ ಮೈಮೇಲೆ ಸುತ್ತಿಕೊಂಡು ಕುಳಿತ್ತಿದ್ದರು. ಇದನ್ನು ಕಂಡ ಗಾಂಧಿಯವರು “ಅಯ್ಯೋ…  ನಮ್ಮ ದೇಶದಲ್ಲಿ ಹೆಣ್ಣು ಮಗಳೊಬ್ಬಳು ತನ್ನ ಮಾನ ರಕ್ಷಿಸಿಕೊಳ್ಳಲು ಬಟ್ಟೆಯಿಲ್ಲದಿದ್ದಾಗ ನಾನು ಮಾತ್ರ ಈ ವಿದೇಶಿ ವಸ್ತ್ರಗಳನ್ನು ಧರಿಸುವುದು ಸರಿಯಿಲ್ಲವೆಂದು” ಭಾವಿಸಿ ಅಂದಿನಿಂದ ತಾವೇ ನೇಯ್ದ ತುಂಡು ಖಾದಿ ಬಟ್ಟೆಯನ್ನು ಧರಿಸಲು ಪ್ರಾರಂಭಿಸಿದರು.

ಇದನ್ನು ಕಂಡು ವಿದೇಶಿಯರು ಅರೆಬೆತ್ತಲೆಯ ಫಕೀರನೆಂದು ಲೇವಡಿ ಮಾಡಿದಾಗ “ನಮ್ಮ ದೇಶದ ಬಹುದೊಡ್ಡ ಮೊತ್ತದ ಜನರು ಇಷ್ಟೆ ಬಟ್ಟೆಯನ್ನು ತೊಡುತ್ತಾರೆ. ಆದ್ದರಿಂದ ನಾನು ತೊಡುವ ಬಟ್ಟೆ ನನಗೆ ತೃಪ್ತಿ ನೀಡಿದೆ ಎಂದು ಉಧ್ಘರಿಸಿದರು.

ಇವರ ನಾಯಕತ್ವದಲ್ಲಿ ಭಾರತ ಸರ್ವ ಸ್ವತಂತ್ರ ದೇಶವಾಯಿತು. 1947 ಆಗಸ್ಟ್ 15 ಭಾರತಕ್ಕೆ ಸ್ವಾತಂತ್ರ ಬಂದಿತು.


 

ಹೇಮಂತ ಚಿನ್ನು 

ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group